Valentine’s Day: ಮುತ್ತು ಜೋಡಿಸಿ ಪತ್ರ ಬರೆದೆ, ಕೊಡುವಾಗ ಮಾತ್ರ ಯಾಮಾರಿಬಿಟ್ಟೆ

| Updated By: Skanda

Updated on: Feb 13, 2021 | 1:20 PM

ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಮಾಡಿಕೊಳ್ಳುವ ಅವಸರದಲ್ಲೋ ಅಥವಾ ತವಕದಲ್ಲಿರುವ ಪ್ರೇಮಿಗಳ ನಡುವೆ ಅದೆಷ್ಟೋ ಹಾಸ್ಯ ಪ್ರಸಂಗಗಳು ನಡೆದಿರುತ್ತವೆ. ಅಂತಹ ಹಾಸ್ಯ ಪ್ರಸಂಗವೊಂದು ನಿಮ್ಮ ಮುಂದಿದೆ.

Valentines Day: ಮುತ್ತು ಜೋಡಿಸಿ ಪತ್ರ ಬರೆದೆ, ಕೊಡುವಾಗ ಮಾತ್ರ ಯಾಮಾರಿಬಿಟ್ಟೆ
ಸಾಂದರ್ಭಿಕ ಚಿತ್ರ
Follow us on

ಪ್ರೇಮಿಗಳ ದಿನಕ್ಕಾಗಿ ಪ್ರೀತಿಯಲ್ಲಿ ಗೆದ್ದ ಜೋಡಿ ಹಕ್ಕಿಗಳಂತೆಯೇ  ಈಗಷ್ಟೇ ರೆಕ್ಕೆಬಿಚ್ಚಿ ಹಾರಲು ಹೊರಟವರೂ  ಕಾಯುತ್ತಿರುತ್ತಾರೆ. ಅದು ಅತ್ಯಂತ ಸಹಜ ಕೂಡಾ. ಪ್ರೇಮಿಗಳ ದಿನವೆಂದರೆ ಸರ್ಪ್ರೈಸ್​ ಗಿಫ್ಟ್​, ಒಂದಿಷ್ಟು ಹೂವು, ಬಣ್ಣ ಬಣ್ಣದ ಉಡುಪು, ಸುತ್ತಾಟ ಇವೆಲ್ಲದರ ಸಮಾಗಮ. ಈ ಸಂದರ್ಭದಲ್ಲಿ ಎಲ್ಲಾ ಜೋಡಿಗಳೂ ತಮ್ಮದೇ ಲೋಕದಲ್ಲಿ ನಲಿಯುತ್ತಿರುತ್ತಾರೆ. ಒಟ್ಟಾಗಿ ಕೆಲಕಾಲ ಕಳೆಯಲು ಬರುವ ಜೋಡಿಗಳಿಗೆ ಒಮ್ಮೊಮ್ಮೆ ಅನಿರೀಕ್ಷಿತವಾಗಿ ಒಂದಷ್ಟು ತಮಾಷೆ ಪ್ರಸಂಗಗಳೂ ಎದುರಾಗಿರುತ್ತದೆ. ಇವೆಲ್ಲಾ ಪ್ರೇಮಿಗಳ ಪಾಲಿನ ಅವಿಸ್ಮರಣೀಯ ಘಟನೆಗಳು. ಇಂತಹ ತಮಾಷೆ ಪ್ರಸಂಗಗಳೇ ಕೆಲವರ ಪಾಲಿಗೆ ಕಗ್ಗಂಟ್ಟಾಗಿದ್ದೂ ಇದೆ. ಪ್ರೀತಿ ವಿಷಯ ಹಂಚಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ಇಂತಹದ್ದೊಂದು ತಮಾಷೆ ಘಟನೆಯ ನವಿರಾದ ಮೆಲುಕು ಇಲ್ಲಿದೆ.

ಅವಳು ಗುಳಿಗೆನ್ನೆಯ ಸುಂದರಿ ಸ್ಮೃತಿ. ಮೊದಲಿನಿಂದಲೂ ನಾಚಿಕೆ ಸ್ವಭಾವದವಳೇ.. ಯಾರೊಂದಿಗೂ ಜಾಸ್ತಿ ಬೆರೆಯುತ್ತಿರಲಿಲ್ಲ. ಕಾಲೇಜಿಗೆ ಹೋಗುವಾಗ ಹುಡುಗರ ನೋಟ ತಪ್ಪಿಸಿಕೊಳ್ಳಲು ಮುಸುಕು ಧರಿಸಿ ಕಾಲೇಜಿಗೆ ಹೋಗುತ್ತಿದ್ದಳಾಕೆ. ಯಾರ ಬಳಿಯೂ ಅಷ್ಟು ಮಾತನಾಡುವಂಥವಳಲ್ಲ. ತಾನು ತನ್ನ ಸ್ನೇಹಿತರು ಇಷ್ಟೇ ಅವಳ ಪ್ರಪಂಚ ಎನ್ನುವಂತೆ ದಿನ ಸಾಗುತ್ತಿತ್ತು. ಆದರೆ ಅದೊಂದು ದಿನ ಆಕೆ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ತರುಣನೊಬ್ಬ ನಿಂತಿದ್ದ. ಗ್ರಂಥಾಲಯದಿಂದ ತಂದಿದ್ದ ಒಂದಿಷ್ಟು ಪುಸ್ತಕಗಳನ್ನು ಕೈಯ್ಯಲ್ಲಿ ಹಿಡಿದು ಸಾಗುತ್ತಿದ್ದ ಸ್ಮೃತಿ ಕಲ್ಲೆಡವಿ ಬಿದ್ದುಬಿಟ್ಟಳು.

