Brahma Muhurta: ಬ್ರಾಹ್ಮೀ ಮುಹೂರ್ತ ಅಂದ್ರೆ ಯಾವ ಸಮಯ? ಅದಕ್ಕೇಕೆ ಅಷ್ಟು ಮಹತ್ವ?

| Updated By: ಆಯೇಷಾ ಬಾನು

Updated on: Feb 03, 2022 | 6:30 AM

ಆಯುರ್ವೇದದ ಪ್ರಕಾರ ಮುಂಜಾನೆಯ ನಸುಕಿನ 3:00 ರಿಂದ 6:00 ರವರೆಗಿನ ಸಮಯ. ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ.

Brahma Muhurta: ಬ್ರಾಹ್ಮೀ ಮುಹೂರ್ತ ಅಂದ್ರೆ ಯಾವ ಸಮಯ? ಅದಕ್ಕೇಕೆ ಅಷ್ಟು ಮಹತ್ವ?
ಸಾಂದರ್ಭಿಕ ಚಿತ್ರ
Follow us on

ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪುರಾಣ, ವೇದ, ಶಾಸ್ತ್ರಗಳಲ್ಲಿ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತಕ್ಕೆ(Brahma Muhurta) ವಿಶೇಷವಾದ ಸ್ಥಾನವಿದೆ. ಹಾಗೂ ಬ್ರಾಹ್ಮಿ ಮುಹೂರ್ತದ ಸಮಯವನ್ನು ಶುಭವೆಂದು ಪರಿಗಣಿಸಲಾಗಿದೆ. ರಾತ್ರಿಯ ಅಂತಿಮ ಪ್ರಹರವೇ ಬ್ರಾಹ್ಮೀ ಮುಹೂರ್ತ. ಆಯುರ್ವೇದದ ಪ್ರಕಾರ ಮುಂಜಾನೆಯ ನಸುಕಿನ 3:00 ರಿಂದ 6:00 ರವರೆಗಿನ ಸಮಯ. ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದ ಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.

ಬ್ರಾಹ್ಮೀ ಮುಹೂರ್ತದ ಮಹತ್ವ
– ಪ್ರತಿನಿತ್ಯ ಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
– ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ. ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ 41ರಷ್ಟಿರುತ್ತದೆ. ಇದರಿಂದ ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತದೆ. ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.
– ಯಾರು ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.
– ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.
– ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.
– ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ. ದೇವರ ಶೃಂಗಾರ ಹಾಗೂ ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.
– ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರ ಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.
– ಮನುಷ್ಯನ ಜ್ಞಾನ, ವಿವೇಕ, ಶಾಂತಿ, ಸುಖ ಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.
– ಭಗವಂತನ ಸ್ಮರಣೆಯ ನಂತರ ಮೊಸರು, ತುಪ್ಪ, ಕನ್ನಡಿ, ಬಿಲ್ವಪತ್ರೆ, ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ ದಿನ ಶುಭವಾಗಿರುತ್ತದೆ.

ಬ್ರಹ್ಮ ಮುಹೂರ್ತದಲ್ಲೇ ಹನುಮಂತ ಅಶೋಕ ವನ ತಲುಪಿದ್ದು
ಸೀತೆಯನ್ನು ಹುಡುಕುತ್ತಾ ಸಾಗಿದ ಆಂಜನೇಯ ಬ್ರಹ್ಮ ಮುಹೂರ್ತದಂದೇ ಅಶೋಕವನ ತಲುಪಿದ್ದ. ಅಲ್ಲಿ ವೇದ ಮಂತ್ರಗಳ ಉಚ್ಛಾರಣೆಯನ್ನು ಕೇಳಿದ್ದ, ಮತ್ತು ಯಜ್ಞಾದಿ ಕಾರ್ಯಗಳನ್ನು ನೋಡಿದ್ದನೆಂದು ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಲಾಗಿದೆ.
ವರ್ಣಂ ಕೀರ್ತಿಂ ಮತಿಂ ಲಕ್ಷ್ಮೀಂ ಸ್ವಾಸ್ಥ್ಯಮಾಯುಶ್ಚ ವಿದಂತಿ|
ಬ್ರಾಹ್ಮೇ ಮುಹೂರ್ತೋ ಸಂಜಾಗ್ರಚ್ಛಿ ವಾ ಪಂಕಜ ಯಥಾ||

ಇನ್ನು ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಹಾಗೂ ಸ್ಥಿರವಾಗಿರುತ್ತದೆ. ವಾತಾವರಣದಲ್ಲಿ ಶುದ್ಧತೆಯೂ ಹೆಚ್ಚಿರುತ್ತದೆ. ಆಗ ದೇವರ ಉಪಾಸನೆ, ಧ್ಯಾನ, ಯೋಗ, ಪೂಜೆಗಳನ್ನು ಮಾಡುವುದರಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯದಿಂದ ಕೂಡಿರುತ್ತವೆ. ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?