Sringeri: ಮೈಸೂರು ದಸರಾಕ್ಕೆ ಪ್ರೇರಣೆಯಾದ ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ ವೈಭವದ ನವರಾತ್ರಿ ಉತ್ಸವ

| Updated By: ಸಾಧು ಶ್ರೀನಾಥ್​

Updated on: Oct 15, 2023 | 11:28 AM

Sri Sharada Sharan Navaratri Mahotsava 2023: ಶೃಂಗೇರಿ ನವರಾತ್ರಿ ಉತ್ಸವ ವೈಭವ: ಶೃಂಗೇರಿ ಶಾರದಾ ಮಠದಲ್ಲಿ ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮವಾಗಿದೆ. ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಶೃಂಗೇರಿ ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗಿ ದರ್ಬಾರ್ ನಡೆಸಲಾಗುತ್ತದೆ.

Sringeri: ಮೈಸೂರು ದಸರಾಕ್ಕೆ ಪ್ರೇರಣೆಯಾದ ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ ವೈಭವದ ನವರಾತ್ರಿ ಉತ್ಸವ
ಮೈಸೂರು ದಸರಾಕ್ಕೆ ಪ್ರೇರಣೆಯಾದ ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ ನವರಾತ್ರಿ
Follow us on

ಚಿಕ್ಕಮಗಳೂರು: ದೇಶದೆಲ್ಲೆಡೆ ಇಂದಿನಿಂದ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಮ್ಮ ರಾಜ್ಯದ ನಾಡ ಹಬ್ಬ ಮೈಸೂರು ದಸರಾ ಆರಂಭಗೊಂಡಿದ್ದು ಮೈಸೂರು ದಸರಾಕ್ಕೆ ಪ್ರೇರಣೆಯಾದ ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ 9 ದಿನಗಳ ಕಾಲ ವೈಭವದ ನವರಾತ್ರಿ ಉತ್ಸವ (Sri Sharada Sharan Navaratri Mahotsava 2023) ನಡೆಯಲಿದೆ. ನಿತ್ಯವೂ ಶೃಂಗೇರಿ ಶಾರದಾಂಬೆ ನವ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಶಾರದೆ ಅಕ್ಷರ ದೇವಿ ಎಂದೆ ಖ್ಯಾತಿ ಪಡೆದಿದ್ದಾಳೆ.ಇಂದಿನಿಂದ ಶೃಂಗೇರಿ ಮಠದಲ್ಲಿ 9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ,ಲಕ್ಷಾಂತರ ಭಕ್ತರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಶೃಂಗೇರಿಯಲ್ಲಿ ನವರಾತ್ರಿಯ ವೈಭವ:

ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

ಶೃಂಗೇರಿಯಲ್ಲಿ ವಿಜೃಂಭಣೆಯಿಂದ ನಡೆಯುವ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಈ ಸುಸಂದರ್ಭದಲ್ಲಿ ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ. ಶಾರದೆಗೆ ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುತ್ತದೆ.

ಶೃಂಗೇರಿಯಲ್ಲಿ ಅ.15 ರಿಂದ 25ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ:

ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅಕ್ಟೋಬರ್ 15 ರಿಂದ 25 ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿಯ ಹಿಂದಿನ ದಿನ 14 ರಂದು ಭಾದ್ರಪದ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ ಶ್ರೀ ಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಲಿದೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರ ಕಂಗೊಳಿಸಲಿದ್ದಾಳೆ.

ಯಾವ ದಿನ ಯಾವುದೆಲ್ಲಾ ಅಲಂಕಾರ ಇರುತ್ತದೆ:

* ಶ್ರೀ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶಾರದೆಗೆ 15 ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ
* 16- ಹಂಸವಾಹಿನಿ
* 17- ಮಾಹೇಶ್ವರಿ
* 18- ಮಯೂರವಾಹನಾ ಅಲಂಕಾರ
* 19- ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ
* 20- ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ
* 21- ಮೋಹಿನಿ ಅಲಂಕಾರ
* 22- ರಾಜರಾಜೇಶ್ವರಿ ಅಲಂಕಾರ
* 23- ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ
* 24- ವಿಜಯದಶಮಿ, ಗಜಲಕ್ಷ್ಮಿ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ
* 25- ಗಜಲಕ್ಷ್ಮೀ ಅಲಂಕಾರ, ಶೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ನವರಾತ್ರಿ ಸಂದರ್ಭದಲ್ಲಿ ಶ್ರೀ ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ದುರ್ಗಾ ಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀ ಸೂಕ್ತ ಜಪ, ಭವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುವಾಸಿನೀ ಪೂಜೆ ನಡೆಯಲಿದೆ.

Also Read: ದಸರಾ ನೆಪದಲ್ಲಿ ಸುಲಿಗೆಗೆ ಇಳಿದ ಖಾಸಗಿ ಬಸ್​ಗಳು; ಟಿಕೆಟ್ ದರ ದುಪ್ಪಟ್ಟು, ಇಲ್ಲಿದೆ ದರ ವಿವರ

ನವರಾತ್ರಿ ಉತ್ಸವದ ಸಲುವಾಗಿ ರಾಜಬೀದಿಯಲ್ಲಿ ನಡೆಯುವ ರಥೋತ್ಸವ ವಿಜೃಭಣಿಯಂದ ನಡೆಯಲಿದೆ. ನಾನಾ ಪ್ರಾಂತ್ಯಗಳಿಂದ ಆಗಮಿಸುವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವದಿಂದ ಪುನೀತರಾಗುತ್ತಾರೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಮಧು, ಕೈಟಭ, ಶುಂಭ, ನಿಶುಂಭ ಮೊದಲಾದ ಮಹಾರಾಕ್ಷಸರನ್ನು ಕೊಂದ ಜನನ್ಮಾತೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮವಾಗಿದೆ.

ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಶೃಂಗೇರಿ ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗಿ ದರ್ಬಾರ್ ನಡೆಸಲಾಗುತ್ತದೆ. 9 ದಿನಗಳ ಕಾಲ ಪ್ರತಿ ಸಂಜೆ 6 ಗಂಟೆಗೆ ಶ್ರೀಮಠದ ಆವರಣದಲ್ಲಿ ದರ್ಬಾರ್ ನಡೆಯಲಿದ್ದು ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:24 am, Sun, 15 October 23