ಧನತ್ರಯೋದಶಿ 2021: ಧನ್‌ತ್ರಯೋದಶಿಯಂದು ಕ್ಷೀರ ಸಮುದ್ರದಿಂದ ಲಕ್ಷ್ಮಿ ಹುಟ್ಟಿ ಬಂದಳು

| Updated By: ಆಯೇಷಾ ಬಾನು

Updated on: Nov 02, 2021 | 7:14 AM

ಚಿನ್ನವನ್ನು ಖರೀದಿಸಲು ಧನ್ತೇರಸ್‌ ಉತ್ತಮ ಸಂದರ್ಭ. ಅಕ್ಷಯ ತೃತೀಯ, ಗುಡಿ ಪಾಡ್ವ, ನವರಾತ್ರಿ ಮುಂತಾದ ಇತರ ಹಬ್ಬಗಳಂತೆಯೇ ಚಿನ್ನವನ್ನು ಖರೀದಿಸುವುದು ಮಂಗಳಕರ ಎಂದು ಜನರು ನಂಬುತ್ತಾರೆ.

ಧನತ್ರಯೋದಶಿ 2021: ಧನ್‌ತ್ರಯೋದಶಿಯಂದು ಕ್ಷೀರ ಸಮುದ್ರದಿಂದ ಲಕ್ಷ್ಮಿ ಹುಟ್ಟಿ ಬಂದಳು
ಚಿನ್ನ (ಸಾಂದರ್ಭಿಕ ಚಿತ್ರ)
Follow us on

ಧನತ್ರಯೋದಶಿ. ಇದನ್ನೇ ಆಡುಭಾಷೆಯಲ್ಲಿ ‘ಧನತೇರಸ್’ ಎನ್ನುತ್ತಾರೆ. ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ತಿಜೋರಿಯನ್ನು) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.

ಚಿನ್ನವನ್ನು ಖರೀದಿಸಲು ಧನ್ತೇರಸ್‌ ಉತ್ತಮ ಸಂದರ್ಭ. ಅಕ್ಷಯ ತೃತೀಯ, ಗುಡಿ ಪಾಡ್ವ, ನವರಾತ್ರಿ ಮುಂತಾದ ಇತರ ಹಬ್ಬಗಳಂತೆಯೇ ಚಿನ್ನವನ್ನು ಖರೀದಿಸುವುದು ಮಂಗಳಕರ ಎಂದು ಜನರು ನಂಬುತ್ತಾರೆ. ದೀಪಾವಳಿ ಹಬ್ಬದ ಐದು ದಿನಗಳ ಆರಂಭವನ್ನು ಸೂಚಿಸುವ ದಿನವನ್ನು ಧನತೇರಸ್ ಎಂದು ಕರೆಯಲಾಗುತ್ತದೆ ಮತ್ತು ಈ ದಿನ ಭಗವಾನ್ ಕುಬೇರ ಮತ್ತು ಮಾತಾ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದ ಹದಿಮೂರನೇ ದಿನದಂದು ಧನತೇರಸ್ ಆಚರಿಸಲಾಗುತ್ತದೆ. ಈ ವರ್ಷ ಇದನ್ನು 2 ನವೆಂಬರ್ 2021, ಮಂಗಳವಾರ ಆಚರಿಸಲಾಗುತ್ತದೆ.

ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿ ದೇವತೆಯ ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಕೊಡುತ್ತಾರೆ. ಇದರಲ್ಲಿ ಬಹುದೊಡ್ಡ ಅರ್ಥವಿದೆ. ಬೇವು ಅಮೃತದಿಂದ ಉತ್ಪನ್ನವಾಗಿದೆ. ಧನ್ವಂತರಿಯು ಅಮೃತತತ್ವವನ್ನು ಕೊಡುವವನಾಗಿದ್ದಾನೆ ಎಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ಪ್ರತಿದಿನ ಬೇವಿನ ಐದಾರು ಎಲೆಗಳನ್ನು ತಿಂದರೆ ರೋಗಗಳು ಬರುವ ಸಂಭವವೇ ಕಡಿಮೆಯಾಗುತ್ತದೆ. ಬೇವಿಗೆ ಇಷ್ಟೊಂದು ಮಹತ್ವವಿರುವುದರಿಂದಲೇ ಈ ದಿನ ಅದನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ. ಬೇವಿನ ಆಧ್ಯಾತ್ಮಿಕ ಮಹತ್ವವನ್ನು ಸನಾತನ ಸಂಸ್ಥೆಯ ಗ್ರಂಥ ‘ಹಬ್ಬ ಆಚರಿಸುವ ಯೋಗ್ಯ ಪದ್ಧತಿ ಮತ್ತು ಅದರ ಹಿಂದಿನ ಶಾಸ್ತ್ರ’ ಇದರಲ್ಲಿ ಕೊಡಲಾಗಿದೆ.

