Science and Environment : ಜೀವವೆಂಬ ಜಾಲದೊಳಗೆ: ವಶೀಕರಣ ವಿದ್ಯೆ ಕಲಿಯಬೇಕೆ? ಇವರುಗಳನ್ನು ಸಂಪರ್ಕಿಸಿ
Hypnotism : ಈ ವಶೀಕರಣ ವಿದ್ಯೆ ನಿಜವೇ? ಯಾರನ್ನಾದರೂ ಬ್ರೈನ್ ವಾಶ್ ಮಾಡಿ ನಾವು ಹೇಳಿದಂತೆ ಕೇಳುವ ಹಾಗೆ ಮಾಡಬಹುದೆ? ಮನುಷ್ಯರ ವಿಚಾರ ಮನುಷ್ಯರಿಗೇ ಗೊತ್ತು. ಆದರೆ ಇದು ಪ್ರಾಣಿಗಳಲ್ಲಂತೂ ಇದೆ!
ಜೀವವೆಂಬ ಜಾಲದೊಳಗೆ | Jeevavemba Jaaladolage : ದಿನ ಬೆಳಗಾದರೆ ಪೇಪರ್ ಜೊತೆಗೆ ಒಂದು ತೆಳ್ಳನೆಯ ಪಾಂಪ್ಲೆಟ್ ಮನೆಗೆ ಬಂದು ಬೀಳುತ್ತದೆ, “ನಿಮ್ಮ ಕಷ್ಟಗಳಿಗೆಲ್ಲ ಪರಿಹಾರ ಬೇಕೆ? ವಿದ್ಯೆ ಉದ್ಯೋಗ ಆರೋಗ್ಯ ಇತ್ಯಾದಿ ಸಮಸ್ಯೆಯೆ? ಯಾರನ್ನಾದರೂ ಒಲಿಸಿಕೊಳ್ಳಬೇಕೆ? ಜ್ಯೋತಿಷ್ಯಶಾಸ್ತ್ರ ಪಾರಂಗತ, ವಶೀಕರಣ ವಿದ್ಯೆ ಅರಿತಿರುವ ಶ್ರೀ..ಶ್ರೀ..ಶ್ರೀ …ರವರನ್ನು ಸಂಪರ್ಕಿಸಿ” ಎಂದೆಲ್ಲ ಅದರಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿರುತ್ತದೆ. ಈ ವಶೀಕರಣ ವಿದ್ಯೆ ಎಂಬುದು ನಿಜವಾಗಲೂ ಸಾಧ್ಯವೆ? ಯಾರನ್ನಾದರೂ ಬ್ರೈನ್ ವಾಶ್ ಮಾಡಿ ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ನಾವು ಹೇಳಿದಂತೆ ಕೇಳುವ ಹಾಗೆ ಮಾಡಬಹುದೆ? ಮನುಷ್ಯನ ವಿಚಾರದಲ್ಲಿ ಏನೋ ಗೊತ್ತಿಲ್ಲ. ಆದರೆ ಪ್ರಾಣಿ ಜಗತ್ತಿನಲ್ಲಿ ಇದು ನಡೆಯುತ್ತದೆ. ಕೆಲವೊಂದು ಪರೋಪಜೀವಿಗಳು ಬೇರೆ ಪ್ರಾಣಿಗಳ ಮೆದುಳನ್ನೇ ಆಕ್ರಮಿಸಿಕೊಂಡು ತಮಗೆ ಬೇಕಾದಂತೆ ಆ ಪ್ರಾಣಿ ನಡೆದುಕೊಳ್ಳುವಂತೆ ಮಾಡುತ್ತವೆ. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ
*
(ಜಾಲ 5)
Ophiocordyceps ಎಂಬ ಕುಲಕ್ಕೆ ಸೇರಿದ ಶಿಲೀಂದ್ರಗಳಲ್ಲಿ ಅನೇಕ ಪ್ರಬೇಧಗಳಿವೆ. ಅವು ಹಲವಾರು ಜಾತಿಯ ಕೀಟಗಳನ್ನು ವಶಪಡಿಸಿಕೊಂಡು ಅವುಗಳು ತಮಗೆ ಬೇಕಾದಂತೆ ನಡೆದುಕೊಳ್ಳುವಂತೆ ಮಾಡುತ್ತವೆ.
