Pitru Paksha: ಪಿತೃಪಕ್ಷ ಆಚರಣೆ, ಧಾರ್ಮಿಕ ನಂಬಿಕೆ ಮತ್ತಿತರ ಪ್ರಮುಖ ವಿಚಾರಗಳು
ಪಿತೃದೇವತೆಗಳಿಗೆ ಮಾಡುವಂಥ ಕಾರ್ಯ ಮತ್ತು ಸಮಯದ ದೃಷ್ಟಿಯಿಂದ ಬಹಳ ಮುಖ್ಯವಾದದ್ದು ಪಿತೃಪಕ್ಷ. ಇದೇ ಸೆಪ್ಟೆಂಬರ್ 8ನೇ ತಾರೀಕಿನಿಂದ ಪಿತೃಪಕ್ಷ ಆರಂಭವಾಗಲಿದೆ. ಇದು ಸೆಪ್ಟೆಂಬರ್ 21ನೇ ತಾರೀಕಿಗೆ ಮಹಾಲಯ ಅಮಾವಾಸ್ಯೆಯೊಂದಿಗೆ ಕೊನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿತೃಪಕ್ಷದ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುತ್ತಿದೆ.

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿ ಮುಖ್ಯವಾಗಿ ಮೂರು ಋಣಗಳನ್ನು ತೀರಿಸಬೇಕು: ಪಿತೃ ಋಣ, ದೇವ ಋಣ ಹಾಗೂ ಋಷಿ ಋಣ. ಮಾತಾ- ಪಿತೃಗಳ ಸೇವೆ ಮಾಡುವ ಮೂಲಕ ಹಾಗೂ ಪಿತೃ ಯಜ್ಞವನ್ನು ಮಾಡುವುದರೊಂದಿಗೆ ಅತಿ ಮುಖ್ಯವಾಗಿ ಪಿತೃ ಋಣವನ್ನು ತೀರಿಸುವುದಕ್ಕೆ ಅವಕಾಶ ಆಗುತ್ತದೆ. ಅಂದ ಹಾಗೆ ಈ ಅವಧಿಯಲ್ಲಿಯೇ ಯಾಕೆ ಪಕ್ಷವನ್ನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮನುಷ್ಯರ ಲೆಕ್ಕದಲ್ಲಿನ ಒಂದು ತಿಂಗಳು ಅಂದರೆ, ಅದು ಪಿತೃ ದೇವತೆಗಳಿಗೆ ಒಂದು ದಿನ. ಇನ್ನು ಅವರ ಪಾಲಿಗೆ ಶುಕ್ಲ ಪಕ್ಷ ಎಂಬುದು ಹಗಲಾದರೆ, ಕೃಷ್ಣ ಪಕ್ಷವು ರಾತ್ರಿ. ಹೀಗೆ ಪಿತೃ ದೇವತೆಗಳಿಗೆ ಅಂತ ನೀಡುವ ತಿಲ ತರ್ಪಣ ಮತ್ತು ಪಿಂಡ ಪ್ರದಾನವು ಅವರಿಗೆ ಇಡೀ ವರ್ಷಕ್ಕೆ ಸಾಕಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಪಕ್ಷವನ್ನು ಮಾಡಲಾಗುತ್ತದೆ.
ಮಹಾಲಯ ಮಾಸ:
ಈ ಅವಧಿಯನ್ನು ಮಹಾಲಯ ಪಕ್ಷ ಅಂತಲೂ ಕರೆಯಲಾಗುತ್ತದೆ. ಮಹಾ ಅಂದರೆ ಭಾರೀ ಅಥವಾ ದೊಡ್ಡದು ಎಂಬ ಅರ್ಥ ಅಂದುಕೊಳ್ಳೋಣ. ಇನ್ನು ಲಯ ಎಂದಾದರೆ ನಾಶ. ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದಂಥ ಒಂದು ಯುದ್ಧದಲ್ಲಿ, ಅದು ಕೂಡ ಭಾದ್ರಪದ ಬಹುಳ (ಕೃಷ್ಣಪಕ್ಷ) ಮಾಸದಲ್ಲಿ ಹಲವು ದೇವತೆಗಳು ಹಾಗೂ ಋಷಿಗಳು ರಾಕ್ಷಸರಿಂದ ಸಾವನ್ನಪ್ಪುತ್ತಾರೆ. ಈ ದೇವತೆಗಳು ಹಾಗೂ ಋಷಿಗಳು ನಮ್ಮ ಹಿರಿಯರಿದ್ದಂತೆ ಹಾಗೂ ಇದು ಮಹಾಲಯದ ಅವಧಿಯಲ್ಲಿ, ಆದ್ದರಿಂದ ಇದನ್ನು ಮಹಾಲಯ ಎನ್ನಲಾಗುತ್ತದೆ.
