Daily Devotional: ಅರ್ಚನೆ ಮಾಡಿಸುವಾಗ ಗೋತ್ರ ಗೊತ್ತಿಲ್ಲದಿದ್ದರೆ ಏನು ಮಾಡಬೇಕು? ಜ್ಯೋತಿಷ್ಯ ಸಲಹೆ ಇಲ್ಲಿದೆ
ಹಿಂದೂ ಸಂಪ್ರದಾಯದಲ್ಲಿ ಅನಾದಿ ಕಾಲದಿಂದಲೂ ಅರ್ಚನೆ ಮಾಡುವಾಗ ಭಕ್ತರ ಹೆಸರು, ಗೋತ್ರ ಮತ್ತು ನಕ್ಷತ್ರಗಳನ್ನು ಹೇಳಿ ಸಂಕಲ್ಪ ಮಾಡಿಸಿ ಅರ್ಚನೆ ಮಾಡಿಸಲಾಗುತ್ತದೆ. ಆದರೆ ಅರ್ಚನೆ ಮಾಡಿಸುವಾಗ ಗೋತ್ರ ಗೊತ್ತಿಲ್ಲದಿದ್ದರೆ ಏನು ಮಾಡಬೇಕು ಎಂಬುದು ಅನೇಕರ ಪ್ರಶ್ನೆ. ಡಾ. ಬಸವರಾಜ್ ಗುರೂಜಿಯವರು ಈ ಗೊಂದಲಗಳಿಗೆ ಉತ್ತರವನ್ನು ನೀಡಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ, ದೇವಾಲಯಗಳಲ್ಲಿ ಅರ್ಚನೆ ಮಾಡಿಸುವ ಸಂದರ್ಭದಲ್ಲಿ ಭಕ್ತರು ಎದುರಿಸುವ ಒಂದು ಸಾಮಾನ್ಯ ಗೊಂದಲಕ್ಕೆ ಪರಿಹಾರವನ್ನು ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ದೇವರಿಗೆ ಸೇವೆ ಸಲ್ಲಿಸುವ ವಿಧಾನಗಳಲ್ಲಿ ಅರ್ಚನೆಯು ಒಂದು ಪ್ರಮುಖ ಮತ್ತು ವಿಶೇಷ ಪದ್ಧತಿಯಾಗಿದೆ. ಹಿಂದೂ ಸಂಪ್ರದಾಯದಲ್ಲಿ ಅನಾದಿ ಕಾಲದಿಂದಲೂ ಅರ್ಚನೆ ಮಾಡುವಾಗ ಭಕ್ತರ ಹೆಸರು, ಗೋತ್ರ ಮತ್ತು ನಕ್ಷತ್ರಗಳನ್ನು ಹೇಳಿ ಸಂಕಲ್ಪ ಮಾಡಿಸಿ ಅರ್ಚನೆ ಮಾಡಿಸಲಾಗುತ್ತದೆ. ಅರ್ಚಕರು ಸಹ ಸಹಜವಾಗಿಯೇ ಈ ವಿವರಗಳನ್ನು ಕೇಳುತ್ತಾರೆ. ಆದರೆ, ಅನೇಕ ಭಕ್ತರಿಗೆ ತಮ್ಮ ಗೋತ್ರ ಯಾವುದು, ಅಥವಾ ಮನೆ ದೇವರು ಯಾವುದು ಎಂಬ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ, ಗೋತ್ರ ಗೊತ್ತಿಲ್ಲದಿದ್ದರೆ ಪ್ರಾರ್ಥನೆ ಅಪೂರ್ಣವಾಗುತ್ತದೆಯೇ, ಭಗವಂತನಿಗೆ ನಮ್ಮ ಪ್ರಾರ್ಥನೆ ತಲುಪುವುದಿಲ್ಲವೇ ಎಂಬ ಆತಂಕಗಳು ಮೂಡುವುದು ಸಹಜ. ಕೆಲವರು ವಿಷ್ಣು ದೇವಾಲಯಕ್ಕೆ ಹೋದರೆ ವಿಷ್ಣು ಗೋತ್ರ ಅಥವಾ ಶಿವ ದೇವಾಲಯಕ್ಕೆ ಹೋದರೆ ಶಿವ ಗೋತ್ರ ಎಂದು ಹೇಳುವ ರೂಢಿಯನ್ನು ಹೊಂದಿರುತ್ತಾರೆ. ಆದರೆ, ಇದು ಸರಿಯಾದ ಪದ್ಧತಿಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಡಾ. ಬಸವರಾಜ್ ಗುರೂಜಿ ಅವರ ಸ್ಪಷ್ಟೀಕರಣದ ಪ್ರಕಾರ, ನಿಮ್ಮ ಗೋತ್ರ ತಿಳಿದಿದ್ದರೆ ಅರ್ಚನೆಗೆ ಅದನ್ನು ಹೇಳುವುದು ಸೂಕ್ತ. ಆದರೆ, ನಿಮಗೆ ನಿಮ್ಮ ಗೋತ್ರದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಕೇವಲ ನಿಮ್ಮ ಹೆಸರನ್ನು ಹೇಳಿ, ಅರ್ಚನೆ ಮಾಡಿಸಿದರೂ ಅದು ಸಂಪೂರ್ಣವಾಗಿ ಪರಿಪೂರ್ಣವಾಗುತ್ತದೆ. ಹೆಸರು ಎಲ್ಲರಿಗೂ ತಿಳಿದಿರುತ್ತದೆ. ಕೆಲವರಿಗೆ ರಾಶಿ ಅಥವಾ ನಕ್ಷತ್ರಗಳ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಅಂತಹ ಸಮಯದಲ್ಲಿ ಕೇವಲ ಹೆಸರನ್ನು ಹೇಳಿದರೂ ಸಾಕು.
