Arundhati Nakshatra: ಮದುವೆ ವೇಳೆ ನವಜೋಡಿಗೆ ಅರುಂಧತಿ ನಕ್ಷತ್ರ ತೋರಿಸುವುದೇಕೆ? ಪುರಾಣ ಕಥೆ ಇಲ್ಲಿದೆ
ವಿವಾಹದ ನಂತರ ನವವಧು-ವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಬ್ರಹ್ಮದೇವರ ಪುತ್ರಿ ಸಂಧ್ಯಾದೇವಿ ವಸಿಷ್ಠರ ಪತ್ನಿ ಅರುಂಧತಿಯಾಗಿ ಪರಿವರ್ತನೆಯಾದ ಕಥೆಯು ಈ ಆಚರಣೆಯ ಹಿಂದಿದೆ. ಇದು ದಂಪತಿಗಳಲ್ಲಿ ತಾಳ್ಮೆ, ಸಹನೆ, ಪ್ರೀತಿ ಮತ್ತು ವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ, ದೀರ್ಘಕಾಲಿಕ ದಾಂಪತ್ಯ ಜೀವನಕ್ಕೆ ಆಶೀರ್ವಾದದ ಸಂಕೇತವಾಗಿದೆ.

ನಿತ್ಯ ಜೀವನದಲ್ಲಿ ಪಾಲಿಸುವ ಆಚಾರ, ವಿಚಾರ, ಸಂಪ್ರದಾಯ ಮತ್ತು ಪದ್ಧತಿಗಳ ಹಿಂದೆ ಆಳವಾದ ವೈಜ್ಞಾನಿಕ ತತ್ವಗಳು, ಇತಿಹಾಸ ಮತ್ತು ಪುರಾಣದ ಕಥೆಗಳು ಅಡಗಿವೆ. ಇವುಗಳನ್ನು ಅರ್ಥಮಾಡಿಕೊಂಡಾಗ ಜೀವನದಲ್ಲಿ ಬಹಳಷ್ಟು ಶುಭವಾಗುತ್ತದೆ. ಇಂತಹ ಪದ್ಧತಿಗಳಲ್ಲಿ ವೈವಾಹಿಕ ವಿಷಯಗಳಲ್ಲಿ ಪ್ರಮುಖವಾಗಿರುವ ಅರುಂಧತಿ ನಕ್ಷತ್ರ ದರ್ಶನದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ, ವಿಶೇಷವಾಗಿ ಹಿಂದೂ ವಿವಾಹ ಪದ್ಧತಿಯಲ್ಲಿ, ಮಾಂಗಲ್ಯಧಾರಣೆ ಮತ್ತು ಸಪ್ತಪದಿ ಕಾರ್ಯಗಳು ಮುಗಿದ ನಂತರ ನವವಧು-ವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಪದ್ಧತಿ ಚಾಲ್ತಿಯಲ್ಲಿದೆ. ಪುರೋಹಿತರು ಆಕಾಶದ ಕಡೆಗೆ ಬೆರಳಿಟ್ಟು, “ಅರುಂಧತಿ ನಕ್ಷತ್ರ ಕಾಣಿಸುತ್ತಿದೆಯೇ?” ಎಂದು ಕೇಳಿ, ಅದನ್ನು ನೋಡಿ ನಮಸ್ಕರಿಸಲು ಸೂಚಿಸುತ್ತಾರೆ. ಕೆಲವೊಮ್ಮೆ ದಂಪತಿಗಳಿಗೆ ಅದು ಕಾಣಿಸದಿದ್ದರೂ, ಆಕಾಶದ ಆ ನಿರ್ದಿಷ್ಟ ಭಾಗಕ್ಕೆ ಗೌರವ ಸಲ್ಲಿಸುತ್ತಾರೆ. ಆದರೆ, ಈ ಆಚರಣೆಯ ಹಿಂದೆ ಅಡಗಿರುವ ಮಹತ್ವ ಮತ್ತು ಪುರಾಣ ತಿಳಿದುಕೊಳ್ಳುವುದು ಅತಿ ಮುಖ್ಯ.
