ಒಂದು ಬಾರಿ ರಾವಣ ಸುದೀರ್ಘ ತಪಸ್ಸಿನ ಮೂಲಕ ಪರಮೇಶ್ವರನನ್ನು ಮೆಚ್ಚಿಸಿ ಆತ್ಮಲಿಂಗವನ್ನು ನೀಡುವಂತೆ ಕೇಳಿಕೊಳ್ಳುತ್ತಾನೆ. ಆತನ ಬೇಡಿಕೆಯನ್ನು ಮನ್ನಿಸಿದ ಶಿವ, ಆತ್ಮಲಿಂಗವನ್ನು ದಾರಿ ಮಧ್ಯದಲ್ಲಿ ಎಲ್ಲಿಯೂ ಭೂಸ್ಪರ್ಷ ಮಾಡದಂತೆ ತಿಳಿಸಿ ಆತನಿಗೆ ನೀಡುತ್ತಾನೆ. ರಾವಣನಿಗೆ ಶಿವ ಆತ್ಮಲಿಂಗವನ್ನು ನೀಡಿದ ವಿಚಾರವನ್ನು ತಿಳಿದ ದೇವತೆಗಳು, ತನ ಬಲ ಹೆಚ್ಚಿ ಇನ್ನೇನು ಕೆಡುಕಾಗುವುದೋ ಎಂದು ಭಯಭೀತ ರಾಗುತ್ತಾರೆ. ಈ ಸಮಸ್ಯೆಗೆ ಮುಕ್ತಿ ಹಾಡುವಂತೆ ಶಿವ ಪುತ್ರ ಗಣೇಶನ ಮೊರೆ ಹೋಗುತ್ತಾರೆ. ದೇವತೆಗಳ ಕೂಗನ್ನಾಲಿಸಿದ ಗಣೇಶ, ಬಾಲ ಗಣಪತಿಯಾಗಿ ಅವರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡುತ್ತಾನೆ. ಇತ್ತ ಆತ್ಮಲಿಂಗವನ್ನು ಹೊತ್ತುನಡೆದ ಮಹಾ ಬ್ರಾಹ್ಮಣ ರಾವಣನಿಗೆ ಸಂಧ್ಯಾವಂದನೆಗೆ ಸಮಯವಾಗುತ್ತದೆ.ಅದೇ ಸಮಯದಲ್ಲಿ ಬಾಲ ಗಣಪತಿ ಅದೇ ಹಾದಿಯಲ್ಲಿ ಬರುತ್ತಾನೆ. ರಾವಣನೂ ಆತ್ಮಲಿಂಗವನ್ನು ಹಿಡಿದು ನಿಲ್ಲುವುದಕ್ಕಾಗಿ ಜನರನ್ನು ಹುಡುಕು ತ್ತಿರುತ್ತಾನೆ.
ಗಣಪತಿಯನ್ನು ಕಂಡ ರಾವಣ ಆತನಲ್ಲಿ ಆತ್ಮಲಿಂಗವನ್ನು ನೀಡಿ ತಾನು ಆದಷ್ಟು ಬೇಗ ಸಂಧ್ಯಾವಂದನೆ ಮುಗಿಸಿ ಬರುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ಬಾಲಕ ತಾನು ಹತ್ತು ಎಣಿಸುವುದರೊಳಗಾಗಿ ಇಲ್ಲಿರಬೇಕು ಇಲ್ಲವಾದಲ್ಲಿ ಆತ್ಮಲಿಂಗವನ್ನು ಇಲ್ಲಿಯೇ ಇಟ್ಟು ಹೋಗುವುದಾಗಿ ತಿಳಿಸುತ್ತಾನೆ. ಅದಕ್ಕೊಪ್ಪಿದ ರಾವಣ ಸಂಧ್ಯಾವಂದನೆಗೆಂದು ನೀರಿಗಿಳಿಯುತ್ತಾನೆ. ಇತ್ತ ಗಣಪತಿ ರಾವಣನಿಗೆ ಕೇಳಿಸುವಂತೆ ಸಂಖ್ಯೆಗಳನ್ನು ಎಣಿಸುತ್ತಾನೆ. ಉಪಾಯವಾಗಿ ಕೊನೆಯಲ್ಲಿ ಸಂಖ್ಯೆಯನ್ನು ವೇಗವಾಗಿ ಎಣಿಸಿ ಹತ್ತು ಎನ್ನುತ್ತಾನೆ. ಲಿಂಗವನ್ನು ನೆಲದಲ್ಲಿಟ್ಟು ಅಲ್ಲಿಂದ ತೆರಳುತ್ತಾನೆ. ರಾವಣ ನೀರಿನಿಂದ ಮೇಲೆ ಬಂದು ನೋಡುತ್ತಾನೆ. ಆತ್ಮಲಿಂಗ ಅಲ್ಲಿಯೇ ಪ್ರತಿಷ್ಠಾಪನೆಯಾಗಿದೆ. ಅದೇ ಗೋಕರ್ಣ.