World Hypertension Day 2022: ಆರೋಗ್ಯ ಎನ್ನುವುದು ನಮ್ಮ ಜೀವನಶೈಲಿಯ ಮೇಲೆ ನಿರ್ಧಾರವಾಗುವಂಥದ್ದು. ಆಹಾರ, ಶರೀರ ಕ್ರಮ, ವಿಶ್ರಾಂತಿ ಮತ್ತು ಮನಃಸ್ವಾಸ್ಥ್ಯ. ನಾನು ಸಿಹಿ, ಜಂಕ್ಫುಡ್, ಬೇಕರಿ ತಿನಿಸುಗಳನ್ನು ತೀರಾ ಅಪರೂಪಕ್ಕೆ, ಕಡಿಮೆ ಪ್ರಮಾಣದೊಳಗೆ ಸೇವಿಸುತ್ತೇನೆ. ಹಾಗಾಗಿ ಜೀವನಶೈಲಿಯಿಂದ ಬರುವ ಯಾವ ರೋಗಗಳೂ ಬಾಧಿಸದಂತೆ ನನ್ನನ್ನು ನಾನು ನೋಡಿಕೊಂಡಿದ್ದೇನೆ. ನಮ್ಮ ಮನೆಯ ಅಂಗಳದೊಳಗೆ ಆಹಾರ ಉದ್ಯಾನವನ ಮಾಡಿಕೊಂಡಿದ್ದೇನೆ. ಅಲ್ಲ ಸುಲಭಕ್ಕೆ ಸೊಪ್ಪಿನ ಗಿಡಗಳನ್ನು ಬೆಳೆಸಲು ಸಾಧ್ಯ. ನುಗ್ಗೆ, ಲವಂಗ, ತುಳಸಿ, ಚಕ್ರಮುನಿ, ನೆಲಬಸಳೆ, ವೀಳ್ಯದೆಲೆ, ಪಾರಿಜಾತ ಹೀಗೆ ಮುಂತಾದ ಸೊಪ್ಪುಗಳಿಂದ ಹರಿತ್ರಸ ತಯಾರಿಸುತ್ತೇನೆ. ಒಂದೊಂದು ದಿನ ಒಂದೊಂದು ಸೊಪ್ಪಿಗೆ ಅರಿಷಿಣ ಉಪ್ಪು ಹಾಕಿ ರಸ ತಯಾರಿಸುತ್ತೇನೆ. ಕೆಲವೊಮ್ಮೆ ಋತುಮಾನಕ್ಕೆ ತಕ್ಕಂತೆ ಬೆಳೆದ ಹಣ್ಣುಗಳನ್ನೂ ಇದಕ್ಕೆ ಸೇರಿಸಿ ಸ್ಮೂದಿ (ಕನ್ನಡದಲ್ಲಿ ಮೋಡಿ) ಮಾಡಿ ಸೇವಿಸುತ್ತೇನೆ. ಉಳಿದಂತೆ ಊಟಕ್ಕೆ ಸಿರಿಧಾನ್ಯ. ಈ ಆಹಾರಶೈಲಿಯಿಂದ ಹೊಟ್ಟೆ ಭಾರ ಎಂದೆನ್ನಿಸುವುದಿಲ್ಲ. ನನ್ನ ದೇಹಮನಸ್ಸು ಹಗೂರವೆನ್ನಿಸುತ್ತದೆ.
ಡಾ. ಸಂಜೀವ ಕುಲಕರ್ಣಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಧಾರವಾಡ
ಧಾರವಾಡದಿಂದ ಹತ್ತು ಕಿ.ಮೀ ದೂರದಲ್ಲಿ ಸುಮನ ಸಂಗಮ ಕಾಡುತೋಟ ನಿರ್ಮಿಸಿಕೊಂಡಿದ್ದೇನೆ. ಬೆಳಗ್ಗೆ ಶುದ್ಧ ಗಾಳಿ, ಹಸಿರು ವಾತಾವರಣ, ದೇಹಶ್ರಮದಿಂದಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ. ಐದೂವರೆಗೆ ಎದ್ದು ನೂಲು ಧ್ಯಾನ ಮಾಡುತ್ತೇನೆ. ಇದು ಆರು ತಿಂಗಳಿನಿಂದ ಅಳವಡಿಸಿಕೊಂಡಿರುವ ಧ್ಯಾನ. ಚರಕದಿಂದ ನೂಲು ತೆಗೆದು ಆರು ಮೀಟರ್ ಬಟ್ಟೆಯನ್ನು ನೇಯುವಷ್ಟರ ಮಟ್ಟಿಗೆ ಪರಿಣತಿ ಸಾಧಿಸಿಕೊಂಡಿದ್ದೇನೆ. ಈ ಬಟ್ಟೆಯಿಂದಲೇ ಶರ್ಟ್ ಹೊಲಿಸಿಕೊಂಡು ಧರಿಸುತ್ತಿದ್ದೇನೆ. ಶ್ರಮದಿಂದ ಹುಟ್ಟಿದ ಖುಷಿ, ಆತ್ಮತೃಪ್ತಿ ಇನ್ನೆಲ್ಲಿಂದಲೂ ಸಿಗದು.
