ಹಿರಿಯರ ಕಾರ್ಯ ಮಾಡಲು ಪಿತೃಪಕ್ಷವೇ ಶ್ರೇಷ್ಠವಾದದ್ದು ಯಾಕೆ ಗೊತ್ತಾ? ಪಿತೃಗಳಿಗೆ ತಿಲ ತರ್ಪಣವೇಕೆ? ಇಲ್ಲಿದೆ ವಿವರ
homage to ancestors: ಅನ್ನ ಹಾಕದಿದ್ದರೆ, ಆಷಾಡ, ಸಂಕ್ರಾಂತಿ, ಅಮಾವಾಸ್ಯೆ, ಅಲ್ಲದೆ ಕೆಲವೊಂದು ತಿಥಿ ವಿಶೇಷ ದಿನಗಳು ಬಂದಾಗ ಮಣ್ಣಿನ ಪಾತ್ರೆ ಹಿಡಿದು ನಿಂತಿರುತ್ತಾರೆ. ಆಗಲೂ ಹಾಕದಿದ್ದರೆ ಮಣ್ಣಿನ ಪಾತ್ರೆ ಯನ್ನು ಕೆಳಗೆ ಹಾಕಿ ಒಡೆದು ಶಪಿಸಿ ಹೋಗುತ್ತಾರೆ ಅಂತ ಮನೆಗಳಲ್ಲಿ ಕೇಳಿದ ಮಾತು.
ಪಿತೃ ಪಕ್ಷ (Pitru Paksha) ಎಂದರೆ ತಂದೆ, ತಾಯಿ, ಹಿಂದಿನ ತಲೆಮಾರಿನವರು (ancestors or Pitrus). ಅವರ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಲು ತುಂಬಾ ತ್ಯಾಗ ಮಾಡಿರುತ್ತಾರೆ. ಹಿರಿಯರು ಪೋಷಿಸಿ ಬೆಳೆಸಿದ ಅವರ ಋಣವನ್ನು ಕಡಿಮೆ ಮಾಡಿಕೊಳ್ಳಲು, ಅವರ ಜೀವಿತಾವಧಿಯ ನಂತರ ವರ್ಷಕ್ಕೊಮ್ಮೆ ಅವರ ಸ್ಮರಣೆ ಹಾಗೂ ಆತ್ಮಕ್ಕೆ ಪ್ರಾರ್ಥನೆಯನ್ನು “ಪಿತೃ ಪಕ್ಷ”, ಕಾರ್ಯವನ್ನು (homage) ಮಾಡುವ ಮೂಲಕ ಸಾಧ್ಯ ಎಂದು ತಿಳಿಸಿದ್ದಾರೆ. ಪಿತೃಗಳಿಗೆ ತರ್ಪಣ, ಪಿಂಡಪ್ರದಾನ ಮಾಡುವುದರಿಂದ ಅವರ ಆಶೀರ್ವಾದ ದೊರೆಯುವುದು. ಇದರಿಂದ ಮನೆ ಸುಖ ಸಮೃದ್ಧಿಯಿಂದ, ಮಕ್ಕಳು ಆಯುರಾರೋಗ್ಯವಂತರಾಗಿ, ಸುಖ ಸಂತೋಷವಾಗಿ ಬದುಕು ಸಾಗಿಸುತ್ತಾರೆ ಎಂಬ ನಂಬಿಕೆ. ಪುರಾಣಗಳಲ್ಲೂ ನಾವು ಇದರ ಕುರಿತಾಗಿ ಕಥೆಗಳನ್ನು ಕೇಳಿದ್ದೇವೆ.
