Datta Jayanti 2021: ತ್ರಿಮೂರ್ತ ಸ್ವರೂಪಿ ದತ್ತಾತ್ರೇಯ ಜಯಂತಿ ಮಹತ್ವ, ಕಥೆ, ಪೂಜೆ ವಿಧಾನ ತಿಳಿಯಿರಿ

| Updated By: preethi shettigar

Updated on: Dec 18, 2021 | 12:01 PM

ದತ್ತಾತ್ರೇಯನನ್ನು ಶಿವ, ವಿಷ್ಣು ಮತ್ತು ಬ್ರಹ್ಮನ ಅವತಾರವೆಂದು ಪರಿಗಣಿಸಲಾಗಿದೆ. ದತ್ತಾತ್ರೇಯನ ತಂದೆಯ ಹೆಸರು ಋಷಿ ಅತ್ರಿ ಮತ್ತು ಅವನ ತಾಯಿಯ ಹೆಸರು ಅನುಸೂಯಾ ದೇವಿ. ಅವರಿಗೆ ಮೂರು ತಲೆಗಳು ಮತ್ತು ಆರು ತೋಳುಗಳಿವೆ. ಭಗವಾನ್ ದತ್ತಾತ್ರೇಯನು 24 ಗುರುಗಳಿಂದ ಶಿಕ್ಷಣ ಪಡೆದಿದ್ದಾರೆಂಬ ನಂಬಿಕೆಯಿದೆ.

Datta Jayanti 2021: ತ್ರಿಮೂರ್ತ ಸ್ವರೂಪಿ ದತ್ತಾತ್ರೇಯ ಜಯಂತಿ ಮಹತ್ವ, ಕಥೆ, ಪೂಜೆ ವಿಧಾನ ತಿಳಿಯಿರಿ
ದತ್ತಾತ್ರೇಯ ಜಯಂತಿ
Follow us on

ಹಿಂದೂ ಧರ್ಮದಲ್ಲಿ ಮಾರ್ಗಶಿರ ಮಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ದತ್ತ ಜಯಂತಿ ಅಂದರೆ ದತ್ತಾತ್ರೇಯ ಜಯಂತಿಯನ್ನು ಈ ತಿಂಗಳ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ಇದು 2021ರ ಡಿಸೆಂಬರ್ 18 ರ ಶನಿವಾರದಂದು ಬಂದಿದೆ. ದತ್ತಾತ್ರೇಯನನ್ನು ತ್ರಿದೇವನ ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶನ ರೂಪವೆಂದು ಪರಿಗಣಿಸಲಾಗಿದೆ. ದತ್ತಾತ್ರೇಯ ಜಯಂತಿಯನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ಆಚರಿಸಲಾಗುತ್ತದೆ. ದತ್ತ ಜಯಂತಿಗೆ ಇಡೀ ದೇಶದಲ್ಲಿ ಪ್ರಾಮುಖ್ಯತೆ ಇದ್ದರೂ, ದಕ್ಷಿಣ ಭಾರತದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಇಲ್ಲಿ ದತ್ತ ಪಂಥದ ಅನೇಕ ಜನರಿದ್ದಾರೆ. ದತ್ತಾತ್ರೇಯನನ್ನು ಆರಾಧಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ.

ಶುಭ ಮುಹೂರ್ತ
ದತ್ತಾತ್ರೇಯನನ್ನು ಪ್ರದೋಷ ಕಾಲದಲ್ಲಿ ಪೂರ್ಣಿಮೆಯಂದು ಪೂಜಿಸಲಾಗುತ್ತೆ. ಪೂರ್ಣಿಮಾ ತಿಥಿಯ ಆರಂಭ: ಶನಿವಾರ, ಡಿಸೆಂಬರ್ 18 ಸಂಜೆ 7:24 ಕ್ಕೆ. ಪೂರ್ಣಿಮಾ ತಿಥಿ ಮುಕ್ತಾಯ: ಡಿಸೆಂಬರ್ 19 ಭಾನುವಾರ ಬೆಳಿಗ್ಗೆ 10.05 ರವರೆಗೆ.

