AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kumkumarchana: ಕುಂಕುಮಾರ್ಚನೆಯನ್ನು ಮಹಿಳೆಯರು ಮಾಡಿಸಬಹುದಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ದೇವಸ್ಥಾನಗಳಲ್ಲಿ, ಮನೆಯಲ್ಲಿ ದೇವಿಗೆ ಕುಂಕುಮಾರ್ಚನೆ ಮಾಡಿಸುವುದು ಸಾಮಾನ್ಯ. ಆದರೆ ಈ ಪೂಜಾ ವಿಧಿಯನ್ನು ವಯಸ್ಸಾದವರು, ದೇವ ಭಕ್ತಿ ಇರುವವರು ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರು ಮಾತ್ರ ಮಾಡಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಉತ್ತರವನ್ನು ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿದ್ದಾರೆ.

Kumkumarchana: ಕುಂಕುಮಾರ್ಚನೆಯನ್ನು ಮಹಿಳೆಯರು ಮಾಡಿಸಬಹುದಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಕುಂಕುಮಾರ್ಚನೆ
ಅಕ್ಷತಾ ವರ್ಕಾಡಿ
|

Updated on: Jan 06, 2026 | 9:30 AM

Share

ಕುಂಕುಮಾರ್ಚನೆಯ ಮಹತ್ವ ಮತ್ತು ಅದನ್ನು ಯಾರು ಆಚರಿಸಬಹುದು ಎಂಬ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ದೇವಸ್ಥಾನಗಳಲ್ಲಿ, ಮನೆಯಲ್ಲಿ ದೇವಿಗೆ ಕುಂಕುಮಾರ್ಚನೆ ಮಾಡಿಸುವುದು ಸಾಮಾನ್ಯ. ಆದರೆ ಈ ಪೂಜಾ ವಿಧಿಯನ್ನು ವಯಸ್ಸಾದವರು, ದೇವ ಭಕ್ತಿ ಇರುವವರು ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರು ಮಾತ್ರ ಮಾಡಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಗುರೂಜಿಯವರು ‘ಕುಂಕುಮಾರ್ಚನೆಯನ್ನು ಎಲ್ಲರೂ ಮಾಡಿಸಬಹುದು’ ಎಂದು ಸ್ಪಷ್ಟ ಉತ್ತರವನ್ನು ನೀಡಿದ್ದಾರೆ.

ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಮತ್ತು ಉದ್ಯೋಗಿಗಳು ಸೇರಿದಂತೆ ತಮ್ಮ ವೃತ್ತಿಗಳಲ್ಲಿ ಇರುವ ಪ್ರತಿಯೊಬ್ಬರೂ ಈ ಪೂಜೆಯನ್ನು ಆಚರಿಸಬಹುದು. ಇದು ಅವರವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ವಿಶೇಷವಾಗಿ, ಮಕ್ಕಳಿಂದ ಕುಂಕುಮಾರ್ಚನೆ ಮಾಡಿಸುವುದಕ್ಕೆ ಹೆಚ್ಚಿನ ಮಹತ್ವವಿದೆ. ಮಕ್ಕಳು, ಪುಟ್ಟ ಮಕ್ಕಳು, ಹತ್ತು ವರ್ಷದ ಗಂಡು ಮಕ್ಕಳು, ಮತ್ತು ಋತುಮತಿ ಆಗುವ ಹಂತದಲ್ಲಿರುವ ಹೆಣ್ಣು ಮಕ್ಕಳಿಂದ (ಅದಕ್ಕೆ ಸೂಕ್ತವಲ್ಲದ ಕಾಲವನ್ನು ಹೊರತುಪಡಿಸಿ) ಕುಂಕುಮಾರ್ಚನೆ ಮಾಡಿಸಿದರೆ, ಅವರಿಗೆ ಸಂಸ್ಕಾರ, ಸಪ್ತ ಚಕ್ರಗಳ ಜಾಗೃತಿ, ಜ್ಞಾನ ವೃದ್ಧಿ, ತಾಳ್ಮೆ, ಸಹನೆ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಮಕ್ಕಳು ಗುರುವಾರಗಳಂದು ಈ ಪೂಜೆಯನ್ನು ಮಾಡಿದರೆ ಹೆಚ್ಚು ಶುಭ.

