Mahashivratri 2024: ಶಿವ -ಪಾರ್ವತಿ ವಿವಾಹವಾದ ಸ್ಥಳ ಈಗ ಹೇಗಿದೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2024 | 12:02 PM

ಈಗ ಡೆಸ್ಟಿನೇಶನ್‌ ವೆಡ್ಡಿಂಗ್ ಟ್ರೆಂಡ್‌ ಆಗಿದೆ. ಆದರೆ ಈ ಪರಿಕಲ್ಪನೆ ಸಹಸ್ರವರ್ಷಗಳಿಂದಲೂ ಇತ್ತು ಅನ್ನೋದು ನಂಬಲೇಬೇಕಾದ ವಿಷಯ. ಏಕೆಂದರೆ ಶಿವ ಪಾರ್ವತಿಯನ್ನು ಒಂದು ದೇವಾಲಯದಲ್ಲಿ ವರಿಸಿದನು ಎನ್ನಲಾಗುತ್ತದೆ. ಹಾಗಾದರೆ ಆ ಸ್ಥಳ ಯಾವುದು? ಈಗ ಹೇಗಿದೆ ಈ ದೇವಾಲಯ? ಈ ವಿಷಯದ ಬಗೆಗಿನ ಎಲ್ಲಾ ಮಾಹಿತಿಗಳು ಇಲ್ಲಿವೆ.

Mahashivratri 2024: ಶಿವ -ಪಾರ್ವತಿ ವಿವಾಹವಾದ ಸ್ಥಳ ಈಗ ಹೇಗಿದೆ ಗೊತ್ತಾ?
Follow us on

ನಮ್ಮಲ್ಲಿ ಹೆಚ್ಚಿನವರಿಗೆ, ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದು ದೊಡ್ಡ ವಿಷಯ, ಅದೇ ರೀತಿ ಮದುವೆಯಾಗಲು ಸರಿಯಾದ ಸ್ಥಳವನ್ನು ಕಂಡುಹಿಡಿಯುವುದು ಕೂಡಾ ಅಷ್ಟೇ ಕಷ್ಟ. ಹೆಚ್ಚಿನ ನಿಶ್ಚಿತಾರ್ಥ, ಮದುವೆಗಳು ಹೋಟೆಲ್ ಗಳಲ್ಲಿ, ಸಮುದ್ರದ ದಡದಲ್ಲಿ, ಬೇರೆ ಬೇರೆ ದೇಶಗಳಲ್ಲಿ, ದೊಡ್ಡ ದೊಡ್ಡ ಸಭಾಂಗಣದಲ್ಲಿ ಆಗಲಿ ಎಂದು ಬಯಸುತ್ತಾರೆ. ಇನ್ನು ಅನೇಕರು ತಮ್ಮ ಮದುವೆಯನ್ನು ಆಧ್ಯಾತ್ಮಿಕ ವಾತಾವರಣದಲ್ಲಿ ನಡೆಸಲು ಇಚ್ಛಿಸುತ್ತಾರೆ. ಇದಕ್ಕೆ ಉದಾಹರಣೆ ಶಿವ- ಪಾರ್ವತಿ. ಈಗ ಡೆಸ್ಟಿನೇಶನ್‌ ವೆಡ್ಡಿಂಗ್ ಟ್ರೆಂಡ್‌ ಆಗಿದೆ. ಆದರೆ ಈ ಪರಿಕಲ್ಪನೆ ಸಹಸ್ರವರ್ಷಗಳಿಂದಲೂ ಇತ್ತು ಅನ್ನೋದು ನಂಬಲೇಬೇಕಾದ ವಿಷಯ. ಏಕೆಂದರೆ ಶಿವ ಪಾರ್ವತಿಯನ್ನು ಒಂದು ದೇವಾಲಯದಲ್ಲಿ ವರಿಸಿದನು ಎನ್ನಲಾಗುತ್ತದೆ. ಹಾಗಾದರೆ ಆ ಸ್ಥಳ ಯಾವುದು? ಈಗ ಹೇಗಿದೆ ಈ ದೇವಾಲಯ? ಈ ವಿಷಯದ ಬಗೆಗಿನ ಎಲ್ಲಾ ಮಾಹಿತಿಗಳು ಇಲ್ಲಿವೆ.

ಶಿವ- ಪಾರ್ವತಿ ಎಲ್ಲಿ ವಿವಾಹವಾದರು?

ಮಾತಾ ಪಾರ್ವತಿಯು, ಗಂಡನ ರೂಪದಲ್ಲಿ ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಮಾಡಿದ್ದಳು. ಆಕೆಯ ತಪಸ್ಸಿನಿಂದ ಸಂತಸಗೊಂಡ ಶಿವನು ಮಾಘ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಮಾತಾ ಪಾರ್ವತಿಯನ್ನು ಮದುವೆಯಾದನು. ಆ ದಿನವನ್ನೇ ಇಂದು ನಾವು ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ. ಮಹಾದೇವನು ಪಾರ್ವತಿ ದೇವಿಯ ವಿವಾಹ ಪ್ರಸ್ತಾಪವನ್ನು ಒಪ್ಪಿಕೊಂಡಾಗ, ಆಕೆಯ ತಂದೆ ಹಿಮಾಲಯ ಪರ್ವತದಲ್ಲಿ ಮದುವೆಗೆ ಸಿದ್ಧತೆಗಳನ್ನು ನಡೆಸಿದರು ಬಳಿಕ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ತ್ರಿಯುಗಿ ನಾರಾಯಣ ಎಂಬ ಹಳ್ಳಿಯಲ್ಲಿ ಶಿವ- ಪಾರ್ವತಿ ವಿವಾಹವಾದರು.

