Hug Day: ಪರಿಶುದ್ಧ ಪ್ರೇಮದಲ್ಲಿ ನವಿರಾದ ಅಪ್ಪುಗೆಗೂ ಇದೆ ವಿಶೇಷ ಸ್ಥಾನ!

|

Updated on: Feb 12, 2021 | 10:59 AM

Valentine's Week: ಪರಿಶುದ್ಧ ಪ್ರೇಮದಲ್ಲಿನ ಅಪ್ಪುಗೆ ಪ್ರೇಮಿಗಳ ನಡುವಿನ ನಂಬಿಕೆಯನ್ನು ಹೆಚ್ಚಿಸಬಲ್ಲದು. ನಾನು ನಿನಗೆ ಸದಾ ಕಾವಲಾಗಿ ಇರುತ್ತೇನೆ ಎಂಬ ಭಾವ ನಿಮ್ಮ ಪ್ರೇಮಿಯಲ್ಲಿ ಮೂಡುವುದಕ್ಕೆ ಈ ಅಪ್ಪುಗೆ ಸಹಕಾರಿ.

Hug Day: ಪರಿಶುದ್ಧ ಪ್ರೇಮದಲ್ಲಿ ನವಿರಾದ ಅಪ್ಪುಗೆಗೂ ಇದೆ ವಿಶೇಷ ಸ್ಥಾನ!
ಒಂದು ಬಿಸಿ ಅಪ್ಪುಗೆ ನಿಮ್ಮ ಹೃದಯದ ಆರೋಗ್ಯವನ್ನೂ ಸುಧಾರಿಸಬಲ್ಲದು..
Follow us on

ಪ್ರೇಮವೆಂದಾಕ್ಷಣ (Love) ಎದೆಯಲ್ಲಿ ತುಮುಲ, ತೊಳಲಾಟ ತಾರಕ್ಕೇರುತ್ತದೆ. ಎದೆಬಡಿತಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗಿ ಚಡಪಡಿಕೆ ಶುರುವಾಗುತ್ತದೆ. ಏಕಾಂತದಲ್ಲಿ ಕೂತು ಧ್ಯಾನ ಮಾಡಬೇಕೆಂದುಕೊಂಡರೂ ಮನಸ್ಸು ಒಲ್ಲೆ ಎನ್ನುತ್ತದೆ. ಹಿನ್ನೆಲೆಯಲ್ಲಿ ವಿರಹ ಗೀತೆಯೇನಾದರೂ ಕೇಳಿಬಂದರೆ ಹೃದಯದ ಗತಿ ಕೇಳುವುದೇ ಬೇಡ! ಅದ್ಯಾವ ದಿಕ್ಕಿನಿಂದ ಯೋಚಿಸಿದರೂ ಪ್ರೇಮಕ್ಕಿರುವಷ್ಟು ನವಿರಾದ ಭಾವ ಬೇರೆಲ್ಲೂ ಸಿಗುವುದಿಲ್ಲ. ಅಪರೂಪಕ್ಕೊಮ್ಮೆ ಸಿಗುವ ಪ್ರೇಮಿಗೆ ಬಿಸಿ ಅಪ್ಪುಗೆ ನೀಡಿ ಮೈಮರೆವ ಸುಖಕ್ಕೆ ಈ ಜಗದ ಬೇರಾವ ಸಂಪತ್ತೂ ಸಾಟಿಯಾಗುವುದಿಲ್ಲ. ತಂಗಾಳಿಯಲ್ಲಿ ತೇಲಿ ಬರುವ ಮೆಲುಮಾತು, ಅದಕ್ಕೆ ಹಿನ್ನೆಲೆ ಸಂಗೀತದಂತಹ ಮುಗುಳ್ನಗೆ, ನಡುವಲ್ಲೊಂದು ಮೃದು ಸ್ಪರ್ಶ, ಕೊನೆಗೆ ಬಿಸಿ ಅಪ್ಪುಗೆ ಇವಿಷ್ಟೂ ಇದ್ದರೆ ಎಲ್ಲರೂ ಖಾಯಂ ಪ್ರೇಮರೋಗಿಗಳೇ!

