IND vs ENG: ಲಾರ್ಡ್ಸ್ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ
India vs England Lords Test: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯದ ವೇಳೆಗೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಜೋ ರೂಟ್ ಅಜೇಯ 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಬೆನ್ ಸ್ಟೋಕ್ಸ್ 39 ರನ್ ಗಳಿಸಿದ್ದಾರೆ. ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ ಎರಡು ವಿಕೆಟ್ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lords Test) ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ ದಿನದ ಅಂತ್ಯದ ವೇಳೆಗೆ ನಾಲ್ಕು ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ದಿನದಾಟ ಜೋ ರೂಟ್ (Joe Root) 191 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಅವರಿಗೆ ಸಾಥ್ ನೀಡುತ್ತಿರುವ ನಾಯಕ ಬೆನ್ ಸ್ಟೋಕ್ಸ್ 102 ಎಸೆತಗಳಲ್ಲಿ 39 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ನಿತೀಶ್ ಕುಮಾರ್ ರೆಡ್ಡಿ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ನಿತೀಶ್ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್
ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಎರಡೂ ತಂಡಗಳು ತಲಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಇಂಗ್ಲೆಂಡ್ ತಂಡವು ಜೋಶ್ ಟಾಂಗ್ ಬದಲಿಗೆ ಜೋಫ್ರಾ ಆರ್ಚರ್ರನ್ನು ಕಣಕ್ಕಿಳಿಸಿದರೆ, ಇತ್ತ ಟೀಂ ಇಂಡಿಯಾ, ಪ್ರಸಿದ್ಧ್ ಕೃಷ್ಣ ಬದಲಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಸೇರಿಸಿಕೊಂಡಿದೆ. ಹಾಗೆಯೇ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಿಧಾನಗತಿಯ ಆರಂಭ ಸಿಕ್ಕಿತು. ಆದಾಗ್ಯೂ ಆಂಗ್ಲ ತಂಡದ ಇಬ್ಬರು ಆರಂಭಿಕರನ್ನು ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ರೆಡ್ಡಿ ಪೆವಿಲಿಯನ್‌ಗೆ ಕಳುಹಿಸಿದರು. ನಿತೀಶ್ ತಮ್ಮ ಮೊದಲ ಓವರ್‌ನಲ್ಲೇ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿಯ ವಿಕೆಟ್ ಪಡೆದರು. ಇಬ್ಬರೂ ಕ್ರಮವಾಗಿ 23 ಮತ್ತು 18 ರನ್ ಗಳಿಸಿದರು.
IND vs ENG: ‘ಭಾಝ್ ಬಾಲ್ ಕ್ರಿಕೆಟ್ ಆಡಿ, ನಾನು ನೋಡ್ಬೇಕು’; ಆಂಗ್ಲ ಆಟಗಾರರ ಕಾಲೆಳೆದ ಸಿರಾಜ್
ಶತಕದಂಚಿನಲ್ಲಿ ರೂಟ್
ಇದಾದ ನಂತರ ಜೋ ರೂಟ್ ಮತ್ತು ಓಲಿ ಪೋಪ್ ಜವಾಬ್ದಾರಿಯನ್ನು ವಹಿಸಿಕೊಂಡು ಎರಡನೇ ಸೆಷನ್‌ನಲ್ಲಿ ಭಾರತಕ್ಕೆ ಯಾವುದೇ ವಿಕೆಟ್ ಪಡೆಯಲು ಬಿಡಲಿಲ್ಲ. ಇಬ್ಬರ ನಡುವೆ ಮೂರನೇ ವಿಕೆಟ್‌ಗೆ 211 ಎಸೆತಗಳಲ್ಲಿ 109 ರನ್‌ಗಳ ಶತಕದ ಪಾಲುದಾರಿಕೆ ಇತ್ತು, ಇದನ್ನು ಮೂರನೇ ಸೆಷನ್‌ನಲ್ಲಿ ಜಡೇಜಾ ಮುರಿದರು.104 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 44 ರನ್ ಗಳಿಸಿದ್ದ ಪೋಪ್ ಜಡೇಜಾಗೆ ಬಲಿಯಾದರು. ಇದರ ನಂತರ, ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಹ್ಯಾರಿ ಬ್ರೂಕ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಪ್ರಸ್ತುತ ರೂಟ್ ಮತ್ತು ಸ್ಟೋಕ್ಸ್ ಕ್ರೀಸ್‌ನಲ್ಲಿದ್ದು, ಐದನೇ ವಿಕೆಟ್‌ಗೆ ಇಬ್ಬರೂ ಈಗಾಗಲೇ 170 ಎಸೆತಗಳಲ್ಲಿ 79 ರನ್‌ಗಳ ಪಾಲುದಾರಿಕೆಯನ್ನು ಮಾಡಿದ್ದಾರೆ. ರೂಟ್ ತಮ್ಮ 37 ನೇ ಟೆಸ್ಟ್ ಶತಕಕ್ಕೆ ಕೇವಲ ಒಂದು ರನ್ ದೂರದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 pm, Thu, 10 July 25
