ಹಲೊ, ಬೈ ಮಧ್ಯದ ಲೈಫ್ ಸ್ಪ್ಯಾನ್ ಚಿಕ್ಕದು. ಈಗಿನ ಕಾಲದ ಯುವಕ ಯುವತಿಯರಿಗೆ ವ್ಯವಧಾನವೇ ಇಲ್ಲ. ಫೇಸ್‌ಬುಕ್, ವಾಟ್ಸ್ಆಪ್, ಟ್ವಿಟರ್, ಇನ್ಸ್ಟಾದಲ್ಲಿ ಪ್ರಪೋಸ್ ಮಾಡೋದು ಎಷ್ಟು ಸುಲಭವೋ ಅಷ್ಟೇ ದೂರಾಗೋದೂ ಕೂಡ. ಈ ಫಾಸ್ಟ್ ಫುಡ್ ಭರಾಟೆಯಲ್ಲಿ ‘ಸ್ನೇಹ,-ಪ್ರೀತಿ’, ‘ಪಿಜ್ಜಾ- ಬರ್ಗರ್’ ಥರ. ತಿಂದಾಗ ಅಷ್ಟೆ ತೃಪ್ತಿ. ಹಾಗೆ ನಿನ್ನ ಭೇಟಿಯೂ ಹೌದು. ಒಂದು ವಾರ ಕಳೆದಿರಲ್ಲ ಮತ್ತೆ ನೋಡುವಾಸೆ. ತಂತ್ರಜ್ಞಾನದ ಮಾಯಾಜಾಲದ ಪ್ರೀತಿಯ ಓಯಾಸಿಸ್ ನೀನು! ಒಲವ ಜಲಧಾರೆ ಹರಿಸುವ ಜಾದುಗಾರ. (Valentine’s Day 2021)
ಅಲ್ಲ ಕಣೊ.. ಈ ಗದ್ದಲದಲ್ಲಿ ಎಲ್ಲಿಂದ ತಗಲಿಕೊಂಡೆ? ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನೇ ಸಿಗಬೇಕಾ? ಪ್ರೀತಿಸಲೇ ಬೇಕೆನ್ನುವಷ್ಟು ಸುಂದರಿಯಲ್ಲ. ರೂಪ ಇಲ್ಲ, ಬಣ್ಣ ಇಲ್ಲ, ತುಂಟತನವಿಲ್ಲ, ನಖ್ರಾ ಇಲ್ಲ, ಅದೇ ಸೋಜಿಗ! ಏನು ಆಕರ್ಷಿಸಿತೊ? ಗೊತ್ತಿಲ್ಲ ಮಾರಾಯ.
ನನ್ನೊಳಗಿನ ಪುಟ್ಟ ಪೋರಿ ತುಂಟಾಟ ಕಲಿತದ್ದು ನಿನ್ನಿಂದ. ನೀ ಹೇಳೋದು ಕೇಳಿದರೆ ಸಾಕು ಬಿಡು, ಈ ಜನ್ಮ ಸಾರ್ಥಕ. ಒಂದು ಹೆಣ್ಣು ಇನ್ನೇನು ಬಯಸುತ್ತಾಳೆ ಹೇಳು. ಮನಸು ಕಳಕೊಂಡು ನಿನ್ನ ಕೈವಶವಾಗಿ ಉಳಿಯೋದು ಸುಂದರ!
ನಿನ್ನ ದೃಷ್ಟಿಗೆ ಬಿದ್ದು, ನೋಟದಲಿ ನೆಲೆಸಿ, ಕಣ್ರೆಪ್ಪೆಯ ಕಾವಲಿನಲಿ, ಕಣ್ಮಣಿಯಾಗಿ ಸಂಭ್ರಮಿಸುವುದಿದೆ ನೋಡು, ಅದು ಗುಡ್ಡದ ಮೇಲೆ, ಪ್ರಕೃತಿ ಎದುರು ಮೈಚೆಲ್ಲಿ, ಗಟ್ಟಿಯಾಗಿ ನಿನ್ನ ಹೆಸರು ಹೇಳಿದಂತೆಯೇ ಸರಿ. ಮಾಮೂಲಿ ಲವರ್ಸ್ಗಳಿಗಿಂತ ನೂರು ಪಟ್ಟು ಸ್ಟ್ರಾಂಗ್. ನೀನು ಹಟಮಾರಿ. ಈ ಜಗತ್ತಿನಲ್ಲೇ ಯಾವ ಪ್ರೇಮಿಯೂ ಇರಲ್ಲ ಬಿಡು. ಅದೇನು ತೀವ್ರತೆ!
