ಜೀವವೆಂಬ ಜಾಲದೊಳಗೆ | Jeevavemba Jaaladolage : “ಕೆಂಪಿ ದನ ಇದೆಯಲ್ಲ ಅದು ಇವತ್ತು ಕರು ಕರ್ಕೊಂಡು ಬಂದಿತ್ತು ಕಣೇ, ಎಲ್ಲೋ ಬೆಟ್ಟದಲ್ಲೇ ಕರು ಹಾಕಿರಬೇಕು, ನಿನ್ನೆ ಮನೆಗೆ ಬಂದೇ ಇರಲಿಲ್ಲ. ಇವತ್ತು ಕರು ಜೊತೆಗೆ ಬಂದಿದೆ, ಎಷ್ಟು ಮುದ್ದಾಗಿದೆ ಗೊತ್ತಾ, ಕರು ಅಂತೂ ಚುರುಕೂ ಚುರುಕು, ಹುಟ್ಟಿ ಒಂದೇ ದಿನ ಆಗಿದ್ದರೂ ಅಮ್ಮನಿಗಿಂತಲೂ ಜೋರಾಗಿ ಓಡತ್ತೆ”…ಅಮ್ಮ ಖುಷಿಯಿಂದ ಹೇಳುತ್ತಿದ್ದರು. ಪ್ರತಿದಿನ ಸಮಯಕ್ಕೆ ಸರಿಯಾಗಿ ಗೇಟಿನ ಬಳಿ ಬಂದು ಅಂಬಾ ಎಂದು ಕೂಗಿ ಕರೆದು ಅಮ್ಮ ಕೊಡುವ ಅಕ್ಕಚ್ಚನ್ನು ಕುಡಿದು ಹೋಗುವ ನಾಲ್ಕಾರು ದನಗಳಲ್ಲಿ ಕೆಂಪಿಯೂ ಒಂದು. ಈ ದನಗಳು “ಮಲೆನಾಡು ಗಿಡ್ಡ” ತಳಿಗೆ ಸೇರಿದವುಗಳು. ಕಷ್ಟಸಹಿಷ್ಣುಗಳು. ಹಾಗಾಗಿ ಅವುಗಳನ್ನು ಸಾಕಿದವರು ಮೆಂದು ಬರಲಿ ಎಂದು ಬೆಳಿಗ್ಗೆ ಬಿಡುತ್ತಾರೆ. ಇವು ಹೀಗೆ ಒಂದೆರಡು ಮನೆಗಳಲ್ಲಿ ಕೂಗಿ ಕರೆದು ಅವರು ಕೊಡುವುದನ್ನು ಕುಡಿದು, ತಿಂದು, ಹುಲ್ಲು ಸಿಕ್ಕಲ್ಲಿ ಮೆಂದು ಸಾಯಂಕಾಲ ಮನೆಗೆ ವಾಪಾಸಾಗುತ್ತವೆ.
ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran)
(ಜಾಲ 6)
“ಮಾಸ ತಿಂದುಬಿಟ್ಟಿರತ್ತೆ, ಸ್ವಲ್ಪ ಜಾಸ್ತಿ ನಂಜಿಗೆ ಕೊಡಬೇಕು ಅವರ ಮನೆಯವರು” ಅಮ್ಮ ಹೇಳಿದಾಗ ತಲೆಯಲ್ಲಿ ಸಣ್ಣಗೆ ಒಂದು ಬಲ್ಬ್ ಹೊತ್ತಿಕೊಂಡ ಅನುಭವವಾಯ್ತು. ಸಸ್ಯಾಹಾರಿಯಾದ ದನ, ತನ್ನದೇ ಮಾಂಸದ ತುಣುಕನ್ನು ತಿನ್ನುವುದು! ಮೊದಲು ನಮ್ಮ ಮನೆಯಲ್ಲೂ ಸಹ ಜಾನುವಾರುಗಳು ಇದ್ದ ಕಾಲದಲ್ಲಿ ಯಾವುದೇ ದನ ಅಥವಾ ಎಮ್ಮೆ ಕರು ಹಾಕುವ ಸಮಯ ಬಂತೆಂದರೆ ಅಪ್ಪ ಅದರ ಬಳಿಯಲ್ಲೇ ಇರುತ್ತಿದ್ದರು. ಕರು ಹಾಕಿದ ನಂತರ ನಾಲ್ಕಾರು ತಾಸುಗಳಲ್ಲಿ ಅದು “ಕಸ” ಹಾಕುತ್ತದೆ, ಮತ್ತು ಅದನ್ನು ತಿನ್ನಲು ಪ್ರಯತ್ನಿಸುತ್ತದೆ, ಹಾಗೆ ಕಸ ತಿನ್ನಬಾರದು ಎಂದು ಕಾಯುತ್ತಿದ್ದರು. ತಿನ್ನಬಾರದ ವಸ್ತುವಾದರೆ ಅದು ಏಕೆ ತಿನ್ನಲು ಪ್ರಯತ್ನಿಸುತ್ತದೆ!
ಗರ್ಭಕೋಶದೊಳಗೆ ತಾಯಿಗೂ ಮರಿಗೂ ಹೊಕ್ಕುಳುಬಳ್ಳಿಯ ಮೂಲಕ ಸಂಪರ್ಕವೇರ್ಪಡಿಸಿ, ಅಗತ್ಯ ಪೋಷಕಾಂಶಗಳನ್ನು ತಾಯಿಯಿಂದ ಮರಿಗೆ ಸಾಗಿಸುವ ಚೀಲದಂತಹ “ಪ್ಲಾಸೆಂಟಾ”ವನ್ನು ನಮ್ಮ ಕಡೆ “ಮಾಸ”, “ಕಸ”, “ಸತ್ತೆ” ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುವುದು. ಮರಿಹಾಕುವ ಜೀವಿಗಳಾದ ಸಸ್ತನಿಗಳಲ್ಲಿ ಮರಿ ಹಾಕಿದ ನಂತರ ಕೆಲವೇ ಕ್ಷಣಗಳಿಂದ ಹಿಡಿದು 24 ಗಂಟೆಯೊಳಗೆ ಈ “ಕಸ” ಕೂಡ ಹೊರಗೆ ಬರುವುದು ಸ್ವಾಭಾವಿಕ ಪ್ರಕ್ರಿಯೆ.
ಜಾನುವಾರುಗಳು ಮಾಸು ತಿನ್ನಲು ಪ್ರಯತ್ನಿಸುತ್ತವೆ, ಆದರೆ ಹಾಗೆ ತಿಂದರೆ ಅದಕ್ಕೆ ನಂಜು ಹೆಚ್ಚಾಗುತ್ತದೆ ಮತ್ತು ಹಾಲು ಕಡಿಮೆಯಾಗುತ್ತದೆ, ಹಾಗಾಗಿ ತಿನ್ನಲು ಬಿಡಬಾರದು ಎಂಬುದು ನಮ್ಮ ಹಳ್ಳಿಗಳಲ್ಲಿರುವ ನಂಬಿಕೆ. ಇದರಲ್ಲಿ ಅರ್ಧ ಸತ್ಯವಿದೆ ಎನ್ನುತ್ತಾರೆ ಅನುಭವಸ್ಥರು. ಹಲವಾರು ವರ್ಷಗಳಿಂದ ಜಾನುವಾರುಗಳನ್ನು ಸಾಕುತ್ತಿರುವವರು, “ಅವು ತಿನ್ನಲು ಪ್ರಯತ್ನಿಸುವುದು ನಿಜ, ತಿಂದರೆ ಮಹಾ ವ್ಯತ್ಯಾಸವೇನೂ ಆಗುವುದಿಲ್ಲ. ಕೆಲವೊಮ್ಮೆ ಮರುದಿನ ಬೇಧಿಯಾಗಬಹುದು, ನಂಜಿಗೆ ಸ್ವಲ್ಪ ಹೆಚ್ಚು ಕೊಟ್ಟರೆ ಎಲ್ಲವೂ ಸರಿಯಾಗುತ್ತದೆ” ಎನ್ನುತ್ತಾರೆ. ಪಶುವೈದ್ಯರುಗಳಾದ ಡಾ.ಕೃಷ್ಣಮೂರ್ತಿ ಮತ್ತು ರಜತ್ ಸಹ ಇದನ್ನು ಅನುಮೋದಿಸುತ್ತಾರೆ.
ಜಾನುವಾರುಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿರುವ ಪಶುತಜ್ಞ, ವಿಜ್ಞಾನಿ, ಡಾ. ಬಿ. ಎನ್. ಶ್ರೀಧರ, “ಎಲ್ಲ ಜಾನುವಾರುಗಳೂ ಮಾಸನ್ನು ತಿನ್ನುವುದಿಲ್ಲ. ಯಾವುದೋ ಪೋಷಕಾಂಷಗಳ ಕೊರತೆ ಇರುವವು ತಿನ್ನಲು ಪ್ರಯತ್ನಿಸುತ್ತವೆ. ಅನೇಕ ವೇಳೆ ಕರು ಹಾಕಿದ ಜಾನುವಾರುಗಳು ಹಸಿವಿನಿಂದ ಬಳಲುತ್ತವೆ, ಹೆಚ್ಚು ಆಹಾರ ನೀಡಬಾರದೆಂಬ ಮೂಢನಂಬಿಕೆಯಿಂದಾಗಿ ಸರಿಯಾಗಿ ಆಹಾರ ಕೊಡದಿದ್ದರೆ ಆಗ ಸಹ ಅವು ಮಾಸ ತಿನ್ನಲು ಪ್ರಯತ್ನಿಸುತ್ತವೆ. ಹೀಗೆ ತಿಂದರೂ ಸಹ ಅಪಾಯವೇನೂ ಇಲ್ಲ. ನನ್ನ ಹಲವಾರು ವರ್ಷಗಳ ವೈದ್ಯಕೀಯ ಅನುಭವದಲ್ಲಿ ಕಸ ತಿಂದು ತೀವ್ರವಾಗಿ ಅನಾರೋಗ್ಯಕ್ಕೊಳಗಾದ ಜಾನುವಾರುಗಳನ್ನು ಕಂಡಿಲ್ಲ, ಆದರೂ ಅದು ಅವುಗಳ ಆಹಾರವಲ್ಲದ್ದರಿಂದ ಅಜೀರ್ಣವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಿನ್ನಲು ಬಿಡಬೇಡಿ ಎಂದು ಸಲಹೆ ನೀಡುತ್ತೇವೆ” ಎನ್ನುತ್ತಾರೆ.
ಗರ್ಭಚೀಲದಲ್ಲಿ ಮರಿಗಳನ್ನು ಬೆಳಸಿ ಮರಿ ಹಾಕುವ ಸಸ್ತನಿಗಳ ವಂಶದಲ್ಲಿ ಹೆಚ್ಚಿನವುಗಳು ಈ ಮಾಸವನ್ನು ತಿನ್ನುವುದೂ ಸಹ ಪ್ರಕೃತಿ ಸಹಜ ಕ್ರಿಯೆ. ಮಾಂಸಾಹಾರಿ ಪ್ರಾಣಿಗಳಷ್ಟೇ ಅಲ್ಲದೆ ಸಸ್ಯಾಹಾರಿ ಪ್ರಾಣಿಗಳೂ ಈ ಮಾಸವನ್ನು ಏಕೆ ತಿನ್ನುತ್ತವೆ? ಎಂಬ ಪ್ರಶ್ನೆ ತಲೆಯನ್ನು ಕೊರೆಯಲು ಪ್ರಾರಂಭಿಸಿದಾಗ ಮೊದಲು ಹೊಳೆದದ್ದು ರಕ್ಷಣೆಯ ವಿಚಾರ. ಈ ಮಾಸವು ಅಲ್ಲೇ ಇದ್ದರೆ ಕೊಳೆತು ವಾಸನೆ ಬರುವುದರಿಂದ ಭಕ್ಷಕಗಳು ದಾಳಿ ಮಾಡುವ ಸಂಭವನೀಯತೆ ಹೆಚ್ಚುತ್ತದೆ. ಇನ್ನೂ ಹೆಚ್ಚು ಶಕ್ತಿಯಿರದ ಮರಿಗಳು ಭಕ್ಷಕಗಳಿಗೆ ಸುಲಭವಾಗಿ ಆಹಾರವಾಗುತ್ತವೆ. ಇದನ್ನು ತಡೆಯಲು ತಾಯಿ ಮರಿ ಹಾಕಿದಾಗ ಹೊರಬರುವ ಅವಶೇಷಗಳನ್ನೆಲ್ಲ ತಿನ್ನುವ ಅಭ್ಯಾಸ ಬೆಳೆಸಿಕೊಂಡಿರಬೇಕು. ಇದರ ಬಗ್ಗೆ ಇನ್ನಷ್ಟು ಹುಡುಕಾಡಿದಾಗ ಅದಕ್ಕೆ ಹೊಂದಿಕೊಂಡಂತೆ ಅನೇಕ ಸಂಗತಿಗಳು ಎದುರಿಗೆ ಬಂದವು.