ಮಹಾಭಾರತದಲ್ಲಿ ಕರ್ಣ ಸಹಾಯ ಕೇಳಲು ಬಂದವರನ್ನು ಹಾಗೆ ಕಳಿಸಿದವನಲ್ಲ. ಬ್ರಾಹ್ಮಣ ವೇಷಧಾರಿಯಾಗಿ ಬಂದ ಇಂದ್ರನಿಗೆ, ತನ್ನ ದೇಹದ ಜೊತೆಯಲ್ಲೇ ಬೆಸೆದು ಕೊಂಡ ಕವಚವನ್ನೇ ಕಿತ್ತು ಕೊಟ್ಟಂಥ ಮಹಾದಾನಿ. ಕರ್ಣನ ಅಂತ್ಯ ಕಾಲದಲ್ಲಿ ಕೃಷ್ಣನು ವಿಶ್ವರೂಪವನ್ನು ತೋರಿಸಿದನು ಎಂದು ಕೇಳಿದ್ದೇವೆ. ಕರ್ಣ ಕುರುಕ್ಷೇತ್ರದಲ್ಲಿ ವೀರ ಮರಣವನ್ನಪ್ಪಿ ಸ್ವರ್ಗಕ್ಕೆ ಹೋದನು. ಆದರೆ ಅಲ್ಲಿ ತಿನ್ನಲು ಆಹಾರ ಸಿಗಲಿಲ್ಲ ಹಸಿವಾದಾಗ, ಆಹಾರ ಕೇಳಿದರೆ ತಟ್ಟೆ ತುಂಬಾ ಬಂಗಾರ, ಆಭರಣ, ಕೊಟ್ಟರಂತೆ. ಕರ್ಣ ಹೇಳಿದ, ಹಸಿವಿಗೆ ಅನ್ನಬೇಕು ಬಂಗಾರವಲ್ಲ ಎಂದಾಗ, ಸ್ವರ್ಗಾಧಿಪತಿ ಇಂದ್ರ ಹೇಳಿದನಂತೆ ನೀನು ಬದುಕಿದ್ದಾಗ ಸಹಾಯ ಕೇಳಲು ಬಂದವರಿಗೆಲ್ಲ ಬಂಗಾರ ದಾನ ಮಾಡಿದ್ದೆ. ಯಾರಿಗೂ ನೀನು ಒಂದು ಹಿಡಿ ಅನ್ನ ಕೊಟ್ಟಿಲ್ಲ. ಪಿತೃ ಕಾರ್ಯ ಮಾಡಿಲ್ಲ, ಪಿತೃಗಳ ಋಣವು ನಿನ್ನ ಮೇಲಿದೆ. ಆದ್ದರಿಂದ ನೀನು ಏನು ದಾನ ಮಾಡಿದ್ದೆಯೋ ಅದೇ ಇಲ್ಲಿ ಸಿಗುವುದು ಎಂದನು. ’
ಕರ್ಣ ಹೇಳಿದ ನನ್ನ ಹೆತ್ತವರು ನನಗೆ ತಿಳಿದಿರಲಿಲ್ಲ . ಬಂದವರು ಸಹಾಯ ಕೇಳಿದರೆ ಹೊರತು ಹಸಿವು ಎನ್ನಲಿಲ್ಲ, ಹೀಗಾಗಿ ನಾನು ಚಿನ್ನವನ್ನು ಕೊಡುತ್ತಿದ್ದೆ. ಇದಕ್ಕಿಂತ ಹೆಚ್ಚು ಗೊತ್ತಿಲ್ಲ. ಇದರ ಪರಿಹಾರಕ್ಕೆ ಏನು ಮಾಡಬಹುದು ಎಂದು ಕೇಳಿದನು. ಆಗ ಇಂದ್ರನು, ಈಗ ಭಾದ್ರಪದ ಮಾಸದ 15 ದಿನದ ಕೃಷ್ಣ ಪಕ್ಷ ಬಂದಿದೆ. ಭೂಲೋಕಕ್ಕೆ ಹೋಗಿ, ಬಡವರಿಗೆ ಎಷ್ಟು ಸಾಧ್ಯವೊ ಅಷ್ಟು ಅನ್ನದಾನ ಮಾಡಿ ಬಾ ಇದರಿಂದ ನಿನ್ನ ಪಿತೃ ಋಣ ತೀರುತ್ತದೆ. ನಂತರ ಕರ್ಣ ಬೋಲೋಕಕ್ಕೆ ಬಂದು ಸಾಕಷ್ಟು ಅನ್ನದಾನ ಮಾಡಿ ಸ್ವರ್ಗ ಸೇರಿದನು. ಆಗ ಅಲ್ಲಿ ಆಹಾರ ಸಿಕ್ಕಿತು. ಭಾದ್ರಪದ ಮಾಸದ ಕೃಷ್ಣಪಕ್ಷ 15 ದಿನಗಳಲ್ಲಿ ಕರ್ಣ ಅನ್ನದಾನ ಮಾಡಿ ವಿಶೇಷ ಪುಣ್ಯ ಸಂಪಾದನೆ ಮಾಡಿದ ಕಾರಣ ಇದಕ್ಕೆ ‘ಪಿತೃಪಕ್ಷ’ ಎಂಬುದು ಹೆಚ್ಚು ಮಹತ್ವ ಪಡೆಯಿತು.
