Makar Sankranti 2026: ಮಕರ ಸಂಕ್ರಾಂತಿಯಂದು ಗಾಳಿಪಟಗಳನ್ನು ಏಕೆ ಹಾರಿಸಲಾಗುತ್ತದೆ ಎಂದು ತಿಳಿದಿದೆಯೇ?
ಈ ವರ್ಷ ಮಕರ ಸಂಕ್ರಾಂತಿ ಜನವರಿ 14 ರಂದು ಬಂದಿದೆ. ಈ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಮತ್ತು ಸಂಪ್ರದಾಯಗಳೊಂದಿಗೆ ಆಚರಿಸುತ್ತಾರೆ. ಅದರಂತೆ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯವೂ ಇದೆ. ಆದರೆ ಗಾಳಿಪಟಗಳನ್ನು ಹಾರಿಸುವ ಹಿಂದೆ ಹಲವು ಕಾರಣಗಳಿವೆ. ಅವು ಏನು ಎಂದು ಇಲ್ಲಿ ತಿಳಿದುಕೊಳ್ಳಿ.

ಹಿಂದೂ ಕ್ಯಾಲೆಂಡರ್ ಮತ್ತು ದೃಕ್ ಪಂಚಾಂಗದ ಪ್ರಕಾರ, 2026ರ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಬುಧವಾರದ ದಿನ ಆಚರಿಸಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ ಮಕರ ಸಂಕ್ರಾಂತಿಯಂದು ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಹಬ್ಬದ ದಿನದಂದು ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯ ಹೊಸದಲ್ಲ. ಇದು ರಾಮನ ಕಾಲದಿಂದಲೂ ನಡೆದು ಬಂದಿದೆ. ಇದು ಮೊಘಲರೊಂದಿಗೆ ಸಹ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.
ಗಾಳಿಪಟಕ್ಕೂ ರಾಮನಿಗೂ ಇದೆ ನಂಟು:
ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದರ ಹಿಂದೆ ಧಾರ್ಮಿಕ ನಂಬಿಕೆಗಳಿವೆ. ರಾಮಾಯಣದ ಪ್ರಕಾರ, ರಾಮನು ಮೊದಲ ಬಾರಿಗೆ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸಿದನು. ಅವನ ಗಾಳಿಪಟವು ಬಹಳ ಎತ್ತರಕ್ಕೆ ಹಾರಿ ಇಂದ್ರಲೋಕವನ್ನು ತಲುಪಿತು ಎಂದು ಹೇಳಲಾಗುತ್ತದೆ. ಅಂದಿನಿಂದ, ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಪ್ರಾರಂಭವಾಗಿದೆ. ಇದನ್ನು ರಾಮಚರಿತಮಾನಸದ ಬಾಲಕಾಂಡದಲ್ಲಿ ಉಲ್ಲೇಖಿಸಲಾಗಿದೆ.
ಗಾಳಿಪಟ ಹಾರಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನ:
ಮಕರ ಸಂಕ್ರಾಂತಿಯ ಸಮಯದಲ್ಲಿ ಸಾಕಷ್ಟು ಚಳಿ ಇರುವುದರಿಂದ ಚಳಿಗಾಲದ ಸೂರ್ಯಪ್ರಕಾಶದಲ್ಲಿ ಗಾಳಿಪಟ ಹಾರಾಟ ಮಾಡುವುದರಿಂದ ದೇಹಕ್ಕೆ ವಿಟಮಿನ್ ಡಿ ದೊರೆಯುತ್ತದೆ. ವಿಟಮಿನ್ ಡಿ ಎಲುಬುಗಳ ಬಲವರ್ಧನೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿದ್ದು, ಚಳಿಗಾಲದಲ್ಲಿ ಇದರ ಕೊರತೆ ಸಾಮಾನ್ಯವಾಗಿ ಕಂಡುಬರುತ್ತದೆ. ಹೊರಗಡೆ ಸಮಯ ಕಳೆಯುವುದರಿಂದ ಈ ಕೊರತೆಯನ್ನು ಸಹಜವಾಗಿ ತುಂಬಿಕೊಳ್ಳಬಹುದು. ಇದಲ್ಲದೇ ಗಾಳಿಪಟ ಹಾರಿಸುವಾಗ ಕೈಗಳು, ಭುಜಗಳು ಮತ್ತು ಬೆನ್ನು ಸ್ನಾಯುಗಳು ನಿರಂತರವಾಗಿ ಚಲಿಸುತ್ತವೆ. ದಾರವನ್ನು ಹಿಡಿದು ನಿಯಂತ್ರಿಸುವ ಕ್ರಿಯೆಯಿಂದ ಹಿಡಿತ ಶಕ್ತಿ ಹೆಚ್ಚುತ್ತದೆ ಮತ್ತು ಸ್ನಾಯುಗಳು ಬಲವಾಗುತ್ತವೆ.
ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?
ಗಾಳಿಪಟ ಹಾರಿಸುವಿಕೆಯ ಹಿಂದಿನ ಇತಿಹಾಸ:
ಗಾಳಿಪಟ ಹಾರಾಟಕ್ಕೆ ಸುಮಾರು 2,000 ವರ್ಷಗಳ ಇತಿಹಾಸವಿದೆ. ಇದು ಚೀನಾದಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ, ಗಾಳಿಪಟಗಳನ್ನು ಸಂದೇಶಗಳನ್ನು ಕಳುಹಿಸಲು ಬಳಸಲಾಗುತ್ತಿತ್ತು. ಚೀನಾದ ಪ್ರಯಾಣಿಕರಾದ ಫಾ ಹಿಯಾನ್ ಮತ್ತು ಹ್ಯೂಯೆನ್ ತ್ಸಾಂಗ್ ಅವರು ಗಾಳಿಪಟಗಳನ್ನು ಭಾರತಕ್ಕೆ ತಂದರು. ಆರಂಭದಲ್ಲಿ, ಯುದ್ಧಭೂಮಿಯಲ್ಲಿ ಪರಸ್ಪರ ಸಂದೇಶಗಳನ್ನು ಕಳುಹಿಸುವ ಸಂಪ್ರದಾಯದಲ್ಲಿ ಗಾಳಿಪಟಗಳನ್ನು ಬಳಸಲಾಗುತ್ತಿತ್ತು. ಮೊಘಲರು ದೆಹಲಿಯಲ್ಲಿ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಅದರ ನಂತರ, ಗಾಳಿಪಟ ಹಾರಾಟವು ಕ್ರಮೇಣ ಭಾರತದಲ್ಲಿ ಹೊಸ ಕ್ರೀಡೆಯಾಗಿ ಗುರುತಿಸಲ್ಪಟ್ಟಿತು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Tue, 13 January 26
