Valentine’s Day: ಒತ್ತಾಯದ ಒಪ್ಪಿಗೆಗಿಂತ No ಎನ್ನುವುದೂ ಪ್ರೀತಿಯೇ! ಪ್ರೀತಿಯನ್ನು ತಿರಸ್ಕರಿಸುವುದೂ ಒಂದು ಕಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 8:52 PM

Learn to Say NO: ಪ್ರೀತಿಯ ವಿಚಾರದಲ್ಲಿ ಸ್ಪಷ್ಟವಾಗಿ ನಿರಾಕರಿಸಿದಾಗ ಕಾರಣ ಹೇಳುವುದು ಉತ್ತಮ. ಸುತ್ತಿ ಬಳಸಿ ಹೇಳುವುದು ಅಥವಾ ಮುಂದೂಡುವುದಕ್ಕಿಂತ ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಮೇಲು.

Valentines Day: ಒತ್ತಾಯದ ಒಪ್ಪಿಗೆಗಿಂತ No ಎನ್ನುವುದೂ ಪ್ರೀತಿಯೇ! ಪ್ರೀತಿಯನ್ನು ತಿರಸ್ಕರಿಸುವುದೂ ಒಂದು ಕಲೆ
ನಿರಾಕರಣೆಯೂ ಪ್ರೀತಿಯ ರೂಪ
Follow us on

ಪ್ರೀತಿ ಎರಡು ಹೃದಯದ ನಡುವಿನ ಮಧುರ ಅನುಭೂತಿ. ಒಬ್ಬರನ್ನೊಬ್ಬರು ಅರಿತು ನಡೆದರೆ ಪ್ರೀತಿ ಹೊಸ ಪ್ರಪಂಚವನ್ನೇ ತೋರಿಸಿಕೊಡುತ್ತದೆ. ಆದರೆ, ಅದೇ ಪ್ರೀತಿ ಎಷ್ಟೋ ಜನರ ಪಾಲಿಗೆ ಬಿಡಿಸಿಕೊಳ್ಳಲಾಗದ ಕಗ್ಗಂಟಾಗಿ ಸಂಕಷ್ಟ, ಸಂಕಟಗಳನ್ನು ಸೃಷ್ಟಿ ಮಾಡಿದ ಉದಾಹರಣೆಯೂ ಇದೆ. ಹೀಗಾಗಿ ಪ್ರೀತಿ ಪಥದಲ್ಲಿ ಹೆಜ್ಜೆ ಹಾಕಲು ಒಪ್ಪಿಕೊಳ್ಳುವ ಮೊದಲು ಹತ್ತಾರು ಬಾರಿ ಯೋಚಿಸಬೇಕು. ಒತ್ತಾಯದ ಒಪ್ಪಿಗೆಗಿಂತ ಸ್ಪಷ್ಟ ನಿರಾಕರಣೆಯೂ ‘ಪ್ರೀತಿ’ಯ ಸಂಕೇತವೇ ಆಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

NO ಅನ್ನೋ ಪದ ಯಾವಾಗಲೂ ನಕಾರತ್ಮಕವೇ ಆಗಿರಬೇಕು ಎಂದೇನಿಲ್ಲ. ಇದು Hurtful ಪದ ಎಂದೇ ತಿಳಿದುಕೊಳ್ಳಬೇಕಿಲ್ಲ. ಏಕೆಂದರೆ NO ಎಷ್ಟೋ ಸಂದರ್ಭದಲ್ಲಿ ಅತ್ಯಂತ ಆಪ್ತ ಮತ್ತು ಸಹಾಯಕ (The Most Helpful) ಪದವೂ ಆಗಿ ಉಪಯೋಗಕ್ಕೆ ಬರುತ್ತದೆ. ಕೆಲ ಸಂದರ್ಭಗಳಲ್ಲಿ ಇದನ್ನು ಬಳಸದಿದ್ದರೇನೇ ನಾವು ಮತ್ತು ನಮ್ಮಿಂದಾಗಿ ಬೇರೆಯವರು ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ನಮಗೂ ಬೇಸರವಾಗದೇ, ಇನ್ನೊಬ್ಬರನ್ನೂ ನೋಯಿಸದೇ NO ಹೇಳುವುದನ್ನು ಕಲಿತುಕೊಳ್ಳುವುದು ಒಳ್ಳೆಯದು. ಅದೇರೀತಿ NO ಪದವನ್ನು ಒಪ್ಪಿಕೊಳ್ಳೋದು ಕೂಡಾ ಅಭ್ಯಾಸ ಮಾಡಿಕೊಳ್ಳಬೇಕು. ಇದನ್ನು ಬೇಕಿದ್ದರೆ ವ್ಯಕ್ತಿಗತ ನೈಪುಣ್ಯತೆ ಎಂದೂ ಪರಿಗಣಿಸಬಹುದು.