ಅರುಂಧತಿ ನಕ್ಷತ್ರದ ಕುರಿತು ಹೇಳುವಾಗ, ಬ್ರಹ್ಮದೇವರ ಪುತ್ರಿಯಾದ ಸಂಧ್ಯಾ ದೇವಿಯ ಕಥೆ ಪ್ರಮುಖವಾಗಿ ನಿಲ್ಲುತ್ತದೆ. ಸಂಧ್ಯಾ ದೇವಿಯು ಅತ್ಯಂತ ರೂಪವತಿ ಹಾಗೂ ಯುವತಿಯಾಗಿದ್ದಳು. ವಸಿಷ್ಠ ಮಹರ್ಷಿಗಳು ಆಕೆಯ ರೂಪವನ್ನು ಕಂಡು, ಈ ದೇಹವನ್ನು ಅಗ್ನಿಗೆ ಆಹುತಿ ಮಾಡಬೇಕೆಂದು ಆಜ್ಞಾಪಿಸಿದರು. ವಸಿಷ್ಠರ ಆಜ್ಞೆಯನ್ನು ಹಿಂದು-ಮುಂದು ನೋಡದೆ ಪಾಲಿಸಿದ ಸಂಧ್ಯಾ ದೇವಿ, ತಕ್ಷಣವೇ ಅಗ್ನಿಗೆ ಆಹುತಿಯಾಗುತ್ತಾಳೆ. ತದನಂತರ, ಆಕೆ ಸ್ತ್ರೀ ರೂಪವನ್ನು ಧರಿಸಿ ಸಂಧ್ಯಾ ಮತ್ತು ಪ್ರಾತಃಕಾಲದ ದೇವತೆಯಾಗಿ ಪುನಃ ಜನ್ಮ ತಾಳುತ್ತಾಳೆ.
ಈ ಪುನರ್ಜನ್ಮದ ನಂತರ, ವಸಿಷ್ಠ ಮಹರ್ಷಿಗಳು ಆಕೆಯನ್ನು ವಿವಾಹವಾಗಲು ಇಚ್ಛೆಪಡುತ್ತಾರೆ. ಸಂಧ್ಯಾ ದೇವಿ ಕೂಡ ಇದಕ್ಕೆ ಸಮ್ಮತಿ ಸೂಚಿಸುತ್ತಾಳೆ. ಆದರೆ, ವಸಿಷ್ಠರು ಆಕೆಗೆ ಒಂದು ಕಮಂಡಲ ಮತ್ತು ಕೆಲವು ವಸ್ತುಗಳನ್ನು ನೀಡಿ, “ನಾನು ಬರುವವರೆಗೂ ನೀನು ಇವುಗಳನ್ನು ಕಾಪಾಡಿಕೊಂಡಿರು” ಎಂದು ಹೇಳಿ ತಪಸ್ಸಿಗೆ ತೆರಳುತ್ತಾರೆ. ವಸಿಷ್ಠರು ಸುಮಾರು ವರ್ಷಗಳ ಕಾಲ ಮರಳಿ ಬರುವುದಿಲ್ಲ. ಇದು ಸಂಧ್ಯಾ ದೇವಿಯ ತಾಳ್ಮೆ ಮತ್ತು ನಿಷ್ಠೆಯನ್ನು ಪರೀಕ್ಷಿಸುವ ಒಂದು ಸಂದರ್ಭವಾಗಿತ್ತು. ಹಲವು ವರ್ಷಗಳು ಕಳೆದರೂ, ಅವರು ನೀಡಿದ್ದ ವಸ್ತುಗಳನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ವಸಿಷ್ಠರಿಗಾಗಿ ಸಂಧ್ಯಾ ದೇವಿ ಕಾಯುತ್ತಾಳೆ. ವಸಿಷ್ಠರು ಮರಳಿದಾಗ, ಆಕೆಯ ತಾಳ್ಮೆ ಮತ್ತು ಭಕ್ತಿಗೆ ಸಂತುಷ್ಟರಾಗಿ ಆಕೆಯನ್ನು ವಿವಾಹವಾಗುತ್ತಾರೆ.
ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ
ಈ ಘಟನೆಯ ನಂತರ, ವಸಿಷ್ಠ ಮಹರ್ಷಿಗಳು ಸಂಧ್ಯಾ ದೇವಿಗೆ “ಈ ಜಗತ್ತಿನಲ್ಲಿ, ಆಕಾಶದಲ್ಲಿ ನೀನು ಅರುಂಧತಿ ನಕ್ಷತ್ರವಾಗಿ ನೆಲೆಸುವೆ. ಯಾರು ವಿವಾಹವಾಗುತ್ತಾರೋ, ಅಂತಹ ವಧು-ವರರು ತಮ್ಮ ಮಾಂಗಲ್ಯಧಾರಣೆ ನಂತರ, ಯಾವುದೇ ಮುಹೂರ್ತದಲ್ಲಿ, ಹಗಲೇ ಇರಲಿ ಅಥವಾ ರಾತ್ರಿಯೇ ಇರಲಿ, ನಿನ್ನ ದರ್ಶನವನ್ನು ಮಾಡಿದರೆ, ನಿನ್ನಂತೆ ಅವರ ಜೀವನದಲ್ಲಿ ತಾಳ್ಮೆ, ಸಹನೆ, ಪ್ರೀತಿ ಮತ್ತು ವಿಶ್ವಾಸ ಬೆಳೆಯಲಿ. ನೀನು ಕಾದ ರೀತಿಯಲ್ಲಿ, ಅವರಿಗೂ ಕಾಯುವ ಮನೋಭಾವ ಬರಲಿ. ಒಂದು ಸಣ್ಣ ವಿಷಯಕ್ಕೂ ವಿಚ್ಛೇದನ ನೀಡುವಂತಹ ಪ್ರವೃತ್ತಿ ದೂರವಾಗಿ, ದಾಂಪತ್ಯದಲ್ಲಿ ಶಾಶ್ವತ ಪ್ರೀತಿ ಇರಲಿ” ಎಂದು ವರವನ್ನು ನೀಡುತ್ತಾರೆ.
ಕೆಲವು ಪುರೋಹಿತರು ಅರುಂಧತಿ ಜೊತೆಗೆ ವಸಿಷ್ಠರ ನಕ್ಷತ್ರವನ್ನೂ ತೋರಿಸುತ್ತಾರೆ. ಅರುಂಧತಿ ನಕ್ಷತ್ರದ ದರ್ಶನವು ನವದಂಪತಿಗಳಿಗೆ ಸಹನೆ, ತಾಳ್ಮೆ, ಯೋಚನಾ ಶಕ್ತಿ ಮತ್ತು ಪರಸ್ಪರ ಗೌರವವನ್ನು ಬೆಳೆಸಿಕೊಳ್ಳಲು ಒಂದು ಪ್ರೇರಣೆಯಾಗಿದೆ. ಇದು ಕೇವಲ ಒಂದು ಆಚರಣೆಯಾಗಿರದೆ, ವೈವಾಹಿಕ ಜೀವನದ ಮಹತ್ವವನ್ನು, ನಿಷ್ಠೆ ಮತ್ತು ನಂಬಿಕೆಯ ಆಧಾರವನ್ನು ನೆನಪಿಸುವ ಸಂಕೇತವಾಗಿದೆ. ಈ ನಂಬಿಕೆಯ ಆಧಾರದ ಮೇಲೆ, ಅರುಂಧತಿಯ ಕೃಪಾಶೀರ್ವಾದವು ವಧು-ವರರಿಗೆ ಸುಖಮಯ ದಾಂಪತ್ಯ ಜೀವನವನ್ನು ಕರುಣಿಸಲಿ ಎಂಬುದು ಇದರ ಆಶಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