ಈ ದೇವಾಲಯದ ವೈಶಿಷ್ಟ್ಯಗಳೇನು?

ತ್ರಿಯುಗಿ ನಾರಾಯಣ ದೇವಾಲಯವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದ್ದು, ಪ್ರಾಚೀನ ದಂತಕಥೆಗೆ ಸಾಕ್ಷಿಯಾಗಿ ದೇವಾಲಯದ ಆವರಣದಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಉದಾಹರಣೆಗೆ, ಶಿವ-ಪಾರ್ವತಿ ವಿವಾಹದ ಸಂದರ್ಭ ಈ ದೇವಾಲಯದಲ್ಲಿ ಹೋಮಕ್ಕೆ ಮಾಡಿದ ಬೆಂಕಿ ಅಥವಾ ಜ್ವಾಲೆ ಈಗಲೂ ದಿನದ 24 ಗಂಟೆ ಉರಿಯುತ್ತದೆ. ಮೂರು ಯುಗದಿಂದಲೂ ಇದು ಆರದೆ ಉರಿಯುತ್ತಿದೆ ಎಂದು ಹೇಳಲಾಗುತ್ತದೆ. ಇದನ್ನು ತ್ರಿಯುಗಿ ನಾರಾಯಣ ದೇವಾಲಯದ ಅಖಂಡ ಜ್ವಾಲೆ ಎಂದೂ ಕೂಡ ಕರೆಯುತ್ತಾರೆ ಇದಲ್ಲದೆ, ಇಲ್ಲಿ ಸ್ನಾನ ಮಾಡಲು ರುದ್ರ ಕುಂಡ, ಶುದ್ಧೀಕರಣಕ್ಕಾಗಿ ವಿಷ್ಣು ಕುಂಡ, ನೀರು ಕುಡಿಯಲು ಬ್ರಹ್ಮ ಕುಂಡ ಮತ್ತು ನೈವೇದ್ಯ ಅರ್ಪಿಸಲು ಸರಸ್ವತಿ ಕುಂಡ ಎಂದು ಕರೆಯಲ್ಪಡುವ ನಾಲ್ಕು ಕುಂಡಗಳಿವೆ. ತ್ರಿಯುಗಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಿಕರು ಕೇದಾರನಾಥ ದೇವಾಲಯದ ಚಾರಣದ ಮೂಲ ಶಿಬಿರವಾದ ಗೌರಿ ಕುಂಡಕ್ಕೆ ನಮಸ್ಕರಿಸುತ್ತಾರೆ. ನಂತರ ಪ್ರಯಾಣವನ್ನು ಮುಂದುವರೆಸುತ್ತಾರೆ.

ಇದನ್ನೂ ಓದಿ: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ

ಶಿವ ಮತ್ತು ಪಾರ್ವತಿಯ ಮದುವೆಯಲ್ಲಿ ಬ್ರಹ್ಮ ಅರ್ಚಕನಾಗಿದ್ದನೆಂದು ಹೇಳಲಾಗುತ್ತದೆ ಮತ್ತು ಮದುವೆಯಾಗುವ ಮೊದಲು ಭಗವಾನ್‌ ಬ್ರಹ್ಮನು ಸ್ನಾನ ಮಾಡಿದ ಕೊಳವನ್ನು ಬ್ರಹ್ಮಕುಂಡ ಎಂದು ಕರೆಯಲಾಗುತ್ತದೆ. ಶಿವ- ಪಾರ್ವತಿಯ ಮದುವೆಯಲ್ಲಿ ವಿಷ್ಣು ವಧುವಿನ ಸಹೋದರನಾಗಿ ಎಲ್ಲಾ ಪದ್ಧತಿಗಳನ್ನು ಪೂರೈಸಿದನು. ಮದುವೆಗೆ ಮುಂಚಿತವಾಗಿ ವಿಷ್ಣು ಸ್ನಾನ ಮಾಡಿದ ಸ್ಥಳದಲ್ಲಿ ಅದನ್ನು ವಿಷ್ಣುಕುಂಡ ಎಂದು ಕರೆಯಲಾಯಿತು. ವಿವಾಹದ ಸ್ಥಳದಲ್ಲಿ ಅದರ ನಿಖರವಾದ ಸ್ಥಳ ಗುರುತಿಸಲು ಬ್ರಹ್ಮ ಶಿಲಾ ಎಂಬ ಕಲ್ಲಿದೆ. ಇಲ್ಲಿ ಪವಿತ್ರ ಬೆಂಕಿಯಿಂದ ಉಂಟಾದ ಚಿತಾಭಸ್ಮವನ್ನು ಮನೆಗೆ ಒಯ್ಯುವುದರಿಂದ ಮನೆಯಲ್ಲಿ ಸುಖ, ವೈವಾಹಿಕ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ತ್ರಿಯುಗಿನಾರಾಯಣ ದೇವಾಲಯವು ವಾಸ್ತುಶಿಲ್ಪದ ದೃಷ್ಟಿಯಿಂದ ಪ್ರಸಿದ್ಧ ಕೇದಾರನಾಥ ದೇವಾಲಯದಂತೆ ಕಾಣುತ್ತದೆ. ದೇವಾಲಯದ ದಂತಕಥೆಯ ಪ್ರಕಾರ, ಪ್ರಸ್ತುತ ರಚನೆಯನ್ನು ಸಂತ, ಲೇಖಕ ಮತ್ತು ತತ್ವಜ್ಞಾನಿ ಆದಿ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

 

 

 

Published On - 11:24 am, Fri, 8 March 24