ಆಗ ಪರಮೇಶ್ವರನ ಪರಮಭಕ್ತನಾದಂತಹ ರಾವಣ ಈ ಆತ್ಮ ಲಿಂಗವನ್ನು ಎತ್ತಲು ಪ್ರಯತ್ನಿಸುತ್ತಾನೆ. ಮಹಾಬಲಶಾಲಿಯಾದ ರಾವಣ ಆತ್ಮಲಿಂಗವನ್ನು ಕೀಳುವ ಪ್ರಯತ್ನದೊಂದಿಗೆ ಕೈಗೆ ಬಂದ ಆತ್ಮಲಿಂಗವನ್ನು ಈಗಿನ ಕಾರವಾರದ ಶೇಜವಾಡ, ಕುಮಟಾದ ಧಾರೇಶ್ವರ, ಹೊನ್ನಾವರದ ಗುಣವಂತೆ ಮತ್ತು ಮುರುಡೇಶ್ವರದಲ್ಲಿ ಆತ್ಮಲಿಂಗದ ಕ್ಷೇತ್ರಗಳಾದವು.
ನಮ್ಮ ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಒಂದು. ಪವಿತ್ರವಾದ ಯಾತ್ರಾಸ್ಥಳದಲ್ಲಿ ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರಬ್ಬಿ ಸಮುದ್ರ. ಇಂಥಹ ಪ್ರಕೃತಿ ರಮಣೀಯತೆಯಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರದಲ್ಲಿ ಶಿವನ ಆತ್ಮ ಲಿಂಗವು ನೆಲೆಸಿದೆ. ಈ ಪುಣ್ಯ ಕ್ಷೇತ್ರದ ಬಗ್ಗೆ ಸಾಕಷ್ಟು ಉಲ್ಲೇಖಗಳನ್ನು ಕಾಣಬಹುದು. ಪ್ರಮುಖವಾಗಿ ಪವಿತ್ರವಾದ ಗ್ರಂಥವಾದ ರಾಮಾಯಾಣ ಹಾಗೂ ಮಹಾ ಭಾರತದಲ್ಲಿ ಕಾಣಬಹುದಾಗಿದೆ. ಇಂಥಹ ಮಾಹಿಮಾನ್ವಿತ ದೇವಾಲಯವಿರುವುದು ನಮ್ಮ ಕರ್ನಾಟಕದಲ್ಲಿ ಎಂಬುದು ಹೆಮ್ಮೆಯ ವಿಷಯವಾಗಿದೆ.
ಭೂ ಕೈಲಾಸ, ಪರಶುರಾಮ ಭೂಮಿ, ಶ್ರೀ ಕ್ಷೇತ್ರ ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪ್ರಸಿದ್ಧವಾದ ಯಾತ್ರಾಸ್ಥಳ ಕಾಶಿ, ರಾಮೇಶ್ವರದಷ್ಟೆ ಪವಿತ್ರ ಸ್ಥಳ ಎಂದು ಭಕ್ತರು ಭಾವಿಸುತ್ತಾರೆ. ಕಡಲತೀರದ ಈ ಸ್ಥಳ ಸುಂದರವಾಗಿದೆ.