ಹಿರಿಯರ ಕಾರ್ಯ ಮಾಡಲು ಪಿತೃಪಕ್ಷ ಶ್ರೇಷ್ಠವಾದದ್ದು. ಪಿತೃಪಕ್ಷ ದಲ್ಲಿ ಹಿರಿಯರು, ಆಹಾರಕ್ಕಾಗಿ ಬೆಳ್ಳಿ ಪಾತ್ರೆಯನ್ನು ಹಿಡಿದು ನಿಂತಿರುತ್ತಾರೆ. ಈಗ ಅವರಿಗೆ ಅನ್ನ ಸಿಗದಿದ್ದ ಪಕ್ಷದಲ್ಲಿ, ವರ್ಷಕ್ಕೊಮ್ಮೆ ವೈದೀಕ ಕರ್ಮಾದಿಗಳನ್ನು ಮಾಡುವ ದಿನ ಹಿತ್ತಾಳೆ ಪಾತ್ರೆ ಹಿಡಿದು ನಿಂತಿರುತ್ತಾರೆ. ಅನ್ನ ಹಾಕದಿದ್ದರೆ, ಆಷಾಡ, ಸಂಕ್ರಾಂತಿ, ಅಮಾವಾಸ್ಯೆ, ಅಲ್ಲದೆ ಕೆಲವೊಂದು ತಿಥಿ ವಿಶೇಷ ದಿನಗಳು ಬಂದಾಗ ಮಣ್ಣಿನ ಪಾತ್ರೆ ಹಿಡಿದು ನಿಂತಿರುತ್ತಾರೆ. ಆಗಲೂ ಹಾಕದಿದ್ದರೆ ಮಣ್ಣಿನ ಪಾತ್ರೆ ಯನ್ನು ಕೆಳಗೆ ಹಾಕಿ ಒಡೆದು ಶಪಿಸಿ ಹೋಗುತ್ತಾರೆ ಅಂತ ಮನೆಗಳಲ್ಲಿ ಕೇಳಿದ ಮಾತು. ಏನು ಆಗದಿದ್ದರೂ ಅದಕ್ಕೆಂದೆ ಇರುವ ದಿವಸಗಳಲ್ಲಿ ಬಡ ಬ್ರಾಹ್ಮಣ ನಿಗೆ ( ಸ್ವಯಂಪಾಕ’) ಹೊಟ್ಟೆ ತುಂಬ ಊಟ ಮಾಡುವಷ್ಟು, ತರಕಾರಿ ಹಾಲು ಮೊಸರು ತುಪ್ಪ ಸಹಿತ ಆಹಾರ ಪದಾರ್ಥಗಳನ್ನು ಬಡಿಸಿ ಶಕ್ತಾನುಸಾರ ದಕ್ಷಿಣೆ ಕೊಟ್ಟು ಸ್ವಯಂಪಾಕ ದಾನವನ್ನು ಕೊಡಬೇಕು. ಇದರಿಂದಾಗಿ ಎಷ್ಟೋ ಋಣ ಸಂದಾಯವಾಗುತ್ತದೆ.