ಮುಜುಗರಗೊಂಡ ಸ್ಮೃತಿ ತುಸು ಬೇಗ ಎದ್ದು ನಿಂತು ಇನ್ನೇನು ಹೊರಡಬೇಕೂ ಅಷ್ಟರಲ್ಲಿ, ಅವಳನ್ನೇ ನೋಡುತ್ತಿದ್ದ ತರುಣ ಓಡೋಡಿ ಇವಳತ್ತ ಬಂದು ಏನಾಯಿತು? ಹುಷಾರಾಗಿ ನಡೆಯಬೇಕಲ್ವೇ? ಎಂದು ಕೇಳುತ್ತ ಪುಸ್ತಕಗಳನ್ನು ಅವಳ ಕೈಯ್ಯಲ್ಲಿ ನೀಡಿದ. ಆಗಲೇ, ಅವರಿಬ್ಬರ ಕಣ್ಸೆಳೆತ ಒಂದಾಗಿತ್ತು. ಸ್ಮೃತಿಯ ಕೆನ್ನೆಗಳು ನಾಚಿ ನವಿರಾಗಿದ್ದವು. ಅದೇ ಸಮಯ ಅವರಿಬ್ಬರ ಪ್ರೀತಿಗೆ ಮುನ್ನುಡಿ ಬರೆದಿದ್ದು. ನಂತರದ ದಿನಗಳಲ್ಲಿ ಪ್ರೀತಿ ಹಂಚಿಕೊಂಡಿದ್ದಾಯಿತು. ಅದೆಷ್ಟೋ ಉಡುಗೊರೆಯನ್ನು ನೀಡಿದ್ದೂ ಆಯಿತು. ಹೀಗೆ ದಿನ ಸಾಗುತ್ತಿದ್ದಂತೆಯೇ ಫೆ.14 ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ತರುಣ, ಸ್ಮೃತಿಗಾಗಿ ಪ್ರೀತಿಯ ಸಿಹಿ ಮುತ್ತುಗಳನ್ನು ಪೋಣಿಸಿಟ್ಟಂತೆ ಪದಗಳನ್ನು ಜೋಡಿಸಿ ಪತ್ರ ಬರೆದ. ಅದೇ ಮೊದಲ ಬಾರಿಗೆ ತರುಣ ಬರೆದ  ಪತ್ರವದು.

‘ಮೊದಲ ನೋಟದಲ್ಲಿನ ಆ ನಿನ್ನ ಕಣ್ಣಿನ ಭಾವ ನನ್ನ ಎದೆಯಲ್ಲಿ ಅಚ್ಚಳಿಯದೇ ಉಳಿದಿದೆ. ನೀ ನಗುವಾಗ ನನ್ನ ಎದೆ ಬಡಿತದ ಸದ್ದು ಆಹ್ಲಾದಿಸಲು ನನ್ನೀ ಮನಸ್ಸು ಕಾಯುತ್ತಿದೆ. ನೀ ನಡೆದು ಬರುವಾಗ ಹೃದಯದ ಬಡಿತವನ್ನು ಆನಂದಿಸಲು ಪ್ರತೀ ಕ್ಷಣ ಮನಸ್ಸು ಚಡಪಡಿಯುತ್ತದೆ. ಏಕೋ ಏನೋ ಗೊತ್ತಿಲ್ಲ. ನಿನ್ನನ್ನು ಇಂದು ನೋಡಲೇ ಬೇಕು ಎಂಬ ಹಂಬಲ ಮನಸ್ಸಿಗೆ ನಾಟುತ್ತಿದೆ. ಓಡೋಡಿ ಬಂದಿದ್ದೇನೆ. ನನ್ನನ್ನು ಎಂದೂ ಬಿಟ್ಟು ಹೋಗುವುದಿಲ್ಲ ಎಂದು ಪ್ರೇಮಿಗಳ ದಿನದಂದೇ ಹಣೆಗೆ ಮುತ್ತಿಕ್ಕಿ ಭಾಷೆ ನೀಡು ಸಖಿ..’

