ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಆರಾಧನೆ ಮಾಡಲು ಸಮರ್ಪಿತವಾದ ಈ ದಿನವು ಬಹಳ ವಿಶೇಷ ಎನಿಸಿಕೊಂಡಿದೆ. ಧಾರ್ಮಿಕ ದೃಷ್ಟಿಕೋನದಿಂದ ಈ ದಿನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ ನೀವು ಯಾವುದೇ ರೀತಿಯ ಪುಣ್ಯ ಕಾರ್ಯವನ್ನು ಮಾಡಿದರೂ ಕೂಡ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದನು. ಜೊತೆಗೆ ಅಕ್ಷಯ ತೃತೀಯದಂದು ಯಾವ ವಸ್ತು ಖರೀದಿಸಿದರೂ ಕೂಡ ಅದು ಮತ್ತೆ ಮತ್ತೆ ಖರೀದಿ ಮಾಡುವ ಹಾಗಾಗುತ್ತದೆ ಅಂದರೆ ಅದು ನಿಮ್ಮ ಮನೆಯಲ್ಲಿ ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ಚಿನ್ನವನ್ನು ಖರೀದಿ ಮಾಡುವ ಪದ್ಧತಿ ಹುಟ್ಟುಕೊಂಡಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯವನ್ನು ಸ್ವಯಂಸಿದ್ಧ ಮುಹೂರ್ತ ಎಂದೂ ಕರೆಯಲಾಗುತ್ತದೆ, ಅಂದರೆ ಅಕ್ಷಯ ತೃತೀಯದಂದು ಯಾವುದೇ ಶುಭ ಕಾರ್ಯವಾಗಲಿ ಅದನ್ನು ಮುಹೂರ್ತವನ್ನು ನೋಡದೆಯೇ ಮಾಡಬಹುದು. ಹಾಗಾದರೆ ಈ ವರ್ಷ ಅಕ್ಷಯ ತೃತೀಯವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಈ ದಿನ ಯಾವ ದೇವರನ್ನು ಪೂಜಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯು ಮೇ. 10 ರಂದು ಬೆಳಿಗ್ಗೆ 4:17 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಮೇ. 11 ರಂದು ಮುಂಜಾನೆ 2:49 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿಯ ಪ್ರಕಾರ ಮೇ 10 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.
ಅಕ್ಷಯ ತೃತೀಯ ಶುಭ ಮುಹೂರ್ತ;
ಈ ದಿನ ಪೂಜೆ ಮಾಡಲು ಶುಭ ಸಮಯವು ಬೆಳಿಗ್ಗೆ 5.34 ರಿಂದ ಮಧ್ಯಾಹ್ನ 12.17 ರವರೆಗೆ ಇರುತ್ತದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯವು ದಿನವಿಡೀ ಇರುತ್ತದೆ.
ಈ ಬಾರಿ ಅಕ್ಷಯ ತೃತೀಯದಂದು ಸುಕರ್ಮ ಯೋಗವಿದ್ದು, ಇದು ಮಧ್ಯಾಹ್ನ 12:08 ರಿಂದ ಆರಂಭವಾಗಿ ಮರುದಿನ ಅಂದರೆ ಮೇ 11 ರಂದು ಬೆಳಿಗ್ಗೆ 10:03 ರವರೆಗೆ ಇರುತ್ತದೆ. ಇದಲ್ಲದೆ ಈ ದಿನ ರವಿ ಯೋಗವು ಇದೆ. ಇದು ದಿನವಿಡೀ ಇರುತ್ತದೆ. ಅಕ್ಷಯ ತೃತೀಯದಂದು, ಅಭಿಜಿತ್ ಮುಹೂರ್ತವು ಬೆಳಿಗ್ಗೆ 11:13 ರಿಂದ ಮಧ್ಯಾಹ್ನ 12:45 ರವರೆಗೆ ಇರುತ್ತದೆ.
ಈ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ನಂತರ, ಮನೆಯ ದೇವರ ಕೋಣೆಯಲ್ಲಿ ತುಪ್ಪದ ದೀಪ ಹಚ್ಚಿ. ಬಳಿಕ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಶ್ರದ್ದಾ, ಭಕ್ತಿಯಿಂದ ಪೂಜಿಸಿ. ಇದಾದ ಬಳಿಕ ದೇವರಿಗೆ ಆರತಿ ಮಾಡಿ, ನೈವೇದ್ಯ ಅರ್ಪಿಸುವ ಮೂಲಕ ಪೂಜೆಯನ್ನು ಮುಗಿಸಿ. ಭೋಗ ಅಥವಾ ನೈವೇದ್ಯವನ್ನು ನೀವು ತಿನ್ನಿ, ನಿಮ್ಮ ಕುಟುಂಬ ಸದಸ್ಯರಿಗೂ ಕೊಡಿ.
ಇದನ್ನೂ ಓದಿ: ಪಾಪಮೋಚನಿ ಏಕಾದಶಿ ದಿನ ಏನು ಮಾಡಬೇಕು, ಮಾಡಬಾರದು
ನೀವು ಲಕ್ಷ್ಮೀ ದೇವಿ ಮತ್ತು ವಿಷ್ಣುವನ್ನು ಮೆಚ್ಚಿಸಲು ಬಯಸಿದಲ್ಲಿ, ಅಕ್ಷಯ ತೃತೀಯದಂದು, ಮೀನು, ಮಾಂಸ, ಮದ್ಯ, ಬೆಳ್ಳುಳ್ಳಿ, ಈರುಳ್ಳಿ ಸೇರಿದಂತೆ ತಾಮಸ ಆಹಾರವನ್ನು ಸೇವಿಸಬಾರದು.
ಈ ದಿನ ಅಕ್ಕಿ, ಹಿಟ್ಟು, ಬೇಳೆಕಾಳುಗಳು, ಬೆಲ್ಲ, ಕಡಲೆ, ತುಪ್ಪ, ಉಪ್ಪು, ಎಳ್ಳು, ಸೌತೆಕಾಯಿ ಇತ್ಯಾದಿಗಳನ್ನು ದಾನ ಮಾಡಬಹುದು. ಈ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಎಲ್ಲವೂ ಸದಾ ಕಾಲವಿರುತ್ತದೆ ಎನ್ನುವ ನಂಬಿಕೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನದಂದು ಉಪ್ಪನ್ನು ದಾನ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಜೊತೆಗೆ ಜೀವನದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಕಾರಣದಿಂದಾಗಿ ಅಕ್ಷಯ ತೃತೀಯದಂದು ಉಪ್ಪನ್ನು ದಾನವಾಗಿ ನೀಡಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