Festivals In March 2024: ಮಾರ್ಚ್ ತಿಂಗಳಿನಲ್ಲಿ ಆಚರಿಸುವ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಕಾಲಾಷ್ಟಮಿ, ವಿಜಯ ಏಕಾದಶಿ, ವಸಂತ ಹುಣ್ಣಿಮೆಯ ಉಪವಾಸ, ಮಹಾ ಶಿವರಾತ್ರಿ, ಹೋಳಿ, ರಂಗ ಪಂಚಮಿ, ಭಾಲಚಂದ್ರ ಸಂಕಷ್ಟಿ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳನ್ನು ಮಾರ್ಚ್ ತಿಂಗಳಿನಲ್ಲಿ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಭಕ್ತರಿಗೆ, ಮಾರ್ಚ್ ತಿಂಗಳು ಅತ್ಯಂತ ವಿಶೇಷ ತಿಂಗಳಾಗಿದೆ. ಹಾಗಾದರೆ ಈ ಹಬ್ಬಗಳನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಾರ್ಚ್ ತಿಂಗಳಿನಲ್ಲಿ ಅತ್ಯಂತ ವಿಶೇಷ ಹಬ್ಬಗಳನ್ನು (Festivals) ಆಚರಿಸಲಾಗುತ್ತದೆ. ಈ ಮಾಸವು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ಜೊತೆಗೆ ಈ ತಿಂಗಳಲ್ಲಿ ಅನೇಕ ಪ್ರಮುಖ ಹಬ್ಬಗಳಿರುವುದರಿಂದ ಈ ಮಾಸವನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗಿದೆ. ಹಿಂದೂಗಳ ಅನೇಕ ಹಬ್ಬ, ಉಪವಾಸಗಳು ಇರುವುದರಿಂದ ಮತ್ತು ರಂಜಾನ್ (Ramadan) ಈ ತಿಂಗಳ ಎರಡನೇ ವಾರದಿಂದ ಪ್ರಾರಂಭವಾಗುವುದರಿಂದ ಮುಸ್ಲಿಮರಿಗೂ ಈ ತಿಂಗಳು ವಿಶೇಷವಾಗಲಿದೆ. ಅಲ್ಲದೆ ಮಾಘ ಮಾಸವು ಅಂತ್ಯವಾಗಿ ಫಾಲ್ಗುಣ ಮಾಸ ಆರಂಭವಾಗಿರುವುದರಿಂದ ಮಾರ್ಚ್ ಮೊದಲ ವಾರದಲ್ಲಿ ಭಾನು ಸಪ್ತಮಿ, ಶಬರಿ ಜಯಂತಿ, ಕಾಲಾಷ್ಟಮಿ, ಜಾನಕಿ ಜಯಂತಿ ಮತ್ತು ವಿಜಯ ಏಕಾದಶಿಯನ್ನು ಆಚರಿಸುತ್ತಾರೆ. ಮಾರ್ಚ್ ಎರಡನೇ ವಾರದಲ್ಲಿ ಎಲ್ಲಾ ಶಿವ ಭಕ್ತರು ತಮ್ಮ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ((Maha Shivratri 2024) ಆಚರಣೆ ಮಾಡುತ್ತಾರೆ. ಮಾರ್ಚ್ ಕೊನೆಯ ವಾರದಲ್ಲಿ ಭಾರತದಾದ್ಯಂತ ಅತ್ಯಂತ ವರ್ಣರಂಜಿತ ಹಬ್ಬಗಳಲ್ಲಿ ಒಂದಾದ ಹೋಳಿಯನ್ನು ಆಚರಿಸುತ್ತಾರೆ ಜೊತೆಗೆ ಅದೇ ದಿನ ವಸಂತ ಹುಣ್ಣಿಮೆಯ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಈ ಹಬ್ಬದ ನಂತರ ಬರುವ ಮತ್ತೊಂದು ಪ್ರಮುಖ ದಿನವೆಂದರೆ ಅದು ರಂಗ ಪಂಚಮಿ. ಹಾಗಾಗಿ ಭಕ್ತರಿಗೆ, ಮಾರ್ಚ್ ತಿಂಗಳು ಅತ್ಯಂತ ಪ್ರಮುಖ ತಿಂಗಳಾಗಿದೆ.
