Daily Devotional: ಸಹವಾಸ ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತೇ ಗೊತ್ತಾ?
ಡಾ. ಬಸವರಾಜ್ ಗುರುಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸಹವಾಸದ ಮಹತ್ವವನ್ನು ವಿವರಿಸಿದ್ದಾರೆ. ಉತ್ತಮ ಸಹವಾಸ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ, ಆದರೆ ಕೆಟ್ಟ ಸಹವಾಸ ನಾಶಕ್ಕೆ ಕಾರಣವಾಗಬಹುದು. ಸತ್ಸಂಗ ಮತ್ತು ಸಜ್ಜನರ ಸಹವಾಸದ ಮಹತ್ವವನ್ನು ಒತ್ತಿ ಹೇಳುತ್ತಾ, ಪೋಷಕರು ಮತ್ತು ಮಕ್ಕಳು ಸಹವಾಸದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸಹವಾಸದ ಪ್ರಭಾವದ ಬಗ್ಗೆ ಆಳವಾಗಿ ವಿವರಿಸಿದ್ದಾರೆ. ಜೀವನದಲ್ಲಿ ಯಶಸ್ಸು ಮತ್ತು ವಿಫಲತೆಗಳ ಹಿಂದಿನ ಅನೇಕ ಅಂಶಗಳಿವೆ. ಅದೃಷ್ಟ, ಜಾತಕ, ದೈವಬಲ, ವ್ಯಕ್ತಿಯ ನಡವಳಿಕೆಗಳು ಮತ್ತು ಪೂರ್ವಿಕರ ಆಸ್ತಿಗಳು ಇದರಲ್ಲಿ ಸೇರಿವೆ. ಆದರೆ, ಗುರೂಜಿ ಒತ್ತಿ ಹೇಳುವ ಪ್ರಮುಖ ಅಂಶವೆಂದರೆ ವ್ಯಕ್ತಿಯ ಸಹವಾಸ. ಯಾರ ಜೊತೆ ಸಂವಾದ ನಡೆಸುತ್ತೇವೆ, ಸಮಯ ಕಳೆಯುತ್ತೇವೆ ಎಂಬುದು ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸುತ್ತಾರೆ.
ಕೆಲವು ಸಹವಾಸಗಳು ಜೈಲು ಪಾಲಾಗಲು ಕಾರಣವಾಗಬಹುದು, ಜೀವನವನ್ನು ಹಾಳು ಮಾಡಬಹುದು. ಆದರೆ, ಉತ್ತಮ ಸಹವಾಸವು ದೇಶದಲ್ಲೇ ಉನ್ನತ ವ್ಯಕ್ತಿಯಾಗಲು ಸಹಾಯ ಮಾಡಬಹುದು. ಈ ವ್ಯತ್ಯಾಸವು ಸಹವಾಸದ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಸಹವಾಸವನ್ನು “ಹತ್ತಿರವಾಸ” ಎಂದು ಕರೆಯುವುದು ಸೂಕ್ತ. ಏಕೆಂದರೆ, ಹತ್ತಿರದ ಸಂಬಂಧಗಳು ನಮ್ಮ ಜೀವನವನ್ನು ಆಳವಾಗಿ ಪ್ರಭಾವಿಸುತ್ತವೆ. ಈ ಸಹವಾಸದಿಂದ ಸರ್ವನಾಶ ಅಥವಾ ಸಮೃದ್ಧಿ ಎರಡೂ ಉಂಟಾಗಬಹುದು.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಈ ಪುರಾತನ ದೇವಾಲಯದಲ್ಲಿದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ!
ಎಷ್ಟೇ ಜ್ಞಾನಿ ಅಥವಾ ಕಲಿತ ವ್ಯಕ್ತಿಯಾದರೂ, ಕೆಟ್ಟ ಸಹವಾಸದಿಂದ ಅವರ ಜ್ಞಾನ, ಬುದ್ಧಿ, ತಿಳುವಳಿಕೆ ಮತ್ತು ಜೀವನವೇ ಹಾಳಾಗಬಹುದು. ಆದ್ದರಿಂದ, ಸಹವಾಸದ ಬಗ್ಗೆ ಜಾಗರೂಕರಾಗಿರಬೇಕು. ಸತ್ಸಂಗ, ಅಥವಾ ಉತ್ತಮ ವ್ಯಕ್ತಿಗಳ ಸಹವಾಸ, ಅತ್ಯಂತ ಮುಖ್ಯ. ಆದಿಶಂಕರಾಚಾರ್ಯರು “ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನ್ಮುಕ್ತಿ” ಎಂದು ಹೇಳಿದ್ದಾರೆ. ಸಜ್ಜನರ ಸಹವಾಸವು ಹೆಜ್ಜೆಯನ್ನು ಸವಿದಂತೆ ಎಂದು ಹೇಳಬಹುದು. ಮಕ್ಕಳು ಒಳ್ಳೆಯ ವಿದ್ಯಾರ್ಥಿಗಳ ಜೊತೆ ಇದ್ದಾಗ ಚೆನ್ನಾಗಿ ಓದುತ್ತಾರೆ, ಕೆಟ್ಟ ಸಹವಾಸದಿಂದ ದುರ್ವ್ಯಸನಗಳಿಗೆ ಬಲಿಯಾಗುತ್ತಾರೆ. ಪೋಷಕರು ಮಕ್ಕಳ ಸಹವಾಸದ ಬಗ್ಗೆ ಗಮನ ಹರಿಸಬೇಕು. ಸತ್ಸಂಗ ದೊಡ್ಡ ಆಶೀರ್ವಾದ. ಸಕ್ಕರೆಯ ಸಹವಾಸದಿಂದ ಹಾಲು ಸಿಹಿಯಾಗುತ್ತದೆ, ಹುಳಿಯ ಸಹವಾಸದಿಂದ ಹಾಲು ಒಡೆಯುತ್ತದೆ ಎಂಬ ಉದಾಹರಣೆಯ ಮೂಲಕ ಗುರೂಜಿ ಸಹವಾಸದ ಪ್ರಭಾವದ ಬಗ್ಗೆ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 am, Sat, 7 June 25








