Daily Devotional: ಪತಿ-ಪತ್ನಿ ಜಗಳ, ವಿವಾಹ ವಿಚ್ಛೇದನಕ್ಕೆ ಜ್ಯೋತಿಷ್ಯದ ಪ್ರಕಾರ ಕಾರಣ ತಿಳಿಯಿರಿ
ಇಂದು ಸಮಾಜದಲ್ಲಿ ವಿವಾಹ ವಿಚ್ಛೇದನ ಸಾಮಾನ್ಯವಾಗುತ್ತಿದೆ. ಹಣಕಾಸು, ಅಹಂ, ಭಿನ್ನಾಭಿಪ್ರಾಯಗಳು ಸಾಮಾನ್ಯ ಕಾರಣವಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿ, ಕುಜ, ರಾಹು, ಶನಿ, ಕೇತು ಗ್ರಹಗಳ ಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇಷ್ಟೆಲ್ಲಾ ಗ್ರಹ ದೋಷಗಳಿದ್ದರೂ ಸಹ, ದಂಪತಿಗಳ ಮನಸ್ಸಿನ ಗಟ್ಟಿತನ, ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆ ಇದ್ದರೆ ವಿಚ್ಛೇದನವನ್ನು ತಡೆಯಬಹುದು ಎಂದು ಡಾ. ಬಸವರಾಜ್ ಗುರೂಜಿಯವರು ಸಲಹೆ ನೀಡಿದ್ದಾರೆ.

ಸಮಾಜದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿವಾಹ ವಿಚ್ಛೇದನಕ್ಕೆ ಜ್ಯೋತಿಷ್ಯ ಪ್ರಕಾರ ಕಾರಣಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹಿಂದಿನ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿದ್ದಂತೆ ಇಂದಿಗೂ ವಿವಾಹವು ಪವಿತ್ರ ಹಾಗೂ ಶಕ್ತಿಶಾಲಿ ಸಂಬಂಧವೆಂದು ಪರಿಗಣಿಸಲಾಗಿದೆ. ವಿವಾಹವು ಸಮಾಜದ ಆಧಾರ ಸ್ತಂಭವಾಗಿದ್ದು, ಸದೃಢ ಸಂತಾನದ ಮೂಲಕ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಆದರೂ, ಇಂದು ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿವೆ.
ವಿವಾಹ ವಿಚ್ಛೇದನಕ್ಕೆ ಹಣಕಾಸಿನ ಸಮಸ್ಯೆಗಳು, ಅಹಂಕಾರ, ಭಿನ್ನಾಭಿಪ್ರಾಯಗಳು, ಮಾತು ತಪ್ಪುವುದು, ಮೋಸ, ಅನಾರೋಗ್ಯ, ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ಸೇರಿದಂತೆ ಹಲವು ಕಾರಣಗಳಿವೆ. ಆದರೆ ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದಾಗ, ಗ್ರಹಗಳ ಅಶುಭ ಸ್ಥಾನಗಳು ಮತ್ತು ದೋಷಗಳು ದಾಂಪತ್ಯದಲ್ಲಿ ಬಿರುಕು ಮೂಡಿಸಲು ಪ್ರಮುಖ ಕಾರಣಗಳಾಗಿವೆ ಎಂದು ಗುರೂಜಿ ಎಚ್ಚರಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಜ್ಯೋತಿಷ್ಯದಲ್ಲಿ ರವಿ, ಕುಜ, ರಾಹು, ಶನಿ ಮತ್ತು ಕೇತು ಗ್ರಹಗಳು ವಿವಾಹ ವಿಚ್ಛೇದನಕ್ಕೆ ಕಾರಣವಾಗಬಲ್ಲವು. ಕೆಲವು ಜಾತಕಗಳಲ್ಲಿ ದ್ವಿಕಳತ್ರ ಯೋಗ ಇರುವುದರಿಂದ ಎರಡನೇ ವಿವಾಹದ ಸಾಧ್ಯತೆಗಳೂ ಇರುತ್ತವೆ.
- ರವಿ ಗ್ರಹ: ರವಿಯು ಬಿಸಿ ಮತ್ತು ತಾಪದ ಗ್ರಹವಾಗಿದೆ. ನೀಚ ಸ್ಥಾನದಲ್ಲಿ, ಶತ್ರು ಸ್ಥಾನದಲ್ಲಿ, ಲಗ್ನದಲ್ಲಿ ಅಥವಾ ಸಪ್ತಮ ಭಾವದಲ್ಲಿ ರವಿ ಇದ್ದಾಗ ದೋಷಗಳು ಉಂಟಾಗುತ್ತವೆ. ರವಿಯು ಶುಕ್ರನೊಂದಿಗೆ ಎರಡನೇ ಅಥವಾ ನಾಲ್ಕನೇ ಭಾವದಲ್ಲಿದ್ದರೆ ಕಲಹಗಳು ಉಂಟಾಗಿ ವಿಚ್ಛೇದನ ಖಚಿತ.