ಮಾರ್ಚ್ 2024 ರಲ್ಲಿ ಬರುವ ಹಬ್ಬಗಳ ಪಟ್ಟಿ ಇಲ್ಲಿದೆ;
- ಮಾರ್ಚ್ 3 (ಭಾನುವಾರ) -ಕಾಲಾಷ್ಟಮಿ: ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಕಲಾಷ್ಟಮಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನದ ಉಪವಾಸದ ಮೂಲಕ ಶಿವನು ಸಂತಸಗೊಂಡು ಶುಭ ಫಲವನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಶಿವ ಪುರಾಣದ ಪ್ರಕಾರ, ಕಲಾಭೈರವ ಶಿವನ ಭಾಗದಿಂದ ಹುಟ್ಟಿಕೊಂಡವನು, ಆದ್ದರಿಂದ ಅಷ್ಟಮಿ ದಿನಾಂಕದಂದು ಬರುವ ಕಲಾಷ್ಟಮಿಯನ್ನು ಕಾಲ ಭೈರವಾಷ್ಟಮಿ ಅಥವಾ ಭೈರವಾಷ್ಟಮಿ ಎಂದೂ ಕರೆಯುತ್ತಾರೆ.
- ಮಾರ್ಚ್ 6 (ಬುಧವಾರ) -ವಿಜಯ ಏಕಾದಶಿ: ಸನಾತನ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಏಕಾದಶಿ ಉಪವಾಸವು ಎರಡು ಅವಧಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅಂದರೆ ಪ್ರತೀ ತಿಂಗಳ ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ. ಹಾಗಾಗಿ ಪ್ರತಿ ಏಕಾದಶಿಯು ತನ್ನದೇ ಆದ ವಿಭಿನ್ನ ಹೆಸರನ್ನು ಮತ್ತು ಮಹತ್ವವನ್ನು ಹೊಂದಿದೆ. ಅದೇ ರೀತಿಯಲ್ಲಿ ಈ ಬಾರಿಯ ವಿಜಯ ಏಕಾದಶಿಯನ್ನು ಮಾರ್ಚ್ 6, ಬುಧವಾರ ದಂದು ಆಚರಣೆ ಮಾಡಲಾಗುತ್ತದೆ.
- ಮಾರ್ಚ್ 8 (ಶುಕ್ರವಾರ) -ಮಹಾ ಶಿವರಾತ್ರಿ, ಪ್ರದೋಷ ವ್ರತ: ಮಹಾ ಶಿವರಾತ್ರಿ ಹಿಂದೂಗಳಿಗೆ ವಿಶೇಷ ಹಬ್ಬ. ಈ ವರ್ಷ ಮಹಾ ಶಿವರಾತ್ರಿಯನ್ನು ಮಾರ್ಚ್ 8 ರಂದು ಪ್ರತಿ ವರ್ಷದಂತೆ ವೈಭವದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಶಿವ ಪಾರ್ವತಿಯರ ವಿವಾಹದ ದಿನವನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಅಲ್ಲದೆ ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವ ಪುರಾಣ.