ಇದನ್ನೂ ಓದಿ: Valentine’s Day: ಸರ್ಪ್ರೈಸ್ ತಂದ ಫಜೀತಿ, ಅವರಿಗೆ ಸಿಗಲೇ ಇಲ್ಲ ಪ್ರೀತಿಯ ಪತ್ರ

ತನ್ನ ಪ್ರೀತಿಯನ್ನು ಪದಕ್ಕಿಳಿಸಿದ ಪತ್ರವನ್ನು ಕಿಸೆಯಲ್ಲಿಟ್ಟುಕೊಂಡು ತರುಣ ಬಸ್​ ಹತ್ತಿ ಹೊರಟ. ಅವರಿಬ್ಬರು ಸೇರುವ ಮಾಮೂಲಿ ಜಾಗದಲ್ಲಿ ಸ್ಮೃತಿಗಿಂತ ಬೇಗ ಬಂದು ಕಾಯುತ್ತ ಕುಳಿತ. ಅವನ ಕಣ್ಣುಗಳಲ್ಲಿ ಪ್ರೀತಿಯ ಭಾವನೆಗಳು ಮೂಡಿದ್ದವು. ತಾನು ಬರೆದ ಮೊದಲ ಪತ್ರವನ್ನು ಸ್ಮೃತಿಯೊಡನೆ ಹಂಚಿಕೊಳ್ಳಲು ತರುಣನ ಮನಸ್ಸು ಚಡಪಡಿಸುತ್ತಿತ್ತು. ಕಣ್ಣುಗಳು ಅವಳು ಬರುವ ದಾರಿಯನ್ನೇ ಕಾಯುತ್ತಿತ್ತು. ಅದೇ ಸಮಯಕ್ಕೆ ಸ್ಮೃತಿ, ಕೆಂಪು ಬಣ್ಣದ ಉಡುಪಿನಲ್ಲಿ ತರುಣನ ಕಣ್ಣಲ್ಲಿ ಹೊಳೆಯುತ್ತಿದ್ದಳು . ಬರೆದ ಪತ್ರದ ಗುಂಗಿನಲ್ಲೇ ಅವಳನ್ನು ನೆನೆಯುತ್ತ ನಿಂತ ತರುಣ ಕೆಂಪು ಗುಲಾಬಿಯನ್ನು ಮುಡಿಗೆ ಮುಡಿಸಿದ. ಮಂಡಿಯೂರಿ ಕೈಯ್ಯಲ್ಲಿದ್ದ ಪತ್ರವನ್ನು ಅವಳಿಗೆ ಕೊಟ್ಟು ತನ್ನ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲಾರಂಭಿಸಿದ. ಅವನು ಹೇಳುತ್ತ ಸಾಗುತ್ತಿದ್ದಂತೆಯೇ ಸ್ಮೃತಿಯ ತುಟಿಯಂಚಿನಲ್ಲಿ ನಗು ಮೂಡಿತ್ತು. ಜೋರಾಗಿ ನಗಲಾರಂಭಿಸಿದಳು . ಪತ್ರದಲ್ಲಿ ತೊಗರಿ ಬೇಳೆ 1ಕೆ.ಜಿ, ಹೆಸರು ಬೇಳೆ 1ಕೆ.ಜಿ ಮತ್ತು ತರಕಾರಿ ಲಿಸ್ಟ್​ ಬರೆದಿದ್ದನ್ನು ಕಂಡ ತರುಣ ಕೋಪಗೊಂಡ. ಸ್ಮೃತಿಗೆ ಮಾತ್ರ ತಡೆಯಲಾರದಷ್ಟು ನಗು.

ಆಗಲೇ ಗೊತ್ತಾದದ್ದು, ಬಸ್ಸಿನಲ್ಲಿ ಬರುವಾಗ ಕಾಲಿಗೆ ಧರಿಸಿದ್ದ ಬೂಟಿನ ದಾರವನ್ನು ಕಟ್ಟಿಕೊಳ್ಳಲು ಹೋದಾಗ ಪಕ್ಕದಲ್ಲಿ ಕೂತಿದ್ದ ಅಜ್ಜಿಯ ಬ್ಯಾಗ್​ ಕೆಳಗೆ ಬೀಳಿಸಿದ್ದ ತರುಣ. ಬ್ಯಾಗಿನಲ್ಲಿದ್ದ ಕಾಗದಗಳೆಲ್ಲ ಕೆಳಗೆ ಬಿದ್ದಿದ್ದವು. ಅಜ್ಜಿಗೆ ಅವುಗಳನ್ನು ಹೆಕ್ಕಿಕೊಡಲು ಹೋಗಿ ತನ್ನ ಕಿಸೆಯಲ್ಲಿದ್ದ ಪತ್ರ ಕೆಳಗೆ ಬಿದ್ದಿತ್ತು. ಅಲ್ಲೇ ಬದಲಾಗಿದ್ದು ಪತ್ರ. ಮನೆಯ ಸಾಮಗ್ರಿ ಚೀಟಿಯನ್ನು ನೋಡಿದ್ದ ಸ್ಮೃತಿ ಜೋರಾಗಿ ನಕ್ಕಳು. ಆದರೆ, ತರುಣನ ಪ್ರೀತಿಯ ಪತ್ರ ಓದಿದ ಅಜ್ಜಿಯ ಮುಖದಲ್ಲಿ ತುಸು ನಾಚಿಕೆಯ ನಗುವಿತ್ತು.

Published On - 8:36 pm, Fri, 12 February 21