ದುಡ್ಡು ಮಾಡಬೇಕು ಎಂಬ ಆಸೆ ಸಾಮಾನ್ಯವಾಗಿ ಪ್ರತಿಯೊಬ್ಬನಲ್ಲಿಯೂ ಇರುತ್ತದೆ. ಕೆಲವರು ಅಲ್ಪ ತೃಪ್ತರು, ಮತ್ತೊಂದಿಷ್ಟು ಜನ ಇನ್ನು ಸಂಪಾದಿಸಬೇಕು, ಹೆಚ್ಚು ಆಸ್ತಿ ಮಾಡಬೇಕು ಎಂಬ ಆಸೆ ಹೊಂದಿರುವವರು. ಯಾರಿಗೆ ಆಗಲಿ ಹಣವಂತರಾಗಬೇಕು ಎಂಬ ಇಚ್ಛೆ ತಪ್ಪಲ್ಲ. ನಾವು ಬೆಳೆದು ಬಂದ ರೀತಿ, ನಮ್ಮ ಅನುಭವಕ್ಕೆ ಬಂದ ಜೀವನ ಎಲ್ಲವೂ ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿರುತ್ತದೆ. ಆದರೆ ಶ್ರೀಮಂತರಾಗುವ ಮೊದಲು ನಿಷ್ಠೆಯಿಂದ ಕೆಲಸ ಮಾಡಬೇಕು ಮತ್ತು ಅನ್ಯಾಯ ಮಾಡಿ ಹಣ ಗಳಿಸಬಾರದು ಎಂಬುದು ತಿಳಿದಿರಬೇಕು. ಇದರ ಹೊರತಾಗಿ ಕೆಲವೊಂದು ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಹಾಗಾದರೆ ಯಾವ ರೀತಿಯಲ್ಲಿ ಯೋಚಿಸಬೇಕು ಮತ್ತು ಯೋಚಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
ನಾನು ಏನು ಮಾಡಿದರೂ ಜನರು ಒಪ್ಪುವುದಿಲ್ಲ, ಬದಲಾಗಿ ಎಲ್ಲದಕ್ಕೂ ಅಡ್ಡಿಪಡಿಸುತ್ತಾರೆ ಎಂದು ಯೋಚಿಸಿದಲ್ಲಿ ಎಂದಿಗೂ ನಿಮ್ಮ ಕಾರ್ಯಸಾಧನೆ ಆಗುವುದಿಲ್ಲ. ಜನರು ಮಾತನಾಡುತ್ತಾರೆ ಎಂದು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ನಿಮಗೆ ಇಷ್ಟವಾದ ಕೆಲಸ ಮಾಡಿ ಶ್ರದ್ದೆಯಿಂದ ಸರಿಯಾದ ಫಲಗಳನ್ನು ಪಡೆದಲ್ಲಿ ಸಿರಿವಂತಿಕೆ ನಿಮ್ಮನ್ನು ಅರಸಿ ಬರುತ್ತದೆ. ಈ ಮಾತನ್ನು ಚಾಣಕ್ಯನು ಕೂಡ ಅನೇಕ ಬಾರಿ ಹೇಳಿದ್ದಾನೆ.
ಯಾವುದಾದರೂ ಕೆಲಸ ಆರಂಭಿಸುವ ಮೊದಲೇ ನಿಮಗೆ ನೀವೇ ನನ್ನ ಪರಿಸ್ಥಿತಿ ಸರಿಯಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು. ಜೀವನದಲ್ಲಿ ಸುಖವೂ ಶಾಶ್ವತವಲ್ಲ ಹಾಗೆಯೇ ದುಃಖವೂ ಅಲ್ಲ. ನಿಮ್ಮ ಪ್ರಯತ್ಮ ಹೇಗಿರುತ್ತದೆ ಎಂಬುದರ ಮೇಲೆ ಪ್ರತಿಫಲ ದೊರೆಯುತ್ತದೆ. ಕೆಲವೊಮ್ಮೆ ಅತಿಯಾಗಿ ಶ್ರಮಪಟ್ಟರು ಕೂಡ ಸರಿಯಾದ ಫಲಿತಾಂಶ ಸಿಗುವುದಿಲ್ಲ. ಆ ಸಂದರ್ಭದಲ್ಲಿ ಮತ್ತೆ ಪ್ರಯತ್ನ ಪಡಬೇಕು. ಸೊನ್ನೆಯಿಂದ ಮತ್ತೆ ಆರಂಭಿಸಬೇಕು. ಅದರ ಹೊರತಾಗಿ ಎಂದಿಗೂ ನನ್ನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳುತ್ತಾ ಕುಳಿತುಕೊಳ್ಳಬಾರದು.
ಎಲ್ಲಾ ರೀತಿಯ ಕೆಟ್ಟ ಅಭ್ಯಾಸಗಳಲ್ಲಿ ಇದು ಒಂದಾಗಿದೆ. ಇಂದು ಮಾಡಿ ಮುಗಿಸುವ ಕೆಲಸವನ್ನು ನಾಳೆ ಇಟ್ಟುಕೊಳ್ಳುವುದು. ಇದರಿಂದ ಇಂದಿನ ದಿನ ಜೊತೆಗೆ ನಾಳೆಯೂ ಕೂಡ ಹಾಳಾಗುತ್ತದೆ. ನಿಮ್ಮ ಸಮಯ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಆದ್ದರಿಂದ ಇಂದು ಮಾಡಬೇಕಾಗಿರುವ ಕೆಲಸವನ್ನು ಮುಂದೆ ಹಾಕುವ ಬದಲು ಅದನ್ನು ಮೊದಲು ಮುಗಿಸಿ. ಇದರಿಂದ ಸರಿಯಾದ ಸಮಯಕ್ಕೆ ಕೆಲಸ ಮುಗಿಯುತ್ತದೆ ಜೊತೆಗೆ ಬೇರೆ ಕೆಲಸಗಳನ್ನು ಮಾಡಲು ಕೂಡ ಮತ್ತಷ್ಟು ಸಮಯ ಸಿಗುತ್ತದೆ.