ಅಂದಹಾಗೆ ಈ ಅಪ್ಪುಗೆಗೆ ಇಂದು (ಫೆ.12) ತುಸು ಹೆಚ್ಚೇ ಮಹತ್ವ. ಪ್ರೇಮಿಗಳ ವಾರದ ಆರನೇ ದಿನವನ್ನು ಹಗ್​ ಡೇ (Hug Day) ಎಂದು ಆಚರಿಸಲಾಗುತ್ತೆ. ಪ್ರೇಮಿಯ ಬಿಸಿ ಅಪ್ಪುಗೆಯಲ್ಲಿ ಕರಗಿ ಹೋಗಲೆಂದೇ ಆಚರಿಸುವ ಈ ದಿನದಲ್ಲಿ ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಗುಟ್ಟು ಸಹ ಅಡಗಿದೆ. ಒಬ್ಬ ಹುಡುಗ ಮತ್ತು ಹುಡುಗಿಯ ನಡುವಿನ ಪ್ರೀತಿಯಲ್ಲಿ ಮಾತುಕತೆ, ಕೋಳಿಜಗಳ, ಭೇಟಿ, ಉಡುಗೊರೆಯಂತೆಯೇ ಅಪ್ಪುಗೆಯೂ ಒಂದು ನವಿರು ಭಾವ. ಹೀಗಾಗಿ ಅಪ್ಪುಗೆಯನ್ನು ಒಂದು ಶುದ್ಧ ಅನುಭೂತಿಯನ್ನಾಗಿ ಕಾಣಬೇಕು.

ಒಂದು ಅಪ್ಪುಗೆ ನಂಬಿಕೆಯನ್ನೂ ಹೆಚ್ಚಿಸಬಲ್ಲದು.
ಪರಿಶುದ್ಧ ಪ್ರೇಮದಲ್ಲಿನ ಅಪ್ಪುಗೆ ಪ್ರೇಮಿಗಳ ನಡುವಿನ ನಂಬಿಕೆಯನ್ನು ಹೆಚ್ಚಿಸಬಲ್ಲದು. ನಾನು ನಿನಗೆ ಸದಾ ಕಾವಲಾಗಿ ಇರುತ್ತೇನೆ ಎಂಬ ಭಾವ ನಿಮ್ಮ ಪ್ರೇಮಿಯಲ್ಲಿ ಮೂಡುವುದಕ್ಕೆ ಈ ಅಪ್ಪುಗೆ ಸಹಕಾರಿ. ಬೇಸರದಲ್ಲಿದ್ದಾಗ, ನೋವು ಅಥವಾ ಸಂಕಟವನ್ನು ಅನುಭವಿಸುತ್ತಿದ್ದಾಗ ಒಂದು ಬಿಸಿ ಅಪ್ಪುಗೆ ನೀಡಿದರೆ ಅದು ಎದೆಯೊಳಗಿನ ಎಲ್ಲಾ ದುಃಖವನ್ನೂ ಕರಗಿಸಿ ಹಗುರಾಗಿಸಬಲ್ಲದು. ಒಬ್ಬರನ್ನೊಬ್ಬರು ಆಪ್ತವಾಗಿ ಅಪ್ಪಿಕೊಳ್ಳುವುದು ಸಂಬಂಧಕ್ಕೆ ಸೇತುವೆಯಾಗಬಲ್ಲದು. ಜೊತೆಗೆ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಬೆಚ್ಚನೆಯ ಭಾವವನ್ನು ಮೂಡಿಸಬಲ್ಲದು. ಆದ್ದರಿಂದ ಪ್ರಾಮಿಸ್​ ಡೇ ಮರುದಿನ ಒಬ್ಬರನ್ನೊಬ್ಬರು ತಬ್ಬಿಕೊಂಡು ಪ್ರೇಮದ ಬೆಚ್ಚನೆಯ ಅನುಭೂತಿಯನ್ನು ಅನುಭವಿಸಲೆಂದು ಈ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ವಾರದ ಆರನೇ ದಿನವಾದ ಇಂದು ನಿಮ್ಮ ಪ್ರೇಮಿಗೆ ಒಂದು ಬೆಚ್ಚನೆಯ ಅಪ್ಪುಗೆ ನೀಡಲು ಮರೆಯದಿರಿ.