ದತ್ತಾತ್ರೇಯ ಜಯಂತಿ ಪೂಜಾ ವಿಧಿ
ದತ್ತಾತ್ರೇಯ ಜಯಂತಿ ದಿವಸ ಸೂರ್ಯೋದಯಕ್ಕಿಂತ ಮುಂಚೆ ಸ್ನಾನ ಮಾಡಿ ಉಪವಾಸ ಮಾಡಲಾಗುತ್ತದೆ. ಪೂಜೆಯ ಸಮಯದಲ್ಲಿ ಭಕ್ತರು ಸಿಹಿತಿಂಡಿಗಳು, ಧೂಪದ್ರವ್ಯ ಕೋಲುಗಳು, ಹೂವುಗಳು ಮತ್ತು ದೀಪಗಳನ್ನು ಬೆಳಗುತ್ತಾರೆ. ಈ ಸಮಯದಲ್ಲಿ ಭಕ್ತರು ಮಂತ್ರಗಳು ಮತ್ತು ಧಾರ್ಮಿಕ ಗೀತೆಗಳನ್ನು ಪಠಿಸಬೇಕು. ಜೀವನ್ಮುಕ್ತ ಗೀತಾ ಮತ್ತು ಅವಧುತ ಗೀತೆಯ ಪದ್ಯಗಳನ್ನು ಓದಬೇಕು ಜೊತೆಗೆ ಭಕ್ತರು “ಓಂ ಶ್ರೀ ಗುರುದೇವ್ ದತ್ತ” ಮತ್ತು “ಶ್ರೀ ಗುರು ದತ್ತಾತ್ರೇಯ ನಮಃ” ಮಂತ್ರಗಳನ್ನು ಪಠಿಸಬೇಕು. ಅರಿಶಿನ ಪುಡಿ, ಸಿಂಧೂರ ಮತ್ತು ಶ್ರೀಗಂಧದ ಪೇಸ್ಟ್ ಅನ್ನು ಪೂಜೆಯ ಸಮಯದಲ್ಲಿ ದತ್ತ ದೇವರ ಪ್ರತಿಮೆಯ ಮೇಲೆ ಹಚ್ಚಿ ಆತ್ಮ ಮತ್ತು ಮನಸ್ಸಿನ ಶುದ್ಧೀಕರಣ ಮತ್ತು ಜ್ಞಾನೋದಯಕ್ಕಾಗಿ ಪೂಜಿಸುತ್ತಾರೆ.

ದತ್ತಾತ್ರೇಯನ ಕಥೆ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಒಮ್ಮೆ ಮಾತೆ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ತಮ್ಮ ವಾಸ್ತವತೆಯ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದರು. ಅವರ ಅಹಂಕಾರಕ್ಕೆ ಪೆಟ್ಟು ನೀಡಲು ನಾರದರು ಒಂದು ದಿನ ತ್ರಿದೇವತೆಗಳ ಬಳಿ ಬಂದು ನಿಮ್ಮ ರೂಪ ಮತ್ತು ಗುಣಗಳು ಋಷಿ ಅತ್ರಿರವರ ಪತ್ನಿ ಅನಸೂಯಾ ಅವರ ಮುಂದೆ ಏನೂ ಇಲ್ಲ ಎಂದು ಹೇಳಿದರು. ಆಗ ಕೋಪಗೊಂಡ ತ್ರಿದೇವತೆಗಳು ತ್ರಿಮೂರ್ತಿಗಳಿಗೆ ಅತ್ರಿ ಮಹರ್ಷಿಯ ಪತ್ನಿ ಅನಸೂಯಾಳ ಬಳಿ ಹೋಗಿ ಆಕೆಯ ಗುಣಗಳನ್ನು, ಪತಿ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಒತ್ತಾಯಿಸುತ್ತಾರೆ. ತಮ್ಮ ಹೆಂಡತಿಯರ ಒತ್ತಾಯಕ್ಕೆ ಒಪ್ಪಿಕೊಂಡ ಶಿವ, ವಿಷ್ಣು ಮತ್ತು ಬ್ರಹ್ಮರು ಸಾಧು ವೇಷ ಧರಿಸಿ ಭಿಕ್ಷೆ ಬೇಡಲು ಅನಸೂಯಾರ ಆಶ್ರಮಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ಅತ್ರಿ ಮಹರ್ಷಿಗಳು ಆಶ್ರಮದಲ್ಲಿ ಇರುವುದಿಲ್ಲ.