- ಮಾರ್ಚ್ 8 (ಶುಕ್ರವಾರ) -ಪ್ರದೋಷ ವ್ರತ: ಮಹಾ ಶಿವರಾತ್ರಿಯಂದು ಪ್ರದೋಷ ವ್ರತವನ್ನು ಕೂಡ ಆಚರಣೆ ಮಾಡಲಾಗುತ್ತದೆ. ಈ ವ್ರತವು ಭಗವಾನ್ ಶಿವ ಮತ್ತು ಆತನ ಪತ್ನಿ ಪಾರ್ವತಿಗೆ ಸಂಬಂಧಿಸಿದೆ. ಈ ಪವಿತ್ರ ವ್ರತವನ್ನು ಆಚರಿಸುವುದರಿಂದ ಆ ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪ್ರದೋಷ ವ್ರತವನ್ನು ಒಂದು ತಿಂಗಳಲ್ಲಿ 2 ಬಾರಿ ಆಚರಿಸಲಾಗುತ್ತದೆ. ಇದು ಶುಕ್ರವಾರ ಬಂದಿರುವುದರಿಂದ ಈ ದಿನ ವ್ರತ ಆಚರಣೆ ಮಾಡುವವರಿಗೆ ಜೀವನದಲ್ಲಿ ಅದೃಷ್ಟ ವೃದ್ಧಿಯಾಗುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ.
- ಮಾರ್ಚ್ 10 (ಭಾನುವಾರ) -ಅಮಾವಾಸ್ಯೆ: ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ಕೃಷ್ಣ ಪಕ್ಷದ ಕೊನೆಯ ದಿನವನ್ನು ಅಮಾವಾಸ್ಯೆಯೆಂದು ಆಚರಣೆ ಮಾಡಲಾಗುತ್ತದೆ. ಇನ್ನು ಧರ್ಮ ಗ್ರಂಥಗಳಲ್ಲಿ ಅಮಾವಾಸ್ಯೆ ತಿಥಿ ಬಹಳ ಮುಖ್ಯವಾಗಿದ್ದು, ಈ ದಿನವನ್ನು ಪಿತೃಗಳ ದಿನ ಎಂದು ನಂಬಲಾಗಿದೆ. ಮಾರ್ಚ್ ತಿಂಗಳ ಅಂದರೆ ಫಾಲ್ಗುಣ ಮಾಸದ ಅಮಾವಾಸ್ಯೆಯನ್ನು ಮಾರ್ಚ್ 10, ಭಾನುವಾರ ದಂದು ಆಚರಣೆ ಮಾಡಲಾಗುತ್ತದೆ.
- ಮಾರ್ಚ್ 11 (ಸೋಮವಾರ) -ರಂಜಾನ್ ಉಪವಾಸ ಆರಂಭ: ರಂಜಾನ್ ದಿನಾಂಕ ಚಾಂದ್ರಮಾನ ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಆಧರಿಸಿರುವುದರಿಂದ ರಂಜಾನ್ ಭಾರತದಲ್ಲಿ ಮಾರ್ಚ್ 11 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಇದು ಏಪ್ರಿಲ್ 9, 2024 ರಂದು ಕೊನೆಗೊಳ್ಳುವ ಸಾಧ್ಯತೆ ಇದೆ.
- ಮಾರ್ಚ್ 13 (ಬುಧವಾರ) -ವಿನಾಯಕ ಚತುರ್ಥಿ: ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯನ್ನು ಮಾರ್ಚ್ 13ರ ಬುಧವಾರ ಆಚರಣೆ ಮಾಡಲಾಗುತ್ತದೆ. ಬುಧವಾರವನ್ನು ಭಗವಾನ್ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ವಿನಾಯಕ ಚತುರ್ಥಿ ಬುಧವಾರ ಬಂದಿರುವುದು ವಿಶೇಷವಾಗಿದೆ. ಈ ದಿನ, ಗಣಪತಿಯನ್ನು ವಿಧಿ – ವಿಧಾನಗಳ ಮೂಲಕ ಪೂಜಿಸುವುದರಿಂದ ಶುಭ ಫಲವು ನೂರು ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