ವೈದ್ಯವೃತ್ತಿಯಲ್ಲಿ ಒತ್ತಡಗಳು ಇದ್ದಿದ್ದೇ. ಆದರೆ ಸಹವೈದ್ಯರೊಂದಿಗೆ ಹೇಗೆ ಕೆಲಸವನ್ನು ಹಂಚಿಕೊಂಡು ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ನಮ್ಮದು ಐದು ಜನರ ವೈದ್ಯವೃಂದ. ರಾತ್ರಿ ಹತ್ತೂವರೆಯಿಂದ ಹತ್ತೂ ನಲವತ್ತೈದರೊಳಗೆ ಮಲಗುತ್ತೇನೆ. ಕೆಲಸದಲ್ಲಿ ಬದಲಾವಣೆ ಮಾಡಿಕೊಂಡರೆ ಅದೇ ವಿಶ್ರಾಂತಿ. ನಾವು ನಡೆಸುವ ನಾವು ನಡೆಸುವ ಬಾಲಭವನ ಶಾಲೆ, ಸಮಾಜ ಕಾರ್ಯದಲ್ಲಿ ಸದಾ ತೊಡಗಿಕೊಂಡಿರುತ್ತೇನೆ. ಎಲ್ಲಿ ಪ್ರಶಸ್ತಿ ಪ್ರಸಿದ್ಧಿಯ ಅಪೇಕ್ಷೆ ಇರಲ್ಲವೋ ಅಂಥ ಕೆಲಸಗಳಲ್ಲಿ ನಾನು ತೊಡಗಿಕೊಂಡು ಬಂದಿದ್ದೆನಾದ್ದರಿಂದ ಸುಖಿಯಾಗಿದ್ದೇನೆ. ನನ್ನ 22ನೇ ವಯಸ್ಸಿನಿಂದ ಧ್ಯಾನವನ್ನು ರೂಢಿಸಿಕೊಂಡಿದ್ದೇನೆ. ಹಾಗಾಗಿ ಇಡೀ ದಿನ ಚೈತನ್ಯದಿಂದ ಇರಲು ಸಾಧ್ಯವಾಗಿದೆ. ಅಪರೂಪಕ್ಕೆ ಕೆಲಸದ ಒತ್ತಡದಿಂದಾಗಿ ದಣಿವು ಉಂಟಾಗುತ್ತದೆ ಹೊರತು ಉಳಿದಂತೆ ಹಗೂರ ತೇಲುತ್ತಿರುತ್ತೇನೆ. ಎಂಥ ಕಾಲದಲ್ಲಿಯೂ ಎಂಥ ಆಧುನಿಕತೆಯಲ್ಲಿಯೂ ನಮಗೆ ಬೇಕಾದ ಜೀವನಶೈಲಿಯನ್ನು ನಾವೇ ರೂಢಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಆಳದೊಳಗೆ ನೆಮ್ಮದಿಯಿಂದ ಇರಲು ಹೊರಗಿನ ಒತ್ತಡವನ್ನು ವಿಚಲಿತರಾಗದೇ ನಿಭಾಯಿಸುವುದು ಧ್ಯಾನದಿಂದ ಸಾಧ್ಯವಿದೆ.
