ಗಣೇಶನ ಜತೆಗೆ ಹೆಣೆದುಕೊಂಡ ಕಥೆಗಳು ಹಲವಾರು. ಒಂದೊಂದು ಸಂದರ್ಭವೂ ಒಂದೊಂದು ಕಥೆಯನ್ನು ಹೇಳುತ್ತದೆ. ಚಂದ್ರ ಮತ್ತು ಗಣೇಶ, ಪಾರ್ವತಿ ಸುತ, ಹಾವು ಹೊಟ್ಟೆಗೆ ಸುತ್ತಿಕೊಂಡ ಕಥೆ, ಗಜಮುಖನಾದ ಸನ್ನಿವೇಶ, ಮೊದಲ ಪೂಜೆ ಮಾಡಿಸಿಕೊಳ್ಳುವ ದೇವರು, ಗಣಪತಿಯ ವಾಹನವಾದ ಇಲಿ ಎಲ್ಲವೂ ಕೂಡ ಏಕದಂತನ ಸುತ್ತ ಸುತ್ತುವ ಕಥಾ ಹಂದರ. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ(Ganesha Chaturthi 2021) ಬರುತ್ತಿದೆ. ಈ ಸಂದರ್ಭದಲ್ಲಿ ಮೊದಕ ಪ್ರಿಯನ ಬಗೆಗೆ ಒಂದಿಷ್ಟು ತಿಳಿದುಕೊಳ್ಳುವುದು ಸೂಕ್ತ. ಅದರಲ್ಲೂ ಗಣಪತಿಯ ವಾಹನವಾದ ಮೂಷಿಕನ ಕಥೆ ಬಗ್ಗೆ ತಿಳಿಯುವುದು ಬಲು ಮುಖ್ಯ.
ದೇವಾನು ದೇವತೆಗಳ ಕಥೆಗಳ ಬಗ್ಗೆ ನೋವು ಓದಿದಾಗ ತಿಳಿಯುವುದೇನೆಂದರೆ ಎಲ್ಲಾ ದೇವರು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿದ್ದಾರೆ. ಆದರೆ ಗಣೇಶ ಮಾತ್ರ ಸಣ್ಣ ಇಲಿಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಅದು ಹೇಗೆ ಇಷ್ಟು ದೊಡ್ಡ ಗಣೇಶ ಪುಟ್ಟ ಇಲಿಯನ್ನು ವಾಹನವಾಗಿಸಿಕೊಂಡ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇನ್ನು ಇದು ಏಕೆ ಎಂದು ಹಲವರಲ್ಲಿ ಇನ್ನೂ ಕೂಡ ಗೊಂದಲಿ ಇದೆ. ಅದಕ್ಕೆ ಉತ್ತರ ಇಲ್ಲಿದೆ.
ಋಷಿಯಿಂದ ಶಾಪ ಪಡೆದ ಕ್ರೌಂಚ
ಜನಪ್ರಿಯ ದಂತಕಥೆಯ ಪ್ರಕಾರ, ಗಣಪತಿ ಸವಾರಿ ಮಾಡುವ ಮೂಷಿಕ ಹಿಂದಿನ ಜನ್ಮದಲ್ಲಿ ದೈತ್ಯಾಕಾರದ ಕ್ರೌಂಚ ಎಂಬ ಹೆಸರಿನ ಪುರುಷನಾಗಿದ್ದ. ಒಮ್ಮೆ ಇಂದ್ರ ದೇವನು ತನ್ನ ಆಸ್ಥಾನದಲ್ಲಿ ಎಲ್ಲಾ ಋಷಿ ಮುನಿಗಳನ್ನು ಕರೆದಿರುತ್ತಾನೆ. ಈ ಸಭೆಗೆ ಕ್ರೌಂಚ ಸಹ ಬಂದಿರುತ್ತಾನೆ. ಈ ವೇಳೆ ತನಗೆ ಅರಿವಿಗೆ ಬರದಂತೆ ಕ್ರೌಂಚ ವಾಮದೇವನೆಂಬ ಮುನಿಯ ಪಾದವನ್ನು ತುಳಿದುಬಿಡುತ್ತಾನೆ. ಇದರಿಂದ ಕೋಪಗೊಂಡ ವಾಮದೇವ ಉದ್ದೇಶ ಪೂರ್ವಕವಾಗಿಯೇ ನನ್ನ ಪಾದ ತುಳಿದಿದ್ದೀಯಾ ಎಂದು ನೀನು ಮೂಷಿಕನಾಗು ಎಂದು ಶಾಪ ನೀಡುತ್ತಾನೆ.
