ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ (Akshaya Tritiya )ವಿಶೇಷ ಮಹತ್ವ ನೀಡಲಾಗಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು, ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಯಾವುದೇ ಶುಭ ಸಮಯವಿಲ್ಲದೆ ಮಾಡಬಹುದು. ಸತ್ಯಯುಗ ಮತ್ತು ತ್ರೇತಾಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ದ್ವಾಪರಯುಗವು ಈ ದಿನದಂದು ಕೊನೆಗೊಂಡಿತು, ಅದರ ನಂತರ ಕಲಿಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ಈ ದಿನ ಜನರು ಚಿನ್ನವನ್ನು ಖರೀದಿಸುತ್ತಾರೆ ಏಕೆಂದರೆ ಇದು ಶುಭಫಲಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಆದರೆ ಇದರ ಹಿಂದಿರುವ ಕಾರಣ ಮತ್ತು ಧಾರ್ಮಿಕ ನಂಬಿಕೆ ಬಗ್ಗೆ ಇಲ್ಲಿದೆ ಮಾಹಿತಿ.
ಈ ದಿನ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ದಿನ ಚಿನ್ನ ಖರೀದಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಸದಾಕಾಲ ಇರುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಈ ಶುಭ ದಿನದಂದು ಲಕ್ಷ್ಮೀ ದೇವಿ ಮತ್ತು ಕುಬೇರನಿಗೆ ಪೂಜೆ ಮಾಡಲಾಗುತ್ತದೆ. ಇದು ನಿಮಗೆ ವರ್ಷಪೂರ್ತಿ ಶುಭ ಫಲಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ನೀವು ಬಹಳ ಸಮಯದಿಂದ ಶುಭ ಕಾರ್ಯ ಅಥವಾ ಶುಭ ಸಮಯಕ್ಕಾಗಿ ಕಾಯುತ್ತಿದ್ದರೆ, ಅಕ್ಷಯ ತೃತೀಯ ದಿನ ನೀವು ಆ ಶುಭ ಕಾರ್ಯವನ್ನು ಮಾಡಬಹುದು. ಅದರ ಜೊತೆಗೆ ಈ ದಿನ ಚಿನ್ನ ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಹಾಗೆ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸದಾಕಾಲ ಇರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಚೈತ್ರ ಹುಣ್ಣಿಮೆಯ ಪೂಜೆ ಹೇಗೆ ಮಾಡಬೇಕು? ಇಲ್ಲಿದೆ ಸರಳ ಪೂಜಾ ವಿಧಾನ
ಈ ದಿನ “ನೀವು ಯಾವುದೇ ರೀತಿಯ ಪುಣ್ಯ ಕಾರ್ಯವನ್ನು ಮಾಡಿದರೂ ಕೂಡ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ” ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದನು. ಜೊತೆಗೆ ಅಕ್ಷಯ ತೃತೀಯದಂದು ಯಾವ ವಸ್ತು ಖರೀದಿಸಿದರೂ ಕೂಡ ಅದು ಮತ್ತೆ ಮತ್ತೆ ಖರೀದಿ ಮಾಡುವ ಹಾಗಾಗುತ್ತದೆ ಅಂದರೆ ಅದು ನಿಮ್ಮ ಮನೆಯಲ್ಲಿ ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ಚಿನ್ನವನ್ನು ಖರೀದಿ ಮಾಡುವ ಪದ್ಧತಿ ಹುಟ್ಟುಕೊಂಡಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:45 pm, Mon, 22 April 24