ಯಾವುದೇ ಕೆಲಸ ಹೇಳಿದರೂ ನನಗೆ ಸಮಯವಿಲ್ಲ ಅಥವಾ ಏನಾದರೂ ಹೊಸ ವಿಷಯ ಕಲಿಯುವಾಗಲೂ ಕೂಡ ಅವುಗಳಿಂದ ತಪ್ಪಿಸಿಕೊಳ್ಳಲು ಸಮಯವಿಲ್ಲ ಎನ್ನುವುದು ಕೂಡ ತಪ್ಪು. ಇದು ಸಾಮಾನ್ಯವಾಗಿದ್ದರೂ ಕೂಡ ಈ ವರ್ತನೆ ನಿಮ್ಮನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯುವ ಬದಲು ನಿಮ್ಮನ್ನು ಇದ್ದಲ್ಲಿಯೇ ಇರಿಸುತ್ತದೆ ಇದರಿಂದ ಯಾವುದೇ ರೀತಿಯ ಪ್ರಗತಿ ಕಂಡು ಬರುವುದಿಲ್ಲ.
ಯಾರಾದರೂ ನಿಮ್ಮ ಬಗ್ಗೆ ಅಥವಾ ನಿಮ್ಮ ಕೆಲಸದ ಬಗ್ಗೆ ಯಾವುದಾದರೂ ಸಲಹೆ ನೀಡಿದ್ದರೆ ನೀವು ಅದನ್ನು ಸ್ವೀಕರಿಸುವ ಬದಲು ಇಂತಹ ವಿಷಯಗಳು ಹೇಳಲು ಮಾತ್ರ ಸುಲಭ ಅದು ಕಾರ್ಯಗತವಾಗುವುದಿಲ್ಲ ಎಂದು ಅವರನ್ನು ಅವಹೇಳನ ಮಾಡುತ್ತೀರಿ. ಆದರೆ ಅದನ್ನು ಒಮ್ಮೆ ಪ್ರಯತ್ನಿಸಿ ನೋಡಲು ಬಯಸುವುದಿಲ್ಲ. ಇದರಿಂದಾಗಿ ನಿಮಗೆ ಸುಲಭ ಮತ್ತು ಕಷ್ಟದ ಕೆಲಸ ಯಾವುದು ಎಂದು ತಿಳಿಯುವುದಿಲ್ಲ.
ಜೀವನದಲ್ಲಿ ಯಾರಾದರೂ ಯಶಸ್ಸನ್ನು ಗಳಿಸಿದರೆ ಅವನ ಅದೃಷ್ಟ ಚೆನ್ನಾಗಿತ್ತು ನಮ್ಮ ಹಾಗಲ್ಲ ಎನ್ನಲಾಗುತ್ತದೆ. ಆದರೆ ಆತ ಅವನ ಶ್ರಮದಿಂದ ಮುಂದೆ ಬಂದಿರುತ್ತಾನೆ. ಶ್ರಮ ಇಲ್ಲದ ಜೀವನದಲ್ಲಿ ಒಳ್ಳೆಯ ಫಲಿತಾಂಶವೂ ಇರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಮೊದಲು ಅರಿತುಕೊಳ್ಳಬೇಕು. ಕೆಲಸದಲ್ಲಿ ಸರಿಯಾದ ಶ್ರದ್ದೆ ವಹಿಸಿ ದುಡಿದಲ್ಲಿ ಪ್ರತಿಫಲ ನಿಮ್ಮ ಮುಂದಿರುತ್ತದೆ.
ಇದನ್ನೂ ಓದಿ: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ
ಕೆಲಸದಲ್ಲಿ ಎಂದಿಗೂ ಅಸೂಯೆ ಇರಬಾರದು. ಏಕೆಂದರೆ ಎಲ್ಲರ ಸಾಮರ್ಥ್ಯ ಒಂದೇ ಆಗಿರುವುದಿಲ್ಲ. ನನಗಿಂತ ಅವನು ಹೆಚ್ಚು ಸಂಪಾದನೆ ಮಾಡುತ್ತಾನೆ ಎಂದು ನಾವು ಕೊರಗುವ ಬದಲು ನನ್ನ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗಲಿ ಎಂದುಕೊಳ್ಳಬೇಕು. ಜೊತೆಗೆ ಅವನು ಜೀವನದಲ್ಲಿ ಸೋಲಬೇಕು, ಅವನು ದುಡಿಯುವುದಕ್ಕಿಂತ ಹೆಚ್ಚು ನಾನು ಸಂಪಾದನೆ ಮಾಡಬೇಕು ಎನ್ನುವ ಭಾವನೆ ಇರಬಾರದು. ನಮ್ಮ ಕೆಲಸವನ್ನು ನಾವು ಪ್ರೀತಿಸಬೇಕು. ಬೇರೆಯವರ ದುಡಿಮೆ ಮತ್ತು ಅವರ ಹಣದ ಮೇಲೆ ಎಂದಿಗೂ ವ್ಯಾಮೋಹ ಬೆಳೆಸಿಕೊಳ್ಳಬಾರದು. ಈ ರೀತಿಯಾಗಿ ಕೆಲವು ಕ್ರಮಗಳನ್ನು ರೂಢಿಸಿಕೊಂಡಲ್ಲಿ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:33 pm, Tue, 26 March 24