ಪ್ರೀತಿ ಎಂಬುದು ಹೊಸದಾಗಿ ಪ್ರೇಮವನ್ನು ಹಂಚಿಕೊಳ್ಳುತ್ತಿರುವ ನವ ಜೋಡಿಗಳಲ್ಲಿ ಮಾತ್ರವಲ್ಲ. ಮದುವೆಯಾದ ಜೋಡಿಗಳಲ್ಲೂ ಸ್ಥಿರವಾಗಿರುವಂಥದ್ದು. ಪ್ರೇಮಿಗಳಿಗೆ ಪ್ರೇಮ ನೀವೇದನೆ ಹೇಳಿಕೊಳ್ಳಲು ಪ್ರೇಮ ದಿನವೇ ಬೇಕಂತಿಲ್ಲ. ಪ್ರೀತಿಯನ್ನು ಹೇಳಿಕೊಳ್ಳಲು ಹೋದಾಗ ಹೆದರಿಕೆಗಾಗುತ್ತೆ, ನಾಚಿಕೆಯಾಗುತ್ತೆ ಮಾತ್ರವಲ್ಲದೇ ತಮಾಷೆಯ ಸಂಗತಿಗಳೂ ನಡೆದಿರುತ್ತೆ. ಅಂತಹದ್ದೊಂದು ತಮಾಷೆ ಕಥೆ ಇಲ್ಲಿದೆ. ಪ್ರೀತಿಯಿಂದ ಗಂಡನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಹೋಗಿ ನಡೆದ ತಮಾಷೆಯ ಸಂಗತಿಯೊಂದನ್ನು ಯೂಟ್ಯೂಬರ್ ಅನುಪಮಾ ಹೆಗಡೆ ಟಿವಿ9 ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಅವರ ಬರಹದಲ್ಲೇ ಓದೋಣ ಪ್ರೀತಿ ಹೇಳಲು ಹೋಗಿ ನಡೆದ ತಮಾಷೆ ಸಂಗತಿಯನ್ನು..
ಗಂಡನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡುವುದು, ಏನಾದ್ರು ಗಿಫ್ಟ್ ಕೊಡುವುದು ಅಂದರೆ ನಂಗೆ ಇಷ್ಟ. ಅವರಿಗೂ ನನ್ನ ಚಾಯ್ಸ್ ಇಷ್ಟ. ಹೀಗೆ ಇರುವಾಗ ಒಮ್ಮೆ ಏನಾಯ್ತು ಅಂದ್ರೆ, ಅವರು ಮುಂಬೈಗೆ ಹೋಗಬೇಕಾಗಿ ಬಂತು. ಹುಟ್ಟುಹಬ್ಬ ನಾನಿಲ್ಲದೆ ಅಲ್ಲಿ ಆಚರಿಸಿಕೊಳ್ಳೋ ಸಮಯ ಅದಾಗಿತ್ತು. ಅವರ ಬ್ಯಾಗ್ ಪ್ಯಾಕ್ ಮಾಡೋದು ನಾನೇ. ಎಷ್ಟು ದಿನ ಇರುತ್ತಾರೋ ಅಷ್ಟು ದಿನಕ್ಕೆ ಆರ್ಡರ್ನಲ್ಲಿ ಬಟ್ಟೆಗಳನ್ನು ಜೋಡಿಸಿ ಇಡುತ್ತೇನೆ.
ಹುಟ್ಟುಹಬ್ಬದ ದಿನ ಮೊದಲೇ ವಿಶ್ ಮಾಡಿ ಮುಗಿದಿತ್ತು. ಬ್ಯಾಗ್ ನೋಡಿ ಅದರಲ್ಲಿರುವ ಸರ್ಪ್ರೈಸ್ ನೋಡಿ ಫೋನ್ ಮಾಡ್ತಾರೆ ಅಂತ ಕಾಯುತ್ತಾ ಕುಳಿತಿದ್ದೆ. ಹಾಗೆ ಅವರು ಬ್ಯಾಗ್ ಓಪನ್ ಮಾಡಿದ್ದಾರೆ ಹೊಸ ಟೀ ಶರ್ಟ್, ಇದೆ. ಎತ್ತಿ ನೋಡಿದ್ದಾರೆ ತಕ್ಷಣ ಫೋನ್. ನನಗೋ ಇಲ್ಲಿ ಭಾರೀ ಖುಷಿ. ಅರೆ, ಚಂದ ಇದೆ ಟೀ ಶರ್ಟ್, ಈ ಕಲರ್ ಇರಲಿಲ್ಲ, ಯಾವಾಗ ತಂದೆ, ಹಾಕಿಕೊಳ್ತೇನೆ, ಫೋಟೋ ಕಳಿಸ್ತೀನಿ, ಅದು-ಇದು ಮಾತಾನಾಡಿದ್ರು. ನಾನು ಕಾಯ್ತಾ ಇದ್ದೆ. ವಿಷಯಕ್ಕೆ ಬರ್ತಿಲ್ವಲ್ಲ ಇವರು ಅಂತ.
