AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri Day 8: ನವರಾತ್ರಿಯ ಎಂಟನೇ ದಿನದ ವಿಶೇಷ; ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರೀ

ನವರಾತ್ರಿಯ ಎಂಟನೇ ದಿನ ಜಗನ್ಮಾತೆ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಶುದ್ಧ ಹಾಲಿನಂತೆ ಬಿಳಿಯ ವರ್ಣದ ಮಹಾಗೌರಿ ತಪಸ್ಸಿನಿಂದ ಈ ರೂಪ ಪಡೆದಳು. ಈ ದಿನ ಆಕೆಯನ್ನು ಆರಾಧಿಸುವುದರಿಂದ ಸಂಚಿತ ಪಾಪಗಳು ನಿವಾರಣೆಯಾಗಿ, ಶಾಂತಿ ಹಾಗೂ ಶಾಶ್ವತ ಪುಣ್ಯ ಪ್ರಾಪ್ತವಾಗುತ್ತದೆ. ಭಕ್ತರ ಕಷ್ಟಗಳನ್ನು ದೂರ ಮಾಡಿ ಸಕಾರಾತ್ಮಕ ಬದುಕಿಗೆ ಮಾರ್ಗದರ್ಶನ ನೀಡುವ ಶಕ್ತಿ ಈ ದೇವಿಯಲ್ಲಿದೆ ಎಂಬ ನಂಬಿಕೆಯಿದೆ.

Navaratri Day 8: ನವರಾತ್ರಿಯ ಎಂಟನೇ ದಿನದ ವಿಶೇಷ; ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರೀ
ಮಹಾಗೌರೀ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Sep 28, 2025 | 9:44 AM

Share

ನವರಾತ್ರಿಯ ಎಂಟನೇ ದಿನ ಜಗನ್ಮಾತೆಯ ಆರಾಧನೆ ಮಹಾಗೌರೀ ರೂಪದಲ್ಲಿ ನೆರವೇರುತ್ತದೆ. ಈ ದಿನದ ದೇವಿಯ ವಿಶೇಷತೆ ಎಂದರೆ ಆಕೆಯ ದೇಹ ಸಂಪೂರ್ಣವಾಗಿ ಹಾಲಿನಂತೆ ಬಿಳಿಯಾಗಿದೆ. ಆ ಶುದ್ಧ ಬಿಳಿಯ ಬಣ್ಣಕ್ಕೆ ಶಂಖ, ಚಂದ್ರ ಮತ್ತು ಕುಂದಪುಷ್ಪಗಳನ್ನು ಉಪಮೆ ನೀಡಲಾಗಿದೆ. ಕೇವಲ ಎಂಟು ವರ್ಷದ ವಯಸ್ಸಿನ ಬಾಲೆಯ ರೂಪದಲ್ಲಿರುವ ಈ ತಾಯಿ “ಅಷ್ಟ ವರ್ಷಾ ಭವೇದ್ ಗೌರೀ” ಎಂಬ ಪ್ರಸಿದ್ಧಿಯಿಂದ ಗುರುತಿಸಲ್ಪಟ್ಟಿದ್ದಾಳೆ.

ಶ್ವೇತೇ ವೃಷಾ ಸಮಾರೂಢಾ ಶ್ವೇತಾಂಬರಾ ಧರಾ ಶುಚಿಃ । ಮಹಾಗೌರೀ ಶುಭಂ ದದ್ಯಾನ್ಮಹಾದೇಪ್ರಮೋದದಾ ॥

ದೇವಿಯ ಸ್ವರೂಪ:

ಮಹಾಗೌರೀ ತಾಯಿಯು ಧರಿಸಿರುವ ವಸ್ತ್ರಗಳು ಹಾಲಿನಂತೆ ಬಿಳಿಯವು. ಆಭರಣಗಳೂ ಸಹ ಬಿಳಿಯ ಬಣ್ಣದಲ್ಲಿವೆ. ತಾಯಿಗೆ ನಾಲ್ಕು ಭುಜಗಳಿದ್ದು, ವಾಹನವಾಗಿ ಬಿಳಿ ವೃಷಭವಿದೆ. ಬಲಗಡೆಯ ಮೇಲಿನ ಕೈ ಅಭಯಮುದ್ರೆಯಲ್ಲಿ,ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಎಡಗಡೆಯ ಮೇಲಿನ ಕೈಯಲ್ಲಿ ಡಮರು, ಕೆಳಗಿನ ಎಡಗೈಯಲ್ಲಿ ವರಮುದ್ರೆ. ಮಹಾಗೌರಿಯ ಮುಖಭಾವ ಶಾಂತವಾಗಿದ್ದು, ಭಕ್ತರ ಮನಸ್ಸಿಗೆ ನೆಮ್ಮದಿ ತುಂಬುತ್ತದೆ.