ದ್ವಾದಶ ಪಿತೃಗಳು:
- ಈ ಪಿತೃಪಕ್ಷದಲ್ಲಿ ದ್ವಾದಶ ಪಿತೃಗಳಿಗೆ ಮುಖ್ಯವಾಗಿ ಪಿಂಡ ಪ್ರಧಾನ ಮಾಡಲಾಗುತ್ತದೆ. ಪಿತೃವರ್ಗ: ಪಿತೃ, ಪಿತಾಮಹ, ಪ್ರಪಿತಾಮಹ (ತಂದೆ, ಅಜ್ಜ, ಮುತ್ತಜ್ಜ)
- ಮಾತೃವರ್ಗ- ಮಾತೃ, ಪಿತಾಮಹಿ, ಪ್ರಪಿತಾಮಹಿ (ತಾಯಿ, ತಂದೆಯ ತಾಯಿ ಹಾಗೂ ಅಜ್ಜನ ತಾಯಿ)
- ಮಾತಾಮಹ ವರ್ಗ- ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ (ತಾಯಿಯ ತಂದೆ, ತಾಯಿಯ ತಾತ ಹಾಗೂ ತಾಯಿಯ ಮುತ್ತಾತ)
- ಮಾತಾಮಹಿ ವರ್ಗ- ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ (ತಾಯಿಯ ತಾಯಿ; ತಾಯಿಯ ಅಜ್ಜಿ, ತಾಯಿಯ ಮುತ್ತಜ್ಜಿ)
ಈ ಸಂದರ್ಭದಲ್ಲಿ ಯಾರಿಗೆಲ್ಲ ಪಿಂಡ ಪ್ರಧಾನ ಮಾಡಬಹುದು ಎಂಬ ವಿವರ ಹೀಗಿದೆ (ಒಂದು ವೇಳೆ ಮೃತಪಟ್ಟದಲ್ಲಿ ಅವರಿಗೆಲ್ಲ ಪಕ್ಷದಲ್ಲಿ ಪಿಂಡ ಪ್ರದಾನ ಮಾಡಲಾಗುತ್ತದೆ): ಹೆಂಡತಿ, ಮಗ, ಅಣ್ಣ- ತಮ್ಮಂದಿರು, ಅಣ್ಣ- ತಮ್ಮಂದಿರ ಪತ್ನಿಯರು, ತಂದೆಯ ಅಣ್ಣತಮ್ಮಂದಿರು, ತಂದೆಯ ಅಣ್ಣ- ತಮ್ಮಂದಿರ ಪತ್ನಿಯರು, ಸೋದರ ಮಾವಂದಿರು, ಸೋದರ ಮಾವಂದಿರ ಪತ್ನಿಯರು, ಸ್ವಂತ ಮಗಳು, ಅಳಿಯ, ಸ್ವಂತ ಅಕ್ಕ- ತಂಗಿಯರು, ಅಕ್ಕತಂಗಿಯರ ಪತಿ, ಅಕ್ಕತಂಗಿಯರ ಮಕ್ಕಳು, ತಂದೆಯ ಅಕ್ಕತಂಗಿಯರು, ಅವರ ಪತಿ, ತಾಯಿಯ ಅಕ್ಕತಂಗಿಯರು, ಅವರ ಪತಿ, ಮಾವ, ಅತ್ತೆ, ಹೆಂಡತಿಯ ಅಣ್ಣ-ತಮ್ಮಂದಿರು, ಅವರ ಹೆಂಡತಿ, ವಿದ್ಯೆ ಕಲಿಸಿದ ಗುರು, ಅವರ ಹೆಂಡತಿ, ಆಚಾರ್ಯರು (ಕುಟುಂಬ ಪುರೋಹಿತರು), ಅವರ ಹೆಂಡತಿ, ಶಿಷ್ಯ, ಸ್ನೇಹಿತರು.
