ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ H.C.ಮಹದೇವಪ್ಪ (hc mahadevappa) ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವು ಸಂಕಷ್ಟದಲ್ಲಿದ್ದು, ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾವನ್ನು ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾವನ್ನು ಆಚರಿಸಲು ನಿರ್ಧರಿಸಿದೆ pic.twitter.com/zegs5Hk9er
— Dr H.C.Mahadevappa (@CMahadevappa) September 21, 2023
ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬರಸಿಡಿಲು ಬಡಿದಿದೆ. ಅದ್ಧೂರಿ ದಸರಾ ಆಚರಣೆ ಸಿದ್ಧತೆಯಲ್ಲಿದ್ದ ಸರ್ಕಾರ ಇದೀಗ ಸರಳ ದಸರಾ ಆಚರಣೆ ಮಾಡಬೇಕಾ ಅಥವಾ ಅದ್ಧೂರಿ ದಸರಾ ಆಚರಣೆ ಮಾಡಬೇಕಾ ಎನ್ನುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿತ್ತು. ಅದ್ಧೂರಿ ದಸರಾ ಆಚರಣೆಗೆ ಈ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಮುಂಗಾರು ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಬರಿದಾಗುತ್ತಿವೆ.
ಇದನ್ನೂ ಓದಿ: ಗಣೇಶ ಚತುರ್ಥಿ: ಅಭಿಮನ್ಯು ನೇತೃತ್ವದ 9 ಗಜಪಡೆಗೆ ವಿಶೇಷ ಪೂಜೆ: ಮಳೆ ಅಡ್ಡಿ
ಮತ್ತೊಂದು ಕಡೆ ರಾಜ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದು ಸರ್ಕಾರದ ಇಕ್ಕಟ್ಟಿಗೆ ಸಿಲುಕಿದಂತಾಗಿತ್ತು. ಇವೆಲ್ಲದರ ಮಧ್ಯೆ ದಸರಾ ಸರಳವಾಗಿ ಮಾಡಬೇಕಾ ಅಥವಾ ಅದ್ಧೂರಿಯಾಗಿ ಮಾಡಬೇಕಾ ಎಂಬ ಬಗ್ಗೆ ಈವರೆಗೂ ಸರ್ಕಾರದ ನಿರ್ಧಾರ ಅಂತಿಮವಾಗಿರಲಿಲ್ಲ. ಆದರೆ ಸದ್ಯ ಪ್ರಸಕ್ತ ವರ್ಷ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 pm, Thu, 21 September 23