ಗುರೂಜಿ ಅವರು ಹೇಳುವಂತೆ, “ಪ್ರಾರ್ಥನೆ ವಿಧಿಯ ಬರಹವನ್ನು ಬದಲಾಯಿಸಬಹುದು” (Prayer can change faith). ಅಂದರೆ, ನಿಸ್ವಾರ್ಥ ಭಕ್ತಿ ಮತ್ತು ಪ್ರಾಮಾಣಿಕವಾದ ಪ್ರಾರ್ಥನೆಯು ವಿಧಿಯ ಬರಹವನ್ನೇ ಬದಲಿಸುವ ಶಕ್ತಿ ಹೊಂದಿದೆ. ಭಗವಂತನ ಮುಂದೆ ನೀವು ಸಶರೀರವಾಗಿ ನಿಂತಿರುವಾಗ, ನೀವು ಏಕಚಿತ್ತದಿಂದ, ಮನಃಪೂರ್ವಕವಾಗಿ ಮಾಡುವ ಪ್ರಾರ್ಥನೆಗೆ ಅಪಾರ ಶಕ್ತಿ ಇರುತ್ತದೆ. ಈ ಪ್ರಾರ್ಥನೆ ವಿಧಿ-ವಿಧಾನ ಭಗವಂತನನ್ನು ತಲುಪುತ್ತದೆ.
ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!
ಕೆಲವರು ತಮ್ಮ ಕುಟುಂಬ ಸದಸ್ಯರ ಹೆಸರನ್ನು, ಗೋತ್ರ, ನಕ್ಷತ್ರಗಳನ್ನು ಹೇಳಿ ಅರ್ಚನೆ ಮಾಡಿಸುತ್ತಾರೆ. ಇದು ಅವರ ತೃಪ್ತಿಗಾಗಿ, ಹರಕೆಗಳನ್ನು ಪೂರೈಸಲು, ಅಥವಾ ವಿದ್ಯಾಭ್ಯಾಸ, ಆರೋಗ್ಯ, ಮನೆ, ಐಶ್ವರ್ಯ, ಉದ್ಯೋಗ ಮುಂತಾದ ಶುಭ ಫಲಗಳಿಗಾಗಿ ಇಷ್ಟಾರ್ಥ ಸಿದ್ಧಿಯನ್ನು ಕೋರಿ ಮಾಡುವ ಪ್ರಾರ್ಥನೆಯಾಗಿದೆ. ಇದು ಉತ್ತಮವೇ ಆಗಿದೆ. ಆದರೆ, ಈ ವಿವರಗಳು ಗೊತ್ತಿಲ್ಲದವರು ಸುಳ್ಳು ಗೋತ್ರಗಳನ್ನು ಹೇಳುವ ಅಥವಾ ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ.
ಮುಖ್ಯವಾಗಿ, ಭಗವಂತನಿಗೆ ಅರ್ಪಣೆ ಮಾಡುವುದು ನಿಮ್ಮ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಗೋತ್ರ ಗೊತ್ತಿಲ್ಲದಿದ್ದರೆ, ಕೇವಲ ಕಣ್ಣು ಮುಚ್ಚಿ, ಏಕಾಗ್ರ ಮನಸ್ಸಿನಿಂದ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ. ಇದು ಸಹ ಅತ್ಯಂತ ಫಲಪ್ರದವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