ಸಾಮಾನ್ಯವಾಗಿ ಪ್ರೇಮ ನಿವೇದನೆಗಳು (Love Proposal) ಬಂದಾಗ, ಅವುಗಳನ್ನು ನಿರಾಕರಿಸುವ ಪರಿಸ್ಥಿತಿಯಲ್ಲಿದ್ದರೂ ನಮ್ಮ ಆ ಅಭಿಪ್ರಾಯವನ್ನು ನೇರವಾಗಿ ಬಾಯಿಬಿಟ್ಟು ಹೇಳಲು ಕಷ್ಟವಾಗುವುದು ಸಾಮಾನ್ಯ. Propose ಮಾಡಿದ ವ್ಯಕ್ತಿ ಏನೆಂದುಕೊಳ್ಳಬಹುದು? ಪಾಪ, ಅವರಿಗೆ ಎಷ್ಟು ನೋವಾಗಬಹುದು? ಎಂದು ಯೋಚಿಸಿ NO ಹೇಳುವುದಕ್ಕೂ ಹಿಂದೆಮುಂದೆ ನೋಡುವುದು ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ಲಕ್ಷಣ. ಇದಕ್ಕೆ ಅಪವಾದ ಇಲ್ಲವೇ ಇಲ್ಲ ಎಂದೇನಲ್ಲ. ಆದರೆ, ಬಹುತೇಕ ಜನರು ಏಕಾಏಕಿ ನಿರಾಕರಿಸದೇ ಭಾವನಾತ್ಮಕವಾಗಿ ಯೋಚಿಸುವುದು ಸತ್ಯ.

ಹೀಗೆ NO ಹೇಳಬೇಕಾದ ಪರಿಸ್ಥಿತಿ ಒಂದು ಬಗೆಯ ಸಂದಿಗ್ಧತೆಯನ್ನು ಉಂಟುಮಾಡುವುದಂತೂ ಸತ್ಯ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎದುರಿದ್ದವರನ್ನು ಹೇಗೆ ನಿಭಾಯಿಸಬೇಕು? ಈ ಸಮಸ್ಯೆಗೆ ಪರಿಹಾರ ಇದೆಯೋ? ಇಲ್ಲವೋ? ಎಂಬ ಗೊಂದಲ ನಿಮಗಿದ್ದರೆ ಅದೆಲ್ಲವಕ್ಕೂ ಇಲ್ಲಿದೆ ಉತ್ತರ.