- “Caterpillar fungus” ಅಥವಾ “ವೆಜಿಟಬಲ್ ಫಂಗಸ್” ಎಂಬುದು ತನ್ನ ಔಷಧೀಯ ಗುಣಗಳಿಂದಾಗಿ ಟಬೆಟ್, ಚೀನಾ ಮೊದಲಾದೆಡೆಗಳಲ್ಲಿ ಬಹುಬೇಡಿಕೆಯಲ್ಲಿರುವ ವಸ್ತು. ಹಿಮಾಲಯದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಇವುಗಳು ದೊರೆಯುತ್ತವೆ. 3000-4000 ಅಡಿಗಳ ಎತ್ತರದ ಪ್ರದೇಶದಲ್ಲಿ ಕುರುಚಲು ಸಸ್ಯಗಳು, ಹುಲ್ಲುಗಳ ನಡುವೆ ಇವುಗಳನ್ನು ಹುಡುಕಿ, ಸಂಗ್ರಹಿಸಿ, ಮಾರುವುದು ಹಲವಾರು ಜನರ ಉದ್ಯೋಗ.
- ಒಂದು ಜಾತಿಯ (ಘೋಸ್ಟ್ ಮಾತ್) ಪತಂಗದ ಮರಿಗಳು (ಲಾರ್ವಾ) ಭೂಮಿಯಾಳದಲ್ಲಿದ್ದು ಸಸ್ಯಗಳ ಬೇರುಗಳನ್ನು ತಿನ್ನುತ್ತವೆ. Ophiocordyceps sinensis ಎಂಬ ಶಿಲೀಂದ್ರಗಳು ಆ ಲಾರ್ವಾಗಳನ್ನು ಆಕ್ರಮಿಸಿಕೊಂಡು ಅದರ ಜೀವಕೋಶಗಳಿಂದ ಪೋಷಕಾಂಶಗಳನ್ನು ಹೀರುತ್ತಾ ಅದರೊಳಗೆ ಬೆಳೆಯಲು ಪ್ರಾರಂಭಿಸುತ್ತವೆ. ಒಂದಿಷ್ಟು ದಿನಗಳಲ್ಲಿ ಅಲ್ಲೇ ಬೆಳೆದು ಆ ಮರಿಯ ನರವ್ಯೂಹವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತವೆ. ಹೆಚ್ಚಾಗಿ ಭೂಮಿಯಾಳದಲ್ಲೇ ಉಳಿಯಬಯಸುವ ಆ ಮರಿ ಭೂಮಿಯ ಮೇಲ್ಭಾಗಕ್ಕೆ ಬರುವಂತೆ ಮಾಡುತ್ತವೆ. ಒಮ್ಮೆ ಭೂಮಿಯ ಮೇಲ್ಭಾಗಕ್ಕೆ ಬಂದ ನಂತರ ಅದನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಅದರ ದೇಹವನ್ನು ನಿಶ್ಚೇಷ್ಟಿತಗೊಳಿಸುತ್ತದೆ. ನಂತರ ಅದರ ತಲೆಯ ಭಾಗದಿಂದ ಶಿಲೀಂದ್ರದ ಸಂತಾನೋತ್ಪತ್ತಿ ದಂಡ (stromata) ಲಂಬವಾಗಿ ಭೂಮಿಯ ಮೇಲೆ ಹೊರಬರುತ್ತದೆ. ಇದೇ “ಕ್ಯಾಟರ್ ಪಿಲ್ಲರ್ ಫಂಗಸ್”. ಅತೀ ಎಚ್ಚರಿಕೆಯಿಂದ ಇದನ್ನು ಸಂಗ್ರಹಿಸುತ್ತಾರೆ. ಅದರ ತುದಿಯಲ್ಲಿರುವ ಬೀಜಗಳು(ಸ್ಪೋರ್) ಗಾಳಿಗೆ ಎಲ್ಲೆಡೆ ಪಸರಿಸುತ್ತವೆ. ಹೀಗೆ ಪಸರಿಸಿದ ಬೀಜಗಳು ಇನ್ನೊಂದು ಮರಿಯನ್ನು ಸಂಧಿಸಿದರೆ ಅಲ್ಲಿ ಮತ್ತೆ ಇದೇ ಜೀವನಚಕ್ರ ಮುಂದುವರೆಯುತ್ತದೆ.