ನೀ ಮನಸು ಕದ್ದ ಕಳ್ಳ ಅಷ್ಟೇ ಅಲ್ಲ. ಲಂಪಟ, ಪಟಿಂಗ ಇನ್ನೂ ಏನಾದರಿದ್ದರೆ ಸೇರಿಸಿ ಪ್ರೀತಿಯಿಂದ ಬೈದು ಬಿಡುವಾಸೆ. ಹೆಣ್ಣಿಗೆ ಬೇಕು ಚಾಕೊಲೇಟ್ ಹೀರೋ ಅಲ್ಲ. ಹೀರೋ, ವಿಲನ್ ಎರಡೂ ಆದ ನಿಪುಣ. ಯು ಆರ್ ಮ್ಯಾನ್ಲಿ!
ಮನಸು ನೀ ಹೀಗೇ ಇರಲೆಂದು ಬಯಸೋದಿಲ್ಲ. ಇರುವ ಹಾಗೇ ಸ್ವೀಕರಿಸಿ, ‘ನನ್ನ ಹುಡುಗ ಹೀಗೇ!’ ಮನಸು ಒಪ್ಪಿಯಾಯಿತು. ಈ ಹಂತ ತಲುಪುವವರೆಗೆ ನಮ್ಮಿಬ್ಬರ ಮಧ್ಯೆ ಅದೇನು ಢಿಫರೆನ್ಸ್ ಮಾರಾಯ! ನಿನ್ನಂಥವನ ಜೊತೇಲಿ ಏಗುವುದು ಸುಲಭವಲ್ಲ.
‘ಶಾಲ್ ವೀ ಹ್ಯಾವ್ ಕಾಫಿ?’ ಎಂದಾಗ ಮನದ ಕೋಲಾಹಲ. ಶ್ರೇಯಾ ಘೊಶಾಲ್ ಮತ್ತು ಸೋನು ನಿಗಮ್ ನಮ್ಮಿಬ್ಬರ ಸುತ್ತಲೂ ಡುಯೆಟ್ ಹಾಡಿದಂತೆ…ನನ್ನ ಕನಸುಗಳೆಲ್ಲಾ ನಿನ್ನ ಕನಸುಗಳಾಗಿದ್ದವು.
ಅಂದು ಕಾಫಿಡೇಗೆ ಹೊರಟಾಗ ಮನದ ಡೊಂಬರಾಟ ಹೇಗೆ ಹೇಳಲಿ? ನಿನ್ನ ಮೇಲೆ ಭರವಸೆ. ನನ್ನ ಮೇಲೆ ನನಗೆ ಇದೆಯೊ ಇಲ್ಲವೊ ಗೊತ್ತಿಲ್ಲ. ನಿನ್ನ ಮೇಲೆ ಸಂಪೂರ್ಣ ವಿಶ್ವಾಸ. ಎಲ್ಲಾ ತವಕ, ತಲ್ಲಣಗಳ ಬದಿಗಿರಿಸಿ ಹೊರಟೇ ಬಿಟ್ಟೆ. ಆ ದಿನದ ಥ್ರಿಲ್ಲೇ ಬೇರೆ!
ನಮ್ಮ ಸ್ನೇಹದ ಪಯಣ ಸುದೀರ್ಘ. ಅದರ ಗಮ್ಯವೇ ‘ಪ್ರೀತಿ’ ಹೇಳಿದೆ. ಕಣ್ಣಗಲಿಸಿ, ಕೆನ್ನೆಗೆ ಕೈಯಾನಿಸಿ, ಆಶ್ಚರ್ಯಪಟ್ಟಿದ್ದೆ. ಒಳಗೊಳಗೇ ಹೋಳಿಗೆ ಉಂಡ ಸಂಭ್ರಮ. ನಿನಗೆ ಗೊತ್ತಾಗದಂತೆ ಅನಂದಿಸಿದೆ. ಮನದ ಡೊಂಬರಾಟ ಮುಚ್ಚಿಕೊಳ್ಳೋದು ಎಷ್ಟು ಕಷ್ಟ ಮಾರಾಯ. ಅದೂ ನಿನ್ನಂಥವನ ಮುಂದೆ. ಡಾ ಅಂದರೆ ಡೊಮಿನೋಸ್, ಮ ಅಂದರೆ ಮ್ಯಾಕ್ ಡೊನಲ್ಸ್ ಅನ್ನುವವನ ಕಣ್ಣಿಗೆ ಮಣ್ಣು ಹಾಕುವುದೇನು ಅಷ್ಟು ಸುಲಭವಲ್ಲ ಬಿಡು.
