ಲಕ್ಷ್ಮೀ ಪಂಚಮಿ ಹಿಂದೂ ಹಬ್ಬಗಳಲ್ಲಿ ಒಂದಾಗಿದ್ದು, ಸಂಪತ್ತು, ಸಮೃದ್ಧಿಯನ್ನು ಪಡೆಯಲು ಅದೃಷ್ಟ ದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸಲು ಶುಭ ದಿನವೆಂದು ಪರಿಗಣಿಸಲಾಗಿದೆ. ಈ ಹಬ್ಬವು ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದ್ದು ಮುಖ್ಯವಾಗಿ ನೇಪಾಳ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ಅದರಲ್ಲಿಯೂ ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಲಕ್ಷ್ಮೀ ಪಂಚಮಿಯನ್ನು ಎ. 13 ರಂದು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನದ ಮಹತ್ವವೇನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ.
ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಈ ದಿನವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಲಕ್ಷ್ಮೀ ಪಂಚಮಿಯ ಶುಭ ದಿನದಂದು ಜನರು ಸಂಪತ್ತು ಮತ್ತು ಸಮೃದ್ಧಿಯ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಜೀವನದ ಪ್ರತಿ ಹಂತದಲ್ಲೂ ಆರೋಗ್ಯ ಮತ್ತು ಅದೃಷ್ಟಕ್ಕಾಗಿ ದೇವಿಯ ಆಶೀರ್ವಾದವನ್ನು ಕೋರುತ್ತಾರೆ. ತಾಯಿ ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸುವವರಿಗೆ ಸಂತೋಷ, ಆರೋಗ್ಯ, ಸಂಪತ್ತು ಮತ್ತು ಅವರ ಅಪೇಕ್ಷಿತ ಬಯಕೆಗಳನ್ನು ತಾಯಿ ಈಡೇರಿಸುತ್ತಾಳೆ ಎಂದು ನಂಬಲಾಗಿದೆ. ವ್ಯವಹಾರದಲ್ಲಿ ಯಶಸ್ಸನ್ನು ಬಯಸುವ ಮಾಲಕರು, ಕಾರ್ಮಿಕರಿಗೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಬಯಸುವವರಿಗೆ ಈ ದಿನ ಶುಭವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ವರ್ಷ ಪೂರ್ತಿ ಒಳ್ಳೆಯ ಫಲ ಪಡೆಯಲು ಮೇಷ ಸಂಕ್ರಾಂತಿಯಂದು ಈ ವಸ್ತುಗಳನ್ನು ದಾನ ಮಾಡಿ!
1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.
2. ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಪೂಜಾ ಕೋಣೆಯ ಜೊತೆಗೆ ಮನೆಯನ್ನು ಸ್ವಚ್ಛಗೊಳಿಸಿ.
3. ಒಂದು ಪೀಠದ ಮೇಲೆ ಲಕ್ಷ್ಮೀಯ ವಿಗ್ರಹವನ್ನು ಇರಿಸಿ.
4. ತುಪ್ಪದಿಂದ ದೀಪ ಹಚ್ಚಿ ವಿಗ್ರಹವನ್ನು ದಾಸವಾಳ ಹೂವಿನಿಂದ ಅಲಂಕರಿಸಿ.
5. ಲಕ್ಷ್ಮೀ ದೇವಿಯ ಮಂತ್ರಗಳನ್ನು ಪಠಿಸಿ, ಇಷ್ಟಾರ್ಥ ಸಿದ್ದಿಗಾಗಿ ದೇವರ ಬಳಿ ಪ್ರಾರ್ಥಿಸಿ.
6. ಪಾಯಸ, ಹಲ್ವಾ ಮುಂತಾದ ನೈವೇದ್ಯಗಳನ್ನು ಮನೆಯಲ್ಲಿ ತಯಾರಿಸಿ ದೇವರಿಗೆ ಭಕ್ತಿಯಿಂದ ಅರ್ಪಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