ಬೆಂಗಳೂರಿನಲ್ಲಿ ಕದ್ದ ಮೊಬೈಲ್ ಫೋನುಗಳು ಎಲ್ಲಿ ಹೋಗುತ್ತವೆ, ಇದರ ಜಾಲ ಹೇಗಿದೆ?: ಇಲ್ಲಿದೆ ಸ್ಟೋಲನ್ ಫೋನ್ ರಹಸ್ಯ
Secret of Stolen Phones: ನಾವು ಎಷ್ಟೇ ಜಾಗರೂಕರಾಗಿದ್ದರೂ ಕಳ್ಳರು ತಮ್ಮ ಕೈಚಳಕದಿಂದ ನಮ್ಮ ಮೊಬೈಲ್ ಎಗರಿಸುತ್ತಾರೆ. ಇದನ್ನು ಹುಡುಕುವುದೇ ಹರಸಾಹಸ. ಆದರೆ, ಈ ರೀತಿ ಕದ್ದ ಫೋನುಗಳು ಏನಾಗುತ್ತವೆ ಎಂದು ನೀವು ಯೋಚಿಸಿದ್ದೀರಾ?, ಕಳ್ಳತನವಾದ ಫೋನ್ ಎಲ್ಲಿಗೆ ಹೋಗುತ್ತದೆ, ಇದರ ಜಾಲ ಹೇಗಿದೆ?. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು ಮಹಾನಗರದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪ್ರತಿ ದಿನ ಮೊಬೈಲ್ ಫೋನ್‌ಗಳು ಕಳ್ಳತನ/ಕಳೆದು ಹೋಗುತ್ತವೆ. ಬಸ್ಗೆ ಹತ್ತುವಾಗ, ಮಾರ್ಕೆಟ್ ಜಾಗ, ಮೆಜೆಸ್ಟಿಕ್ ಬಸ್ ನಿಲ್ದಾಣ, ಜನ ಜಂಗುಳಿ ಇರುವಂತಹ ಜಾಗದಲ್ಲಿ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳ ಕಳ್ಳತನ ನಡೆಯುತ್ತಿವೆ. ಎಷ್ಟೇ ಜಾಗರೂಕರಾಗಿದ್ದರೂ ಕಳ್ಳರು ತಮ್ಮ ಕೈಚಳಕದಿಂದ ಮೊಬೈಲ್ ಎಗರಿಸುತ್ತಿದ್ದಾರೆ. ಇದನ್ನು ಹುಡುಕುವುದೇ ಹರಸಾಹಸ. ಕೆಲವರು ಪಟ್ಟು ಬಿಡದೆ ತಮ್ಮ ಫೋನನ್ನು ಹುಡುಕಿದರೆ, ಇನ್ನೂ ಕೆಲವರು ಇದಿನ್ನು ಸಿಗುವುದಿಲ್ಲ ಎಂದು ಹೊಸ ಫೋನಿನ ಮೊರೆ ಹೋಗುತ್ತಾರೆ. ಈ ರೀತಿ ಕದ್ದ ಫೋನುಗಳು ಏನಾಗುತ್ತವೆ ಎಂದು ನೀವು ಯೋಚಿಸಿದ್ದೀರಾ?, ಕಳ್ಳತನವಾದ ಫೋನ್ ಎಲ್ಲಿಗೆ ಹೋಗುತ್ತದೆ, ಇದರ ಜಾಲ ಹೇಗಿದೆ?. ಈ ಕುರಿತ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಪೋರ್ಟಲ್, ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ನ ಡ್ಯಾಶ್‌ಬೋರ್ಡ್ ಪ್ರಕಾರ, ಇಲ್ಲಿಯವರೆಗೆ ಭಾರತದಾದ್ಯಂತ, 1,487,034 ಫೋನ್‌ಗಳನ್ನು ನಿರ್ಬಂಧಿಸಲಾಗಿದೆ, 804,966 ಪತ್ತೆಹಚ್ಚಲಾಗಿದೆ ಮತ್ತು 112,648 ಮರುಪಡೆಯಲಾಗಿದೆ. 2022 ರಲ್ಲಿ ಬೆಂಗಳೂರಿನಲ್ಲಿ ಸೆಲ್ ಫೋನ್ ಕಳ್ಳತನವು 450% ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಈಗ ಫೋನ್ ಕಳ್ಳತನವು ಸಾಮಾನ್ಯವಾದ ಅಪರಾಧವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಎಂಬುದು ಸಾಮಾನ್ಯ ಜನರ ಅಭಿಪ್ರಾಯ.
