ರಾಹುಗ್ರಸ್ತದಿಂದ ಆದ ಸೂರ್ಯ ಹಾಗೂ ಚಂದ್ರನ ಗ್ರಹಣಗಳು ಯಾವ ರಾಶಿಯಲ್ಲಿ ಆಗುತ್ತವೆ, ಆ ರಾಶಿಯಿಂದ ನಾವು ತಿಳಿಯಬೇಕಾದುದೇನು ಎಂಬುದು ಒಂದು ಕಡೆಯಾದರೆ, ಯಾವ ನಕ್ಷತ್ರದಲ್ಲಿ ಸೂರ್ಯ ಹಾಗು ಚಂದ್ರರು ಇರುತ್ತಾರೆ ಎನ್ನುವುದರ ಆಧಾರದ ಮೇಲೂ ಆಗಿನ ಕಾಲದ ರಾಜ್ಯದ ಮೇಲಾಗುವ ಪರಿಣಾಮವನ್ನು, ಪ್ರಕೃತಿಯ ಮೇಲಾಗುವ ಬದಲಾಣೆಗಳನ್ನು ಊಹಿಸುತ್ತಿದ್ದರು. ಅಶ್ವಿನೀ ನಕ್ಷತ್ರದಲ್ಲಿ ಗ್ರಹಣವಾದರೆ ಅಶ್ವಗಳು ಹಾಗೂ ಆಶ್ವಪಾಲಕರು, ಭರಣಿಯಲ್ಲಿ ಆದರೆ ಕಳಿಂಗ ಅಂದರೆ ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಭಾಗಗಳು, ಕೃತ್ತಿಕಾ ನಕ್ಷದಲ್ಲಿ ಆದರೆ ಕಳಿಂಗದ ನಾಯಕರು, ರೋಹಿಣಿಯಲ್ಲಿ ಆದರೆ ಶಸ್ತ್ರಗಳಿಂದ ಹಾಗೂ ಕೋಪದಿಂದ ಪ್ರಜೆಗಳು ಪೀಡಿತರಾಗುವರು.
ಮೃಗಶಿರಾ ನಕ್ಷತ್ರದಲ್ಲಿ ಗ್ರಹಣವಾದರೆ ಸಾಲ, ನಿಷಾದ, ಕೇಕಯ ರಾಜ್ಯಕ್ಕೆ ತೊಂದರೆ, ಆರ್ದ್ರಾ ನಕ್ಷತ್ರದಲ್ಲಿ ಗ್ರಹಣವಾದರೆ ಗಿಳಿಗಳಿಗೆ, ನಾಯಿಗಳಿಗೆ, ಜಲಾಶಯವನ್ನು ನಂಬಿ ಬದುಕುವವರಿಗೆ ತೊಂದರೆಯಾಗಲಿದೆ. ಪುನರ್ವಸು ನಕ್ಷತ್ರದಲ್ಲಿ ಗ್ರಹಣವಾದರೆ ಅಂಗಡಿಗಳಿಗೆ, ಜಿಂಕೆ, ಕೃಷ್ಣಮೃಗದಂತಹ ಪ್ರಾಣಿಗಳಿಗೆ ಸಮಸ್ಯೆ ಆಗಬಹುದು. ಪುಷ್ಯ ನಕ್ಷತ್ರದಲ್ಲಿ ಗೋಮತಿ, ಸಿಂಧು ನದಿ ಪ್ರದೇಶದ ಜನರಿಗೆ ಹಾಗೆಯೇ ಸೌವೀರ, ಕುರು, ಪಾಂಚಲ ರಾಜ್ಯದಲ್ಲಿ ವಾಸಿಸುವ ಜನರಿಗೆ, ಆಶ್ಲೇಷಾ ನಕ್ಷತ್ರದಲ್ಲಿ ಆದರೆ ಕಾಶಿ, ಕಲಿಂಗ, ಸಿಂಹಲ ದೇಶದ ರಾಜರಿಗೆ, ಮಘಾ ನಕ್ಷತ್ರದಲ್ಲಿ ಆದರೆ ಅರಣ್ಯದಲ್ಲಿ ವಾಸಿಸುವ ಜನಾಂಗಗಳಿಗೆ, ಪೂರ್ವಾಫಲ್ಗುಣೀ ನಕ್ಷತ್ರದಲ್ಲಿ ಆದರೆ ಉತ್ತಮ ಸ್ತ್ರೀಯರಿಗೆ, ಕಾಂಭೋಜ, ಸೌರಾಷ್ಟ್ರ ದೇಶಗಳ ರಾಜರುಗಳಿಗೆ, ಉತ್ತರಾಫಲ್ಗುಣೀ ನಕ್ಷತ್ರದಲ್ಲಿ ಗ್ರಹಣವಾದರೆ ಮಗಧ ದೇಶಕ್ಕೂ ಹಾಗೂ ಯವನರಿಗೂ ಪೀಡೆ ಉಂಟಾಗಲಿದೆ.
