Makar Sankranti 2026: ಸೂರ್ಯ ಸಂಕ್ರಮಣ ಹಾಗೂ ಮಕರ ಜ್ಯೋತಿಯ ರಹಸ್ಯ ಮತ್ತು ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಅಪೂರ್ವ ಪರ್ವವಾಗಿದ್ದು, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ದಿನ. ಇದು ಉತ್ತರಾಯಣ ಪುಣ್ಯಕಾಲದ ಆರಂಭ. ಎಳ್ಳು-ಬೆಲ್ಲ ಹಂಚುವುದು, ಸೂರ್ಯ ಪೂಜೆ, ಗೋ ಪೂಜೆ, ಮತ್ತು ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿ ದರ್ಶನ ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ಹಬ್ಬದ ಮಹತ್ವದ ಕುರಿತು ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

ಮಕರ ಸಂಕ್ರಾಂತಿ ಹಾಗೂ ಮಕರ ಜ್ಯೋತಿಯ ರಹಸ್ಯ ಮತ್ತು ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಮಕರ ಸಂಕ್ರಾಂತಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದು ಪ್ರಕೃತಿ ಮತ್ತು ನಭೋಮಂಡಲದಲ್ಲಿನ ಬದಲಾವಣೆಯನ್ನು ಸೂಚಿಸುವ ಒಂದು ಅಪೂರ್ವವಾದ ಪರ್ವಕಾಲವಾಗಿದೆ. ಜಗತ್ತಿನಲ್ಲಿ ಯುಗಾದಿಯಂತೆ ಪ್ರಕೃತಿಯಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಅದೇ ರೀತಿ ಸೂರ್ಯನ ಪಥ ಬದಲಾವಣೆಯ ಆಧಾರದ ಮೇಲೆ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಇದು ಇತಿಹಾಸ, ಪುರಾಣಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಮತ್ತು ದೇಶಾದ್ಯಂತ ವಿಭಿನ್ನ ಸಂಪ್ರದಾಯಗಳೊಂದಿಗೆ ಆಚರಿಸಲ್ಪಡುತ್ತದೆ.
ಮಕರ ಎಂದರೆ ಹನ್ನೆರಡು ರಾಶಿಗಳಲ್ಲಿ ಹತ್ತನೆಯ ರಾಶಿ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಮಕರ ಸಂಕ್ರಾಂತಿ ಎಂದು ಹೆಸರಿಸಲಾಗಿದೆ. ಇಂದಿನಿಂದ ಉತ್ತರಾಯಣ ಪುಣ್ಯಕಾಲವು ಪ್ರಾರಂಭವಾಗುತ್ತದೆ. ಕರ್ಕಾಟಕ ರಾಶಿಗೆ ಸೂರ್ಯನು ಪ್ರವೇಶಿಸುವವರೆಗೂ ಇದು ಉತ್ತರಾಯಣ ಕಾಲವಾಗಿರುತ್ತದೆ. ದೇವತೆಗಳಿಗೆ ಇದು ಹಗಲಿನ ಕಾಲವಾಗಿದ್ದರೆ, ದಕ್ಷಿಣಾಯನವು ರಾತ್ರಿಯ ಕಾಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಉತ್ತರಾಯಣ ಪುಣ್ಯಕಾಲದಲ್ಲಿ ಶುಭಕಾರ್ಯಗಳನ್ನು ಮಾಡುವುದು ಹೆಚ್ಚು ಫಲಪ್ರದವೆಂದು ನಂಬಲಾಗಿದೆ.
ಮಕರ ಸಂಕ್ರಾಂತಿಯೊಂದಿಗೆ ಮಕರ ಜ್ಯೋತಿಯ ದರ್ಶನವೂ ಹಾಸುಹೊಕ್ಕಾಗಿದೆ. ಶಬರಿಮಲೆಯಲ್ಲಿ ಪ್ರತಿ ವರ್ಷವೂ ಅಯ್ಯಪ್ಪ ಸ್ವಾಮಿಯೇ ಜ್ಯೋತಿಯ ರೂಪದಲ್ಲಿ, ಮಕರ ನಕ್ಷತ್ರದ ಮುಖೇನ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬುದು ಪುರಾಣೋಕ್ತವಾಗಿದೆ. ಮನೆಯಿಂದಲೇ ಆಕಾಶದ ಕಡೆ ನೋಡಿ, ಟಿವಿ ಮುಖೇನ ಅಥವಾ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮಕರ ಜ್ಯೋತಿಯ ದರ್ಶನ ಮಾಡಬಹುದು. ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳಿ 18 ಮೆಟ್ಟಿಲುಗಳನ್ನು ಹತ್ತಿ ಜ್ಯೋತಿಯ ದರ್ಶನ ಪಡೆಯುತ್ತಾರೆ.
