ದಕ್ಷಿಣ ಕನ್ನಡ ದೇವಾಲಯಗಳ ಬೀಡು ಎಂದರೆ ತಪ್ಪಾಗಲಾರದು. ಅಲ್ಲಿನ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ಕಾರಿಂಜ ಕ್ಷೇತ್ರವೂ (Karinjeshwara Temple) ಸೇರಿಕೊಂಡಿದೆ. ಬಹಳ ಸುಂದರವಾದ ಸ್ಥಳದಲ್ಲಿ ಈ ದೇವಾಲಯವಿದ್ದು ಚಾರಣ ಮಾಡುವವರಿಗೆ ಅದ್ಭುತವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಅಂದಾಜು 1500 ಅಡಿ ಎತ್ತರದಲ್ಲಿದೆ. ಶಿವನಿಗೂ(Lord Shiva), ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
ಈ ಬೆಟ್ಟವನ್ನು ದೂರದಿಂದ ನೋಡಿದಾಗ ಏಕಶಿಲೆಯಂತೆ ಕಾಣುತ್ತದೆ. ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನ ತನಕ ಸುಮಾರು 500ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಮಾಡಬೇಕಾಗುತ್ತದೆ. ಇದರ ಹೊರತಾಗಿ ಬೆಟ್ಟದ ಅರ್ಧದವರೆಗೆ ಉತ್ತಮ ಡಾಂಬರು ರಸ್ತೆಯೂ ಇದೆ. ಬೆಟ್ಟದ ಬುಡದಲ್ಲಿ ಗದೆಯ ಆಕಾರದ ವಿಶಾಲ ‘ಗದಾತೀರ್ಥ’ ಕಾಣಸಿಗುತ್ತದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಬಹುದು. ಕೆರೆಯ ಪಕ್ಕದಲ್ಲಿ ಪುರಾತನ ಗುಹೆಯೊಂದಿದೆ. ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ ಸಾಗಿದರೆ ಪಾರ್ವತಿ ಇರುವ ಗುಡಿ ಸಿಗುತ್ತದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಇರುವ ಏಕಶಿಲಾ ಗಣಪತಿ, ಅದರ ಎದುರಿಗಿರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಮೊಣಕಾಲು ತೀರ್ಥ, ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳನ್ನು ಹಾಗೂ ಸಣ್ಣಪುಟ್ಟ ತೀರ್ಥಗಳನ್ನು ಕಾಣಬಹುದು.
ಬೆಟ್ಟವು ಬೃಹತ್ ಬಂಡೆಗಳಿಂದ ಮಾಡಲ್ಪಟ್ಟಿದ್ದು ಕಪಿಗಳಿಗೆ ಆಶ್ರಯ ತಾಣವಾಗಿದೆ. ಇಲ್ಲಿ ಕಾರಿಂಜೇಶ್ವರನಿಗೆ ಮಾಡಿದ ನೈವೇದ್ಯ ಶ್ರೀರಾಮನ ಸೈನಿಕರಾದ ವಾನರರಿಗೆ ಅರ್ಪಿತವಾಗುತ್ತದೆ. ಅಲ್ಲದೆ ಇಲ್ಲಿನ ವಾನರರಿಗೆ ಆಹಾರ ನೀಡುವುದಾಗಿ ಹರಕೆ ಹೇಳಿಕೊಂಡರೆ ಕೋತಿಗಳ ಉಪದ್ರವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಪ್ರತಿದಿನ ಮಧ್ಯಾಹ್ನ ದೇವರಿಗೆ ಪೂಜೆಯಾದ ನೈವೇದ್ಯವನ್ನು ಅಲ್ಲಿಯೇ ಇರುವ ಒಂದು ಕಲ್ಲಿನ ಮೇಲೆ ಇಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಕಪಿಗಳು ಬಂದು ನೈವೇದ್ಯ ಸ್ವೀಕರಿಸುತ್ತವೆ.
ಹಿಂದೂ ಪುರಾಣಗಳಲ್ಲಿ ನಾಲ್ಕು ಯುಗಗಳಲ್ಲಿಯೂ ಈ ಕ್ಷೇತ್ರವನ್ನು ಉಲ್ಲೇಖಿಸಲಾಗಿದೆ. ಕ್ರುತ ಯುಗದ ಸಮಯದಲ್ಲಿ ‘ರೌದ್ರ ಗಿರಿ’, ‘ದ್ವಾಪರಯುಗದಲ್ಲಿ‘ ಭೀಮಾ ಶೈಲಾ ’, ‘ತ್ರೇತಾ ಯುಗ’ದಲ್ಲಿ ಗಜೇಂದ್ರ ಗಿರಿ’, ಮತ್ತು ‘ಕಲಿಯುಗ’ದಲ್ಲಿ ‘ಕಾರಿಂಜ’ ಎಂದು ಕರೆಯಲಾಗುತ್ತಿದೆ. ಇದು ನಾಲ್ಕು ಪ್ರಮುಖ ಯುಗಗಳಿಗೆ ಸಾಕ್ಷಿಯಾಗಿರುವ ದೇವಾಲಯವಾಗಿದೆ. ಇಡೀ ಬೆಟ್ಟ ಪ್ರದೇಶ ಸುಮಾರು 25 ಎಕರೆ ವ್ಯಾಪಿಸಿದೆ. ಇಡೀ ಕ್ಷೇತ್ರವನ್ನು ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ.
ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ನಾಲ್ಕು ದಿನ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ- ಪಾರ್ವತಿಯರ ಭೇಟಿ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಶಿವನು ಪಾರ್ವತಿಯ ಸಂಗ ಬಯಸಿ ಮೇಲಿನ ಬೆಟ್ಟದಿಂದ ಬಹಳ ಆತುರದಿಂದ ಇಳಿದು ಬರುತ್ತಾನೆ. ಆದರೆ ಪಾರ್ವತಿಯು ರಜಸ್ವಲೆಯಾಗಿರುವುದು ತಿಳಿದು, ಅತೀ ವೇಗದಲ್ಲಿ ಆ ಕಡಿದಾದ ಬೆಟ್ಟವನ್ನು ಏರಿ ತನ್ನ ಸ್ಥಾನವನ್ನು ಸೇರುತ್ತಾನೆ. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಅರ್ಚಕರು, ದೇವರ ವಿಗ್ರಹವನ್ನು ತಲೆಯಲ್ಲಿ ಹೊತ್ತುಕೊಂಡು ಕಡಿದಾದ ಬೆಟ್ಟವನ್ನು ಓಡಿಕೊಂಡೇ ಹೋಗುವುದು ನಡೆದುಕೊಂಡು ಬಂದಿದೆ ಎಂಬ ಮಾತು ಕೂಡ ಇಲ್ಲಿದೆ.
ಇದನ್ನೂ ಓದಿ: ಶಿವನ ನೈವೇದ್ಯಕ್ಕೆ ಈ ಸುಲಭ ಸಿಹಿತಿಂಡಿಗಳು ಸಾಕು
ನಂಬಿಕೆಯ ಪ್ರಕಾರ ಎಂಟುನೂರು ವರ್ಷಗಳ ಹಿಂದೆ ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಎಂಬ ಇಬ್ಬರು ಬ್ರಾಹ್ಮಣ ಸಹೋದರರು ಉತ್ತರ ಕನ್ನಡದ ಕುಂಬಲದಿಂದ ಸನಾತನ ಸಂಸ್ಕೃತಿಯ ಪ್ರಚಾರಕಾಗಿ ಬಂದಿದ್ದರು. ಆ ಸಮಯದಲ್ಲಿ ತುಳುನಾಡಲ್ಲಿ ರಾಜ ಆಡಳಿತ ಅಸ್ಥಿತ್ವದಲ್ಲಿ ಇತ್ತು. ಯಾವ ಜಾಗದಲ್ಲಿ ಇಚ್ಳತ್ತಾಯ ನೆಲೆಯಾದನು ಆ ಪ್ರದೇಶ ಇಚ್ಲಂಪಾಡಿ ಎಂದು ಪ್ರಸಿದ್ಧಿಯಾಯಿತು ಹಾಗೂ ಎಲ್ಲಿ ಕಾರಿಂಜತ್ತಾಯ ನೆಲೆಯಾದನು ಆ ಜಾಗ ಕಾರಿಂಜ ಎಂದು ಪ್ರಸಿದ್ದಿಯಾಯಿತು. ಕಾರಿಂಜ ಮತ್ತು ಇಚ್ಲಂಪಾಡಿ ನಡುವೆ ಒಂದು ಸುಂದರವಾದ ಶಿವ ದೇವಸ್ಥಾನ ನಿರ್ಮಾಣವಾಯಿತು. ಈ ಕ್ಷೇತ್ರ ಕಾರಿಂಜೇಶ್ವರ ಎಂದು ಪ್ರಸಿದ್ಧಿಯಾಯಿತು.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವು ಮಂಗಳೂರಿನಲ್ಲಿದೆ, ಇದು ದೇವಾಲಯದಿಂದ ಕೇವಲ 35 ಕಿ.ಮೀ ದೂರದಲ್ಲಿದೆ.
ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ದೇವಾಲಯದಿಂದ 35 ಕಿ.ಮೀ ದೂರದಲ್ಲಿರುವ ಮಂಗಳೂರಿನಲ್ಲಿದೆ.
ರಸ್ತೆ ಮೂಲಕ: ಈ ದೇವಾಲಯವು ರಸ್ತೆಗೆ ಉತ್ತಮವಾಗಿ ಸಂಪರ್ಕ ಹೊಂದಿದೆ. ಇದು ಮಂಗಳೂರಿನಿಂದ 35 ಕಿ.ಮೀ ದೂರದಲ್ಲಿದೆ ಮತ್ತು ಬಂಟ್ವಾಳದಿಂದ ಕೇವಲ 14 ಕಿ.ಮೀ ದೂರದಲ್ಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:01 pm, Fri, 8 March 24