ಬಳಿಕ ಕ್ರೌಂಚ ಕ್ಷಮೆಯಾಚಿಸಿದಾಗ, ವಾಮದೇವ ಮುನಿಗಳು ಶಾಂತರಾಗಿ. ಒಮ್ಮೆ ಕೊಟ್ಟ ಶಾಪ ಹಿಂಪಡೆಯಲು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನೀನು ಶಿವನ ಮಗನಾದ ಗಣೇಶನ ವಾಹನವಾಗು, ಆಗ ನೀನು ಶಾಪದಿಂದ ಮುಕ್ತನಾಗುವೆ ಎಂದು ತಿಳಿಸುತ್ತಾರೆ.
ಅದರಂತೆ ಕ್ರೌಂಚ ಇಲಿಯಾಗುತ್ತಾನೆ. ಆದರೆ ಕ್ರೌಂಚ ಸಾಧಾರಣ ಇಲಿಯಾಗಿರಲಿಲ್ಲ ಬೃಹತ್ತಾಕಾರದ ಇಲಿಯಾಗಿರುತ್ತಾನೆ. ಬೆಟ್ಟಗಳನ್ನು ತಿನ್ನುವುದು, ಕಾಡಿನಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುವುದನ್ನು ಮಾಡುತ್ತಿರುತ್ತಾನೆ. ಇದೇ ಸಮಯದಲ್ಲಿ ಋಷಿ ಪರಾಶರರು ಮತ್ತು ಅವರ ಪತ್ನಿಗೂ ತೊಂದರೆ ಕೊಡುವ ಈ ಇಲಿ. ಅವರ ಗುಡಿಸಲನ್ನು ನಾಶ ಮಾಡುತ್ತದೆ. ಹೀಗಾಗಿ ಶಿವನ ಬಳಿ ಊರಿನ ಜನರು ತಮಗಾಗುತ್ತಿರುವ ಅಪಾಯದ ಬಗ್ಗೆ ತಿಳಿಸುತ್ತಾರೆ.
ಆಗ ಶಿವ ಇಲಿಯನ್ನು ಹಿಡಿದು ಅದಕ್ಕೆ ತಕ್ಕ ಬುದ್ದಿ ಕಲಿಸಲು ಗಣೇಶನಿಗೆ ತಿಳಿಸುತ್ತಾನೆ. ಗಣೇಶ ಕುಣಿಕೆಯನ್ನು ಎಸೆದು ಇಲಿ ತನ್ನ ಬಳಿ ಬಂದು ಬೀಳುವಂತೆ ಮಾಡುತ್ತಾನೆ. ದೊಡ್ಡ ವಿನಾಶಕ್ಕೆ ಕಾರಣವಾದ ಇಲಿ ತನ್ನ ತಪ್ಪಿನ ಅರಿವಾಗಿ, ಗಣೇಶನ ಬಳಿ ಕ್ಷಮೆಯಾಚಿಸುತ್ತದೆ. ಆಗ ಗಣಪತಿ ಮೂಷಿಕನನ್ನು ತನ್ನ ವಾಹನವನ್ನಾಗಿ ಮಾಡಿ ಅದರಲ್ಲಿ ಏರಿ ಕುಳಿತುಕೊಳ್ಳುತ್ತಾನೆ. ಅಂದಿನಿಂದ ಗಣೇಶ ಮೂಷಿಕ ವಾಹನನ ಪ್ರಯಾಣ ಆರಂಭವಾಗುತ್ತದೆ.
ಇದನ್ನೂ ಓದಿ:
ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ
ಮಂಡ್ಯ: ಪ್ರಳಯ ಸೂಚಕ ಗಣಪ; ಹಲವು ವೈಶಿಷ್ಟ್ಯ ಹಾಗೂ ವೈವಿಧ್ಯಕ್ಕೆ ಹೆಸರಾದಂತಹ ಧಾರ್ಮಿಕ ಕ್ಷೇತ್ರ
Published On - 9:16 am, Wed, 8 September 21