ನಿಮ್ಮ ಆರೋಗ್ಯಕ್ಕೂ ಸಹಕಾರಿ ಅಪ್ಪುಗೆ
ಪ್ರೀತಿಯನ್ನು ವ್ಯಕ್ತಪಡಿಸಲು ಅಪ್ಪುಗೆ ಸಹಕಾರಿಯಾಗುವುದರ ಜೊತೆಜೊತೆಗೆ ಅದು ನಿಮ್ಮ ಆರೋಗ್ಯ ವರ್ಧನೆಗೂ ಉಪಯುಕ್ತ ಎನ್ನುವುದನ್ನು ನೆನಪಿಡಿ. ಒಂದು ಬೆಚ್ಚನೆಯ ಅಪ್ಪುಗೆ ದೇಹದಲ್ಲಿನ ರಕ್ತ ಸಂಚಾರದ ಮೇಲೆ ಧನಾತ್ಮಕ ಪರಿಣಾಮ ಬೀರುವುದರೊಂದಿಗೆ ಮಾನಸಿಕ ಒತ್ತಡ ಹಾಗೂ ಭಯ ನಿವಾರಣೆ, ಆರೋಗ್ಯ ಸುಧಾರಣೆಯನ್ನೂ ಮಾಡಬಲ್ಲದು. ಅಂತೆಯೇ, ನಿಮ್ಮ ಖುಷಿ ಹೆಚ್ಚಿಸುವುದರ ಜೊತೆಗೆ ಸಂವಹನ ಶಕ್ತಿಯನ್ನೂ, ನಿಮ್ಮ ಮೇಲಿನ ನಂಬಿಕೆಯನ್ನೂ ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ: ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ!

ಫೆಬ್ರವರಿ 13, ಶನಿವಾರ: ಕಿಸ್​ ಡೇ
ಮುತ್ತು ಪ್ರೇಮದ ಅತಿ ಮಧುರ ಸಂಕೇತ. ಮನಸ್ಸಿಗೆ ಹತ್ತಿರಾದವರು ನೀಡುವ ಒಂದೇ ಒಂದು ಮುತ್ತು ಮನಸ್ಸಿನ ಭಾರವನ್ನೆಲ್ಲಾ ಕರಗಿಸಬಲ್ಲದು. ಅದು ಆಪ್ತತೆಯನ್ನು ಹೆಚ್ಚಿಸುವ ಜೊತೆಗೆ ಪ್ರೇಮದ ಇನ್ನೊಂದು ಮಜಲನ್ನೂ ಪರಿಚಯಿಸುತ್ತದೆ. ಆದ್ದರಿಂದ ಪ್ರೇಮಿಗಳ ವಾರದ ಏಳನೇ ದಿನ ಅತ್ಯಂತ ವಿಶೇಷವಾಗಿದೆ.

ಇದನ್ನೂ ಓದಿ: ಕಡಲಿನ ಅಂತರಾಳದಲ್ಲಿ ಅವಿತಿರುವ ಅಷ್ಟೂ ಮುತ್ತುಗಳು ನಿನ್ನದೇ ಆಗಲಿ ಗೆಳೆಯ!

ಫೆಬ್ರವರಿ 14, ಭಾನುವಾರ: ಪ್ರೇಮಿಗಳ ದಿನ
ಇದು ಪ್ರೇಮಿಗಳ ವಾರದ ಕಡೆಯ ಮತ್ತು ಮಹತ್ವದ ದಿನ. ಇದನ್ನು ಪ್ರೇಮದ ಸಂತ ಎಂದೇ ಕರೆಯಲ್ಪಟ್ಟ 3ನೇ ಶತಮಾನದ ರೋಮ್​ ಸಂತನೊಬ್ಬನ ನೆನಪಲ್ಲಿ ಆಚರಿಸಲಾಗುತ್ತದೆ. ಏಳು ದಿನಗಳಲ್ಲಿ ಅನುಭವಿಸಿದ ಒಟ್ಟು ಭಾವದ ಮೊತ್ತವೇ ಪ್ರೇಮಿಗಳ ದಿನ. ಇದು ಪ್ರೀತಿಯನ್ನು ಸಂಭ್ರಮಿಸುವ ದಿನ.

Published On - 10:58 am, Fri, 12 February 21