ಕುಂಕುಮಾರ್ಚನೆಯನ್ನು ಪುರುಷರು ಮಾಡಬಹುದೇ ಎಂಬ ಪ್ರಶ್ನೆಗೆ, ಹೌದು ಎಂದು ಉತ್ತರ ನೀಡಲಾಗಿದೆ. ಪುರುಷರು ಕುಂಕುಮಾರ್ಚನೆ ಮಾಡಿದರೆ, ವಿಶೇಷವಾಗಿ ವಾರಕ್ಕೊಮ್ಮೆ ಶುಕ್ರವಾರದಂದು, ತಾಯಿಯ ಅನುಗ್ರಹ ಬೇಗ ಸಿಗುತ್ತದೆ ಎಂದು ನಂಬಲಾಗಿದೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಸಾಲದ ಹೊರೆಯಿಂದ ಬಳಲುತ್ತಿರುವವರು (ಬ್ಯಾಂಕ್ ಸಾಲ, ಬಡ್ಡಿ ಸಾಲ), ಮತ್ತು ವ್ಯವಸಾಯಕ್ಕೆ ಸಾಲ ಮಾಡಿದ ಪುರುಷರು ಶುಕ್ರವಾರದ ದಿನ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಬಹಳ ಶುಭವಾಗುತ್ತದೆ. ತಾಯಿಗೆ ಮಗುವಿನ ರೂಪವಾಗಿ ಕಾಣಿಸಿ ಬೇಗ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಮಹಿಳೆಯರು ಕುಂಕುಮಾರ್ಚನೆ ಮಾಡುವುದರಿಂದ ದೀರ್ಘ ಸೌಮಂಗಲ್ಯ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ಗಂಡನ ದುರಭ್ಯಾಸಗಳ ನಿವಾರಣೆ, ಆಸ್ತಿ ಕಲಹಗಳ ಇತ್ಯರ್ಥ, ಆಸ್ತಿ ವೃದ್ಧಿ, ಹಣಕಾಸಿನ ಅನುಕೂಲ, ಅಪವಾದಗಳ ನಿವಾರಣೆ, ಮತ್ತು ಗಂಡನಿಗೆ ಅಧಿಕಾರ ಪ್ರಾಪ್ತಿ ಸೇರಿದಂತೆ ಹಲವು ಶುಭ ಫಲಗಳು ದೊರೆಯುತ್ತವೆ. ಲಲಿತಾ ಸಹಸ್ರನಾಮ ಅಥವಾ ಅಷ್ಟೋತ್ತರ ಹೇಳಿಕೊಂಡು ಕುಂಕುಮಾರ್ಚನೆ ಮಾಡಿದಾಗ ಈ ಫಲಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ರೋಗಿಗಳು ಮತ್ತು ದೇಹದಲ್ಲಿ ಯಾವುದಾದರೂ ಕಂಟಕ ಹೊಂದಿರುವವರೂ ಕುಂಕುಮಾರ್ಚನೆ ಮಾಡುವುದರಿಂದ ಸಾಕಷ್ಟು ಶುಭ ಫಲಗಳನ್ನು ಪಡೆಯುತ್ತಾರೆ. ಸಕಾರಾತ್ಮಕ ಆಲೋಚನೆಗಳೊಂದಿಗೆ ಗುರುವಾರ, ಶುಕ್ರವಾರ, ಬುಧವಾರದಂದು ಈ ಪೂಜೆಯನ್ನು ಆಚರಿಸುವವರಿಗೆ ಆಜ್ಞಾಚಕ್ರದ ಜಾಗೃತಿ, ರಕ್ತ ಸಂಚಾರ ಸುಧಾರಣೆ, ಮನಸ್ಸಿನ ಭಾವನೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಮಕ್ಕಳು, ಗಂಡಸರು, ವೃದ್ಧರು, ಅಶಕ್ತರು ಸೇರಿದಂತೆ ಎಲ್ಲರೂ ನಂಬಿಕೆಯಿಂದ ಕುಂಕುಮಾರ್ಚನೆ ಮಾಡಿದಾಗ ಅವರ ಆಸೆ ಆಕಾಂಕ್ಷೆಗಳು ಈಡೇರಿ, ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ ಸಿಗುತ್ತದೆ. ಶನಿ ಕಾಟ ಮತ್ತು ದುಷ್ಟ ಶಕ್ತಿಗಳ ಕಾಟ ನಿವಾರಣೆಯಾಗಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