- ಝಾಂಬಿ ಇರುವೆಗಳು – Ophiocordyceps unilateralis ಹೆಸರಿನ ಶಿಲೀಂದ್ರಗಳು ಉಷ್ಣವಲಯದ ಕಾಡುಗಳಲ್ಲಿ ವಾಸಿಸುವ ಕಪ್ಪು ಇರುವೆ (ಕಾರ್ಪೆಂಟರ್ ಆಂಟ್ಸ್) ಗಳನ್ನು ಆಕ್ರಮಿಸುವ ಪರೋಪಜೀವಿಗಳು. ಇರುವೆಯ ದೇಹದ ಮೇಲೆ ಬಿದ್ದ ಶಿಲೀಂದ್ರದ ಬೀಜವೊಂದು ಅದರ ದೇಹದೊಳಗೆ ಚರ್ಮದ ಮೂಲಕವೇ ಪ್ರವೇಶಿಸಿ, ಒಂದು ಕೋಶವಿದ್ದದ್ದು ಹಲವಾರಾಗಿ ಬೆಳೆದು ಅದರ ದೇಹವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಅದರ ಮೆದುಳನ್ನೇ ನಿಯಂತ್ರಿಸಿ, ಅದು ಗುಂಪಿನಿಂದ ಹೊರಹೊರಟು ಮರವೊಂದರ ಮೇಲೆ ಏರುವಂತೆ ಮಾಡುತ್ತದೆ. ತಾನು ಬೆಳೆಯಲು ಸೂಕ್ತವಾದ ಶಾಖ, ಹವಾಮಾನ ಇರುವ ಅನುಕೂಲಕರವಾದ ಜಾಗವನ್ನು ನೋಡಿ ಇರುವೆಯು ತನ್ನ ಗಟ್ಟಿಮುಟ್ಟಾದ ದವಡೆಗಳನ್ನು ಎಲೆ ಅಥವಾ ಕಾಂಡಕ್ಕೆ ಚುಚ್ಚಿಕೊಳ್ಳುವಂತೆ ನಿರ್ದೇಶಿಸುತ್ತದೆ. ಅಲ್ಲಿಗೆ ಆ ಇರುವೆಯ ಜೀವನ ಅಂತ್ಯಗೊಂಡಂತೆ. ಅದನ್ನು ಆವರಿಸಿಕೊಂಡು ಬೆಳೆಯುವ ಶಿಲೀಂದ್ರದ ಸಂತಾನೋತ್ಪತ್ತಿ ದಂಡ (Stromata) ಇರುವೆಯ ತಲೆಯ ಭಾಗವನ್ನು ಛೇದಿಸಿಕೊಂಡು ಲಂಬವಾಗಿ ಹೊರಬರುತ್ತದೆ. ತುದಿಯಲ್ಲಿರುವ ಗುಂಡನೆಯ ಭಾಗದಲ್ಲಿರುವ ಬೀಜಗಳು ಮೇಲಿನಿಂದ ಗಾಳಿಯಲ್ಲಿ ತೇಲಿ ನೆಲದಲ್ಲಿ ಆಹಾರ ಅರಸುತ್ತಿರುವ ಇರುವೆಗಳ ಸಾಲಿನ ಮೇಲೆ ಬೀಳುತ್ತವೆ. ಇನ್ನಷ್ಟು ಇರುವೆಗಳ ದೇಹದೊಳಗೆ ಇದೇ ಜೀವನಚಕ್ರ ಮುಂದುವರೆಯುತ್ತದೆ.