- ಮಾರ್ಚ್ 15 (ಶುಕ್ರವಾರ) -ಸ್ಕಂದ ಷಷ್ಠಿ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸ್ಕಂದ ಷಷ್ಠಿಯನ್ನು ಮಾರ್ಚ್ 15ರಂದು ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ವಿಶೇಷ ಮಹತ್ವವಿದೆ. ಈ ದಿನ ಭಗವಾನ್ ಕಾರ್ತಿಕೇಯನನ್ನು ಅಂದರೆ ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ಶಿವ ಮತ್ತು ಪಾರ್ವತಿ ದೇವಿಯ ಕೃಪೆಯು ಪ್ರಾಪ್ತವಾಗುತ್ತದೆ. ಮತ್ತು ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
- ಮಾರ್ಚ್ 17 (ಭಾನುವಾರ) -ಮಾಸ ದುರ್ಗಾಷ್ಟಮಿ: ದುರ್ಗಾ ದೇವಿಯು, ಅಷ್ಟಮಿ ತಿಥಿಯ ಅಧಿಪತಿಯಾಗಿರುವುದರಿಂದ ಪ್ರತಿ ತಿಂಗಳ ಶುಕ್ಲ ಪಕ್ಷದಲ್ಲಿ ಈ ತಿಥಿಯಂದು ಶಕ್ತಿ ಪೂಜೆ ಮತ್ತು ಉಪವಾಸದ ನಿಯಮವನ್ನು ಆಚರಿಸುವ ಬಗ್ಗೆ ಪುರಾಣಗಳಲ್ಲಿ ಹೇಳಲಾಗಿದೆ. ಈ ವ್ರತವು ರೋಗಗಳನ್ನು ನಿವಾರಿಸುತ್ತದೆ ಮತ್ತು ವ್ಯಕ್ತಿಯ ಆಯಸ್ಸನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
- ಮಾರ್ಚ್ 20 (ಬುಧವಾರ) -ಅಮಲಕಿ ಏಕಾದಶಿ: ಪ್ರತಿಯೊಂದು ಏಕಾದಶಿಯೂ ಸಹ ಅದರದ್ದೇ ಆದ ಮಹತ್ವವನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ ಫಾಲ್ಗುಣ ಮಾಸದ ಅಮಲಕಿ ಏಕಾದಶಿಯನ್ನು ಮಾರ್ಚ್ 20 ರಂದು ಆಚರಣೆ ಮಾಡಲಾಗುತ್ತದೆ. ಈ ವೃತವನ್ನು ಹಿಂದೂಗಳಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದನ್ನು ಭಕ್ತಿಯಿಂದ ಆಚರಿಸುವವರಿಗೆ ಅದೃಷ್ಟ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.
- ಮಾರ್ಚ್ 21 (ಗುರುವಾರ) -ನರಸಿಂಹ ದ್ವಾದಶಿ: ಭಗವಾನ್ ವಿಷ್ಣುವಿನ ಭಕ್ತರು ನರಸಿಂಹ ದ್ವಾದಶಿ ವ್ರತವನ್ನು ಆಚರಿಸುತ್ತಾರೆ. ಈ ದ್ವಾದಶಿಯನ್ನು ಗೋವಿಂದ ದ್ವಾದಶಿ ಎಂದೂ ಸಹ ಕರೆಯಲಾಗುತ್ತದೆ. ಈ ಹಬ್ಬ ಅಥವಾ ವ್ರತವನ್ನು ಪಾಲ್ಗುಣ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ಆಚರಿಸಲಾಗುತ್ತದೆ. ಭಕ್ತರು ಈ ದಿನ ನರಸಿಂಹ ದೇವರ ಪೂಜೆ ಮಾಡುವ ಮೂಲಕ ಮಂತ್ರಗಳನ್ನು ಪಠಿಸುತ್ತಾರೆ ಜೊತೆಗೆ ಧೈರ್ಯ, ಶಕ್ತಿ, ಇಚ್ಛಾಶಕ್ತಿ ಇತ್ಯಾದಿಗಳನ್ನು ನೀಡುವಂತೆ ಪ್ರಾರ್ಥಿಸುತ್ತಾರೆ.
