Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

| Updated By: ಸುಷ್ಮಾ ಚಕ್ರೆ

Updated on: Oct 02, 2021 | 5:44 PM

Goddess Temples : ಮೈಸೂರು ಚಾಮುಂಡೇಶ್ವರಿ, ಹೊರನಾಡು ಅನ್ನಪೂರ್ಣೇಶ್ವರಿ, ಮಾರಿಕಾಂಬ, ಕೊಲ್ಲೂರು ಮೂಕಾಂಬಿಕೆ, ಸಿಗಂದೂರು ಚೌಡೇಶ್ವರಿ ಹೀಗೆ ಭಾರತದಲ್ಲಿ ನವರಾತ್ರಿ ವೇಳೆ ವಿಶೇಷವಾಗಿ ಪೂಜಿಸಲಾಗುವ ದೇವಿಯರ ಪ್ರಮುಖ ದೇವಸ್ಥಾನಗಳ ಎಂಬ ಪಟ್ಟಿ ಇಲ್ಲಿದೆ.

Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ
ನವರಾತ್ರಿ ವಿಶೇಷ- ಮೈಸೂರು ಚಾಮುಂಡೇಶ್ವರಿ ದೇವಸ್ಥಾನ- ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
Follow us on

ಭಾರತದಲ್ಲಿ ಸಾಕಷ್ಟು ಧಾರ್ಮಿಕ ವೈವಿಧ್ಯತೆಗಳಿವೆ. ಪ್ರತಿಯೊಂದು ಹಬ್ಬಕ್ಕೂ ಇಲ್ಲಿ ತನ್ನದೇ ಆದ ಪ್ರಾಮುಖ್ಯತೆಯಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯಗಳಲ್ಲಿ ಇಂದಿಗೂ ಪೂಜೆ ಸಲ್ಲಿಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಜೀವಂತವಾಗಿರಿಸಲಾಗಿದೆ. ಕೃಷ್ಣ, ರಾಮ, ಶಿವ, ಗಣಪತಿ, ಆಂಜನೇಯ, ಸುಬ್ರಹ್ಮಣ್ಯ ಮಾತ್ರವಲ್ಲದೆ ದೇವಿಯರನ್ನು ಕೂಡ ನಮ್ಮ ದೇಶದಲ್ಲಿ ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಇನ್ನೇನು ದಸರಾ ಉತ್ಸವ ಸಮೀಪಿಸುತ್ತಿದೆ. ಮೈಸೂರಿನ ದಸರಾ ಸಂಭ್ರಮವನ್ನು ನೋಡುವುದೇ ಒಂದು ಚಂದ. ನವರಾತ್ರಿ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತೀಯರಿಗೆ ಬಹಳ ಮುಖ್ಯವಾದ ಹಬ್ಬ. 9 ದಿನಗಳ ಕಾಲವೂ ದೇವಿಯನ್ನು ಆರಾಧಿಸಲಾಗುತ್ತದೆ. ದೇವತೆಗಳಾದ ಕರ್ನಾಟಕದ ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಹೊರನಾಡು ಅನ್ನಪೂರ್ಣೇಶ್ವರಿ, ಮಾರಿಕಾಂಬ, ಕೊಲ್ಲೂರು ಮೂಕಾಂಬಿಕೆ, ಸಿಗಂದೂರು ಚೌಡೇಶ್ವರಿ ಹೀಗೆ ದೇವಿಯ ನಾನಾ ಮುಖಗಳನ್ನು ನಾವು ಕಾಣಬಹುದು. ಭಾರತದಲ್ಲಿ ನವರಾತ್ರಿ ವೇಳೆ ವಿಶೇಷವಾಗಿ ಪೂಜಿಸಲಾಗುವ ದೇವಿಯರ ಪ್ರಮುಖ ದೇವಸ್ಥಾನಗಳ ಎಂಬ ಪಟ್ಟಿ ಇಲ್ಲಿದೆ.