“ಫೋನ್ ಕಳ್ಳತನಕ್ಕೆ ಗುರಿಯಾಗುತ್ತಿರುವವರು ಸಾಮಾನ್ಯವಾಗಿ ಮಹಿಳೆಯರು ಮತ್ತು ವೃದ್ಧರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಜನರು ಬೆಳಗಿನ ಜಾವ ಅಥವಾ ರಾತ್ರಿ 10 ರ ನಂತರ ಸಂಚರಿಸುವಾಗ ಸಾಮಾನ್ಯವಾಗಿ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಬೆಂಗಳೂರಿನ ಹೊರವಲಯದಲ್ಲಿ ಮತ್ತು ವಿಶೇಷವಾಗಿ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿ ಆಗುತ್ತದೆ ಎಂದು ಹೇಳಿದ್ದಾರೆ.
”ಕದ್ದ ಸೆಲ್ ಫೋನ್‌ಗಳನ್ನು ಡಿಸ್ಅಸೆಂಬಲ್ ಮಾಡಬಹುದು ಮತ್ತು ಕೂಡಲೇ ಮರುಮಾರಾಟ ಮಾಡಬಹುದು. ಇಂದು ನವೀಕರಿಸಿದ ಫೋನ್‌ಗಳಿಗೆ ಮಾರುಕಟ್ಟೆ ಇದೆ. ಇತ್ತೀಚಿನ ಐಫೋನ್ 15 ಅಥವಾ ಸ್ಯಾಮ್ಸಂಗ್ S23 ಆಲ್ಟ್ರಾ ದಂತಹ ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಕಳ್ಳರಿಗೆ ಹತ್ತು ಸಾವಿರ ರೂಪಾಯಿ ತಂದುಕೊಡುತ್ತದೆ. ಫೋನ್ ಅನ್ನು ಡಿಸ್ಅಸೆಂಬಲ್ ಮಾಡಿದ ನಂತರ ಅದನ್ನು ಪತ್ತೆಹಚ್ಚುವುದು ಸುಲಭವಲ್ಲ. ಈ ಭಾಗಗಳನ್ನು ಭಾರತದಲ್ಲಿ ಅಥವಾ ವಿದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಈ ಬಗ್ಗೆ ಟಿವಿ 9 ಆ್ಯಪ್ಗೆ ಮಾಹಿತಿ ನೀಡಿದ ಸೆಕೆಂಡ್ ಹ್ಯಾಂಡ್ ಫೋನ್ ಡೀಲರ್ ಒಬ್ಬರು, ”ಕದ್ದ ಫೋನ್‌ಗಳಲ್ಲಿ ಹೆಚ್ಚಿನವು ಗ್ರೇ ಮಾರ್ಕೆಟ್ನಲ್ಲಿ ಮಾರಾಟವಾಗುತ್ತವೆ. ಹೆಚ್ಚಾಗಿ ಆ ಫೋನ್ ಕದ್ದ ರೂಪದಲ್ಲೇ ಇರುತ್ತವೆ. ಆದರೆ ಕೆಲವೊಮ್ಮೆ ಅವುಗಳ ಭಾಗಗಳನ್ನು ಇತರ ಫೋನ್‌ಗಳಿಗೆ ಬದಲಾಯಿಸಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಅಂದರೆ, ಈಗ ಐಫೋನ್ನ ಒರಿಜಿನಲ್ ಡಿಸ್ಪ್ಲೇಗೆ ಒಳ್ಳೆಯ ಬೇಡಿಕೆ ಇದೆ. ಕೆಲವರು ಕದ್ದ ಐಫೋನ್ನಿಂದ ಅದರ ಡಿಸ್ಪ್ಲೇ ಯನ್ನು ಮಾತ್ರ ತೆಗೆದು ಒರಿಜಿನಲ್ ರೀತಿಯಲ್ಲಿ ಮಾರಾಟ ಮಾಡುತ್ತಾರೆ,” ಎಂದು ಹೇಳಿದರು.