ಈ ಮೇಲ್ಕಂಡವರಲ್ಲಿ ಯಾರದು ಹೆಸರು ಗೊತ್ತಿರುವುದಿಲ್ಲವೋ ಮಹಿಳೆಯರಿಗೆ ಯಜ್ಞಮ್ಮ ಹಾಗೂ ಪುರುಷರಿಗೆ ಯಜ್ಞಪ್ಪ ಎಂಬ ಹೆಸರು ಬಳಕೆ ಮಾಡಲಾಗುತ್ತದೆ. ಇನ್ನು ಗೋತ್ರ ಗೊತ್ತಿಲ್ಲದಿದ್ದರೆ ಕಾಶ್ಯಪ ಗೋತ್ರ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಸಾಕಿದ್ದಂಥ ನಾಯಿಗೂ ಈ ಸಮಯದಲ್ಲಿ ಸ್ಮರಣೆ ಮಾಡಿ ಪಕ್ಷ ಮಾಡಲಾಗುತ್ತದೆ. ನೆನಪಿಟ್ಟುಕೊಳ್ಳಬೇಕಾದ ಮತ್ತೊಂದು ಮುಖ್ಯ ಅಂಶ ಏನೆಂದರೆ, ಒಬ್ಬ ವ್ಯಕ್ತಿ ಮೃತಪಟ್ಟು, ಒಂದು ವರ್ಷ ಸಂಪೂರ್ಣವಾಗಿ ಕಳೆಯುವ ತನಕ, ಆ ವ್ಯಕ್ತಿಯ ಸಾಂವತ್ಸರಿಕ ಶ್ರಾದ್ಧ ಆರಂಭವಾಗುವ ತನಕ ಅಂಥವರಿಗೆ ಪಕ್ಷದಲ್ಲಿ ತರ್ಪಣ ಬಿಡುವುದಿಲ್ಲ.
ಇದನ್ನೂ ಓದಿ: ಪಿತೃ ಪಕ್ಷದ ಸಮಯದಲ್ಲಿ ಗರ್ಭಿಣಿಯರು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಶ್ರಾದ್ಧ ಅಥವಾ ಪಕ್ಷದ ದಿನ ಇವುಗಳನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ:
- ತಾಂಬೂಲವನ್ನು ತಿನ್ನಬಾರದು (ವೀಳ್ಯದೆಲೆ -ಅಡಿಕೆ- ಸುಣ್ಣದ ತಾಂಬೂಲ)
- ತೈಲ ಅಭ್ಯಂಜನ ಮಾಡಬಾರದು
- ಅನಿವಾರ್ಯ ಪಕ್ಷದಲ್ಲಿ ಮಾತ್ರ ಔಷಧವನ್ನು ತೆಗೆದುಕೊಳ್ಳಬಹುದು
- ಕಾರ್ಯ ಮಾಡುವ ದಿನದಂದು ರಾತ್ರಿ ಭೋಜನ ನಿಷಿದ್ಧ
- ಕಾರ್ಯ ಮಾಡುವ ಹಿಂದಿನ ದಿನವೂ ರಾತ್ರಿ ಭೋಜನ ಮಾಡಬಾರದು
- ಕಾರ್ಯ ಮಾಡುವ ವ್ಯಕ್ತಿ ದೇವರ ನಿರ್ಮಾಲ್ಯವನ್ನು ಮಾತ್ರ ತೆಗೆದುಕೊಳ್ಳಬೇಕು.
- ಕಾರ್ಯ ಮಾಡಿಸುವವರಿಗೆ ಕೊಟ್ಟ ನಂತರವಷ್ಟೇ ತೀರ್ಥವನ್ನು ತೆಗೆದುಕೊಳ್ಳಬಹುದು.