ಮಕರ ಸಂಕ್ರಾಂತಿಯನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮೂರರಿಂದ ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ. ಗೋವುಗಳನ್ನು ಅಲಂಕರಿಸುವುದು, ಮನೆಗಳನ್ನು ಶುಚಿಗೊಳಿಸಿ ರಂಗೋಲಿ ಹಾಕುವುದು, ಸಗಣಿಯಲ್ಲಿ ಹೂಗಳನ್ನು ಇಡುವುದು ಈ ಭಾಗಗಳಲ್ಲಿ ಸಾಮಾನ್ಯ. ಕರ್ನಾಟಕದ ಕೆಲವು ಪ್ರದೇಶಗಳಲ್ಲೂ ಇಂತಹ ಆಚರಣೆಗಳಿವೆ. ಈ ಹಬ್ಬದ ವಿಶೇಷ ಖಾದ್ಯಗಳು ಎಳ್ಳು, ಬೆಲ್ಲ, ಕಬ್ಬು, ಮತ್ತು ನವಧಾನ್ಯಗಳಿಂದ ಮಾಡಿದ ಪದಾರ್ಥಗಳು. ಇವು ಪ್ರಕೃತಿಯ ಸಮೃದ್ಧಿಯನ್ನು ಸಂಕೇತಿಸುತ್ತವೆ.
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಪುಣ್ಯಕಾಲವು ಬೆಳಗಿನ ಜಾವ 9 ಗಂಟೆ 3 ನಿಮಿಷದಿಂದ 10 ಗಂಟೆ 48 ನಿಮಿಷದವರೆಗೆ ಇರುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ತಲೆಗೆ ಕಬ್ಬು, ಅವರೇಕಾಯಿ ಅಥವಾ ಬೆಲ್ಲವನ್ನು ಇಟ್ಟು ಸ್ನಾನ ಮಾಡಿಸುವ ಸಂಪ್ರದಾಯವಿದೆ. ಇದು ಸೂರ್ಯನ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸೂರ್ಯನ ದರ್ಶನ, ಸೂರ್ಯ ನಮಸ್ಕಾರ, ಪುಟ್ಟ ಮಕ್ಕಳಿಗೆ ಆಶೀರ್ವಾದ ಮಾಡುವುದು ಮತ್ತು ಎಳ್ಳು ಹಂಚುವುದು ಈ ದಿನದ ಪ್ರಮುಖ ಆಚರಣೆಗಳು. ಚಳಿಗಾಲದ ಆಯನ ಇದಾಗಿದ್ದು, ಮಕ್ಕಳು ಗಾಳಿಪಟ ಹಾರಿಸಿ, ಕಿಚ್ಚು ಹಾಯಿಸಿ ಖುಷಿಪಡುತ್ತಾರೆ. ಹಳೆಯ ವಸ್ತುಗಳನ್ನು ಬೆಂಕಿಗೆ ಆಹುತಿ ಮಾಡುವುದು ಅಶುಭವನ್ನು ದೂರ ಮಾಡಿ ಹೊಸತನ್ನು ಸ್ವಾಗತಿಸುವ ಸಂಕೇತವಾಗಿದೆ.
ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು
ಇಂದು ಸೂರ್ಯನ ಪೂಜೆ, ಸೂರ್ಯನ ಆರಾಧನೆ ಮತ್ತು ಗೋ ಪೂಜೆಗೆ ಹೆಚ್ಚಿನ ಮಹತ್ವವಿದೆ. ಗೋವಿಗೆ ಆಹಾರ ನೀಡಿ ನಮಸ್ಕರಿಸುವುದರಿಂದ ಆತ್ಮಶಕ್ತಿ ವೃದ್ಧಿಸುತ್ತದೆ ಮತ್ತು ವರ್ಷಪೂರ್ತಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಆರೋಗ್ಯಂ ಭಾಸ್ಕರಾದಿಚ್ಛೇತ್ ಎಂಬಂತೆ, ಸೂರ್ಯನ ಕೃಪೆ ಆರೋಗ್ಯವನ್ನು ತರುತ್ತದೆ. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡೋಣ ಎಂಬ ಸಂದೇಶದೊಂದಿಗೆ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸಂತೋಷದಿಂದ ಸಮಯ ಕಳೆಯುವುದು ಈ ಹಬ್ಬದ ಸಾರವಾಗಿದೆ. ದಕ್ಷಿಣ ಭಾರತದಲ್ಲಿ ಸಿಹಿ ಪೊಂಗಲ್ ತಯಾರಿಸಿ ತಿನ್ನುವುದು ರೂಢಿ. ಇದನ್ನು ಸುಗ್ಗಿಯ ಹಬ್ಬ, ಸಂತೋಷದ ಹಬ್ಬ ಎಂದೂ ಕರೆಯುತ್ತಾರೆ. ಓಂ ಘೃಣಿ ಸೂರ್ಯಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಈ ದಿನದ ಮತ್ತೊಂದು ಪ್ರಮುಖ ಆಚರಣೆ.
ಈ ಶುಭ ದಿನದಂದು ಎಳ್ಳು-ಬೆಲ್ಲವನ್ನು ಕನಿಷ್ಠ ಐದು ಜನಕ್ಕಾದರೂ ಹಂಚಿ, ಓಂ ಘೃಣಿ ಸೂರ್ಯಾಯ ನಮಃ ಮಂತ್ರವನ್ನು ಜಪಿಸಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
