Tulsi Tradition: ಮನೆಯ ಅಂಗಳದಲ್ಲಿ ತುಳಸಿ ಬೃಂದಾವನ ಇರಬೇಕು: ಯಾಕೆ, ಹೇಗೆ, ಅದರ ಮಹತ್ವ ಏನು?
ಹಿಂದೂಗಳ ಮನೆ ಮತ್ತು ಮನಸ್ಸುಗಳನ್ನು ತುಳಸಿ ಗಿಡವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನ ಇರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ಅಶ್ವತ್ಥ ವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಹೇರಳವಾಗಿ ಪ್ರಾಣಶಕ್ತಿ (ಆಮ್ಲಜನಕವು) ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆ ಹಾಕುವುದು ಉಪಯುಕ್ತವಾಗಿದೆ.
ಹಿಂದೂಗಳ ಮನೆ ಮತ್ತು ಮನಸ್ಸುಗಳನ್ನು ತುಳಸಿ ಗಿಡವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನ ಇರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.
ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:
ಅಂದರೆ ತುಳಸಿ ವನ ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸ ಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳು ತಮ್ಮ ಮನೆಯಂಗಳಗಳಲ್ಲಿ ತುಳಸಿಯನ್ನು ನೆಟ್ಟು, ತುಳಸಿ ಕಟ್ಟೆ ಕಟ್ಟಿ, ಅದಕ್ಕೆ ನಿತ್ಯವೂ ಪೂಜಿಸುತ್ತಾರೆ.
ತುಳಸಿಯ ಸೃಷ್ಟಿ: ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವ-ದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದಿತು.
ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿಸಾಟಿ ಅಲ್ಲವಾದ್ದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.
ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಪ್ರಯೋಜನಗಳು: ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟ ಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ.
ಅಶ್ವತ್ಥ ವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಹೇರಳವಾಗಿ ಪ್ರಾಣಶಕ್ತಿ (ಆಮ್ಲಜನಕವು) ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆ ಹಾಕುವುದು ಉಪಯುಕ್ತವಾಗಿದೆ. ತುಳಸಿ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಚರ್ಮರೋಗಗಳು ಇರುವ ಭಾಗಗಳಲ್ಲಿ ಹಚ್ಚಿಕೊಂಡರೆ ರೋಗ ನಿವಾರಣೆಯಾಗುವುದೆಂದು ಹೇಳಲಾಗಿದೆ.
ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು ? ಏಕೆ ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ.
ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖ ಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ.
ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಅಥವಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಹಚ್ಚಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು.
ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿ ಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವ ದೀಪ ಜ್ಯೋತಿಯ ಸ್ತೋತ್ರ ಹೀಗಿದೆ:
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ |
ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿರ್ಜನಾರ್ದನಃ ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||
ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ | ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್||
ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನು ಹಚ್ಚುವುದರಿಂದ ಅವು ಮನೆಮಂದಿಗೂ, ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವ ತಿಳಿದುಬರುತ್ತದೆ. ಹೀಗಾಗಿ ಆಸ್ತಿಕ ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.
ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ? ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖ ಮಾಡಿ ನಿಲ್ಲಬೇಕು. ಮುಖ್ಯ ದ್ವಾರದಿಂದ ಬಲಗಡೆಗೆ ಅರ್ಧ ಕೋಲು (ಒಂದು ಕೋಲು ಅಂದರೆ 28 ಇಂಚು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್ ಗೋಡೆಗೆ ಒಂದು ಗುರುತು ಮಾಡಿರಿ.
ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ 3 ಕೋಲು/ 5 ಕೋಲು/ 7ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿ ಕಟ್ಟೆಯಿರುವುದು.
ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಅಥವಾ ಉತ್ತರಾಭಿಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದ ಎದುರು ನಿಂತು ಎಡಗಡೆಗೆ ಅರ್ಧ ಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ 3 ಕೋಲು/ 5 ಕೋಲು/ 7 ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು.
ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿ ಕಟ್ಟೆಯನ್ನು ನಿರ್ಮಿಸಬಹುದು. ನಿಮ್ಮ ಮನೆಯ ದಿಕ್ಕು ಸ್ವಲ್ಪ ಆಚೀಚೆ ಇದ್ದರೂ ಗೊಂದಲ ಮಡಿಕೊಳ್ಳುವುದು ಬೇಡ. ಇದು ಜನಸಾಮಾನ್ಯರು ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸಬಹುದಾದ ಸುಲಭ ವಿಧಾನವಾಗಿದೆ.
ತುಳಸಿಕಟ್ಟೆಯ ಉದ್ದ ಅಗಲ ಅಳತೆ ಹೀಗಿದ್ದರೆ ಸೂಕ್ತ ಸಾಮಾನ್ಯವಾಗಿ ತುಳಸಿ ಕಟ್ಟೆಯ ಉದ್ದ, ಅಗಲ, ಎತ್ತರ ತಲಾ 19 ಅಂಗುಲ ಆಗಿದ್ದರೆ ಉತ್ತಮ. ತುಳಸಿ ಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರ ಆಗಿರಬಹುದು. ಅದಕ್ಕಿಂತ ಹೆಚ್ಚು ಎತ್ತರ ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿ ಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.
ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು? ಸಾಮಾನ್ಯವಾಗಿ ಶನಿವಾರ, ಬುಧವಾರ ಅಥವಾ ಗುರುವಾರದ ದಿನ ಬೆಳಗ್ಗಿನ ಹೊತ್ತು ಶ್ರೀ ಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.
ತುಳಸಿ ಕಟ್ಟೆಯಲ್ಲಿ ಯಾವ ಜಾತಿಯ ತುಳಸಿ ನೆಡಬಹುದು? ತುಳಸಿ ಕಟ್ಟೆಯಲ್ಲಿ ತಾರಕ ತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿಯನ್ನು (ಬಿಳಿ ತುಳಸಿ) ಸುತ್ತಮುತ್ತ ಮಾರಕಧಾತುಗಳನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ ಯನ್ನೂ (ನಸುಗಪ್ಪು ಬಣ್ಣದ ತುಳಸಿ) ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.
ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳ ಇದೆ. ಆಸಕ್ತರು ಬೇರೆ ಬೇರೆ ಗ್ರಂಥಗಳನ್ನು ಓದಿ ಅದನ್ನು ಅರಿತುಕೊಳ್ಳಬಹುದು. ತುಳಸಿ ಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಹಚ್ಚದೆ, ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ಹಚ್ಚಿ, ದೇದೀಪ್ಯ ವಾತಾವರಣವನ್ನು ನಿರ್ಮಿಸಿ, ಸತ್ತ್ವಗುಣದ ಸಂವರ್ಧನೆ ಮಾಡುವುದು ಅವಶ್ಯಕ ಎಂಬುದರ ಅರಿವು ಇರಲಿ.
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)