ಕಡು ಬಡವರಿಗೆ ಆಶೀರ್ವದಿಸಿದ ಪಿತೃಗಳ ಕಥೆ:
ಹಿರಿಯ – ಕಿರಿಯ ಎಂಬ ಇಬ್ಬರು ಅಣ್ಣ ತಮ್ಮಂದಿರು, ಬೇರೆ ಬೇರೆ ಸಂಸಾರ ಮಾಡಿಕೊಂಡಿದ್ದರು. ಹಿರಿಯ ಶ್ರೀಮಂತ ಇವನ ಪತ್ನಿಗೆ ಹಣದ ಆಸೆ ಜೊತೆಗೆ ಅಹಂಕಾರ ಇತ್ತು. ಕಿರಿಯ ಬಡವ. ಇವನ ಹೆಂಡತಿ ಸರಳ ಸ್ವಭಾವದ ಸಾಧ್ವಿಯಾಗಿದ್ದಳು. ಆ ವರ್ಷ ಪಿತೃಪಕ್ಷ ಬಂದಿತು. ಹಿರಿಯ ನ ಪತ್ನಿ ಹೇಳಿದಳು. ನಾವು ಪಿತೃ ಪಕ್ಷವನ್ನು ಚೆನ್ನಾಗಿ ಆಚರಿಸೋಣ ಎಲ್ಲರನ್ನೂ ಊಟಕ್ಕೆ ಕರೆಯೋಣ. ಅವರು ನಮ್ಮ ಶ್ರೀಮಂತಿಕೆ ನೋಡಲಿ, ಹಾಗೆ ನಿಮ್ಮ ತಮ್ಮ ಕಿರಿಯ ಹಾಗೂ ಅವನ ಹೆಂಡತಿ ಬರಲಿ ಸಾಕಷ್ಟು ಕೆಲಸ ಮಾಡಿಸಿ ಕೊಳ್ಳೋಣ ಎಂದಳು. ಇಷ್ಟು ಹೇಳಿ ತಾನೆ ಹೋಗಿ ಕಿರಿಯ ಮತ್ತು ಅವನ ಹೆಂಡತಿಗೆ ಮರುದಿನ ಬರುವಂತೆ ಹೇಳಿ ಬಂದಳು. ಬೆಳಗಾಗುತ್ತಲೇ ಕಿರಿಯನ ಪತ್ನಿ ಇವಳ ಮನೆಗೆ ಬಂದು ಎಲ್ಲಾ ಕೆಲಸಗಳನ್ನು ಮಾಡಿದಳು. ಅವಳೊಬ್ಬಳೇ ಅಷ್ಟು ಜನಕ್ಕೂ ಬಹಳಷ್ಟು ಅಡುಗೆ ಖಾದ್ಯಗಳನ್ನು ತಯಾರಿಸಿದಳು. ಎಲ್ಲಾ ಮುಗಿಸಿ ಅವಳು ಮನೆಗೆ ಹೋದಳು.
ಮಧ್ಯಾಹ್ನ ಅಪರಾಹ್ನ ಎರಡು ಗಂಟೆ ಹೊತ್ತಿಗೆ, ಪಿತೃಗಳ ಪೂಜೆಯಾಯಿತು. ಪಿತೃಗಳು ಅವರ ಸ್ಥಾನದಲ್ಲಿದ್ದರು. ಊರಿನವರೆಲ್ಲ ಊಟಕ್ಕೆ ಬಂದರು. ಬಹಳ ರುಚಿಕಟ್ಟಾದ ಸೊಗಸಾದ ಅಡುಗೆ ಊಟ ಮಾಡುತ್ತಿದ್ದರು. ಇದನ್ನು ನೋಡಿದ ಪಿತೃಗಳು ಆಹಾ ಎಷ್ಟು ಒಳ್ಳೆಯ ಅಡುಗೆಯನ್ನು ಮಾಡಿ ಪಿತೃಕಾರ್ಯ ಮುಗಿ ಸಿ ಅನ್ನದಾನ ಮಾಡುತ್ತಿದ್ದಾನೆ ಎಂದು ಮಾತಾಡಿಕೊಳ್ಳುತ್ತಿದ್ದರು. ಆಗ ಅದರಲ್ಲಿದ್ದ ಉಳಿದಿಬ್ಬ ಪಿತೃಗಳು, ಇಲ್ಲ ಇಲ್ಲ ಹಾಗೇನಿಲ್ಲ ನಾವು ಇದರ ಬಗ್ಗೆ ಚರ್ಚಿಸೋಣ ಎಂದು ಮಾತಾಡಿದರು.