“ಹೆಚ್ಚಿನ ಕಳ್ಳರು ನೆಕ್ಸಸ್ನಲ್ಲಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ, ಒಬ್ಬ ವ್ಯಕ್ತಿಯು 20-30 ಕದ್ದ ಫೋನ್‌ಗಳನ್ನು ಹೊಂದಿರುವ ಪ್ರಕರಣಗಳನ್ನು ನಾವು ಬೇದಿಸುತ್ತೇವೆ. ಆಗ ನೂರಾರು ಫೋನ್‌ಗಳು ಒಂದೇ ಬಾರಿಗೆ ನಮಗೆ ಸಿಗುತ್ತವೆ. ಪೊಲೀಸರು ಫೋನ್‌ಗಳನ್ನು ವಶಪಡಿಸಿಕೊಂಡ ನಂತರ, ಅವು ನ್ಯಾಯಾಲಯದ ಆಸ್ತಿಯಾಗುತ್ತವೆ. ದೂರುಗಳನ್ನು ಸಲ್ಲಿಸಿದ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನಂತರ ತಮ್ಮ ಫೋನ್‌ಗಳನ್ನು ತೆಗೆದುಕೊಳ್ಳಬಹುದು”, ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಕದ್ದ ಮೊಬೈಲ್ ಫೋನುಗಳು ಎಲ್ಲಿ ಹೋಗುತ್ತವೆ?:
ಕದ್ದ ಮೊಬೈಲ್ ಫೋನ್‌ಗಳನ್ನು ಸಾಮಾನ್ಯವಾಗಿ ನೇಪಾಳ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ನಂತಹ ನೆರೆಯ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತವೆ. ಮೊಬೈಲ್ ಫೋನ್‌ಗಳು ವಿವಿಧ ದೇಶಗಳ ಸೆಲ್ಯುಲಾರ್ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಅವುಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಮೊಬೈಲ್ ಫೋನ್‌ಗಳನ್ನು ಕದಿಯುವ ಗ್ಯಾಂಗ್ ಇರುತ್ತದೆ. ಈ ಗ್ಯಾಂಗ್‌ಗಳು ಬಾಂಗ್ಲಾದೇಶ ಮತ್ತು ನೇಪಾಳ ಗಡಿ, ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯಗಳಿಗೆ ಮೊಬೈಲ್ ಫೋನ್‌ಗಳನ್ನು ಕಳ್ಳಸಾಗಣೆ ಮಾಡುತ್ತದೆ. ಅವರು ಅಂತರರಾಜ್ಯ ಸಂಪರ್ಕಗಳನ್ನು ಹೊಂದಿರುತ್ತಾರಂತೆ.
ಕೆಲವು ಕದ್ದ ಫೋನ್‌ಗಳನ್ನು ದೂರದ ಮೆಟ್ರೋ ನಗರಗಳಿಗೆ ಕಳುಹಿಸುತ್ತಾರೆ, ಅಲ್ಲಿ ಅವುಗಳನ್ನು ಮರುಮಾರಾಟ ಮಾಡಲಾಗುತ್ತದೆ. ಸಣ್ಣ ಮೊಬೈಲ್ ಸೇವಾ ಕೇಂದ್ರಗಳಿಗೆ ಸೇಲ್ ಮಾಡುತ್ತಾರೆ, ಅಲ್ಲಿ ಖರೀದಿದಾರರು ಕದ್ದ ಸ್ಮಾರ್ಟ್‌ಫೋನ್‌ಗಳ ಬಿಡಿಭಾಗಗಳಾದ ಸ್ಕ್ರೀನ್, ಬ್ಯಾಟರಿ, ಸ್ಪೀಕರ್, ಮದರ್‌ಬೋರ್ಡ್ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ. ಹೆಚ್ಚಿನ ಮೊಬೈಲ್ ಕಳ್ಳರು ಫೋನ್‌ನಲ್ಲಿರುವ ಡೇಟಾದ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ. ಅವರು ಅದನ್ನು ಮಾರಾಟ ಮಾಡಲು ಮಾತ್ರ ನೋಡುತ್ತಿರುತ್ತಾರೆ. ಮಾರಾಟ ಮಾಡುವ ಮುನ್ನ ಅದರಲ್ಲಿರುವ ಎಲ್ಲಾ ಡೇಟಾವನ್ನು ಅಳಿಸುತ್ತಾರಂತೆ.