- ಪಿತೃಪಕ್ಷ ಪರ್ಯಂತವಾಗಿ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡಬೇಕು.
ಪಕ್ಷವನ್ನು ಎಲ್ಲಿ ಮಾಡಬೇಕು?
ಕ್ಷೇತ್ರಗಳಲ್ಲಿ ಮಾಡುವುದು ಉತ್ತಮ. ಒಂದು ವೇಳೆ ಸಾಧ್ಯವಿಲ್ಲದಿದ್ದಲ್ಲಿ ಮನೆಯಲ್ಲಿ ಮಾಡಬೇಕು. ಅದು ಕೂಡ ನಾನಾ ಕಾರಣಗಳಿಂದ ಸಾಧ್ಯವಿಲ್ಲ ಎಂದಾದಲ್ಲಿ ಆಗ ಮಠಗಳಲ್ಲಿ ಮಾಡಬಹುದು.
ಪಿತೃಪಕ್ಷ ಯಾವ ದಿನ ಮಾಡಬೇಕು?
ಸಾಧ್ಯವಿದ್ದಲ್ಲಿ ಪಿತೃಪಕ್ಷದಲ್ಲಿ ಎಲ್ಲ ದಿನವೂ (ಏಕಾದಶಿ- ದ್ವಾದಶಿ ಹೊರತುಪಡಿಸಿ) ತರ್ಪಣವನ್ನು ನೀಡಬೇಕು. ಒಂದು ವೇಳೆ ಎಲ್ಲ ದಿನ ಮಾಡಲು ಆಗದಿದ್ದಲ್ಲಿ ತಂದೆಯು ಮೃತಪಟ್ಟಿದ್ದ ದಿನದ ತಿಥಿಯಂದು ಮಾಡಬೇಕು. ಒಂದು ವೇಳೆ ಚತುರ್ಥಿ ಸಾವನ್ನಪ್ಪಿದ್ದರೆ ಚತುರ್ಥಿಯಂದು ಮಾಡಬೇಕು. ಹೀಗೆ ಆ ದಿನ ಮಾಡುವುದು ಉತ್ತಮ. ಆದರೆ ಏನಾದರೂ ಕಾರಣದಿಂದ ಆ ದಿನ ಮಾಡಲಿಕ್ಕೆ ಆಗಲಿಲ್ಲ ಅಂತಾದರೆ ನವಮಿ (ಅವಿಧವಾ ನವಮಿ- ಮುತ್ತೈದೆಯರ ಪಕ್ಷ ಮಾಡುವ ದಿನ), ಏಕಾದಶಿ (ಉಪವಾಸ), ದ್ವಾದಶಿ (ಯತಿಗಳಿಗಾಗಿ ಮೀಸಲಿಟ್ಟ ದಿನ), ಚತುರ್ದಶಿ (ಅಪಘಾತದಲ್ಲಿ ಮೃತಪಟ್ಟವರಿಗೆ ಕಾರ್ಯ ಮಾಡುವ ದಿನ- ಘಾತ ಚತುರ್ದಶಿ) ಇವಿಷ್ಟು ದಿನ ಬಿಟ್ಟು ಪಿತೃಪಕ್ಷದ ಉಳಿದ ಯಾವ ದಿನವಾದರೂ ಮಾಡಬಹುದು.
ಇನ್ನು ಪಿತೃಪಕ್ಷದಲ್ಲಿ ಆಗಲಿಲ್ಲ ಎಂದಾದರೆ ಆಶ್ವೀಜ ಮಾಸದಲ್ಲಿ ಪಂಚಮಿ ತನಕ (ತುಲಾ ಮಾಸದಲ್ಲಿ) ಪಕ್ಷವನ್ನು ಮಾಡಬಹುದು. ಶ್ರದ್ಧೆ ಹಾಗೂ ಕ್ರಮಬದ್ಧವಾದ ಪಕ್ಷದ ಆಚರಣೆಯಿಂದ ನಮ್ಮ ಹಿರಿಯರಿಗೆ ಆ ದೇವರು ಸದ್ಗತಿಯನ್ನು ದಯ ಪಾಲಿಸುತ್ತಾನೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