ಇದನ್ನೂ ಓದಿ : ಜೀವವೆಂಬ ಜಾಲದೊಳಗೆ; ಪ್ರಾಣಿಗಳಿಗಂತೂ ಬೋರ್ಡ್ ಓದಲು ಬರುವುದಿಲ್ಲ ಚಿಪ್ಸ್, ಕುರ್ಕುರೆ ಹಿಡಿದುಕೊಂಡು ಹೋಗುವ ನಮಗೆ?
ಸಸ್ತನಿಗಳು ಹೀಗೆ ತಮ್ಮದೇ ದೇಹದ ಭಾಗವೊಂದು ಹೊರಬಂದ ತಕ್ಷಣ ತಿನ್ನುವುದರ ಹಿಂದೆ ಹಲವಾರು ಕಾರಣಗಳಿರಬಹುದು.
ರಕ್ಷಣೆ – ಮೊದಲೇ ಹೇಳಿದಂತೆ ಇದರ ವಾಸನೆಗೆ ಆಕರ್ಷಿತವಾಗುವ ಭಕ್ಷಕಗಳನ್ನ ದೂರವಿಡುವ ಪ್ರಯತ್ನವಿರಬಹುದು.
ಸ್ವಚ್ಛತೆಗೆ – ತಮ್ಮ ಗೂಡಿನ ಸ್ವಚ್ಛತೆ ಕಾಪಾಡಿಕೊಳ್ಳಲು ಮರಿ ಹಾಕುವ ಸಮಯದಲ್ಲಿ ಹೊರಬರುವ ಕಸ (ಪ್ಲಾಸೆಂಟಾ), ನೀರು (ಆಮ್ನಿಯಾಟಿಕ್ ಫ್ಲೂಯಿಡ್), ಇನ್ನಿತರ ಅವಶೇಷಗಳನ್ನೂ ತಿನ್ನುವ ಅಭ್ಯಾಸ ಬೆಳೆದಿರಬಹುದು
ಹಸಿವಿಗೆ – ಬಹಳಷ್ಟು ಪ್ರಾಣಿಗಳು ಮರಿ ಹಾಕುವುದಕ್ಕೂ ಮೊದಲೊಂದಿಷ್ಟು ಗಂಟೆಗಳಿಂದಲೂ ಆಹಾರ ಸೇವಿಸುವುದಿಲ್ಲ. ಹಾಗಾಗಿ ಮರಿ ಹಾಕಿದ ನಂತರ ತಕ್ಷಣ ಹಸಿವು ಹೆಚ್ಚಾಗಿ ಅಲ್ಲೇ ಸುಲಭವಾಗಿ ದೊರೆಯುವ ಕಸವನ್ನು ತಿನ್ನಬಹುದು.
ಪೋಷಕಾಂಶಗಳಿಗಾಗಿ – ಪ್ಲಾಸೆಂಟಾ ಅನೇಕ ಪೋಷಕಾಂಶಗಳ ಆಗರ. ಪ್ರೋಟೀನ್, ವಿಟಾಮಿನ್ , ದೇಹ ಶ್ರೀಘ್ರವಾಗಿ ಚೇತರಿಸಿಕೊಳ್ಳಲು ಬೇಕಾಗುವಂತಹ ಅಂಶಗಳು ಹಲವಾರು ಅತ್ಯವಶ್ಯಕ ಹಾರ್ಮೋನುಗಳು, ನೋವುನಿವಾರಕಗಳು ಮಾಸ ಮತ್ತು ಅದರಲ್ಲಿರುವ ನೀರಿನಲ್ಲಿ ಹೇರಳವಾಗಿರುತ್ತದೆ. ಹಾಗಾಗಿ ತಿನ್ನುವ ಅಭ್ಯಾಸ ಬೆಳೆದಿರಬಹುದು.