- ಕುಜ ಗ್ರಹ (ಮಂಗಳ/ಅಂಗಾರಕ): ಜಾತಕದಲ್ಲಿ ಎರಡು, ನಾಲ್ಕು, ಏಳು, ಎಂಟು, ಹನ್ನೆರಡನೇ ಸ್ಥಾನಗಳಲ್ಲಿ ಕುಜ ಇದ್ದಾಗ ಕುಜ ದೋಷ ಉಂಟಾಗುತ್ತದೆ. ಇದು ನೇರವಾಗಿ ವಿಚ್ಛೇದನಕ್ಕೆ ಕಾರಣವಾಗದಿದ್ದರೂ, ಮನಸ್ತಾಪಗಳು, ಕೋಪತಾಪಗಳು ಮತ್ತು ಗಲಾಟೆಗಳಿಗೆ ಕಾರಣವಾಗುತ್ತದೆ.
- ಶನಿ ಗ್ರಹ: ಶನಿಯು ಲಗ್ನದಲ್ಲಿ ಅಥವಾ ಸಪ್ತಮ ಭಾವದಲ್ಲಿದ್ದಾಗ ದಂಪತಿಗಳ ನಡುವೆ ಸದಾ ಜಗಳ ಮತ್ತು “ನಾನು ಹೆಚ್ಚು” ಎಂಬ ಅಹಂಕಾರ ಮನೆಮಾಡುತ್ತದೆ.
- ರಾಹು ಗ್ರಹ: ಏಳನೇ ಸ್ಥಾನದಲ್ಲಿ ರಾಹು ಇದ್ದಾಗ ಅನಾರೋಗ್ಯ, ಐಶ್ವರ್ಯದ ಕೊರತೆ, ನಿರ್ಲಕ್ಷ್ಯತನ, ಕೋಪತಾಪಗಳು ಮತ್ತು ಬೇಜವಾಬ್ದಾರಿತನ ವಿಚ್ಛೇದನಕ್ಕೆ ಕಾರಣವಾಗಬಹುದು.
- ಕೇತು ಗ್ರಹ: ಕೇತುವು ಬೂದಿ ಗ್ರಹ ಅಥವಾ ವೈರಾಗ್ಯ ಗ್ರಹ ಎಂದು ಕರೆಯಲ್ಪಡುತ್ತದೆ. ಇದು ನಿರ್ಲಕ್ಷ್ಯ ಸ್ವಭಾವವನ್ನು ಸೂಚಿಸುತ್ತದೆ. ಶುಕ್ರ ಮತ್ತು ಕೇತು ಒಂದೇ ಸ್ಥಾನದಲ್ಲಿದ್ದಾಗ ವಿಚ್ಛೇದನದ ಸಾಧ್ಯತೆಗಳು ಹೆಚ್ಚಾಗುತ್ತವೆ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಆದರೆ, ಇಷ್ಟೆಲ್ಲಾ ಗ್ರಹ ದೋಷಗಳಿದ್ದರೂ ಸಹ, ದಂಪತಿಗಳ ಮನಸ್ಸಿನ ಗಟ್ಟಿತನ, ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆ ಇದ್ದರೆ ವಿಚ್ಛೇದನವನ್ನು ತಡೆಯಬಹುದು. ವಿಚ್ಛೇದನವು ಶುಭಕರವಾದ ಸಂಗತಿಯಲ್ಲ. ಯಾರಾದರೂ ಒಬ್ಬರು ಹೊಂದಿಕೊಂಡು ಸಾಗಿದರೆ ಜೀವನ ಸುಂದರವಾಗಿರುತ್ತದೆ. ಈ ಗ್ರಹ ದೋಷಗಳಿಂದ ಉಂಟಾಗುವ ವಿವಾಹ ವಿಚ್ಛೇದನದ ಸಮಸ್ಯೆಗಳಿಗೆ ಪರಿಹಾರವಾಗಿ, ಸಾಕ್ಷಾತ್ ಪಾರ್ವತಿ ದೇವಿಗೆ ಪ್ರತಿ ಮಂಗಳವಾರ ಐದು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ಎಲ್ಲಾ ದೋಷಗಳನ್ನು ನಿವಾರಿಸಿಕೊಳ್ಳಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




