ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸಿ ಒಂದು ತಿಂಗಳು ಕಾಲ ಸಂಚರಿಸುತ್ತಾನೆ. ಹಾಗಾಗಿ ಈ ತಿಂಗಳನ್ನು ಧನುರ್ಮಾಸ ಎನ್ನಲಾಗುತ್ತದೆ. ಇದರ ಜತೆ ಗಡಗುಟ್ಟಿಸುವ ಚಳಿಯು ಮನುಷ್ಯನನ್ನು ಬಾಧಿಸುತ್ತದೆ. ಚಳಿಗೆ ಮನುಷ್ಯನು ಬಿಲ್ಲಿನಂತೆ (ಧನಸ್ಸು) ಬಾಗಿ ಮುದುಡಿ ಮಲಗುತ್ತಾನೆ. ಧನುರ್ಮಾಸದ ಅರ್ಥವನ್ನು ಹೀಗೆಯೂ ವ್ಯಾಖ್ಯಾನಿಸಬಹುದು.
ಸೂರ್ಯನು ಗುರುವಾರ (ಡಿ 16) ಧನಸ್ಸು ರಾಶಿಯನ್ನು ಪ್ರವೇಶಿಸಿದ್ದು, ಶುಕ್ರವಾರದಿಂದ (ಡಿ 17) ಧನುರ್ಮಾಸ ಪೂಜೆ ಆರಂಭವಾಗುತ್ತದೆ. ದೇವತೆಗಳಿಗೆ ಉತ್ತರಾಯಣ ಹಗಲಾಗಿದ್ದು, ದಕ್ಷಿಣಾಯನ ರಾತ್ರಿಯಾಗಿದೆ. ದಕ್ಷಿಣಾಯನ ಪುಣ್ಯಕಾಲದಲ್ಲಿ (ಕಟಕ ಸಂಕ್ರಮಣದ) ಬರುವ ಆಷಾಢ ಮಾಸದ ಪ್ರಥಮ ಏಕಾದಶಿಯಂದು ಯೋಗನಿದ್ರೆಗೆ ಜಾರುವ ಶ್ರೀಹರಿ, ಉತ್ಥಾನ ದ್ವಾದಶಿಯಂದು ಮೇಲೇಳುತ್ತಾನೆ. ಧನುರ್ಮಾಸದ ನಂತರ ಮಕರಸಂಕ್ರಮಣ ನಡೆಯಲಿದ್ದು, ಅಂದಿನಿಂದ ಉತ್ತರಾಯಣ. ಇದು ದೇವತೆಗಳಿಗೆ ಹಗಲಾದ ಕಾರಣ, ಧನುರ್ಮಾಸ ಅರುಣೋದಯ ಕಾಲ. ಈ ಸಮಯದಲ್ಲಿ ಶ್ರೀಹರಿಯನ್ನು ಪೂಜಿಸಲು ಪ್ರಶಸ್ತ ಕಾಲ ಎನಿಸಿದೆ.
ಈ ಒಂದು ತಿಂಗಳ ಕಾಲ ಮುಂಜಾನೆ ಎದ್ದು, ಸ್ನಾನ ಮಾಡಿ ಶುಚಿರ್ಭೂತರಾಗಿ ದೇವರ ಪೂಜೆ ಮಾಡಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ ಎನಿಸುತ್ತದೆ. ಶಾಸ್ತ್ರಕಾರರ ಪ್ರಕಾರ ಸೂರ್ಯೋದಯದ ನಂತರದ ಪೂಜೆಗೆ ಫಲ ಕಡಿಮೆ. ಹಾಗಾಗಿ ಈ ತಿಂಗಳಲ್ಲಿ ಭೂಮಿಪೂಜೆ, ಗೃಹಪ್ರವೇಶ, ಮದುವೆ ಮತ್ತಿತರ ಶುಭಕಾರ್ಯ ನಡೆಸುವಂತಿಲ್ಲ.
ಈ ತಿಂಗಳಲ್ಲಿ ಪ್ರತಿನಿತ್ಯ ದೇವರಿಗೆ ಮುದ್ಗಾನ್ನದ (ಹೆಸರು ಬೇಳೆ ಹುಗ್ಗಿ) ನೈವೇದ್ಯ ಸಮರ್ಪಿಸಬೇಕು. ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಬೇಯಿಸಿ, ಇದರ ಜತೆ ಸ್ವಲ್ಪ ಬೆಲ್ಲ, ಶುಂಠಿ, ತುಪ್ಪ, ಮೆಣಸು ಸೇರಿಸಿ ಹುಗ್ಗಿ ತಯಾರಿಸಬೇಕು. ಕೆಲವರು ಜೀರಿಗೆ, ತುಪ್ಪ ಅಥವಾ ಬೆಣ್ಣೆಯಲ್ಲಿ ಹುರಿದ ಗೇರುಬೀಜ (ಗೋಡಂಬಿ) ಮಿಶ್ರಣ ಮಾಡುತ್ತಾರೆ. ಬೆಣ್ಣೆ ಸೇರಿಸಿ ಮಾಡುವ ಹುಗ್ಗಿಯನ್ನು ತಮಿಳುನಾಡಿನಲ್ಲಿ ವೆಣ್ ಪೊಂಗಲ್ ಎನ್ನುತ್ತಾರೆ. ಈ ಹುಗ್ಗಿಯ ಜೊತೆಗೆ ಹುಣಿಸೆ ಗೊಜ್ಜು ಸೇರಿಸಿ ಸವಿದರೆ ಆಹ್ಹಾ, ರುಚಿಯೋ ರುಚಿ.