1. ಪ್ರೀತಿಯನ್ನು ನಿರಾಕರಿಸಿದರೆ ಸ್ವಾರ್ಥಿ, ತಪ್ಪಿತಸ್ಥ, ಒರಟು, ಮನುಷ್ಯತ್ವ ಇಲ್ಲದವನು.. ಹೀಗೆ ನಾನಾ ರೀತಿಯಲ್ಲಿ ಜರಿಯಬಹುದು ಎಂಬ ಯೋಚನೆಗಳು ಕಾಡುತ್ತವೆ. ಆದರೆ, ನಿರಾಕರಿಸುವುದು ಖಂಡಿತವಾಗಿಯೂ ಸ್ವಾರ್ಥವಾಗಲಿ, ಕಠೋರತೆಯಾಗಲಿ ಅಲ್ಲವೇ ಅಲ್ಲ. ಇದು ಅತ್ಯಂತ ಸಹಜ, ಸ್ವಾಭಾವಿಕ ಹಾಗೂ ಸ್ಪಷ್ಟ ಆಲೋಚನೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಮಗಿಷ್ಟವಿಲ್ಲದ, ಸರಿಹೋಗದ ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೂ ಇಲ್ಲ. ಮುಂದೆ ಅಂತಹ ಸಂಬಂಧಗಳನ್ನು ಬೆಳೆಸಿ ಪೊಷಿಸುವುದೂ ಸುಲಭವಲ್ಲ. ಹಾಗಾಗಿ ಅದನ್ನು ನಿರಾಕರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಅಂತೆಯೇ, ಉತ್ತರ ಕೊಡದೆ ತಪ್ಪಿಸಿಕೊಳ್ಳುವುದಕ್ಕಿಂತ ನೇರವಾಗಿ ನಿಜ ಹೇಳುವುದೇ ಉತ್ತಮ. ಆದರೆ, ಇಂತಹ ಸಂದರ್ಭಗಳಲ್ಲಿ ನಿರಾಕರಣೆಯ ಮಾತನ್ನು ಕಟುವಾಗಿ ಹೇಳುವುದಕ್ಕಿಂತ ಕೊಂಚ ನಯವಾಗಿ ಹೇಳಿದರೆ ಎದುರಿರುವರು ಆ ಕ್ಷಣದಲ್ಲಿ ಅದನ್ನು ಸ್ವೀಕರಿಸುವುದು ಸುಲಭವಾಗುತ್ತದೆ. ನಿನ್ನ ಕಂಡರೆ ನನಗೆ ಇಷ್ಟವಿಲ್ಲ ಎಂದು ಹೇಳುವ ಬದಲು. ನಿನ್ನ ಮೇಲೆ ನನಗೆ ಆ ರೀತಿಯ ಭಾವನೆಗಳಿಲ್ಲ ಎಂದು ಹೇಳುವುದು ಉತ್ತಮ.

2. ಪ್ರೀತಿಯ ವಿಚಾರದಲ್ಲಿ ಸ್ಪಷ್ಟವಾಗಿ ನಿರಾಕರಿಸಿದಾಗ ಕಾರಣ ಹೇಳುವುದು ಉತ್ತಮ. ಸುತ್ತಿ ಬಳಸಿ ಹೇಳುವುದು ಅಥವಾ ಮುಂದೂಡುವುದಕ್ಕಿಂತ ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಮೇಲು. ಇದರಿಂದಾಗಿ ಅನಾವಶ್ಯಕವಾಗಿ ಇನ್ನೊಬ್ಬ ವ್ಯಕ್ತಿಯನ್ನು ಕಾಯಿಸುವುದು ಅಥವಾ ದಾರಿತಪ್ಪಿಸುವುದನ್ನು ತಡೆಯಬಹುದು.

3. ಪ್ರೇಮ ನಿವೇದನೆಯನ್ನು ನಿರಾಕರಿಸಿದರೂ ಅದನ್ನು ಗೌರವಿಸುವುದು ಅತ್ಯಂತ ಮುಖ್ಯ. ಅವರ ಭಾವನೆಗಳಿಗೆ ಬೆಲೆ ಕೊಡಬೇಕೇ ವಿನಃ ಅಪಮಾನ, ಅಗೌರವ, ನಿಂದನೆ ಮಾಡಕೂಡದು.

4. ನಿವೇದನೆಯನ್ನು ತಿರಸ್ಕರಿಸಿದ ನಂತರವೂ ನಿಮ್ಮನ್ನು ಇಷ್ಟಪಟ್ಟಿದ್ದಕ್ಕಾಗಿ ಹಾಗೂ ಅದನ್ನು ವ್ಯಕ್ತಪಡಿಸಿದ ಅವರ ಪ್ರಯತ್ನಕ್ಕಾಗಿ ಪ್ರಶಂಸೆ ನೀಡಿ ಜೊತೆಗೆ ವಿಶೇಷ ಧನ್ಯವಾದ ಹೇಳಲು ಮರೆಯಬೇಡಿ.

5. ಯಾವುದೇ ವಿಚಾರದಲ್ಲಾದರೂ ಕ್ಷಮೆ ಕೇಳುವುದರಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇರುವುದಿಲ್ಲ. ಹೀಗಾಗಿ ಪ್ರೀತಿಯನ್ನು ಒಪ್ಪಿಕ್ಕೊಳ್ಳುತ್ತಿಲ್ಲವೆಂದಾದರೆ ಒಂದು ಕ್ಷಮೆ ಕೇಳುವುದು ಉತ್ತಮ. ಇದರಿಂದ ಪ್ರೇಮ ನಿವೇದನೆ ಮಾಡಿಕೊಂಡವರಿಗೆ ನಿಮ್ಮ ಮೇಲಿನ ಉತ್ತಮ ಭಾವನೆ ಮುಂದುವರೆಯುವ ಜೊತೆಗೆ ಗೌರವ ಇನ್ನೂ ಹೆಚ್ಚುತ್ತದೆ.

6. ಬದುಕಿನಲ್ಲಿ ಪ್ರೀತಿ, ಪ್ರೇಮ ಹೇಗೆ ವಿಶೇಷವೋ ಅಷ್ಟೇ ಮಹತ್ತರ ಸ್ಥಾನ ಸ್ನೇಹಕ್ಕೂ ಇದೆ ಎಂಬುದನ್ನು ನೆನಪಿಡಿ. ಒಂದುವೇಳೆ ನಿಮಗೆ ಪ್ರೇಮ ನಿವೇದನೆ ಮಾಡಿದ ವ್ಯಕ್ತಿ ನಿಮಗೆ ಈ ಮೊದಲೇ ಪರಿಚಿತರಾಗಿದ್ದು, ಉತ್ತಮ ಸ್ನೇಹವಿತ್ತು ಎಂದಾದರೆ ಪ್ರೀತಿಯ ಕಾರಣಕ್ಕಾಗಿ ಅದನ್ನೂ ಕೊನೆಗಾಣಿಸುವ ನಿರ್ಧಾರಕ್ಕೆ ಬರಬೇಡಿ. ಸಾಧ್ಯವಿದ್ದಲ್ಲಿ ಅದನ್ನು ಪ್ರತ್ಯೇಕವಾಗಿಟ್ಟು ಮೊದಲಿನಂತೆಯೇ ಆರೋಗ್ಯಕರ ಸ್ನೇಹವನ್ನು ಮುಂದುವರೆಸಿ.

ಇದನ್ನೂ ಓದಿ: ಕಳೆದು ಹೋಗುವ ಮುನ್ನ ಪ್ರೇಮಕ್ಕೆ ಕೈ ಚಾಚಿ.. ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ

ಪ್ರಾತಿನಿಧಿಕ ಚಿತ್ರ

ನಿಮ್ಮ ಮನಸ್ಸಿಗೆ ನೋವು ಮಾಡಿಕೊಳ್ಳದೇ ನಿರಾಕರಣೆಯನ್ನು ಒಪ್ಪಿಕೊಂಡು ಮುನ್ನಡೆಯುವುದು ಹೇಗೆ?
ನಮ್ಮ ಪ್ರೀತಿ ಪ್ರಸ್ತಾಪವನ್ನು ಯಾರಾದರೂ ನಿರಾಕರಿಸಿದಾಗ ನಿರಾಸೆ, ದುಃಖವಾಗುವುದು ಸಹಜ. ಆದರೆ ಈ ನೋವು ಶಾಶ್ವತವಲ್ಲ. ಕ್ರಮೇಣ ಈ ಭಾವನೆಗಳ ಜಾಗದಲ್ಲಿ ಸ್ಪಷ್ಟತೆ ಹಾಗು ವಾಸ್ತವ ಒಪ್ಪಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. NO ಅಂದಾಕ್ಷಣ ನಮ್ಮ ನಿರೀಕ್ಷೆ, ಆಸೆಗಳು ಈಡೇರದ ಕಹಿ ಭಾವನೆ ಆವರಿಸಿಕೊಳ್ಳುತ್ತದೆಯಾದರೂ ಕ್ರಮೇಣ ಈ ಕಹಿ ಅನುಭವ ನಮ್ಮ ದಾರಿಯನ್ನು ಸುಲಭ ಮಾಡಿಕೊಡುತ್ತದೆ. ಇದು ನನಗೆ ಅಪಮಾನವೆಂದು, ನಾನು ಕೀಳು ಅಥವಾ ನಿರಾಕರಿಸಿದ ವ್ಯಕ್ತಿ ಸ್ವಾರ್ಥಿ ಎಂದು ಭಾವಿಸುವುದರ ಬದಲು, ನಮ್ಮಿಬ್ಬರ ಪರಸ್ಪರ ಭಾವನೆ ಬೇರೆಯಾಗಿದೆ, ಅವರ ಭಾವನೆಯನ್ನು ನಾನು ಗೌರವಿಸಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಇನ್ನೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹಾಗೂ ನಿಧಾ೯ರವನ್ನು ಗೌರವಿಸಿ, ಒಪ್ಪಿಕೊಳ್ಳಬೇಕು. ನನ್ನ ಭಾವನೆಯಂತೆ ಇನ್ನೊಬ್ಬರ ಭಾವನೆಯೂ ಸಹ ಎನ್ನುವುದನ್ನು ಅರಿಯಬೇಕು. ನೋವು ಸಹ ಪ್ರೀತಿಯ ಒಂದು ಭಾಗ, ಪ್ರೀತೀಯನ್ನು ನಾವು ಯಾರ ಮೇಲೂ ಬಲವಂತವಾಗಿ ಹೇರಲು ಆಗುವುದಿಲ್ಲ, ಅದು ಪರಸ್ಪರ ಅನುಭವಿಸಿ ಒಪ್ಪಿಕೊಳ್ಳುವಂತಹ ಭಾವನೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಸಂಬಂಧಗಳು ಭವಿಷ್ಯದಲ್ಲಿ ಗಟ್ಟಿಯಾಗಿರಬೇಕೆಂದರೆ, ಇಬ್ಬರೂ ಅನ್ನೋನ್ಯವಾಗಿರಬೇಕೆಂದರೆ, ಪರಸ್ಪರ ಪ್ರೀತಿ ಮುಖ್ಯವಾಗುತ್ತದೆ. ಹೀಗಾಗಿ ಬದಲಾಯಿಸಲು ಸಾಧ್ಯವಿರದ ಸಂಗತಿಗಳನ್ನು ಒಪ್ಪಿಕೊಳ್ಳುವುದೇ ಮಿಗಿಲು. ಈ ಎಲ್ಲಾ ಅಂಶಗಳನ್ನು ಅರಿತು ನಡೆದರೆ ಖಂಡಿತವಾಗಿಯೂ ನೋವಿನಿಂದ ಹೊರಬರಬಹುದು.

ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ
ಬದುಕಿನಲ್ಲಿ ಎಲ್ಲದಕ್ಕಿಂತಲೂ ಮಿಗಿಲಾದದ್ದು Self Love. ಅಂತಹ ತಂತ್ರವನ್ನು ಅಳವಡಿಸಿಕೊಂಡು ಸತತ ಅಭ್ಯಾಸ ಮಾಡಿಕೊಳ್ಳಬೇಕು. ಇದು ಆತ್ಮವಿಶ್ವಾಸವನ್ನು, ಆತ್ಮಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದಕ್ಕೆ, ನಮ್ಮ ಅಗತ್ಯಗಳನ್ನು ನಾವೇ ಪೂರೈಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಧೈರ್ಯವಾಗಿ ಮುಂದೆ ಸಾಗಿ. ಸಾಧ್ಯವಾಗಲಿಲ್ಲವೆಂದರೆ ಅಥವಾ ಕಠಿಣವೆನೆಸಿದರೆ ದಯವಿಟ್ಟು ಮನೋವೈದ್ಯರನ್ನು, ಆಪ್ತ ಸಲಹೆಗಾರರನ್ನು ಸಂಪಕಿ೯ಸಿ ಸೂಕ್ತ ಸಲಹೆ ಪಡೆದು ತಾಜಾತನದೊಂದಿಗೆ ಹೆಜ್ಜೆ ಹಾಕಿ.

(ಲೇಖಕಿ ಭವ್ಯಾ ವಿಶ್ವನಾಥ್ ವೃತ್ತಿಯಲ್ಲಿ ಆಪ್ತಸಮಾಲೋಚಕಿ)

Published On - 7:47 pm, Wed, 10 February 21