ಮರಿಗಳೊಡನೆ ಬಾಂಧವ್ಯ ಹೆಚ್ಚಿಸಲು – ಸಸ್ತನಿಗಳಲ್ಲಿ ತಾಯಿಯು, ಮರಿ ಹುಟ್ಟಿದೊಡನೆ ಅದನ್ನು ನೆಕ್ಕಿ ಅದಕ್ಕೆ ಅಂಟಿರುವ ರಕ್ತ, ಗರ್ಭಚೀಲದೊಳಗಿನ ನೀರು ಎಲ್ಲವನ್ನೂ ಸ್ವಚ್ಛಗೊಳಿಸಿ, ಅವುಗಳು ಎದ್ದು ನಿಲ್ಲಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದು ಮರಿಯೊಂದಿಗೆ ಅದರ ಬಾಂಧವ್ಯವನ್ನು ಬೆಳೆಸುತ್ತದೆ ಎನ್ನುತ್ತಾರೆ ತಜ್ಞರು. ಹಾಗೆಯೆ ಹೆಣ್ಣುನಾಯಿಗಳಲ್ಲಿ ಕಸವನ್ನು ತಿನ್ನುವುದೂ ಸಹ ಮರಿಗಳೊಡನೆ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂಬುದು ಪ್ರಯೋಗಗಳ ಮೂಲಕ ದೃಢಪಟ್ಟಿದೆ.
ಈ ಎಲ್ಲ ಅಂಶಗಳನ್ನೂ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ, ಎಲ್ಲ ಅಂಶಗಳನ್ನೂ ವೈಜ್ಞಾನಿಕವಾಗಿ ಇನ್ನೂ ಪ್ರಮಾಣೀಕರಿಸಲಾಗಿಲ್ಲವಾದರೂ ನೋವು ನಿವಾರಕವಾಗಿ, ಪೋಷಕಾಂಶಗಳ ಪೂರೈಕೆಗಾಗಿ, ಬಾಂಧವ್ಯಾಭಿವೃದ್ಧಿಗಾಗಿ ತಿನ್ನುತ್ತವೆ ಎಂಬುದಕ್ಕೆ ಆಧಾರಗಳು ದೊರಕಿವೆ.
ಮಾನವರಲ್ಲೂ ಸಹ ಪ್ಲಾಸೆಂಟಾವನ್ನು ಔಷಧ ರೂಪದಲ್ಲಿ ಬಳಸುವ ಅಭ್ಯಾಸವಿದೆಯಂತೆ! ಚೀನಾದ ಪುರಾತನ ವೈದ್ಯಕೀಯ ಪದ್ಧತಿಯಲ್ಲಿ ಮಗುವಿನ ಜನನವಾದ ನಂತರ ಬಾಣಂತಿಯರನ್ನು ಕಾಡುವ ನೋವು ನಿವಾರಣೆಗಾಗಿ, ಸನ್ನಿ ಅಥವಾ ಡಿಪ್ರೆಶನ್ ತಡೆಗಟ್ಟಲು ಅವರದೇ ಪ್ಲಾಸೆಂಟಾವನ್ನು ವಿವಿಧ ರೂಪದಲ್ಲಿ ತಿನ್ನಿಸುವ ಅಭ್ಯಾಸ ಇತ್ತೆಂದು ಉಲ್ಲೇಖವಿದೆ. ಜಗತ್ತಿನ ಕೆಲವು ಕಡೆ ಈಗಲೂ ಸಹ ಪ್ಲಾಸೆಂಟಾವನ್ನು ಸಂಸ್ಕರಿಸಿ ಕ್ಯಾಪ್ಸೂಲ್ ರೂಪದಲ್ಲಿ ಸಂಗ್ರಹಿಸಿ ಮಾರುವುದು, ಆದನ್ನು ಸೇವಿಸುವುದು ರೂಢಿಯಲ್ಲಿದೆ! ಇದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಸೋಂಕು ತಗಲುವ ಅಪಾಯವಿದೆ, ಹಾಗಾಗಿ ಸೂಕ್ತವಲ್ಲ ಎಂಬುದು ವೈದ್ಯರುಗಳ ಅಭಿಪ್ರಾಯ.
(ಮುಂದಿನ ಜಾಲ : 25.3.2022)
ಹಿಂದಿನ ಜಾಲ : Science and Environment : ಜೀವವೆಂಬ ಜಾಲದೊಳಗೆ: ವಶೀಕರಣ ವಿದ್ಯೆ ಕಲಿಯಬೇಕೆ? ಇವರುಗಳನ್ನು ಸಂಪರ್ಕಿಸಿ
Published On - 2:27 pm, Fri, 11 March 22