ಕಾರವಾರಕ್ಕೆ ಸಮೀಪದ ಶೇಜವಾಡದ ಶೆಜ್ಜೇಶ್ವರ.ಶಿವನ ಆತ್ಮಲಿಂಗದಿಂದ ರೂಪುತಳೆದ ಪಂಚಲಿಂಗೇಶ್ವರಗಳಲ್ಲಿ ಶೇಜವಾಡದ ಶೆಜ್ಜೇಶ್ವರನೇ ಪ್ರಥಮ ಲಿಂಗವೆಂದು ಹೇಳಲಾಗುತ್ತದೆ. ಹೀಗಾಗಿ ಶೇಜವಾಡವು ಭಕ್ತರ ಪಾಲಿಗೆ ಗೋಕರ್ಣದಷ್ಟೇ ಪುರಾಣ ಪ್ರಸಿದ್ಧ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣವಾಗಿರುವ ಗರ್ಭಗುಡಿಯಲ್ಲಿ ಅಂದಾಜು 7 ಅಡಿ ಎತ್ತರದ ಲಿಂಗವಿದೆ. ಆರಂಭದಲ್ಲಿ ಶೆಜ್ಜೇಶ್ವರನನ್ನು ಸಂಪುಟೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಲಿಂಗದ 20 ಅಡಿ ಆಳದಲ್ಲಿ ಆತ್ಮಲಿಂಗದ ಭಾಗವಿದೆ. 20 ಅಡಿ ಕೆಳಗಿಳಿಯಲು ಮೆಟ್ಟಿಲುಗಳೂ ಇವೆ.
ಗೋಕರ್ಣದ ಸುತ್ತಮುತ್ತಲಿನ ಪಂಚಲಿಂಗಂ ದೇವಾಲಯಗಳಲ್ಲಿ ಮುರುಡೇಶ್ವರ ದೇವಾಲಯ ಕೂಡ ಒಂದು.
‘ಮುರುಡೇಶ್ವರ’ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಕಂಡುಕಾಗಿರಿ ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ. . ಭಗವಾನ್ ಶಿವನಿಗೆ ಅರ್ಪಿತವಾದ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು.
ಶಿವನ ದೈತ್ಯ ವಿಗ್ರಹವು ಅತ್ಯಂತ ಜನಪ್ರಿಯವಾಗಿದೆ. ಅಂಕಿ ಅಂಶಗಳ ಪ್ರಕಾರ, ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಎಂದು ಹೇಳಲಾಗುತ್ತದೆ. ಈಗಾಗಲೇ ಹೇಳಿರುವ ಹಾಗೇ ಈ ಶಿವ ಪ್ರತಿಮೆಯು ಸರಿಸುಮಾರು 123 ಅಡಿ ಎತ್ತರವನ್ನು ಹೊಂದಿದೆ.
ರಾಜ ಗೋಪುರ ಎಂದರೆ ‘ಕಿಂಗ್ ಆಫ್ ಟವರ್ಸ್’, ಮುರುಡೇಶ್ವರದಲ್ಲಿರುವ ಈ ದೇವಾಲಯದ ಗೋಪುರವು ಅದರ ಹೆಸರೇ ಸೂಚಿಸುವಂತೆ ಮುರುಡೇಶ್ವರದ ರಾಜನಿದ್ದಂತಿದೆ. ರಾಜ ಗೋಪುರದಲ್ಲಿ 20 ಮಹಡಿಗಳಿದ್ದು, ಜನರು ಲಿಫ್ಟ್‌ಗಳನ್ನು ಬಳಸುವ ಮೂಲಕ ಗೋಪುರದ ಮೇಲ್ಭಾಗವನ್ನೂ ತಲುಪಬಹುದು. ಗೋಪುರದ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು. ಗೋಪುರದ ತುದಿಗೆ ಹೋಗುತ್ತಿದ್ದಂತೆ ಆಕಾಶದಲ್ಲಿ ಹಾರಾಡುತ್ತಿರುವ ಅನುಭವ ಸಿಗುವುದು. ಅತಿ ದೊಡ್ಡ ಶಿವನ ಪ್ರತಿಮೆಯೂ ಕೂಡ ಹತ್ತಿರದಲ್ಲಿರುವಂತೆ ಕಾಣುತ್ತದೆ.
ಹೊನ್ನಾವರ ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿಹೊನ್ನಾವರ ಪಟ್ಟಣದಿಂದ 10 ಕಿ.ಮೀ. ಸಮೀಪದಲ್ಲಿಗುಣವಂತೆ ಗ್ರಾಮದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನವಿದ್ದು ಗುಣವಂತೇಶ್ವರ ಎಂದೂ ಪ್ರಸಿದ್ಧಿ ಪಡೆದಿದೆ.
