
ಸ್ವರ್ಣಗೌರಿ ವ್ರತವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮತ್ತು ಶುಭಕರವಾದ ವ್ರತಗಳಲ್ಲಿ ಒಂದಾಗಿದೆ. ಪಾರ್ವತಿ ದೇವಿಯನ್ನು ಆಚರಿಸುವ ಈ ವ್ರತವು ಕುಟುಂಬದಲ್ಲಿ ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯೆಯಂದು ಆಚರಿಸುವ ಈ ವ್ರತದ ವಿಶೇಷವಾದ ವಿಧಿವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ಪೂಜೆಯನ್ನು ಪ್ರಾರಂಭಿಸುವ ಮೊದಲು, ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸುವುದು ಅತ್ಯಂತ ಮುಖ್ಯ. ಶುದ್ಧ ನೀರಿನಿಂದ ಮತ್ತು ಅರಿಶಿನ ನೀರಿನಿಂದ ಮನೆಯನ್ನು ಪವಿತ್ರಗೊಳಿಸಬೇಕು. ಮನೆಯನ್ನು ಶುಚಿಗೊಳಿಸುವ ಮೂಲಕ ಮನಸ್ಸಿನ ಶುದ್ಧತೆಯನ್ನು ಕೂಡಾ ಕಾಪಾಡಿಕೊಳ್ಳಬೇಕು. ಇದರಿಂದ ಮಹಾಲಕ್ಷ್ಮೀಯ ಅನುಗ್ರಹವನ್ನು ಪಡೆಯಬಹುದು.
ಮಣ್ಣಿನಿಂದ ಅಥವಾ ಅರಿಶಿನದಿಂದ ಗೌರಿಯನ್ನು ಮಾಡಿ, ಅದನ್ನು ಅಕ್ಕಿಯಿಂದ ತುಂಬಿದ ತಟ್ಟೆಯಲ್ಲಿ ಇರಿಸಬೇಕು. ಇದನ್ನು ಮಂಟಪದಲ್ಲಿ ಇರಿಸಿ ವಿವಿಧ ರೀತಿಯ ಅಲಂಕಾರಗಳಿಂದ ಅಲಂಕರಿಸಬೇಕು. ಗಂಧ, ದೀಪ ಮತ್ತು ದೂಪಗಳನ್ನು ಬಳಸಿ ಪೂಜೆಯನ್ನು ನಡೆಸಬೇಕು. 16 ಗಂಟುಗಳ ದಾರವನ್ನು ಕೈಗೆ ಕಟ್ಟಿಕೊಂಡು ಈ ವ್ರತವನ್ನು ಆಚರಿಸುವುದು ಪರಂಪರೆಯಾಗಿದೆ. ನೈವೇದ್ಯಕ್ಕಾಗಿ ಒಬ್ಬಟ್ಟು ಅಥವಾ ಬೆಲ್ಲದ ಪಾಯಸವನ್ನು ಅರ್ಪಿಸಬಹುದು. ಬೆಳಗ್ಗೆ 8:30 ರಿಂದ 9:30 ರವರೆಗೆ ಮತ್ತು ಸಂಜೆ 6:00 ರಿಂದ 7:10 ರವರೆಗೆ ಮೂರು ಆರತಿಗಳನ್ನು ಮಾಡಬೇಕು. ಬೆಸ ಸಂಖ್ಯೆಯ ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ಅಥವಾ ಭಕ್ಷ್ಯಗಳನ್ನು ನೀಡಿ ಪೂಜೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪರ್ಸ್ನಲ್ಲಿ ಎರಡು ಕವಡೆ ಇಟ್ಟುಕೊಳ್ಳಿ, ಪ್ರಯೋಜನ ಸಾಕಷ್ಟಿವೆ
ಪೂಜೆಯ ಸಮಯದಲ್ಲಿ, ಕುಟುಂಬದ ಒಳಿತು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಬೇಕು. ಪ್ರಾರ್ಥನೆ ಸಮಯದಲ್ಲಿ ಪುಷ್ಪಗಳನ್ನು ಕೈಯಲ್ಲಿ ಹಿಡಿದು ನಿಮ್ಮ ಮನಸ್ಸಿನಲ್ಲಿರುವ ಬೇಡಿಕೆಯನ್ನು ದೇವಿಯಲ್ಲಿ ಹೇಳಿರಿಸಬಹುದು. ಈ ವ್ರತವನ್ನು ಭಕ್ತಿಯಿಂದ ಆಚರಿಸುವುದರಿಂದ ಸಾಕಷ್ಟು ಶುಭ ಫಲಗಳನ್ನು ಪಡೆಯಬಹುದು ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Tue, 26 August 25