ಎಫ್‌ಐಆರ್ ದಾಖಲಾಗುವುದು ಕಡಿಮೆ:
ಹೆಚ್ಚಿನ ಮೊಬೈಲ್ ಫೋನ್ ಕಳ್ಳತನ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗುವುದಿಲ್ಲ ಎಂದು ಹಿರಿಯ ಅಪರಾಧ ವಿಭಾಗದ ಪೋಲೀಸ್ ಹೇಳುತ್ತಾರೆ. ಇದಕ್ಕೆ ಕಾರಣವನ್ನೂ ನೀಡಿದ ಅವರು, ”ಕೆಲವು ಬಾರಿ ದೂರುದಾರರೇ ಸ್ವತಃ ಫೋನ್ ಮರಳಿ ಪಡೆಯುವ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಎಫ್‌ಐಆರ್‌ಗಳು ದಾಖಲಾಗುವುದಿಲ್ಲ, ಆಗ ಕದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವುದು ತುಂಬಾ ಕಷ್ಟಕರವಾಗುತ್ತದೆ. ಕೆಲವು ಚೈನೀಸ್ ಸಾಫ್ಟ್‌ವೇರ್‌ಗಳು ಲಭ್ಯವಿದ್ದು, ಅದರ ಸಹಾಯದಿಂದ ದುಷ್ಕರ್ಮಿಗಳು ಮೊಬೈಲ್ ಫೋನ್ ಅನ್ನು ಫ್ಲ್ಯಾಷ್ ಮಾಡುತ್ತಾರೆ, IMEI ಅನ್ನು ಬದಲಾಯಿಸುತ್ತಾರೆ. ಇದರಿಂದಾಗಿ ಅವುಗಳನ್ನು ಟ್ರ್ಯಾಕ್ ಮಾಡುವುದು ಅಸಾಧ್ಯವಾಗುತ್ತದೆ,” ಎಂದು ಪೋಲೀಸ್ ಹೇಳಿದರು.
ಕದ್ದ ಫೋನ್ ಕಡಿಮೆ ಬೆಲೆಯದ್ದಾಗಿದ್ದರೆ ಅವರು ಸಾಮಾನ್ಯವಾಗಿ ದೂರು ದಾಖಲಿಸುತ್ತಾರೆಯೇ ಹೊರತು ಎಫ್‌ಐಆರ್ ದಾಖಲು ಮಾಡುವುದಿಲ್ಲ. ಅಗ್ಗದ ಫೋನ್‌ಗಳ ಮಾಲೀಕರು ಅದನ್ನು ಮರುಪಡೆಯುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಆದಾಗ್ಯೂ, ಕದ್ದ ಫೋನ್ ಅನ್ನು ಅಪರಾಧಕ್ಕಾಗಿ ಬಳಸಿದರೆ, ಅದರಿಂದ ಮುಕ್ತರಾಗಲು ದೂರು ಸಲ್ಲಿಸುವುದು ಒಳ್ಳೆಯದು ಎಂಬುದು ಪೊಲೀಸ್ ಅಧಿಕಾರಿಯ ಮಾತು.
ಬೆಂಗಳೂರು ಮೂಲದ ವಕೀಲರೊಬ್ಬರು ಈ ಬಗ್ಗೆ ಮಾತನಾಡಿ, ”ಎಫ್‌ಐಆರ್ ದಾಖಲಿಸಲು ನಿರಾಕರಿಸಲು ಒಂದು ಕಾರಣವೆಂದರೆ, ಇದು ಅಪರಾಧ ದಾಖಲೆಗಳಲ್ಲಿನ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ, ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಬಹುದು. ಎಸ್‌ಪಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಿಆರ್‌ಪಿಸಿಯ ಸೆಕ್ಷನ್ 156(3) ಅಡಿಯಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಿ ತನಿಖೆಗೆ ಆದೇಶಿಸಬಹುದು. ಆದರೆ ಈ ಪ್ರಕ್ರಿಯೆಯು ದೀರ್ಘವಾಗಿದೆ. ಆದ್ದರಿಂದ, ಕಿರಿಯ ಪೊಲೀಸರು ಹೇಳುವುದನ್ನು ಜನರು ಸಾಮಾನ್ಯವಾಗಿ ಕೇಳುತ್ತಾರೆ,” ಎಂದು ಅವರು ಹೇಳಿದರು.