ಧನತೇರಸ್ ದಿನದ ಇತಿಹಾಸ
ದೀಪಾವಳಿಯ ಮೊದಲ ದಿನವೇ ಧನ್‌ತೆರೇಸ್‌ ಅಥವಾ ಧನತ್ರಯೋದಶಿ ಆಚರಿಸಲಾಗುತ್ತೆ. ದೀಪಾವಳಿ ಎಂಬುವುದು 5 ದಿನಗಳ ಆಚರಣೆ. ಮೊದಲನೇ ದಿನ ಅಂದರೆ ಧನ್‌ತ್ರಯೋದಶಿಯಂದು ಕ್ಷೀರ ಸಮುದ್ರದಿಂದ ಲಕ್ಷ್ಮಿ ಹುಟ್ಟಿ ಬಂದಳು ಎಂಬ ಪೌರಾಣಿಕ ಕತೆಯಿದೆ. ಈ ದಿನ ಲಕ್ಷ್ಮಿ ಜೊತೆ ಕುಬೇರನನ್ನು ಕೂಡ ಪೂಜಿಸಲಾಗುವುದು. ತ್ರಯೋದಶಿಯಂದು ಲಕ್ಷ್ಮಿ ಪೂಜೆ ಮಾಡಿದರೆ ಶುಭ ಎಂದು ಹೇಳಲಾಗುವುದು. ಆದರೆ ಧನತ್ರಯೋದಶಿ ಬಳಿಕ ಬರುವ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಿದರೆ ಹೆಚ್ಚು ಶುಭಕರ ಎಂದು ಪರಿಗಣಿಸಲಾಗಿದೆ.

ಧನತೇರಸ್ ಮಹತ್ವ
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಪೂಜೆಯಲ್ಲಿ ಚಿನ್ನವನ್ನು ಇಡಲಾಗುತ್ತದೆ. ಕುಟುಂಬದಲ್ಲಿ ಯಾವುದೇ ಅಕಾಲಿಕ ಮರಣವನ್ನು ತಪ್ಪಿಸಲು, ಮನೆಯ ಹೊರಗೆ ಯಮದೀಪವನ್ನು ಬೆಳಗಿಸುವ ಆಚರಣೆ ಕೂಡ ಇದೆ. ಧನತೇರಸ್ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದು ಬಲವಾದ ನಂಬಿಕೆಯಾಗಿದೆ. ಧನ್ತೇರಸ್‌ನಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಮಾತ್ರವಲ್ಲದೆ ಆಸ್ತಿ ಮತ್ತು ಇತರಲ್ಲಿ ಹೂಡಿಕೆ ಮಾಡುತ್ತಾರೆ. ಹಳದಿ ಲೋಹವನ್ನು ಖರೀದಿಸುವುದು ಕೇವಲ ಸಂಪ್ರದಾಯವಲ್ಲ ಆದರೆ ಇದು ಉತ್ತಮ ಹೂಡಿಕೆ ಮಾಡುವ ಮಾರ್ಗವಾಗಿದೆ.

ಇದನ್ನೂ ಓದಿ: Deepavali 2021: ದೀಪಗಳ ಹಬ್ಬ ದೀಪಾವಳಿ ಆಚರಣೆಯ ಮಹತ್ವ, ಶುಭ ಮುಹೂರ್ತ