- ಮಾರ್ಚ್ 24 (ಭಾನುವಾರ) -ಫಾಲ್ಗುಣ ಹುಣ್ಣಿಮೆ ಅಥವಾ ಪೂರ್ಣಿಮೆ ವ್ರತ: ಫಾಲ್ಗುಣ ಮಾಸವು ಹಿಂದೂ ಕ್ಯಾಲೆಂಡರ್‌ನ ಕೊನೆಯ ಮಾಸವಾಗಿದೆ. ಹೋಳಿ ಹಬ್ಬವು ಫಾಲ್ಗುಣ ಪೂರ್ಣಿಮೆ ಅಥವಾ ಹುಣ್ಣಿಮೆಯ ಮರುದಿನ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು ಈ ದಿನದಂದು ಭೂಮಿಯಲ್ಲಿ ಕಾಣಿಸಿಕೊಂಡಳು ಎನ್ನಲಾಗುತ್ತದೆ. ಈ ಕಾರಣಕ್ಕಾಗಿ ಫಾಲ್ಗುಣ ಹುಣ್ಣಿಮೆ ದಿನದಂದು ಲಕ್ಷ್ಮೀ ಜಯಂತಿಯನ್ನು ಕೂಡ ಆಚರಿಸಲಾಗುತ್ತದೆ.
- ಮಾರ್ಚ್ 26 (ಮಂಗಳವಾರ) -ಚೈತ್ರ ಮಾಸ ಪ್ರಾರಂಭ: ಅಮಾವಾಸ್ಯೆಯ ನಂತರ ಚಂದ್ರನು ಮೇಷ ಮತ್ತು ಅಶ್ವಿನಿ ರಾಶಿಗಳಲ್ಲಿ ಕಾಣಿಸಿಕೊಂಡು 15ನೇ ದಿನ ಚಿತ್ರಾ ನಕ್ಷತ್ರದಲ್ಲಿ ಪರಿಪೂರ್ಣತೆಯನ್ನು ಹೊಂದಿ, ಪ್ರತಿದಿನವೂ ಹೆಚ್ಚಾಗುವುದರಿಂದ ಆ ಮಾಸಕ್ಕೆ ‘ಚೈತ್ರ’ ಎಂದು ಹೆಸರು. ಈ ಬಾರಿ ಮಾರ್ಚ್ 26 ರಂದು ಚೈತ್ರ ಮಾಸ ಆರಂಭವಾಗಲಿದೆ.
- ಮಾರ್ಚ್ 28 (ಗುರುವಾರ) -ಭಾಲಚಂದ್ರ ಸಂಕಷ್ಟಿ ಚತುರ್ಥಿ: ಗಣೇಶನ ಆಶೀರ್ವಾದ ಪಡೆಯಲು ಬಯಸುವವರು ಭಾಲಚಂದ್ರ ಸಂಕಷ್ಟ ಚತುರ್ಥಿ ಉಪವಾಸವನ್ನು ಮಾಡುವುದು ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ಭಾಲಚಂದ್ರ ಸಂಕಷ್ಟ ಚತುರ್ಥಿ ವ್ರತವನ್ನು ಮಾರ್ಚ್ 28 ರಂದು ಆಚರಣೆ ಮಾಡಲಾಗುತ್ತದೆ. ಯಾವ ವ್ಯಕ್ತಿ ಭಾಲಚಂದ್ರ ಸಂಕಷ್ಟ ಚತುರ್ಥಿ ದಿನದಂದು ಉಪವಾಸ ವ್ರತವನ್ನು ಮಾಡಿ, ಗಣೇಶನನ್ನು ಪೂಜಿಸುತ್ತಾರೋ ಅಂತಹ ವ್ಯಕ್ತಿಯು ಬೇಡಿದ ವರವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
- ಮಾರ್ಚ್ 30 (ಶನಿವಾರ) ರಂಗ ಪಂಚಮಿ: ಹೋಳಿ ಹಬ್ಬದ ನಂತರ ರಂಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಣ್ಣಿಮೆಯ ಐದು ದಿನದ ನಂತರ ಪಂಚಮಿಯಂದು ಕಾಮಣ್ಣನ ದಹನ ಮಾಡುವ ಮೂಲಕ ರಂಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ರಂಗ ಪಂಚಮಿ ಮಾರ್ಚ್ 30 ರಂದು ಆಚರಿಸಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:01 pm, Thu, 29 February 24