- Ophiocordyceps sphecocephala ಎಂಬ ಪ್ರಬೇಧದ ಶಿಲೀಂದ್ರಗಳು ಕೊಣಜ (wasps) ಗಳನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳುತ್ತವೆ. ಇರುವೆಗಳಲ್ಲಿ ಮಾಡಿದಂತೆಯೆ ಅವುಗಳ ನರಮಂಡಲವನ್ನು ವಶಪಡಿಸಿಕೊಂಡು, ತಮಗೆ ಬೇಕಾದ ಸ್ಥಳದಲ್ಲಿ ಅವುಗಳು ನಡೆವಂತೆ ಮಾಡಿ ಝಾಂಬಿ ಇರುವೆಗಳಂತೆಯೆ ಝಾಂಬಿ ಕೊಣಜಗಳನ್ನಾಗಿಸುತ್ತವೆ. ಇವಕ್ಕೂ ಸಹ ಚೀನಾದ ಪಾರಂಪರಿಕ ವೈದ್ಯಕೀಯದಲ್ಲಿ ಬೆಲೆಯಿದೆ.
- Ophiocordyceps nutans ಎಂಬ ಶಿಲೀಂದ್ರವು stink bug ಎಂಬ ಜಾತಿಯ ಮಿಡತೆಗಳನ್ನು ಆಕ್ರಮಿಸಿಕೊಂಡು ಮೇಲಿನಂತೆಯೆ ತಮ್ಮ ಜೀವನಚಕ್ರವನ್ನು ನಡೆಸುತ್ತವೆ. ಬೆಳೆಗಳನ್ನು ತಿಂದು ಹಾಳುಗೆಡವಿ ರೈತನ ವೈರಿ ಎನ್ನಿಸಿಕೊಂಡಿರುವ ಈ ಮಿಡತೆಗಳನ್ನು ನೈಸರ್ಗಿಕವಾಗಿ ತಡೆಯಲು ಈ ಶಿಲೀಂದ್ರ ಸಹಾಯ ಮಾಡುತ್ತದೆ.
- Awl fly ಹೆಸರಿನ ನೊಣಗಳನ್ನು ವಶಪಡಿಸಿಕೊಂಡು ಅದರಲ್ಲಿ Ophiocordyceps coenomyia ಶಿಲೀಂದ್ರಗಳು ತಮ್ಮ ಸಂಸಾರವನ್ನು ಬೆಳೆಸಿಕೊಳ್ಳುತ್ತವೆ.
- ಡಿಸ್ಕೊ ಬಸವನಹುಳು – Leucochloridium paradoxum ಹೆಸರಿನ ಚಪ್ಪಟೆ ಹುಳುಗಳು ಬೇರೆ ಜೀವಿಗಳ ದೇಹದಲ್ಲಿ ಬೆಳೆಯುವ ಪರೋಪಜೀವಿಗಳು. ಹಕ್ಕಿಗಳ ಜೀರ್ಣಾಂಗವ್ಯೂಹದಲ್ಲಿ ತಮ್ಮ ಸಂತಾನೋತ್ಪತ್ತಿ ನಡೆಸುವ ಇವುಗಳ ಮೊಟ್ಟೆಗಳು ಹಕ್ಕಿಯ ಹಿಕ್ಕೆಯೊಡನೆ ಕೆಳಕ್ಕೆ ಬೀಳುತ್ತದೆ. ಆ ಹಕ್ಕಿಯ ಹಿಕ್ಕೆಯನ್ನು ತಿನ್ನುವ ಒಂದು ಜಾತಿಯ ಬಸವನಹುಳುಗಳ (Amber snails) ದೇಹದಲ್ಲಿ ಈ ಮೊಟ್ಟೆಗಳು ಮರಿಯಾಗಿ ಬೆಳೆಯುತ್ತವೆ. ಬಸವನಹುಳುವಿನ ಕಣ್ಣುಗಳು ಅದರ ತಲೆಯಿಂದ ಸ್ವಲ್ಪ ಹೊರಚಾಚಿರುತ್ತವೆ. ಆ ಭಾಗವನ್ನು ಸೇರಿಕೊಳ್ಳುವ ಚಪ್ಪಟೆಹುಳುಗಳು ಅದರ ನರವ್ಯೂಹವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತವೆ. ಬಿಸಿಲು ಮತ್ತು ಭಕ್ಷಕಗಳಾದ ಹಕ್ಕಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೆಚ್ಚಾಗಿ ಎಲೆಗಳ ಹಿಂಬಾಗದಲ್ಲಿ ಅಡಗುವ ಬಸವನ ಹುಳುಗಳು ತಮ್ಮನ್ನು ಆಡಿಸುತ್ತಿರುವ ಚಪ್ಪಟೆಹುಳುಗಳ ನಿರ್ದೇಶನದಂತೆ ಅಡಗುತಾಣದಿಂದ ಗಿಡಮರಗಳ ಮೇಲ್ಭಾಗದಲ್ಲಿ, ಪಕ್ಷಿಗಳಿಗೆ ಸುಲಭ ಗೋಚರವಾಗುವಂತೆ ಹೊರಹೊರಡುತ್ತವೆ. ಅಲ್ಲದೆ ಆ ಬಸವನಹುಳುಗಳ ಹೊರಚಾಚಿದ ಕಣ್ಣುಗಳಲ್ಲಿರುವ ಚಪ್ಪಟೆ ಹುಳುಗಳ ಕಾರಣದಿಂದ ಅದು ಊದಿಕೊಂಡು ಪಕ್ಷಿಗಳಿಗೆ ಪ್ರಿಯವಾದ ಹುಳುಗಳ ಚಲನೆಯನ್ನು ಹೋಲುವಂತೆ ಕುಣಿಯತೊಡಗುತ್ತವೆ. ಇದರಿಂದ ಆಕರ್ಷಿತವಾಗುವ ಪಕ್ಷಿಗಳು ಅದನ್ನು ಕಿತ್ತು ತಿನ್ನುತ್ತವೆ. ಹೀಗೆ ಮತ್ತೊಂದು ಪಕ್ಷಿಯ ಜೀರ್ಣಾಂಗವ್ಯೂಹವನ್ನು ಸೇರುವ ಚಪ್ಪಟೆಹುಳುಗಳು ತಮ್ಮ ಜೀವನಚಕ್ರವನ್ನು ಮುಂದುವರೆಸುತ್ತವೆ.
Toxoplasma gondii ಎಂಬುದೊಂದು ಪ್ರೋಟೋಜೋವಾ ವಂಶದ ಸೂಕ್ಷ್ಮಾಣುಜೀವಿ. ಇದು ಇಲಿಗಳ ದೇಹವನ್ನು ಸೇರಿ, ಮೆದುಳನ್ನು ತಲುಪುತ್ತವೆ. ಈ ಪರೋಪಜೀವಿಯ ಪ್ರಭಾವದಿಂದಾಗಿ ಇಲಿ ತನಗೆ ಬೆಕ್ಕುಗಳ ಬಗೆಗೆ ಅತ್ಯಂತ ಸಹಜವಾಗಿ ಇರುವ ಭಯವನ್ನೇ ಮರೆತುಹೋಗುತ್ತವೆ. ಅಡಗುವುದನ್ನು ಬಿಟ್ಟು ಬೆಕ್ಕಿನೆದುರೇ ಅಡ್ಡಬರುವ ಇವುಗಳನ್ನು ಬೆಕ್ಕು ಹಿಡಿದು ತಿನ್ನುತ್ತದೆ. ನಂತರ ಬೆಕ್ಕಿನ ದೇಹದಲ್ಲಿ ಬೆಳೆವ ಈ ಸೂಕ್ಷಾಣು ಅಲ್ಲೇ ಸಂತಾನೋತ್ಪತ್ತಿ ನಡೆಸುತ್ತದೆ. ಬೆಕ್ಕುಗಳ ಮಲದೊಂದಿಗೆ ಇವುಗಳ ಮೊಟ್ಟೆಗಳೂ ಹೊರಬರುತ್ತವೆ.