ಅಭಿಷೇಕ ಪ್ರಿಯ :
ಗುಣವಂತೆಯ ಶಂಭುಲಿಂಗೇಶ್ವರ ಅಭಿಷೇಕ ಪ್ರಿಯ. ದೇವರಿಗೆ ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿಇದೆ. ನೀರಿನ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳೆ ನೀರಿನ ಅಭಿಷೇಕ ಮುಂತಾದವುಗಳನ್ನು ಭಕ್ತರು ಹರಕೆಯಾಗಿ ಸಲ್ಲಿಸುತ್ತಾರೆ. ಮನೋಭಿಲಾಷೆಗಳ ಈಡೇರಿಕೆಗೆ ಅಭಿಷೇಕದ ಹರಕೆ ಸಲ್ಲಿಸುವ ಸಂಪ್ರದಾಯ ನಡೆದುಬಂದಿದ ದೇವಾಲಯದ ಮುಂಭಾಗದಲ್ಲಿಕೊಳವಿದ್ದು ಇಲ್ಲಿಸ್ನಾನ ಮಾಡಿದರೆ ಚರ್ಮರೋಗ ಗುಣವಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.ಶಿವರಾತ್ರಿಯಂದು ನಾನಾ ಭಾಗಳಿಂದ ಭಕ್ತರು ಆಗಮಿಸಿ ದೇವರಿಗೆ ಅಭಿಷೇಕ ಮಾಡಿ ಕೃತಾರ್ಥರಾಗುತ್ತಾರೆ.
ಈಗ ನಾವು ಪರಿಚಯಮಾಡಿಕೊಳ್ಳುತ್ತಿರುವ ಧಾರೇಶ್ವರ ಕ್ಷೇತ್ರವೂ ಗೋಕರ್ಣದ ಸಮೀಪದಲ್ಲೇ ಇದೆ. ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ಕುಮಟಾದಿಂದ ಐದೇ ಕಿಲೋಮೀಟರುಗಳಷ್ಟು ದೂರ ಕ್ರಮಿಸಿದರೆ ಸಾಕು, ಈ ಜಿಲ್ಲೆಯ ಅತಿ ಪುರಾತನ ದೇವಾಲಯಗಳಲ್ಲೊಂದಾದ ಧಾರೇಶ್ವರದ ಧಾರಾನಾಥ ದೇಗುಲಕ್ಕೆ ನೀವು ತಲುಪಬಹುದು.ದೇಗುಲದ ನವರಂಗಕ್ಕೆ ಮೂರು ಕಡೆಯಿಂದಲೂ ಪ್ರವೇಶಿಸಲು ಅನುಕೂಲವಾಗುವಂತೆ ಬಾಗಿಲುಗಳಿವೆ. ಒರಗಿಕೊಳ್ಳಲು ಕಕ್ಷಾಸನ. ಅದನ್ನು ಆಧರಿಸಿದ ಕಿರುಕಂಬಗಳೂ ನವರಂಗವನ್ನು ಅಲಂಕರಿಸಿದ ದೊಡ್ಡಕಂಬಗಳೂ ಸೊಗಸಾದ ಕೆತ್ತನೆಯಿಂದ ಕೂಡಿವೆ. ಬುಡದಲ್ಲಿ ಚಚ್ಚೌಕವಾಗಿರುವ ಕಂಬಗಳನ್ನು ತಿರುಗಣೆಯ ಯಂತ್ರದಲ್ಲಿ ದುಂಡಗೆ ವಿನ್ಯಾಸಗೊಳಿಸಿ ಬಗೆಬಗೆಯ ಚಿತ್ತಾರಗಳನ್ನು ಕೆತ್ತಿರುವ ರೀತಿ ಮನಸೆಳೆಯುತ್ತದೆ. ಗರ್ಭಗುಡಿಯಲ್ಲಿ ಶಿವಲಿಂಗ. ಇದೇ ಧಾರೇಶ್ವರನೆಂಬ ಹೆಸರು ಪಡೆದ ರೂಪ. ಒಳಗುಡಿಯಲ್ಲಿ ಶಿವನಿಗೆ ಅಭಿಮುಖವಾಗಿರುವ ನಂದಿಯಿದೆ. ಇಲ್ಲಿಯೇ ಹಲವು ಪ್ರಾಚೀನ ವಿಗ್ರಹಗಳಿರುವುದನ್ನು ತಪ್ಪದೆ ಗಮನಿಸಿ. ಒಂದೆಡೆ ವೇಣುಗೋಪಾಲನ ವಿಗ್ರಹ. ಕೊಳಲು ನುಡಿಸುತ್ತಿರುವ ಕೃಷ್ಣನ ಸುತ್ತ ಗೋಪಿಕೆಯರೂ ದನಕರುಗಳೂ ಗೊಲ್ಲರೂ ಇದ್ದಾರೆ. ಇನ್ನೊಂದು ಪ್ರತಿಮೆ- ಶಂಖಚಕ್ರಗದಾಧಾರಿಯಾದ ವಿಷ್ಣುವಿನದು. ಪ್ರತ್ಯೇಕ ಗೂಡುಗಳಲ್ಲಿ ಗಣೇಶ, ಸರಸ್ವತಿಯರ ಪ್ರತಿಮೆಗಳಿವೆ. ಎಡತೊಡೆಯನ್ನೂ ಬಲಪಾದವನ್ನೂ ನೆಲಕ್ಕೂರಿ ಕುಳಿತ ಗಣಪತಿಯ ವಿಗ್ರಹ ಮೋಹಕವಾಗಿದೆ.