ಇದನ್ನೂ ಓದಿ:Chandra Grahan 2023: ಗ್ರಹಣದ ಸಮಯದಲ್ಲಿ ಈ ಕೆಲಸಗಳನ್ನು ಮಾಡದಿರಿ
ಹಸ್ತಾ ನಕ್ಷತ್ರದಲ್ಲಿ ಗ್ರಹಣವಾದರೆ ವಿಂಧ್ಯ ಪರ್ವತ ದಕ್ಷಿಣ ಭಾಗಕ್ಕೆ, ಚಿತ್ರಾ ನಕ್ಷತ್ರದಲ್ಲಿ ಮದ್ರ ಹಾಗೂ ಕುರುಕ್ಷೇತ್ರದ ಭಾಗಗಳಿಗೆ, ಸ್ವಾತಿ ನಕ್ಷತ್ರದಲ್ಲಿ ಆದರೆ ಕಾಶ್ಮೀರ ಹಾಗೂ ಗಾಂಧಾರ ಮೊದಲಾದ ಪ್ರದೇಶಗಳಿಗೆ, ವಿಶಾಖಾ ನಕ್ಷತ್ರದಲ್ಲಿ ಆದರೆ ಕಲ್ಲು, ವೃಕ್ಷಗಳಿಗೆ, ಅನುರಾಧಾ ನಕ್ಷತ್ರದಲ್ಲಿ ಕಾಶಿ ಹಾಗೂ ಕೋಸಲಪ್ರದೇಶದ ಜನರಿಗೆ, ಜ್ಯೇಷ್ಠಾ ನಕ್ಷತ್ರದಲ್ಲಿ ಹಿರಿಯರಿಗೆ ಹಾಗೂ ಅವರ ಹೆಂಡತಿಯರಿಗೆ, ಮೂಲಾದಲ್ಲಿ ಆದರೆ ಕ್ಷುದ್ರ, ಮಾಲವಕ ಹಾಗೂ ಸೈನಿಕರಿಗೆ, ಪೂರ್ವಾಷಾಢ ನಕ್ಷತ್ರದಲ್ಲಿ ಆದರೆ ಬಹ್ಮಪುತ್ರ, ಶೋಣಾ ಮೊದಲಾದ ಐದು ಗಂಡು ನದಿಗಳಿಗೆ, ಸೌವೀರದ ರಾಜನಿಗೆ, ಉತ್ತರಾಷಾಢ ನಕ್ಷತ್ರದಲ್ಲಿ ಆದರೆ ಶಿಬಿ, ಮಾಲವರಾಜ್ಯಗಳಿಗೆ, ಶ್ರವಣ ನಕ್ಷತ್ರದಲ್ಲಿ ಆದರೆ ಸಜ್ಜನರಿಗೆ, ಧನಿಷ್ಠದಲ್ಲಿ ಆದರೆ ಶ್ರೀಮಂತರಿಗೆ, ಶಕ ವಾಸಿಗಳಿಗೆ, ಅಂಡಜ ಪ್ರಾಣಿಗಳಿಗೆ, ಶತಭಿಷಾ ನಕ್ಷತ್ರದಲ್ಲಿ ಆದರೆ ಕೇಕಯ ಹಾಗೂ ಪಾಂಚಾಲ ರಾಜ್ಯಗಳಿಗೆ, ಪೂರ್ವಾಭಾದ್ರ ನಕ್ಷತ್ರದಲ್ಲಿ ಆದರೆ ವಂಗ ಹಾಗೂ ಮಗಧ ದೇಶವಾಸಿಗಳಿಗೆ, ಉತ್ತರಾಭಾದ್ರದಲ್ಲಿ ಆದರೆ ತ್ರಿಗರ್ತ ಭಾಗದ ಜನರಿಗೆ, ರೇವತಿಯಲ್ಲಿ ಆದರೆ ವಿದೇಹ ಮೊದಲಾದ ಭಾಗದ ಜನರಿಗೆ ತೊಂದರೆಯಾಗುವುದು.
ಇದು ಸಾಮನ್ಯವಾದ ನಿಯಮ. ಗ್ರಹಣ ಕಾಲದ ರಾಶಿ ಹಾಗೂ ನಕ್ಷತ್ರಗಳನ್ನು ಕಂಡುಕೊಂಡು ಕೂರ್ಮವಿಭಾಗದ ಮೂಲಕ ಫಲವನ್ನು ಹೇಳಬೇಕು ಎಂಬುದು ಮಹರ್ಷಿ ಪರಾಶರ ಅಭಿಪ್ರಾಯವಾಗಿದೆ.
ಕೂರ್ಮವಿಭಾಗೇನ ವದೇತ್ ಪೀಡಾಂ ದೇಶಸ್ಯ ವೀಕ್ಷ್ಯ ನಕ್ಷತ್ರಮ್ |
ಸಹಿತಂ ಗ್ರಹಣಂ ಯೇನ ತದ್ದೇಶಶ್ಚಾಪ್ನುಯಾತ್ ಪೀಡಾಮ್ ||
ಒಂದು ದೇಶದ ಬಗ್ಗೆ ಆಗಿನ ಕಾಲದ ಶೋಧನೆ ಏನು ಸಾಮನ್ಯದ್ದಲ್ಲ. ಸೃಷ್ಟಿಯ ಪ್ರತಿ ಅಂಶವನ್ನೂ ಹುಡುಕಿ ತೆಗದು ಅದನ್ನು ದಾಖಲಿಸುತ್ತಿದ್ದರು. ಈ ಗ್ರಹಣದ ಕುರಿತಾಗಿ ಇನ್ನಷ್ಟು ಮಾಹಿತಿಗಳಿವೆ. ಈ ಪ್ರಾಚೀನರ ಸಂಶೋಧನೆಯ ಆಳ, ಆಗಲಗಳನ್ನು ತಿಳಿಯುವುದು ಸುಲಭವಲ್ಲ
ಲೇಖನ: ಲೋಹಿತಶರ್ಮಾ