ಹಿಂದೂ ಸಂಪ್ರದಾಯದ ಪ್ರಕಾರ, ಮನದಲ್ಲಿ ಹಾಗೂ ಮನೆಯಲ್ಲಿ ಭಗವಂತನನ್ನು ಪೂಜಿಸುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ. ಇದರ ಜೊತೆಗೆ ಭಗವಂತನ ಸಾನಿಧ್ಯವಾದ ದೇವಾಲಯಗಳಿಗೆ ಹೋಗ್ತೀವಿ. ದೇಗುಲಗಳಲ್ಲಿ ಕುಂಕುಮಾರ್ಚನೆ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬೆಣ್ಣೆ ಅಲಂಕಾರ, ಗೋಡಂಬಿ ಅಲಂಕಾರ, ಅರಿಶಿನ-ಕುಂಕುಮ ಅಲಂಕಾರ, ಪುಷ್ಪಾಲಂಕಾರ, ಹಣ್ಣಿನ ಅಲಂಕಾರ, ತರಕಾರಿ ಅಲಂಕಾರ ಸೇರಿದಂತೆ ಅನೇಕ ರೀತಿಯ ಅಲಂಕಾರಗಳನ್ನು ಭಗವಂತನಿಗೆ ಮಾಡಲಾಗುತ್ತೆ. ಇದಿಷ್ಟೇ ಅಲ್ಲದೇ, ಅನೇಕ ವಿಧಾನಗಳಿಂದ ಭಗವಂತನನ್ನು ಆರಾಧಿಸಲಾಗುತ್ತೆ. ಅದ್ರಲ್ಲೂ ವಿಶೇಷವಾಗಿ ಭಗವಂತನಿಗೆ ಮಾಡೋ ಅಭಿಷೇಕಗಳಲ್ಲಿ ಅನೇಕ ವಿಧಗಳಿವೆ. ಆ ಆಭಿಷೇಕಗಳು ಯಾವುವು? ಬನ್ನಿ ತಿಳಿಯೋಣ.
ಭಗವಂತನಿಗೆ ಮಾಡುವ ಅಭಿಷೇಕಗಳು
1)ನೀರಿನ ಅಭಿಷೇಕ
2)ತಾಳೆ ಹೂವಿನ ಅಭಿಷೇಕ
3)ಗುಲಾಬಿ ಜಲದ ಅಭಿಷೇಕ
4)ಚಂದನ ಅಥವಾ ಗಂಧದ ಅಭಿಷೇಕ
5)ಶಂಖದಿಂದ ಅಭಿಷೇಕ
6)ಬಿಲ್ವಪತ್ರೆ ಅಭಿಷೇಕ
7)ದರ್ಬೆ ಅಭಿಷೇಕ
8)ರುದ್ರಾಕ್ಷಿ ಅಭಿಷೇಕ
9)ನವರತ್ನ ಅಭಿಷೇಕ
10)ಹಣ್ಣಿನ ರಸಗಳ ಅಭಿಷೇಕ
11)ಪಂಚಗವ್ಯ ಅಭಿಷೇಕ
12)ಪಂಚಾಮೃತ ಅಭಿಷೇಕ
13)ಕ್ಷೀರಾಭಿಷೇಕ
ಹೀಗೆ ಅನೇಕ ದ್ರವ್ಯಗಳು, ಹೂಗಳು, ವಸ್ತುಗಳಿಂದ ಭಗವಂತನಿಗೆ ಅಭಿಷೇಕ ಮಾಡಲಾಗುತ್ತೆ. ಶಿವ ಪುರಾಣದ ಪ್ರಕಾರ, ಲಯಕಾರಕ ಪರಮೇಶ್ವರ ಅಭಿಷೇಕಪ್ರಿಯ. ಗಂಗಾಧರನಿಗೆ ಭಕ್ತಿ, ನಿಷ್ಠೆಯಿಂದ ಕೇವಲ ನೀರಿನಿಂದ ಅಭಿಷೇಕ ಮಾಡಿದ್ರೂ ಸಾಕು ಆತ ಬಹಳ ಬೇಗ ಒಲಿಯುತ್ತಾನೆ ಅಂತಾ ಹೇಳಲಾಗುತ್ತೆ. ಅದ್ರಲ್ಲೂ ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ. ಆದ್ರೆ ಶಿವನಿಗೆ ಹಾಲಿನ ಅಭಿಷೇಕ ಮಾಡುವಾಗ ಕೆಲ ನಿಯಮಗಳನ್ನು ಪಾಲಿಸಿದ್ರೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಷ್ಟಕ್ಕೂ, ಹಾಲಿನ ಅಭಿಷೇಕ ಮಾಡಲು ಪಾಲಿಸಬೇಕಾದ ಕ್ರಮಗಳೇನು? ಇಲ್ಲಿ ತಿಳಿಯಿರಿ.