ಇದನ್ನೂ ಓದಿ: Mahashivratri 2024: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ
ಗಣಪತಿ ತೊಟ್ಟ ಆಭರಣಗಳು, ಸೊಂಟಕ್ಕೆ ಸುತ್ತಿದ ಹಾವು, ಪಾದದೆಡೆಯ ಇಲಿ- ಎಲ್ಲವೂ ಸೊಗಸಾಗಿ ಚಿತ್ರಿತವಾಗಿವೆ. ಕೈಗಳಲ್ಲಿ ಜಪಮಾಲೆ, ಪುಸ್ತಕಗಳನ್ನು ಹಿಡಿದು ವರದಹಸ್ತೆಯಾಗಿರುವ ಸರಸ್ವತಿಯ ವಿಗ್ರಹವೂ ಸುಂದರವಾಗಿದೆ.ಆ ಕಾಲದ ಶಿಲ್ಪಗಳ ರೂಪರೇಖೆಗಳೇ ಮುಂದಿನ ಹೊಯ್ಸಳಶಿಲ್ಪಗಳಿಗೆ ಮಾದರಿಯಾಗಿದ್ದರೆ ಅಚ್ಚರಿಯಿಲ್ಲ. ಧಾರೇಶ್ವರ ದೇಗುಲದ ಆವರಣದಲ್ಲಿ ಒಂದು ಕೊಳವೂ ಇದೆ. ಇಲ್ಲೇ ಬದಿಯಲ್ಲಿ ಹಲವು ಶಾಸನಗಳನ್ನೂ ವೀರಗಲ್ಲುಗಳನ್ನೂ ಇರಿಸಿದ್ದು, ಶಾಸನದಲ್ಲಿ ರಾಣಿಯೊಬ್ಬಳು ಗೋದಾನ ನೀಡುತ್ತಿರುವುದರ ಸಚಿತ್ರ ವಿವರಣೆಯಿದೆ.
ಬರಹವಲ್ಲದೆ ನಾಲ್ಕು ಸ್ತರದ ಚಿತ್ರಣವಿರುವ ಈ ಶಾಸನದಲ್ಲಿ ಅನುಕ್ರಮವಾಗಿ ರಾಜರಾಣಿಯರು ದೇಗುಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ದೃಶ್ಯ, ರಾಜರಾಣಿಯರು ಪರಿವಾರದೊಡನಿರುವ ಚಿತ್ರ, ಯೋಧರ ಸಾಲು ಹಾಗೂ ರಾಣಿಯು ದನಕರುಗಳನ್ನು ಯಾಚಕರಿಗೆ ದಾನವಾಗಿ ನೀಡುತ್ತಿರುವುದರ ಚಿತ್ರನಿರೂಪಣೆ ಸೊಗಸಾಗಿ ಮೂಡಿಬಂದಿದೆ. ಇಂತಹ ವಿಶಿಷ್ಟ ಶಾಸನ ಬೇರೆಲ್ಲೂ ಕಂಡುಬರುವುದಿಲ್ಲವೆಂಬುದು ವಿಶೇಷ. ಇದಲ್ಲದೆ ಹಲವು ವೀರಗಲ್ಲುಗಳನ್ನೂ ಇಲ್ಲಿ ಕಾಣಬಹುದು. ಧಾರೇಶ್ವರನ ವಾರ್ಷಿಕ ರಥೋತ್ಸವಕ್ಕಾಗಿ ಇತ್ತೀಚೆಗೆ ನಿರ್ಮಿಸಿರುವ ರಥದ ಮೇಲಿನ ಕಾಷ್ಠಶಿಲ್ಪಗಳು ಗಮನಸೆಳೆಯುವಂತಿವೆ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಇನ್ನಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