ಶಿವ, ವಿಷ್ಣು ಮತ್ತು ಬ್ರಹ್ಮರು ಅನುಸೂಯಾಳ ಬಳಿ ಭಿಕ್ಷೆ ಕೇಳಿತ್ತಾರೆ. ಆಗ ಅನಸೂಯಾ ತನ್ನ ಬಳಿ ಇದ್ದ ಧಾನ್ಯಗಳನ್ನು ಭಿಕ್ಷೆ ನೀಡಲು ಹೊರಟಾಗ ಅದನ್ನು ತ್ರಿಮೂರ್ತಿಗಳು ತಿರಸ್ಕರಿಸುತ್ತಾರೆ. ಅನಸೂಯಾಳನ್ನು ಕುರಿತು ನಮಗೆ ಎದೆಹಾಲನ್ನೇ ಭಿಕ್ಷೆಯಾಗಿ ನೀಡಬೇಕೆಂದು ಹೇಳುತ್ತಾರೆ. ಇದನ್ನು ಕೇಳಿ ಅನುಸೂಯಾ ಗಾಬರಿಯಾಗುತ್ತಾರೆ, ಆದರೆ ಸಾಧುಗಳನ್ನು ಅವಮಾನಿಸಲಾಗುವುದಿಲ್ಲ ಎಂಬ ಭಯದಿಂದ ಅವರು ತನ್ನ ಗಂಡನನ್ನು ನೆನಪಿಸಿಕೊಳ್ಳುವ ಮೂಲಕ ತನ್ನ ಸತಿ ಧರ್ಮದ ಪ್ರಮಾಣವಚನ ಸ್ವೀಕರಿಸಿದಳು. ನನ್ನ ಸತಿ ಧರ್ಮ ನಿಜವಾಗಿದ್ದರೆ, ಮೂವರೂ 6 ತಿಂಗಳ ವಯಸ್ಸಿನ ಶಿಶುಗಳಾಗುತ್ತಾರೆ ಎಂದು ಬೇಡಿಕೊಂಡರು. ಅನಸೂಯಾ ಅಂದುಕೊಂಡಂತೆ ಮೂವರು ದೇವರುಗಳು ಆರು ತಿಂಗಳ ಶಿಶುಗಳಾದರು ಮತ್ತು ಅನಸೂಯಾ ಅವರನ್ನು ತಾಯಿಯಂತೆ ಎದೆಹಾಲನ್ನು ನೀಡುತ್ತಾಳೆ. ಮತ್ತೊಂದೆಡೆ ಗಂಡಂದಿರು ಹಿಂತಿರುಗದಿದ್ದಾಗ, ತ್ರಿದೇವತೆಗಳು ಚಿಂತೆ ಮಾಡಲು ಪ್ರಾರಂಭಿಸಿದರು. ಆಗ ನಾರದರು ಬಂದು ಇಡೀ ವಿಷಯವನ್ನು ಹೇಳಿದರು. ನಂತರ ಮೂವರು ದೇವತೆಗಳು ಅನಸೂಯಾ ಅವರ ಬಳಿ ಹೋಗಿ ಕ್ಷಮೆಯಾಚಿಸಿ ತಮ್ಮ ಗಂಡನನ್ನು ಮರಳಿ ನೀಡುವಂತೆ ಕೇಳಿಕೊಂಡರು. ಅನಸೂಯಾ ತ್ರಿಮೂರ್ತಿಗಳನ್ನು ಮತ್ತೆ ಅವರ ಸ್ವರೂಪಕ್ಕೆ ಮರಳಿ ತಂದಳು. ಅನಸೂಯಾ ಧರ್ಮದಿಂದ ಸಂತಸಗೊಂಡ ತ್ರಿದೇವರು, ನಾವು ಮೂವರು ನಿಮ್ಮ ಭಾಗವಾಗಿ ಜನಿಸುತ್ತೇವೆ ಎಂಬ ವರವನ್ನು ನೀಡಿದರು. ನಂತರ ಬ್ರಹ್ಮ ಭಾಗದಿಂದ ಚಂದ್ರ, ವಿಷ್ಣುವಿನ ಭಾಗದಿಂದ ದತ್ತಾತ್ರೇಯ ಮತ್ತು ನಂತರ ಋಷಿ ದುರ್ವಾಸರು ಶಿವನ ಭಾಗದಿಂದ ಜನಿಸಿದರು.