IMEI ಬದಲಾಯಿಸುವುದು ಸುಲಭವಲ್ಲ
ಪ್ರತಿ ಫೋನ್‌ಗೆ ವಿಶಿಷ್ಟವಾದ ಇಂಟರ್‌ನ್ಯಾಶನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (IMEI) ಸಂಖ್ಯೆಯನ್ನು ನೀಡಲಾಗುತ್ತದೆ. ಇದನ್ನು ನಿರ್ಬಂಧಿಸುವ ಮೂಲಕ ಪೊಲೀಸರು ಕದ್ದ ಫೋನ್ ಅನ್ನು ನಿಷ್ಕ್ರಿಯಗೊಳಿಸಬಹುದು. ಒಮ್ಮೆ ನಿರ್ಬಂಧಿಸಿದರೆ, ಅದು ನೋಂದಾಯಿಸಿದ ದೇಶದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬೆಂಗಳೂರು ಪೊಲೀಸರು ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಅನ್ನು ಬಳಸುತ್ತಾರೆ, ಇದು ಅತ್ಯಾಧುನಿಕ ಪೋರ್ಟಲ್ ಆಗಿದ್ದು ಕದ್ದ ಫೋನ್‌ನ IMEI ಸಂಖ್ಯೆಯನ್ನು ನಿರ್ಬಂಧಿಸಬಹುದು. CEIR ಪೋರ್ಟಲ್ ಕದ್ದ ಫೋನ್‌ಗೆ ಸಿಮ್ ಕಾರ್ಡ್ ಅನ್ನು ಸೇರಿಸಿದಾಗಲೆಲ್ಲಾ ಸಿಮ್ ಕಾರ್ಡ್‌ನ ವಿವರಗಳೊಂದಿಗೆ ಎಚ್ಚರಿಕೆಯನ್ನು ನೀಡುತ್ತದೆ. ಈ ಮೂಲಕ ಕಳ್ಳರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡುತ್ತದೆ.
ಇಂದು ಫೋನ್‌ಗೆ ಹೊಸ IMEI ಅನ್ನು ಸೇರಿಸುವುದು ಸುಲಭವಲ್ಲ ಎಂದು ಸೆಕೆಂಡ್ ಹ್ಯಾಂಡ್ ಫೋನ್ ಡೀಲರ್ ತಿಳಿಸಿದರು. “ಇದು ಹಿಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು. ಇಂದು IMEI ಸಂಖ್ಯೆಯನ್ನು ಬದಲಾಯಿಸುವುದು ಕಷ್ಟ. ಇದಕ್ಕಾಗಿ ನೀವು ಸೂಕ್ತವಾದ ವ್ಯಕ್ತಿಯನ್ನು ಹುಡುಕಬೇಕು. ಫೋನ್‌ಗೆ ಅನುಗುಣವಾಗಿ, ನೀವು ಕಡಿಮೆ ಬೆಲೆಯ ಫೋನ್‌ಗಳಿಗೆ 400 ರೂ. ನಿಂದ ಐಫೋನ್‌ಗಳಿಗೆ 2,500 – 3,000 ರೂ. ವರೆಗೆ ಪಾವತಿಸಬೇಕಾಗಬಹುದು. 2010 ರ ದಶಕದಲ್ಲಿ ಕಡಿಮೆ-ವೆಚ್ಚದ ಚೈನೀಸ್ ಹ್ಯಾಂಡ್‌ಸೆಟ್‌ಗಳಲ್ಲಿ IMEI ಅನ್ನು ಬದಲಾಯಿಸುವುದು ಸಾಮಾನ್ಯವಾಗಿತ್ತು. ಇಂದಿನ ಫೋನ್‌ಗಳು ಅಗ್ಗವಾಗಿದ್ದರೂ, ಹೆಚ್ಚು ಅತ್ಯಾಧುನಿಕವಾಗಿವೆ. ಇವುಗಳಲ್ಲಿ IMEI ಸಂಖ್ಯೆಯನ್ನು ಬದಲಾಯಿಸುವುದು ಕಷ್ಟ,” ಎಂದು ಹೇಳುತ್ತಾರೆ.
ಕಳೆದುಕೊಂಡಿದ್ದೀರಾ? ಅಥವಾ ಕಳ್ಳತನವಾಗಿದಾ?:
ನೀವು ದೂರು ಸಲ್ಲಿಸುವಾಗ ಸರಿಯಾದ ಪದಗಳನ್ನು ಬಳಸುವುದು ಬಹಳ ಮುಖ್ಯ. ಫೋನ್ ಕಸಿದುಕೊಂಡರೆ, ಅಪರಾಧವು ದರೋಡೆಯಾಗಿದ್ದು, ಐಪಿಸಿಯ ಸೆಕ್ಷನ್ 392 ಅನ್ನು ಅನ್ವಯಿಸುತ್ತದೆ, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಅದೆ ನಿಮ್ಮ ಫೋನ್ ಅನ್ನು ನೀವು ಎಲ್ಲೋ ಟೇಬಲ್ ಮೇಲೆ ಇಟ್ಟು ಅಲ್ಲಿಂದ ಕಳ್ಳತನವಾದರೆ ಅಥವಾ ಫೋನ್ ಪಿಕ್‌ಪಾಕೆಟ್ ಆಗಿದ್ದರೆ ಅದು ದರೋಡೆಗೆ ಸಮನಾಗಿರುವುದಿಲ್ಲ.
Published On - 3:03 pm, Thu, 23 May 24