ಒಟ್ಟೊಟ್ಟಿಗೆ ಮಾಡಿದ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಲೆಕ್ಕವಿಲ್ಲ. ಕಾಯುತ್ತ ಕಳೆದ, ಮತ್ತೆ ಮತ್ತೆ ಭೇಟಿಗೆ ಹಾತೊರೆಯುವ, ಹುಚ್ಚು ಮನಸಿನ ಆಸೆಯ ಬಿಸಿಲುಗುದುರೆ ಯಾರ ಕಾಟವಿಲ್ಲದೆ ಓಡಿದ್ದೇ ಓಡಿದ್ದು. ಈ ಕನಸುಗಳೇ ಹೀಗೆ. ಹಗಲು ರಾತ್ರಿಯೆನ್ನದ ಸವಾರಿ!
ಕಾಫಿಡೇ ಪ್ರವೇಶಿಸಿದಾಗ ಅನೇಕ ಜೋಡಿಗಳಿದ್ದರೂ, ನಾವು ತುಂಬಾ ಸ್ಪೆಷಲ್ ಮಾರಾಯ. ಈ ಜಗತ್ತಿಗೇ ಜೀವಂತಿಕೆ ಸಿಕ್ಕಿದ್ದು ನಮ್ಮಿಂದ. ಪ್ರೀತಿ ಶಾಶ್ವತ ಉಳಿಯೋದು ನಮ್ಮಿಂದ. ಜೀವ ಚೈತನ್ಯದ ಮುಂದುವರಿಕೆಯ ಪ್ರತೀಕ.
ನಮಗಾಗಿ ಕಾಯ್ದಿರಿಸಿದ ಟೇಬಲ್ಲಿನ ಬಳಿ, ಇಂಗ್ಲೀಷ್ ಮೂವಿಯಲ್ಲಿ ಹೀರೋ ಮಾಡಿದಂತೆ, ಕುರ್ಚಿ ಹಿಂದಕ್ಕೆ ಎಳೆದು, ನಾ ಕೂರುವುದರಲ್ಲಿ ನಿಧಾನಕ್ಕೆ ಮುಂದೆ ಸರಿಸಿದ್ದೆ. ಇದೆಲ್ಲ ಅಭ್ಯಾಸವಿಲ್ಲದವಳಿಗೆ ಅದೇನು ಮುಜುಗರ ಅಂತಿಯಾ. ಕೇಳಬೇಡ ಮಾರಾಯ.. ದೇವಸ್ಥಾನದಲ್ಲಿ ತೂಗಿಬಿಟ್ಟ ಗಂಟೆ ಗಾಳಿಗೆ ಓಲಾಡುತ್ತ ಬಾರಿಸಿಕೊಂಡಂತೆ. ಅಷ್ಟರಲ್ಲಿ ಈಗ ಬಂದೆ ಎಂದು ನಿರ್ಗಮಿಸಿದೆ. ಎರಡು ಕೈ ಗದ್ದಕ್ಕಿಟ್ಟು ಶೂನ್ಯ ದೃಷ್ಟಿ ಬೀರುತ್ತ ದಾರಿ ಕಾದೆ.
ನಾ ಮೂಕವಿಸ್ಮಿತಳಾಗಿ ಬಿಟ್ಟ ಕಣ್ಣು ಬಡಿಯದೆ ಕೂತುಬಿಟ್ಟೆ..
ಕೆಲವು ಗಿಫ್ಟ್ ಗಳ ಕೈಲಿ ಹಿಡಿದು ಬರುತ್ತಿರುವುದ ನೋಡಿ ನೂರಾರು ಭಾವನೆಗಳು. ಇದೇನು ಕನಸೊ? ನನಸೊ? ಭ್ರಾಂತಿಯ ಛಾಯೆ. ನಗುಮೊಗದಿ ಬಂದವನೆ ‘ಇದೆಲ್ಲಾ ನಿನಗಾಗಿ, ಸುಮಾರು ದಿನಗಳಿಂದ ನಿನ್ನ ಗಮನಿಸಿ, ನನ್ನ ಸೇವಿಂಗ್ಸ್ ನಲ್ಲೇ ಮಾಡಿದ ಕಲೆಕ್ಷನ್.’
ನಾ ಮೂಕವಿಸ್ಮಿತಳಾಗಿ ಬಿಟ್ಟ ಕಣ್ಣು ಬಡಿಯದೆ ಕೂತುಬಿಟ್ಟೆ. ನಿನ್ನ ಮುಗುಳ್ನಗೆ, ತುಂಟತನ, ಕಣ್ಣುಗಳಲಿ ಉಕ್ಕುವ ಒಲವಧಾರೆ, ಏನು ಹೇಳಲಿ? ಒಂದೊಂದೇ ಸುತ್ತಿದ ಬಣ್ಣದ ಕಾಗದ ಬಿಚ್ಚಿದೆ.
ನೀ ಗಮನಿಸಿದ ರೀತಿಗೆ ಬೆರಗಾದೆ ಕಣೊ. ನನಗಿಷ್ಟವಾಗುವ ಬ್ರ್ಯಾಂಡಿನ ವಸ್ತುಗಳ ಸಂಗ್ರಹ. ಜೀನ್ಸ್, ಪೆನ್, ಪರಫ್ಯೂಮ್, ಶಾಂಪು, ಸೋಪ್ ಅಬಾಬಬ..! ಏನು ಹೇಳಲಿ? ಮುಖ್ಯವಾಗಿ ಸರಿಯಳತೆಯ ಒಳುಡುಪು ತಂದಿರುವಿಯಲ್ಲ ಮಾರಾಯ! ನಿನ್ನ ಕಣ್ಣಳತೆಗೆ ಸಂಕೋಚ. ಒಳಗೊಳಗೇ ಜಾತ್ರೆಯ ತೊಟ್ಟಿಲಲ್ಲಿ ಕುಳಿತಂತೆ ಕಚಗುಳಿ. ‘ಆ…’ ಎಂದು ಕೂಗಿಕೊಳ್ಳಬೇಕೆನ್ನುವ ಎಕ್ಸೈಟ್ಮೆಂಟ್ ಕಣೊ. ಈ ಭಾವನೆಗಳನ್ನೆಲ್ಲಾ ಹೇಗೆ ಕಂಟ್ರೋಲ್ ಮಾಡಿಕೊಳ್ಳುವುದು? ನಿನ್ನ ತಬ್ಬಿಕೊಳ್ಳಲೂ ಆಗದ ಸಂಕಟ. ನೀನೋ ಅರಾಮಾಗಿ ಕ್ಷಣಕ್ಷಣದ ಭಾವನೆಗಳ ಜೊತೆ ಸರಸವಾಡುತ್ತಿದ್ದೆ.
ಅಷ್ಟರಲ್ಲಿ ಬಂತು ಕಾಫಿ. ಮುಚ್ಚಿಡಬೇಕಾದ ಗಿಫ್ಟನ್ನು ಮುಚ್ಚಿಟ್ಟು, ಸರ್ವ್ ಮಾಡುವ ಬಾಯ್ ಮುಂದೆ ಸಿಕ್ಕಿ ಬಿದ್ದ ಕಳ್ಳನ ಪರಿಸ್ಥಿತಿ. ನಿನಗೊ ತಮಾಷೆ. ಎದುರಿಗಿದ್ದ ಬಾಟಲಿಯ ನೀರನ್ನೆಲ್ಲಾ ನಿನ್ನ ತಲೆಯ ಮೇಲೆ ಸುರಿದಂತೆ ಮಾಡಿದೆ. ಥಂಬ್ಸ್ ಡೌನ್ ಮಾಡಿ ರೇಗಿಸುವುದೆ?
ಅಲ್ಲಿ ಕಾಫಿ ನೆಪ ಮಾತ್ರ!!!
ಇಬ್ಬರೂ ಶಾಂತವಾಗಿ ಕಾಫಿಯ ಕಪ್ಪನ್ನು ಹಿಡಿದಾಗ, ಇನ್ನೂ ಹೊಗೆಯಾಡುತಿತ್ತು. ಆ ಹೊಗೆಯಲ್ಲಿ ಕಾಫಿಯ ಫ್ಲೇವರ್ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿತು. ನಿನ್ನ ಕಣ್ಣ ದೃಷ್ಟಿಯಲ್ಲಿ ನಾ ಸೆರೆ.
ಅಲ್ಲಿ ಕಾಫಿ ನೆಪ ಮಾತ್ರ!!!
ಆ ಫ್ಲೇವರ್, ‘ನಾ ನಿನ್ನವಳೇ ನಾ ನಿನ್ನವಳೇ’ ಮಾರ್ನುಡಿಯಿತು.
ಕಾಫಿಡೇ ಮ್ಯೂಸಿಕ್ನಲ್ಲಿಯೂ ಅದೇ.
ಮನದ ಮಾತಿಗೆ ಮೌನ ಸಮ್ಮತಿಯ ಸವಿಗಾನ! ಅಲೆಅಲೆಯಾಗಿ ತೇಲಿತು..
ಕಾವ್ಯಶ್ರೀ ಮಹಾಗಾಂವ್ಕರ್
ಇದನ್ನೂ ಓದಿ: Valentine’s Day: ರಾಧಂಗೆ ಕೃಷ್ಣ, ಲೈಲಾಗೆ ಮಜನು, ರೋಮಿಯೋಗೆ ಜೂಲಿಯೆಟ್.. ಇವು ಜಗತ್ತಿನ ಬೆಸ್ಟ್ ಪ್ರೇಮಕಥೆಗಳು
Published On - 11:35 am, Sun, 14 February 21