ದತ್ತ ಜಯಂತಿಯ ಮಹತ್ವ
‌ ‌ದತ್ತ ಜಯಂತಿಯಂದು ಪೂಜಾ ವಿಧಿಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಲ್ಲದೇ ಜಯಂತಿಯ ಮುನ್ನಾದಿನ ಮಾಡುವ ಪೂಜೆಯಿಂದ ಪೂರ್ವಜರಿಗೆ ಮುಕ್ತಿ ಹಾಗೂ ಅವರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ದತ್ತಜಯಂತಿಯಂದು ಮಾಡುವ ಪೂಜೆಯು ಜೀವನದಲ್ಲಿ ಉತ್ಸಾಹ ಹಾಗೂ ಸಮೃದ್ಧಿಯನ್ನು ನೀಡುತ್ತದೆ.

ಪೂಜೆಯ ಪ್ರಯೋಜನಗಳು

  • ದತ್ತಾತ್ರೇಯ ಉಪನಿಷದ್‌ ಹೇಳುವಂತೆ ಯಾರು ದತ್ತಾತ್ರೇಯ ಜಯಂತಿಯ ಮುನ್ನಾ ದಿನ ಉಪವಾಸ ಮಾಡುತ್ತಾರೋ ಅವರಿಗೆ ದತ್ತನ ಆಶೀರ್ವಾದದೊಂದಿಗೆ ಈ ಕೆಲವು ಪ್ರಯೋಜನಗಳು ಪ್ರಾಪ್ತಿಯಾಗುವುದು.
  • ‌ ‌ಸಂಪತ್ತು ಹಾಗೂ ವಸ್ತುಗಳನ್ನು ಖರೀದಿಸುವಂತಹ ಭಾಗ್ಯವು ಒದಗಿಬರುವುದು.
  • ಸರ್ವೋಚ್ಛ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಜೀವನದ ಗುರಿ ಹಾಗೂ ಗುರಿ ಸಾಧನೆಯನ್ನು ಮಾಡಬಹುದು.
  • ಭಯ ಹಾಗೂ ಉದ್ವೇಗದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ಗ್ರಹದೋಷಗಳಿಂದ ಕಂಡು ಬರುವ ಸಮಸ್ಯೆಗೆ ದತ್ತಾತ್ರೇಯನ ಪೂಜೆಯು ಪರಿಹಾರ ನೀಡುವುದು.‌
  • ಪೂರ್ವಜರಿಂದ ಬರುವ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡದ ಸಮಸ್ಯೆ ನಿವಾರಣೆಯಾಗುತ್ತವೆ.
  • ಜೀವನದಲ್ಲಿ ನೀತಿವಂತರಾಗಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.
  • ಎಲ್ಲಾ ಕರ್ಮಬಂಧಗಳಿಂದ ಆತ್ಮವನ್ನು ಮುಕ್ತಗೊಳಿಸುವುದು ಹಾಗೂ ಆಧ್ಯಾತ್ಮಿಕತೆಯತ್ತ ಒಲವು ಬೆಳೆಸುವುದು. ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ಶ್ರೀ ದತ್ತಾತ್ರೇಯ ಸ್ತೋತ್ರಂ

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ೧ ||
ಜೈ ಗುರುದತ್ತ

ಇದನ್ನೂ ಓದಿ: ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ? ಇಲ್ಲಿದೆ ಒಲಿಸಿಕೊಳ್ಳುವ ಸೂತ್ರ

Published On - 6:30 am, Sat, 18 December 21