ಶಿವನಿಗೆ ಕ್ಷೀರಾಭಿಷೇಕ ಮಾಡಲು ಪಾಲಿಸಬೇಕಾದ ನಿಯಮಗಳು
1)ಆಗಷ್ಟೇ ಕರೆದ ಹಾಲನ್ನು ಅಭಿಷೇಕಕ್ಕೆ ಬಳಸಿದ್ರೆ ಒಳ್ಳೇದು. ಮುಂಜಾನೆ ಕರೆದ ಹಾಲನ್ನು ಸಾಯಂಕಾಲದ ಅಭೀಷೇಕಕ್ಕೆ ಬಳಸಬಾರದು.
2)ಶಿವನಿಗೆ ತಣ್ಣನೆಯ ಹಾಲಿನ ಅಭಿಷೇಕ ಮಾಡಿದ್ರೆ ಶುಭ.
3)ಶಿವನಿಗೆ ಪ್ಯಾಕೆಟ್ ಹಾಲನ್ನು ನೇರವಾಗಿ ಬಳಸಬಾರದು. ಪ್ಯಾಕೇಟ್ ಹಾಲನ್ನು ಪಾತ್ರೆಗೆ ವರ್ಗಾಯಿಸಿ ನಂತರ ಅಭಿಷೇಕ ಮಾಡಬೇಕು.
4)ಮನೆಯಲ್ಲಿರುವ ಶಿವಲಿಂಗಕ್ಕೆ ನೀರಿನ ಕಾರಂಜಿಯ ವ್ಯವಸ್ಥೆ ಮಾಡಿ. ಇಲ್ಲವೇ ಧಾರಾಪಾತ್ರೆಯ ಮೂಲಕ ಶಿವನ ತಲೆ ಮೇಲೆ ಸದಾ ನೀರು ಬೀಳುತ್ತಿರುವಂತೆ ಮಾಡಿದರೆ ಶುಭಪ್ರದ.
ಹೀಗೆ ಭಗವಂತನಿಗೆ ಅನೇಕ ವಿಧಗಳಲ್ಲಿ ಪೂಜೆ-ಪುನಸ್ಕಾರ, ನೈವೇದ್ಯ, ಸೇವೆ, ಜಪತಪಾದಿಗಳನ್ನು ಮಾಡಿ ಆರಾಧಿಸಲಾಗುತ್ತೆ. ಇವೆಲ್ಲವುಗಳಿಂಗಿಂತ ಶಿವ ಭಕ್ತಿಯಿಂದ ಮಾಡುವ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕಕ್ಕೆ ಸಂಪ್ರೀತನಾಗಿ ನಮ್ಮ ಬೇಡಿಕೆಯನ್ನೆಲ್ಲಾ ಈಡೇರಿಸ್ತಾನೆ ಅಂತಾ ಹೇಳಲಾಗುತ್ತೆ. ಇನ್ನು ಅಭಿಷೇಕಕ್ಕೆ ಹಾಲು ಬಳಸೋದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಯಾಕಂದ್ರೆ ಗೋವು ಬಹಳ ಪವಿತ್ರ ಹಾಗೂ ಪೂಜನೀಯವಾದುದು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಗೋವಿನ ಹಾಲಿನಿಂದ ಮಾಡುವ ಅಭಿಷೇಕಕ್ಕೆ ಭಗವಂತ ಸಂಪ್ರೀತನಾಗ್ತಾನೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಭಕ್ತರ ಎಲ್ಲಾ ಕೋರಿಕೆ ಈಡೇರಿಸುವ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಏನು ಫಲ?