ಪ್ರತಿ ತಿಂಗಳು ಎರಡು ಪ್ರದೋಷ ವ್ರತಗಳಿರುತ್ತವೆ. ಒಂದು ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಶುಕ್ಲ ಪಕ್ಷದಲ್ಲಿ. ಮಾರ್ಗಶಿರ ಅಥವಾ ಅಘನ್ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಅಂದರೆ 2021ರ ಡಿಸೆಂಬರ್ 16ರ ಗುರುವಾರ ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ಪ್ರದೋಷ ಉಪವಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ಬಾರಿಯ ಪ್ರದೋಷ ವ್ರತವನ್ನು ಗುರುವಾರ ಆಚರಿಸುವುದರಿಂದ, ಇದನ್ನು ಗುರು ಪ್ರದೋಷ ವ್ರತ 2021 ಎಂದು ಕರೆಯಲಾಗುತ್ತದೆ. ಪ್ರದೋಷ ವ್ರತದ ಪೂಜೆಯನ್ನು ಯಾವಾಗಲೂ ಪ್ರದೋಷ ಕಾಲದಲ್ಲಿ ಮಾತ್ರ ಮಾಡಲಾಗುತ್ತೆ. ಈ ದಿನ ಮಾತಾ ಪಾರ್ವತಿ ಮತ್ತು ಶಿವನನ್ನು ಪೂಜಿಸುವುದರಿಂದ ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗುತ್ತದೆ ಎಂಬ ನಂಬಿಕೆಗಳಿವೆ.
2021 ಗುರು ಪ್ರದೋಷ ವ್ರತ ಶುಭ ತಿಥಿ
ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನಾಂಕವು ಇಂದು ಡಿಸೆಂಬರ್ 15 ರ ಬುಧವಾರದಂದು ಮಧ್ಯಾಹ್ನ 02:01 ಕ್ಕೆ ಪ್ರಾರಂಭವಾಗುತ್ತದೆ. ಇದು ಶುಕ್ರವಾರ, ಡಿಸೆಂಬರ್ 17 ರಂದು ಬೆಳಿಗ್ಗೆ 04:40 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 16 ರ ಗುರುವಾರದಂದು ಪ್ರದೋಷ ವ್ರತ ಪೂಜೆಯ ಮುಹೂರ್ತವನ್ನು ನಿಗಧಿಪಡಿಸಲಾಗಿದೆ. ಹೀಗಾಗಿ ಪ್ರದೋಷ ವ್ರತವನ್ನು ಡಿಸೆಂಬರ್ 16 ರಂದು ಆಚರಿಸಲಾಗುತ್ತದೆ.
2021 ಗುರು ಪ್ರದೋಷ ವ್ರತ ಪೂಜೆ ಮುಹೂರ್ತ
ಪ್ರದೋಷ ಕಾಲ ಸಂಜೆ 05.27 ರಿಂದ ರಾತ್ರಿ 08.11 ರವರೆಗೆ. ಪ್ರದೋಷ ವ್ರತ ಮಾಡುವವರು ಈ ಸಮಯದಲ್ಲಿ ಕ್ರಮಬದ್ಧವಾಗಿ ಶಿವನನ್ನು ಪೂಜಿಸಬೇಕು.
ಈ ದಿನ ಬ್ರಹ್ಮಿ ಮುಹೂರ್ತದಲ್ಲಿ ಎದ್ದು ಗಂಗಾಜಲದಿಂದ ಸ್ನಾನ ಮಾಡಿ ಭಗವಾನ್ ಸೂರ್ಯನಿಗೆ ಜಲವನ್ನು ಅರ್ಪಿಸಿ ಪ್ರಾರ್ಥನೆಯನ್ನು ಪ್ರಾರಂಭಿಸಬೇಕು. ನಂತರ ಶಿವ ಚಾಲೀಸಾ ಮತ್ತು ಮಂತ್ರಗಳನ್ನು ಪಠಿಸಬೇಕು. ಶಿವ ಮತ್ತು ಪಾರ್ವತಿ ದೇವಿಗೆ ಹೂವು, ಧೂಪ, ಹಣ್ಣು, ದಾತುರಾವನ್ನು, ಹಾಲು, ಮೊಸರು ಮತ್ತು ಪಂಚಾಮೃತವನ್ನು ಅರ್ಪಿಸಬೇಕು. ಕೊನೆಗೆ ಆರತಿ ಮಾಡಿ ಸಮೃದ್ಧಿ, ಯಶಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಬೇಕು. ಇಡೀ ದಿನ ಉಪವಾಸ ಮಾಡಿ ಆರತಿ ಮಾಡುವ ಮೂಲಕ ದಿನವನ್ನು ಮುಕ್ತಾಯಗೊಳಿಸಬೇಕು. ಈ ರೀತಿ ದೇವರನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಸಿಗುತ್ತದೆ. ಮಹಿಳೆಯರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.