ಹಿರಿಯಣ್ಣ ತಮ್ಮನಿಗೆ ಮೋಸ ಮಾಡಿ ಆಸ್ತಿಯನ್ನೆಲ್ಲ ಹೊಡೆದುಕೊಂಡು ಈಗ ಜನಗಳ ಹೊಗಳಿಕೆಗಾಗಿ ಪಿತೃ ಕಾರ್ಯವನ್ನು ಬಹಳ ಅದ್ದೂರಿಯಾಗಿ ಮಾಡುತ್ತಿದ್ದಾನೆ. ಪಾಪ ಕಿರಿಯ ನಾದ ತಮ್ಮನ ಮನೆಯಲ್ಲಿ ಒಪ್ಪತ್ತಿಗೆ ತಿನ್ನಲು ಗತಿಯಿಲ್ಲ. ಎಷ್ಟು ಕಷ್ಟ ಪಡುತ್ತಿದ್ದಾರೆ. ಅವರಿಗೆ ಧನ ಧಾನ್ಯ ಸಮೃದ್ಧಿಯಾಗಿ ಬರಬೇಕೆಂದು ನಾವು ಆಶೀರ್ವಾದ ಮಾಡಬೇಕು. ಕಿರಿಯನ ಹೆಂಡತಿ ಅಡುಗೆಯನ್ನು ಶ್ರದ್ಧಾ ಭಕ್ತಿಯಿಂದ, ರುಚಿಯಾದ ಪಕ್ವಾನಗಳನ್ನು ಮಾಡಿದ್ದಾಳೆ. ಹಿರಿಯನ ಹೆಂಡತಿ, ಅಲಂಕಾರ ಮಾಡಿಕೊಂಡು ಜನಗಳಿಗೆ ತೋರಿಸಿಕೊಂಡು ಓಡಾಡುತ್ತಿದ್ದಾಳು.
ಹೀಗೆಂದುಕೊಂಡ ಪಿತೃಗಳೆಲ್ಲ ತೀರ್ಮಾನಿಸಿ, ಹೇ ನಾರಾಯಣ ಭಗವಂತ ಕಿರಿಯನ ಮನೆಗೆ ಸಂಪತ್ತು ಧನ ದೌಲತ್ತು ಎಲ್ಲಾ ಕೊಡು, ಅವರು ಹಿರಿಯನಂತೆ ಸುಖ ಸಮೃದ್ಧಿಯಾಗಿರಲಿ ಎಂದು ಭಜನೆ ಮಾಡ ತೊಡಗಿದರು. ಪಿತೃಕಾರ್ಯವೆಲ್ಲ ಮುಗಿಯಿತು ಕಿರಿಯನ ಮಕ್ಕಳು ಬಂದು ಅಮ್ಮ ನಮಗೆ ಊಟ ಕೊಡು ಹಸಿವು ಎಂದವು. ಕಿರಿಯನ ಹೆಂಡತಿ ಊಟ ಮಾಡಿ ಮಕ್ಕಳಿಗೂ ಊಟ ಹಾಕಬೇಕೆಂದು ಭಾವನ ಮನೆಗೆ ಬಂದಳು. ಆದರೆ ಹಿರಿಯನ ಹೆಂಡತಿ ಊಟದ ಪಾತ್ರೆಗಳನ್ನೆಲ್ಲ ಖಾಲಿ ಮಾಡಿ ಅವಳಿಗೆ ತೊಳೆಯಲು ಹಾಕಿದ್ದಳು. ಉಪವಾಸದಿಂದ ಮನೆಗೆ ಹೋದ ಮಕ್ಕಳು ಊಟವಿಲ್ಲದೆ ಅಂಗಳದಲ್ಲಿ ಕುಳಿತವು. ಕಿರಿಯ ಮತ್ತು ಅವನ ಹೆಂಡತಿ ಮಕ್ಕಳಿಗೆ ಊಟ ಕೊಡಲಾಗಲಿಲ್ಲ ಎಂದು ಚಿಂತಿಸುತ್ತಾ ಕುಳಿತಿದ್ದರು. ಮಕ್ಕಳು ಅಂಗಳದಲ್ಲಿ ಆಡಲು ಗುಂಡಿ ತೋಡುವುದು ನೀರು ಹಾಕುವುದು ಹೀಗೆ ಆಡುತ್ತಿದ್ದವು.