ಮತ್ತೆ ಮತ್ತೆ, ಬ್ಯಾಗ್ ಎಲ್ಲ ಸರಿ ಇತ್ತ ಅಂತ ಕೇಳಿದೆ. ಎಲ್ಲ ಸರಿ ಇತ್ತು ಅಂದ್ರು. ಹುಂ.. ಎಲ್ಲ ಪರ್ಫೆಕ್ಟ್ ಅಂದ್ರು. ಆದ್ರೆ ನಾನು ಕಾಯುತ್ತಿದ್ದ ವಿಷಯ ಬರಲೇ ಇಲ್ಲ. ಮರುದಿನ ಬೆಳಿಗ್ಗೆ ಪ್ಲೈಟ್ ಇತ್ತು. ಮನೆಗೆ ಬಂದ ತಕ್ಷಣ ಬ್ಯಾಗ್ ಕೊಡಿ ಅಂದೆ. ಯಾಕೆ, ನಿನಗೆ ಬ್ಯಾಗ್? ನಾನು ಏನು ತಂದಿಲ್ಲ ಅಂದ್ರು. ಕೊಡಿ ನೀವು ಅಂತ ಓಪನ್ ಮಾಡಿ ನೋಡಿದೆ. ಟೀ ಶರ್ಟ್ ಒಳಗೆ ಹುಟ್ಟುಹಬ್ಬದ ಶುಭಾಶಯದ ಜೊತೆಗೆ ಒಂದು ಪ್ರೀತಿಯ ಸಂದೇಶದ ಚೀಟಿ ಇಟ್ಟಿದ್ದೆ. ಟೀ ಶರ್ಟ್ ಎತ್ತಿದ್ದಾಗ ಅದು ಬ್ಯಾಗ್ ಒಳಗಡೆ ಬಿದ್ದು ಅದು ಹೇಗೋ ಬಟ್ಟೆಯ ಅಡಿಗಡೆಯಾಗಿದೆ.
ಇನ್ನೇನು.. ಅವರಿಗೆ ನನ್ನ ಪ್ರೀತಿಯ ಸಂದೇಶ ಸಿಕ್ಕೇ ಇರಲಿಲ್ಲ. ಸ್ವಲ್ಪ ಬೇಸರವಾದರೂ ನಗು ಮುಂದಿತ್ತು. ಏನೇ ಈ ರೀತಿ ಎಲ್ಲಾ ಉಪಾಯ ಮಾಡಿದ್ಯಾ.. ಮೊದಲೇ ಹೇಳಿದ್ರೆ ತೆಗೆದು ಹುಡುಕಿ ಓದುತ್ತಿದ್ದೆ, ಅಂತ ನನ್ನವರು ಬಿದ್ದು ಬಿದ್ದು ನಕ್ಕಿದ್ದರು. ಮನೆಯಲ್ಲಿ ಅವರನ್ನು ಕೂರಿಸಿ ನಾನೇ ಪತ್ರದಲ್ಲಿ ಬರೆದ ಪ್ರೀತಿಯನ್ನು ಓದಿದೆ.
Valentine’s Day ಎದೆಬಡಿತ ಲೆಕ್ಕ ಹಾಕುತ್ತಾ ಕೂರದೇ ಮನದಮಾತು ಥಟ್ಟಂತ ಹೇಳಿಬಿಡು ಗೆಳತಿ
Published On - 5:28 pm, Mon, 8 February 21