ಪ್ರದೋಷ ಉಪವಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ
ಪೌರಾಣಿಕ ನಂಬಿಕೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ವಿಷವು ಹೊರಬಂದಾಗ, ಮಹಾದೇವನು ಬ್ರಹ್ಮಾಂಡವನ್ನು ಉಳಿಸಲು ಆ ವಿಷವನ್ನು ಸೇವಿಸಿದನು. ಆ ವಿಷ ಕುಡಿದ ತಕ್ಷಣ ಮಹಾದೇವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ವಿಷದ ಪ್ರಭಾವದಿಂದ ಮಹಾದೇವನ ದೇಹದಲ್ಲಿ ಸಹಿಸಿಕೊಳ್ಳಲಾಗದ ಉರಿ ಕಾಣಿಸಿಕೊಂಡಿತು. ಆ ಸಮಯದಲ್ಲಿ ದೇವತೆಗಳು ನೀರು, ಬೇಲ್ಪತ್ರ ಇತ್ಯಾದಿಗಳಿಂದ ಮಹಾದೇವನ ನೋವನ್ನು ಕಡಿಮೆ ಮಾಡಿದರು. ಮಹಾದೇವನು ವಿಷವನ್ನು ಕುಡಿದು ಜಗತ್ತನ್ನು ರಕ್ಷಿಸಿದನು, ಆದ್ದರಿಂದ ದೇವತೆಗಳು ಮತ್ತು ಲೋಕದ ಜನರು ಶಂಕರನಿಗೆ ಋಣಿಯಾದರು. ಆ ಸಮಯದಲ್ಲಿ ದೇವತೆಗಳು ಮಹಾದೇವನನ್ನು ಸ್ತುತಿಸಿದರು, ಇದರಿಂದ ಮಹಾದೇವನು ಬಹಳ ಸಂತೋಷಪಟ್ಟನು ಮತ್ತು ಅವನು ತಾಂಡವವನ್ನು ಮಾಡಿದನು. ಈ ಘಟನೆ ನಡೆದಾಗ ಅದು ತ್ರಯೋದಶಿ ತಿಥಿ ಮತ್ತು ಪ್ರದೋಷ ಕಾಲ. ಅಂದಿನಿಂದ ಈ ದಿನಾಂಕ ಮತ್ತು ಪ್ರದೋಷ ಕಾಲ ಮಹಾದೇವನಿಗೆ ಪ್ರಿಯವಾಯಿತು. ಇದರೊಂದಿಗೆ, ಮಹಾದೇವನನ್ನು ಮೆಚ್ಚಿಸಲು, ಭಕ್ತರು ಪ್ರದೋಷ ಕಾಲದಲ್ಲಿ ತ್ರಯೋದಶಿ ತಿಥಿಯಂದು ಪೂಜೆ ಮಾಡುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಮತ್ತು ಈ ಉಪವಾಸಕ್ಕೆ ಪ್ರದೋಷ ವ್ರತ ಎಂದು ಹೆಸರಾಯಿತು.
ಇದನ್ನೂ ಓದಿ: Pradosh Vrat November 2021: ಮಂಗಳ ಪ್ರದೋಷ ವ್ರತ – ಶಿವ ಪಾರ್ವತಿ ಕೃಪೆ ಬೀರುವ ವ್ರತದ ಮಹತ್ವ ಏನು?