ಒಂದು ಕಡೆ ಹೀಗೆ ಗುಂಡಿ ಸ್ವಲ್ಪ ತೋಡುತ್ತಿರುವಾಗ ಬಂಗಾರ ತುಂಬಿದ ತಪ್ಪಲೆ ತನ್ನಿಂದ ತಾನೇ ಮೇಲೆ ಬಂದಿತು. ಇದನ್ನು ಕಂಡು ಹೆದರಿದ ಮಕ್ಕಳು ಅಪ್ಪ ಅಮ್ಮನನ್ನು ಕರೆದವು ಅವರು ಬಂದು ನೋಡಿದರು ತಪ್ಪಲೆಯನ್ನು ಒಳಗೆ ತೆಗೆದುಕೊಂಡು ಹೋಗಿ ದೇವರ ಮುಂದೆ ಇಟ್ಟು ಕೈ ಮುಗಿದು ನೋಡಿದರು. ಸಂಪತ್ತು ತುಂಬಿರುವ ತಪ್ಪಲೆಯನ್ನು ನೋಡಿದರು. ತಕ್ಷಣ ನಮಗೆ ಇಷ್ಟು ಒಳ್ಳೆಯ ಬದುಕು ಕೊಟ್ಟ ಪ್ರೀತಿ ಪಾತ್ರರಾದ ಹಿರಿಯರೇ ನಾವು ಏನು ಮಾಡಲಿಲ್ಲ ಆದರೂ ನಮಗೆ ಸಂಪತ್ತನ್ನು ಕೊಟ್ಟಿರುವಿರಿ. ಈ ಸಂಪತ್ತಿನಿಂದ ತಪ್ಪದೇ ಪ್ರತಿ ವರ್ಷವೂ ಪಿತೃ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು ಅದೇ ರೀತಿ ಮತ್ತೊಂದು ವರ್ಷ ಪಿತೃ ಪಕ್ಷ ಬಂದಾಗ ನಾನಾ ಥರದ ಅಡುಗೆ ಮಾಡಿ, ಹಿರಿಯಣ್ಣ ಅವನ ಹೆಂಡತಿಯನ್ನು ಗೌರವದಿಂದ ಕರೆದು, ಪಿತೃ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ, ಊರವರಿಗೆಲ್ಲಾ ಶುಚಿ ರುಚಿಯಾದ ಅಡುಗೆ ಮಾಡಿ ಹೊಟ್ಟೆ ತುಂಬಾ ಬಡಿಸಿದರು. ಹಿರಿಯ ಮತ್ತು ಅವನ ಪತ್ನಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಎಲ್ಲರನ್ನೂ ಸಂತಸಪಡಿಸಿ ಪಿತೃಗಳನ್ನು ತೃಪ್ತಿಪಡಿಸಿ, ಮಾಡಿದ ಪಿತೃಕಾರದಿಂದ ಅವನ ಸಂಪತ್ತು ದಿನ ಹೆಚ್ಚು ತೊಡಗಿತು. ಎಷ್ಟೇ ಐಶ್ವರ್ಯ ಬಂದರು ಹಿಂದಿನಂತೆ ಸರಳ ಜೀವನವನ್ನು ನಡೆಸಿ ಮಕ್ಕಳೊಂದಿಗೆ ಸಂತೋಷವಾಗಿದ್ದರು. (ಬರಹ: ಆಶಾ ನಾಗಭೂಷಣ)