ಮಂಗಳೂರು, ಸೆ.19: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ(Ganesha Chaturthi) ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ, ಏರಿಯಾಗಳಲ್ಲಿ ಗಣಪತಿಯನ್ನು ಕೂರಿಸಿ ಜನ ಸಂಭ್ರಮಿಸುತ್ತಿದ್ದಾರೆ. ಇನ್ನು ಗಣೇಶ ಹಬ್ಬಕ್ಕೆ ಕಬ್ಬು(Sugarcane) ಅತ್ಯಗತ್ಯ. ಮಂಗಳೂರಿನ ಈ ಚಿಕ್ಕ ಹಳ್ಳಿ ಇಡೀ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಕಬ್ಬು ಪೂರೈಸುತ್ತಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಳ್ಕುಂಜೆ ಎಂಬ ಪುಟ್ಟ ಗ್ರಾಮವು ಎರಡೂ ಜಿಲ್ಲೆಗಳ ಕಬ್ಬಿನ ಅಗತ್ಯವನ್ನು ಪೂರೈಸುತ್ತಿದೆ. ಈ ಗ್ರಾಮದಲ್ಲಿ 45ಕ್ಕೂ ಹೆಚ್ಚು ರೈತ ಕುಟುಂಬಗಳು ಕಬ್ಬು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಸುಮಾರು 2 ರಿಂದ 2.50 ಲಕ್ಷದಷ್ಟು ಕಬ್ಬು ಬರೀ ಈ ಗ್ರಾಮದಲ್ಲಿಯೇ ಬೆಳೆಸಲಾಗುತ್ತಿದೆಯಂತೆ.
ಚೌತಿ ಹಬ್ಬಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಶೇಕಡ 90ರಷ್ಟು ಕಬ್ಬು ಈ ಗ್ರಾಮದಿಂದಲೇ ಸರಬರಾಜಾಗುತ್ತದೆ. ಕಬ್ಬನ್ನು ಮುಖ್ಯವಾಗಿ ಕ್ರಿಶ್ಚಿಯನ್ನರ ಸುಗ್ಗಿಯ ಹಬ್ಬಕ್ಕೆಂದು (ಮಾಂತಿ ಹಬ್ಬ) ಇಲ್ಲಿ ಬೆಳೆಯಲಾಗುತ್ತದೆ. ಹಾಗೂ ಗಣೇಶ ಚತುರ್ಥಿ ಹಬ್ಬಕ್ಕಾಗಿ ಇಲ್ಲಿನ ಕಬ್ಬಿಗೆ ಬೇಡಿಕೆ ಹೆಚ್ಚಿರುತ್ತದೆ. ರೈತರು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಬ್ಬಿನ ಬಿತ್ತನೆಯನ್ನು ಪ್ರಾರಂಭಿಸುತ್ತಾರೆ ಮತ್ತು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬೆಳೆ ಕಟಾವು ಮಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳ ಮೇಲೆ ಬಿದ್ದು ಯುವಕ ಗಂಭೀರ ಗಾಯ
ಜೂನ್ ತಿಂಗಳಿನಲ್ಲಿಯೇ ಕಬ್ಬಿನ ವ್ಯಾಪಾರಸ್ಥರು ಬಳ್ಕುಂಜೆಗೆ ಭೇಟಿ ನೀಡಿ ತಮಗೆ ಬೇಕಾದ ಕಬ್ಬಿನ ಪ್ರಮಾಣವನ್ನು ಮುಂಗಡವಾಗಿ ಆರ್ಡರ್ ಮಾಡಿ ಅಡ್ವಾನ್ಸ್ ನೀಡುತ್ತಾರೆ . 12 ಕಬ್ಬಿನ ಬಂಡಲ್ ಅನ್ನು ವ್ಯಾಪಾರಿಗಳಿಗೆ ನೀಡಲಾಗುತ್ತದೆ. ಅದನ್ನೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸಾರ್ವಜನಿಕರಿಗೆ ಮಾರುತ್ತಾರೆ.
ಬಳ್ಕುಂಜೆ ರೈತರು ಕಳೆದ 40 ವರ್ಷಗಳಿಂದ ಸಂಪೂರ್ಣವಾಗಿ ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬು ಕಟಾವು ಮಾಡಿದ ನಂತರ ಕಬ್ಬು ಕಡಿಯುವ ಕೆಲಸವನ್ನು ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರು ಮಾಡುತ್ತಾರೆ. ಈ ವರ್ಷ ಕಪ್ಪು ತಳಿಯ ಕಬ್ಬಿಗೆ 25 ರೂ. ಬೆಲೆ ಸಿಕ್ಕಿದ್ದು, ಬಿಳಿ ಕಬ್ಬು 35 ರೂ.ಗೆ ಮಾರಾಟವಾಗುತ್ತಿದೆ. ಎಕರೆಗೆ ಸುಮಾರು 10,000-15,000 ಕಬ್ಬು ಬೆಳೆಯಲಾಗಿದೆ. ಇದು ಬಳ್ಕುಂಜೆಯ ರೈತ ಕುಟುಂಬಗಳ ಮುಖ್ಯ ಆದಾಯ. ಇನ್ನು ಕಬ್ಬು ಬೆಳೆದ ಗದ್ದೆಯಲ್ಲಿ ಮುಂದಿನ ಬಾರಿ ಭತ್ತ ಬೆಳೆಯಲಾಗುತ್ತದೆ. ಹಾಗಾಗಿ ಎರಡೂ ಬೆಳೆ ಸಮೃದ್ಧವಾಗಿ ಆಗುತ್ತದೆ ಎಂದು ನಲವತ್ತು ವರುಷಗಳಿಂದ ಕಬ್ಬು ಬೆಳೆಯುತ್ತಿರುವ ರೈತರೊಬ್ಬರು ತಿಳಿಸಿದರು. ಮಂಗಳೂರು, ಪುತ್ತೂರು, ಉಡುಪಿ, ಬಂಟ್ವಾಳ, ಕಡಬ, ನೆಲ್ಯಾಡಿ, ಕಾರ್ಕಳ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಚರ್ಚ್‌ಗಳಿಗೆ ಇಲ್ಲಿನ ಕಬ್ಬನ್ನು ನೀಡಲಾಗುತ್ತದೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:10 pm, Tue, 19 September 23