ಇನ್ನು ಸಂಬಂಧಗಳಿಗೆ ಹೆಚ್ಚು ಒತ್ತು ಕೊಡಬೇಕು. ಸ್ನೇಹಬಳಗವನ್ನು ವಿಸ್ತರಿಸಿಕೊಳ್ಳಬೇಕು. ನಾವು ಸಹಾಯ ಮಾಡಿದರೆ ಜೊತೆಗಿರುವವರೂ ಸಹಾಯ ಮಾಡುತ್ತಾರೆ. ಕೊಟ್ಟು ಪಡೆಯುವುದರಲ್ಲಿ ಆಪ್ತತೆ ಇದೆ. ಎಲ್ಲ ಮನುಷ್ಯರೂ ಆಳದೊಳಗೆ ಒಳ್ಳೆಯವರೇ. ಆದರೆ ರೂಢಿಸಿಕೊಂಡ ಸ್ವಭಾವ, ಸಂದರ್ಭದಿಂದಾಗಿ ಹೊರನೋಟಕ್ಕೆ ಹೆಚ್ಚೂಕಡಿಮೆ ಎನ್ನಿಸಬಹುದು. ಆದರೆ ಅವರೊಳಗಿನ ಒಳ್ಳೆತನವನ್ನು ನಾವು ಸ್ಪರ್ಶಿಸಿದ್ದಾದರೆ ಅವರೇನು ಎನ್ನುವುದು ನಮಗರ್ಥವಾಗುತ್ತದೆ. ಆ ನೆಲೆಯಲ್ಲಿ ಸಂಬಂಧವನ್ನು ರೂಪಿಸಿಕೊಳ್ಳಬೇಕು. ಆಗ ಜನ ಬದಲಾಗುತ್ತಾರೆ ಎನ್ನುವ ತಕರಾರು ಇರುವುದಿಲ್ಲ. ಹೀಗಾಗಿಯೇ ಇಂದು ಸ್ನೇಹ-ಸಂಬಂಧಗಳು ದೀರ್ಘಕಾಲದವರೆಗೂ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ. ಈ ಸ್ನೇಹವಲಯವನ್ನು ಕಟ್ಟಿಕೊಡುವುದು ನಮ್ಮ ಅಭಿರುಚಿಗಳೇ. ನಾನು ಪರಿಸರಕ್ಕೆ ಸಂಬಂಧಿಸಿದ ಕಾರ್ಯಾಗಾರ, ರಚನಾತ್ಮಕ ಕಾರ್ಯಾಗಾರ, ಓದುಬರೆವಣಿಗೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿರತನಾಗಿರುತ್ತೇನೆ. ಒಟ್ಟಾರೆ ಲವಲವಿಕೆಯಿಂದ ಇರುವುದು ಮುಖ್ಯ.
ನಮ್ಮ ಅರಿವು ನನ್ನ ಶರೀರದೊಳಗೆ, ಕುಟುಂಬದೊಳಗೆ, ಸಮಾಜದೊಳಗೆ, ಪ್ರಕೃತಿಯೊಳಗೆ ಅವಿನಾಭಾವವಾಗಿ, ಅವಿಭಾಜ್ಯವಾಗಿ ಇರುವಂಥ ಸುಂದರ ವ್ಯವಸ್ಥೆ. ಅದನ್ನು ಅರಿತುಕೊಳ್ಳುತ್ತಾ ಹೋದಹಾಗೆ ನಮ್ಮ ಮನುಷ್ಯತ್ವವನ್ನು ಕಾಯ್ದುಕೊಳ್ಳಲು ಅಡೆತಡೆಯಾಗಿರುವ ಎಲ್ಲಾ ರೀತಿಯ ತಾರತಮ್ಯಗಳು ದೂರ ಸರಿಯುತ್ತಾ ಹೋಗುತ್ತವೆ. ಲಿಂಗ ವ್ಯತ್ಯಾಸವನ್ನೂ ಮೀರುತ್ತಾ ಹೋಗುತ್ತೇವೆ. ಗಂಡುಹೆಣ್ಣು ಎನ್ನುವುದು ಕೇವಲ ಸಂತಾನೋತ್ಪತ್ತಿಯಲ್ಲಿರುವ ವ್ಯತ್ಯಾಸವಷ್ಟೇ. ಇದು ಅರ್ಥವಾದರೆ ಮಾತ್ರ ಸ್ನೇಹಸಂಬಂಧದ ‘ಅದ್ಭುತ’ ಅನುಭವಕ್ಕೆ ಬರುತ್ತದೆ. ಆಗ ನಮ್ಮ ವೃತ್ತಿಯೊಂದಿಗೆ ನಮ್ಮ ವೈಯಕ್ತಿಕ ಬದುಕನ್ನೂ ನಿರಾಳವಾಗಿ ಕಳೆಯಬಹುದು. ಸೃಜನಶೀಲವಾಗಿ, ಸಮಾಜಮುಖಿಯಾಗಿ ಒಳಗೊಳ್ಳಬಹುದು.
Published On - 2:44 pm, Tue, 17 May 22