ಅನ್ನಪೂರ್ಣೇಶ್ವರಿ ದೇವಸ್ಥಾನ- ಹೊರನಾಡು:

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ಭದ್ರಾ ನದಿಯ ದಡದಲ್ಲಿದೆ. ಚತುರ್ಭುಜೆಯಾದ ಅನ್ನಪೂರ್ಣೇಶ್ವರಿ ದೇವಿ ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ, ನಾಲ್ಕನೇ ಕೈಯಲ್ಲಿ ಗಾಯತ್ರಿ ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ಹೊರನಾಡು ಕ್ಷೇತ್ರ ಅನ್ನದಾನದಕ್ಕೆ ಹೆಸರುವಾಸಿ. ತೀರಾ ಹತ್ತಿರದಿಂದ ಈ ದೇವಿಯನ್ನು ಕಣ್ತುಂಬಿಕೊಳ್ಳಬಹುದು. ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ಈ ಮೂರ್ತಿಯನ್ನು ತಂದು ಸ್ಥಾಪಿಸಲಾಯಿತು. ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಹೊರನಾಡು ಸುತ್ತಮುತ್ತಲಿನ ಗ್ರಾಮಗಳ ರೈತರು ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ದೇವಿಗೆ ಕಾಣಿಕೆ ರೂಪದಲ್ಲಿ ಅರ್ಪಿಸುತ್ತಾರೆ.

ಮೂಕಾಂಬಿಕಾ ದೇವಸ್ಥಾನ- ಕೊಲ್ಲೂರು

ಕರ್ನಾಟಕದ ಉಡುಪಿ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಮೂಕಾಂಬಿಕಾ ದೇವಿಯ ದೇವಾಲಯವಾಗಿದೆ. ಆಕೆಯನ್ನು ಆದಿ ಶಕ್ತಿ ಎಂದು ಕರೆಯಲಾಗುತ್ತದೆ. ಶಕ್ತಿ ದೇವತೆಗಳಲ್ಲಿ ಒಬ್ಬಳಾದ ಕಾರಣ ನವರಾತ್ರಿಗೆ ಇಲ್ಲಿ ವಿಶೇಷ ಪೂಜೆ ಇರುತ್ತದೆ.

ಚಾಮುಂಡೇಶ್ವರಿ ದೇವಸ್ಥಾನ- ಮೈಸೂರು:

ಮೈಸೂರಿನಲ್ಲಿ ದಸರಾ ಬಹಳ ವಿಶೇಷವಾಗಿರುತ್ತದೆ. ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಈ ಸಂದರ್ಭದಲ್ಲಿ ವಿಶೇಷ ಪೂಜೆ ಇರುತ್ತದೆ. ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, ‘ದೇವಿ ಮಹಾತ್ಮೆ’ ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂಬ ಹೆಸರು ಬಂದಿದೆ.

ವೈಷ್ಣೋದೇವಿ ದೇವಸ್ಥಾನ- ಜಮ್ಮು ಕಾಶ್ಮೀರ:

ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನ ಉತ್ತರ ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದಾಗಿದೆ. ಉತ್ತರ ಭಾರತದಲ್ಲಿರುವ ವೈಷ್ಣೋ ದೇವಿ ದೇವಾಲಯವು ಹಿಂದೂಗಳ ನಂಬಿಕೆಯ ಕೇಂದ್ರವಾಗಿದೆ. ಈ ವೈಷ್ಣೋ ದೇವಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಗಳಿವೆ. ತ್ರಿಕೂಟ ಪರ್ವತದಲ್ಲಿರುವ ವೈಷ್ಣೋದೇವಿ ದೇವಸ್ಥಾನದಲ್ಲಿ ನವರಾತ್ರಿ ವೇಳೆ ವಿಶೇಷ ಪೂಜೆ ಇರುತ್ತದೆ. ಮಹಾ ಕಾಳಿ, ಮಹಾ ಸರಸ್ವತಿ ಮತ್ತು ಮಹಾಲಕ್ಷ್ಮಿಯ ಸಂಗಮವೆಂದ ವೈಷ್ಣೋದೇವಿಯನ್ನು ಪೂಜಿಸಲಾಗುತ್ತದೆ.

ಕಾಮಾಕ್ಯ ದೇವಿ ದೇವಸ್ಥಾನ- ಅಸ್ಸಾಂ:

ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯ ವಿಶ್ವದ ಅತಿದೊಡ್ಡ ಶಕ್ತಿಪೀಠ ಎಂದು ಕರೆಯಲಾಗುತ್ತದೆ. 51 ಶಕ್ತಿಪೀಠಗಳಲ್ಲಿ ಇದು ಮಹತ್ವದ್ದಾಗಿದೆ. ಈ ದೇವಾಲಯಕ್ಕೆ ಸುಮಾರು 6 ಸಾವಿರ ವರ್ಷಗಳ ಇತಿಹಾಸವಿದೆ. ದೇಶದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಇದೂ ಒಂದು.

ಜ್ವಾಲಾಮುಖಿ ದೇವಾಲಯ- ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದ ಕಾಂಗ್ರಾ ಎಂಬ ಜಿಲ್ಲೆಯಲ್ಲಿರುವ ದುರ್ಗಾ ದೇವಾಲಯ ಇದಾಗಿದ್ದು, ಅತ್ಯಂತ ಪುರಾಣ ಪ್ರಸಿದ್ಧ ಜ್ವಾಲಾ ದೇವಿಯ ದೇವಾಲಯವಾಗಿದೆ. ಈ ಜ್ವಾಲಾಮುಖಿ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಇಲ್ಲಿ ದೇವಿಯ ಯಾವುದೇ ಮೂರ್ತಿಗಳಿಲ್ಲ. ಬದಲಾಗಿ ನೀಲಿಯ ಜ್ವಾಲೆಯು ಇಲ್ಲಿ ಸದಾ ಉರಿಯುತ್ತಿರುತ್ತದೆ. ಹಾಗಾಗಿ ಈ ಅದ್ಭುತವನ್ನು ನೋಡಲು ದೇಶದ ಮೂಲೆಯಿಂದ ಸಾವಿರಾರು ಜನರು ಈ ಪವಿತ್ರವಾದ ಸ್ಥಳಕ್ಕೆ ಆಗಮಿಸುತ್ತಾರೆ.

ನೈನಾ ದೇವಿ ದೇವಸ್ಥಾನ- ಹಿಮಾಚಲ ಪ್ರದೇಶ:
ನೈನಾ ದೇವಿ ದೇವಾಲಯ ಹಿಮಾಚಲ‌ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿದೆ. ಇಲ್ಲಿ ನೈನಾ ದೇವಿಯನ್ನು ಅತ್ಯಂತ ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ಭಜಿಸಲಾಗುತ್ತದೆ. ಇಲ್ಲಿ ಸತಿದೇವಿ ಅಗ್ನಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು ಎಂಬ ಕತೆಗಳಿವೆ.

ಕಾಳಿಘಾಟ್- ಪಶ್ಚಿಮ ಬಂಗಾಳ:
ಈ ದೇವಾಲಯವು ಪಶ್ಚಿಮ ಬಂಗಾಳದ ಕಲ್ಕತ್ತಾ ಸಮೀಪದ ಹೂಗ್ಲಿ ಎಂಬ ನದಿಯ ತಟದಲ್ಲಿದೆ. ಇಲ್ಲಿ ಮುಖ್ಯವಾಗಿ ಕಾಳಿಯನ್ನು ಭವತಾರಿಣಿ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಇಲ್ಲಿ ಆಚರಿಸಲಾಗುವ ನವರಾತ್ರಿಯೂ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದೆ.

ಕರ್ಣೀ ದೇವಿ ದೇವಾಲಯ- ರಾಜಸ್ಥಾನ

ರಾಜಸ್ಥಾನದ ಬಿಕಾರ್ನೆರ್​ನಲ್ಲಿರುವ ಕರ್ಣಿ ದೇವಿ ದೇವಾಲಯದಲ್ಲಿ ಸುಮಾರು 20 ಸಾವಿರ ಇಲಿಗಳಿದ್ದು, ಇದು ದೇವಿಯ ಸಹಾಯಕರು ಎಂಬ ನಂಬಿಕೆ ಇಲ್ಲಿದೆ. ಇಲ್ಲಿಯ ನವರಾತ್ರಿ ಆಚರಣೆ ವಿಶೇಷವಾಗಿದೆ.

ದಂತೇಶ್ವರಿ ದೇವಾಲಯ- ಛತ್ತೀಸ್​ಗಢ:

ಛತ್ತೀಸ್​ಗಢದಲ್ಲಿರುವ ದಂತೇಶ್ವರಿ ದೇವಾಲಯ 51 ಶಕ್ತಿ ಪೀಠಗಳಲ್ಲಿ ಒಂದು. ದೇವಿಯ ಹಲ್ಲು ಇಲ್ಲಿ ಉದುರಿ ಬಿದ್ದುದರಿಂದ ದಂತೇಶ್ವರಿ ಎಂಬ ಹೆಸರು ಬಂದಿದೆ. ನವರಾತ್ರಿಯ ಪವಿತ್ರವಾದ ದಿನಗಳಲ್ಲಿ ಇಲ್ಲಿಯ ಕಾಡು ಹಾಗೂ ಹಳ್ಳಿಯ ಮೂಲೆಗಳಿಂದ ಜನರು ಬಂದು ದೇವಿಯನ್ನು ಪೂಜಿಸಿ ತೆರಳುತ್ತಾರೆ. ಅಲ್ಲದೆ ಈ ನವರಾತ್ರಿಯ ಕಾಲದಲ್ಲಿ ದಂತೇಶ್ವರಿಯ ದೇವಿಯ ಮೂರ್ತಿಯನ್ನು ಹೊತ್ತುಕೊಂಡು ಅತ್ಯಂತ ಭಕ್ತಿಯಿಂದ ಮೆರವಣಿಗೆ ಮಾಡಲಾಗುತ್ತದೆ.

ಮಹಾಲಕ್ಷ್ಮಿ ದೇವಾಲಯ- ಮಹಾರಾಷ್ಟ್ರ:
ಈ ದೇವಸ್ಥಾನ ಮಹಾರಾಷ್ಟ್ರದ ಕೊಲ್ಹಾಪುದಲ್ಲಿದೆ. ಇಲ್ಲಿ ಸುಮಾರು ಮೂರು ಅಡಿ ಉದ್ದ ಹಾಗೂ 40 ಕೆಜಿ ತೂಗುವ ಕಪ್ಪು ಶಿಲೆಯಿಂದ ಮಾಡಲಾದ ಮಹಾಲಕ್ಷ್ಮಿ ದೇವಿಯ ಮೂರ್ತಿ ಇದೆ. ಈ ದೇವಸ್ಥಾನವನ್ನು ಅಂಬಾಬಾಯಿ ದೇವಿಗೆ ಅರ್ಪಿಸಲಾಗಿದೆ. ಚಾಲುಕ್ಯರ ಕಾಲದಲ್ಲಿ ಕಟ್ಟಲಾಗಿರುವ ಈ ದೇವಸ್ಥಾನದ ವಾಸ್ತುಶಿಲ್ಪವೂ ವಿಶೇಷವಾಗಿದೆ.

ಚಕ್ಕುಲಕ್ಕುತಾವು ದೇವಸ್ಥಾನ- ಕೇರಳ:

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿರುವ ಈ ದೇವಸ್ಥಾನದಲ್ಲಿ ತಾಯಿ ದೇವಿಯನ್ನು ನವರಾತ್ರಿಯಂದು ಬಹಳ ‌ಸಡಗರದಿಂದ ಪೂಜಿಸಲಾಗುತ್ತದೆ. ಈ ದೇವಾಲಯವು ಪರಶುರಾಮ ಸೃಷ್ಟಿಸಿದ ನೂರೆಂಟು ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಭಗವತಿಯನ್ನು ದೇವಿಯೆಂದು ಪೂಜಿಸಲಾಗುತ್ತದೆ.

ಅಂಬಾಜಿ ದೇವಾಲಯ- ಗುಜರಾತ್:
ಗುಜರಾತಿನ ಬನಸ್ಕಾಂತ ಜಿಲ್ಲೆಯ ಮೌಂಟ್ ಅಬು ಎನ್ನುವ ಬೆಟ್ಟದಲ್ಲಿರುವ ಅಂಬಾಜಿ ದೇವಸ್ಥಾನ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ಅಂಬಾ ದೇವಾಲಯಗಳು ಭಾರತದ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಇಲ್ಲಿಯೂ ಯಾವುದೇ ಮೂರ್ತಿಗಳಿಲ್ಲ.

ಇದನ್ನೂ ಓದಿ: Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?

Navratri 2021: ನವರಾತ್ರಿಯ ಒಂಭತ್ತು ದಿನದಲ್ಲಿ ಯಾವ ದಿನ ಯಾವ ದೇವಿಗೆ ಪೂಜೆ ಇಲ್ಲಿದೆ ನವರಾತ್ರಿ ಕ್ಯಾಲೆಂಡರ್

Published On - 5:38 pm, Sat, 2 October 21