ಪೌರಾಣಿಕ ಹಿನ್ನೆಲೆ:

ಮಹಾದೇವನ ಹೊರತುಪಡಿಸಿ ಇನ್ಯಾರನ್ನೂ ಮದುವೆಯಾಗುವುದಿಲ್ಲ ಎಂದು ಸಂಕಲ್ಪಮಾಡಿದ ಈ ತಾಯಿ, ಶಿವನನ್ನು ಪಡೆಯುವ ಉದ್ದೇಶದಿಂದ ಕಠಿಣ ತಪಸ್ಸು ಕೈಗೊಂಡಳು. ಆ ತಪಸ್ಸಿನಿಂದಾಗಿ ಅವಳ ಮೈಬಣ್ಣ ಕಪ್ಪಾಗಿ ಬದಲಾಗಿತ್ತು. ಆದರೆ, ಅವಳ ನಿಷ್ಠೆಗೆ ಒಲಿದ ಶಿವನು ಗಂಗೆಯ ಪವಿತ್ರ ಜಲದಿಂದ ಅವಳ ದೇಹವನ್ನು ಸ್ನಾನಮಾಡಿಸಿದನು. ಆಗ ಅವಳ ದೇಹ ಪ್ರಕಾಶಮಾನವಾಗಿ ಬಿಳಿಯಾಗಿ ಹೊಳೆಯಿತು. ಇದೇ ಸಂದರ್ಭದಿಂದ ಆಕೆಯ ಹೆಸರು “ಗೌರೀ” ಎಂದು ಪ್ರಸಿದ್ಧಿಯಾಯಿತು.

ಆರಾಧನೆಯ ಮಹತ್ವ:

ನವರಾತ್ರಿಯ ಎಂಟನೇ ದಿನ ಮಹಾಗೌರಿಯನ್ನು ಆರಾಧನೆ ಮಾಡುವುದರಿಂದ ಸಂಚಿತ ಪಾಪಗಳು ನಿವಾರಣೆಯಾಗುತ್ತವೆ. ಮುಂದೆ ಪಾಪ, ಸಂತಾಪ, ದುಃಖ, ದಾರಿದ್ರ್ಯ ಸಮೀಪಿಸಲಾರವು, ಎಂದಿಗೂ ಕರಗದ ಪುಣ್ಯ ಭಕ್ತರಿಗೆ ಸಿಗುತ್ತದೆ. ಮಹಾಗೌರಿಯ ಆರಾಧನೆಯ ವಿಶೇಷವೆಂದರೆ, ಭಕ್ತರು ಏಕಾಗ್ರತೆಯಿಂದ ಧ್ಯಾನ ಮಾಡಿದಾಗ ಅಲೌಕಿಕ ಸಿದ್ಧಿಗಳ ಪ್ರಾಪ್ತಿ ಸಂಭವಿಸುತ್ತದೆ.

ಇದನ್ನೂ ಓದಿ: ನವರಾತ್ರಿಯ ಏಳನೇ ದಿನದ ವಿಶೇಷ; ಪಾಪಗಳನ್ನು ಸಂಹರಿಸುವ ಕಾಲರಾತ್ರಿ

ಭಕ್ತರಿಗೆ ಫಲ:

ಯಾವುದೇ ಕಷ್ಟ, ಸಂಕಟ ಭಕ್ತರಿಗೆ ಎದುರಾದರೂ ಮಹಾಗೌರೀ ತಾಯಿ ಅದನ್ನು ದೂರ ಮಾಡುತ್ತಾಳೆ. ಸಾಧ್ಯವಿಲ್ಲ ಎಂದು ಭಾಸವಾಗುವ ಕೆಲಸಗಳನ್ನೂ ಸಹ ಸರಾಗವಾಗಿ ನೆರವೇರಿಸುತ್ತಾಳೆ. ಮನುಷ್ಯರ ಚಿತ್ತವನ್ನು ಉತ್ತಮದ ಕಡೆಗೆ ತಿರುಗಿಸಿ, ಸಕಾರಾತ್ಮಕ ಮಾರ್ಗದಲ್ಲಿ ನಡೆಸುವ ಶಕ್ತಿ ಈ ದೇವಿಯಲ್ಲಿದೆ.

ಸಮಾರೋಪ:

ಮಹಾಗೌರಿಯ ಶರಣಾಗತಿಯಾದ ಭಕ್ತರಿಗೆ ತಾಯಿ ಕೇವಲ ರಕ್ಷಕಿ ಮಾತ್ರವಲ್ಲ, ಬದುಕಿನ ಮಾರ್ಗದರ್ಶಕಿಯೂ ಆಗುತ್ತಾಳೆ. ಆದ್ದರಿಂದ ನವರಾತ್ರಿಯ ಎಂಟನೇ ದಿನ ಮಹಾಗೌರಿಯನ್ನು ಆರಾಧನೆ ಮಾಡುವುದರಿಂದ ಅಲೌಕಿಕ ಸಿದ್ಧಿಗಳು, ಶಾಂತಿ ಮತ್ತು ಶಾಶ್ವತ ಪುಣ್ಯಗಳ ಅನುಭವ ಖಚಿತ.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