- Horsehair worms ಎಂಬುದು ನಿಮಟೋಡ್ ವಂಶಕ್ಕೆ ಸೇರಿದೆ. ಹೆಸರೇ ಹೇಳುವಂತೆ ಕುದುರೆಯ ಕೂದಲಿನಂತೆ ತೋರುವ ತೆಳುವಾದ ಉದ್ದನೆಯ ದೇಹ. ಹೆಚ್ಚಾಗಿ ನೀರಿನ ಪಸೆ ಇರುವ ಝರಿ, ತೊರೆಗಳು ಇರುವಲ್ಲಿ ಕಂಡುಬರುತ್ತದೆ. ಇದರ ಮರಿಗಳು ಜೀರುಂಡೆಯಂತಹ ಕೀಟದ ದೇಹದಲ್ಲಿ ಬೆಳೆಯುತ್ತವೆ. ಬೆಳೆದ ನಂತರ ಇವು ಸ್ವತಂತ್ರವಾಗಿ ಬದುಕಿ ಸಂತಾನೋತ್ಪತ್ತಿ ನಡೆಯುವುದು ನೀರಿನಲ್ಲಿ. ಆದರೆ ಮರಿಯಾಗಿದ್ದಾಗ ಬೆಳೆದ ಕೀಟಗಳು ನೆಲವಾಸಿಗಳು. ಹಾಗಾಗಿ ಇದು ಆ ಕೀಟದ ನರವ್ಯೂಹದ ಮೇಲೆ ಪ್ರಭಾವ ಬೀರಿ ನೀರಿನ ಬಳಿ ಬಂದು ನೀರಿಗೆ ಬೀಳುವಂತೆ ಮಾಡುತ್ತವೆ. ಅಲ್ಲಿ ಅದರ ದೇಹದಿಂದ ಹೊರಬರುತ್ತವೆ. ನಂತರ ಕೀಟ ಮುಳುಗದೇ ಪಾರಾದರೆ ಬದುಕುಳಿಯುತ್ತದೆ. ಈ ದಾರದಂತದ Horsehair worms ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ ಸಹ ಕಂಡುಬರುತ್ತದೆ. ನಮ್ಮ ಮಲೆನಾಡಿನಲ್ಲಿ “ದಾಟು ಬಳ್ಳಿ” ಎಂದು ಕರೆಯಲಾಗುವ ಇದರ ಬಗ್ಗೆ ಒಂದು ಚಂದನೆಯ ಪ್ರತೀತಿ ಇದೆ. ಕಾಡಿಗೆ ಹೋಗುವವರು ಈ ದಾಟುಬಳ್ಳಿ ದಾಟಿದರೆ ಅವರಿಗೆ ತಾವೆಲ್ಲಿದ್ದೇವೆಂಬ ಅರಿವೇ ಆಗದೆ ಕಳೆದುಹೋಗುತ್ತಾರೆ, ಮನೆಗೆ ವಾಪಾಸಾಗುವ ದಾರಿಯೇ ಮರೆತುಹೋಗುತ್ತದಂತೆ ಎಂದು ಹೇಳುತ್ತಾರೆ.
- ನಾಯಿಗಳಲ್ಲಿ, ಹಾಗೂ ಮನುಷ್ಯರಲ್ಲಿ ನೀರಿನ ಬಗ್ಗೆ ಭಯ ಹುಟ್ಟಿಸುವ, ಹುಚ್ಚು ಹಿಡಿಯುವಂತೆ ಮಾಡುವ ರೇಬೀಸ್ ವೈರಸ್ ಕೂಡ ಮೆದುಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ.
ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಹೀಗೆ ಬೇರೆ ಜೀವಿಗಳನ್ನು ಆಕ್ರಮಿಸಿಕೊಂಡು ಅವುಗಳನ್ನು ವಶೀಕರಿಸಿಕೊಳ್ಳುವ ಇನ್ನೂ ಅನೇಕ ಜೀವಿಗಳು ಪ್ರಪಂಚದಲ್ಲಿವೆ.
(ಮುಂದಿನ ಜಾಲ : 11.3.2022)
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಹಿಂದಿನ ಜಾಲ : ಜೀವವೆಂಬ ಜಾಲದೊಳಗೆ; ಪ್ರಾಣಿಗಳಿಗಂತೂ ಬೋರ್ಡ್ ಓದಲು ಬರುವುದಿಲ್ಲ ಚಿಪ್ಸ್, ಕುರ್ಕುರೆ ಹಿಡಿದುಕೊಂಡು ಹೋಗುವ ನಮಗೆ?
Published On - 11:15 am, Fri, 25 February 22