ಹುಗ್ಗಿ ಸೇವಿಸಲು ಕೆಲ ವೈಜ್ಞಾನಿಕ ಕಾರಣಗಳೂ ಇವೆ. ಧನುರ್ಮಾಸ ಹೇಮಂತ ಋತುವಿನ ತಿಂಗಳು, ಅತಿ ತೀಕ್ಷ್ಣವಾದ ಚಳಿಗಾಲ. ಈ ವೇಳೆ ಬೀಳುವ ಇಬ್ಬನಿ ನಮ್ಮ ದೇಹದ ಸ್ವೇದಬಿಂದುಗಳ ಮೂಲಕ ಒಳ ಸೇರುವಷ್ಟು ಪ್ರಭಾವಶಾಲಿ. ಈ ತಿಂಗಳಲ್ಲಿ ಸುರಿವ ಹಿಮದಿಂದ ಮುಂಜಾನೆ ಎದ್ದು ಧಾರ್ಮಿಕ ಕಾರ್ಯದಲ್ಲಿ ತೊಡಗುವ ಜನರ ಜತೆ ಉಳಿದವರ ಕೈ, ಕಾಲು ಮುಖ ಒಡೆಯುವ ಸಾಧ್ಯತೆ ಹೆಚ್ಚು. ಅದರಲ್ಲೂ ನಮ್ಮ ದಕ್ಷಿಣ ಭಾರತದ ಸಾಕಷ್ಟು ಮಂದಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಉಷಃಕಾಲದಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಅಶ್ವತ್ಥಕಟ್ಟೆಯನ್ನು ಪ್ರದಕ್ಷಿಣೆ ಮಾಡುವುದು ವಾಡಿಕೆ. ಇವರ ಚರ್ಮ ಸುಕ್ಕಾಗುವುದು ಸಾಮಾನ್ಯ. ಇದಲ್ಲದೇ ಚಳಿ ಈ ಮಾಸದಲ್ಲಿ ಎಲ್ಲರ ದೇಹವನ್ನು ಬಿಲ್ಲಿನಂತೆ ಮುದುಡಿಸುತ್ತದೆ. ಹಾಗಾಗಿ ಈ ಎರಡೂ ಸಮಸ್ಯೆಗಳಿಂದ ಮುಕ್ತಿ ಕಾಣಲು ದೇಹಕ್ಕೆ ಹದವಾದ ಬಿಸಿ ಅಗತ್ಯವಿದೆ.
ಕೆಲ ಪದಾರ್ಥಗಳಲ್ಲಿ ಬಿಸಿಲು ಕಾಲದಲ್ಲಿ ತಂಪು ನೀಡುವ ಹಾಗೇಯೇ ಶೀತದಲ್ಲಿ ಉಷ್ಣತೆ ಒದಗಿಸುವ ಗುಣವಿದೆ. ಹೆಸರುಬೇಳೆಯಲ್ಲಿ ಇಂತಹ ಗುಣವಿದೆ. ಇದರ ಜತೆ ದೇಹ ಮತ್ತಷ್ಟು ಬಿಸಿ ಹಾಗೂ ಹುರುಪು ಬರಲು, ಮುಖದಲ್ಲಿ ಕಾಂತಿ ಹೆಚ್ಚಿಸುವುದರೊಂದಿಗೆ ಅಜೀರ್ಣ ತಡೆಯಲು ಉಳಿದ ಪದಾರ್ಥಗಳು ನೆರವಾಗುತ್ತವೆ. ಹಾಗಾಗಿ ಹುಗ್ಗಿ ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ.
ಒಟ್ಟಿನಲ್ಲಿ ಬೇಸಿಗೆಕಾಲದ ಬಿಸಿಲಲ್ಲಿ ಬೆಂಗಾಡಿನ ಅನುಭವ, ಮಳೆಗಾಲದ ಮಳೆಯಲ್ಲಿ ವನಸಿರಿಯ ಸಂಪತ್ತಿನ ಸೊಬಗು ಹಾಗೂ ಚಳಿಗಾಲದ ಚಳಿಯಲ್ಲಿ ಮುಂಜಾನೆ ಸುರಿವ ಮಂಜಿನ ಸಿಂಚನ. ಈ ಮೂರುಕಾಲಗಳಲ್ಲಿ ಕಾಣುವ ಪ್ರಕೃತಿ ಸೌಂದರ್ಯವನ್ನು ಮಾನವ ಅನುಭವಿಸಬೇಕು ಎಂಬುದು ಹಿರಿಯರ ಅಭಿಮತ. ಈ ಮೂರು ಕಾಲಗಳಲ್ಲಿ ಸೊಬಗು ಸವಿಯುವುದರ ಜತೆ ಸಕಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು ಹಾಗೂ ಆಹಾರ ಪದ್ಧತಿಯನ್ನು ಸೂಚಿಸಿದ್ದಾರೆ.
ಹಾಗಾಗಿ, ಒಂದು ತಿಂಗಳು ಧನುರ್ಮಾಸ ವ್ರತವನ್ನು ಮಾಡಿ, ದೇಹದ ಜಾಡ್ಯವನ್ನು ತೊಲಗಿಸಿ. ಹುಗ್ಗಿ ಆಹಾರ ಸೇವಿಸಿ, ಸದೃಢ ಆರೋಗ್ಯ ಪಡೆಯಿರಿ.
ಬರಹ: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ, ವಾಸ್ತುಶಾಸ್ತ್ರಜ್ಞ, ಮೊ: 99728 48937
ಇದನ್ನೂ ಓದಿ: ರಾಜ್ಯದ ಏಕೈಕ ಸೂರ್ಯ ನಾರಾಯಣಸ್ವಾಮಿ ದೇವಸ್ಥಾನ ಎಲ್ಲಿದೆ ಗೊತ್ತಾ..?
ಇದನ್ನೂ ಓದಿ: ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು