ಸಹೋದರನಿಗೆ ಅಪಘಾತ, ತಾಯಿಗೆ ಅನಾರೋಗ್ಯ; ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಹೇಳಿದ್ದಿಷ್ಟು

| Updated By: ಗಣಪತಿ ಶರ್ಮ

Updated on: Dec 30, 2022 | 3:52 PM

ಪ್ರಧಾನಿ ಕುಟುಂಬದವರೆಲ್ಲ ಒಟ್ಟೊಟ್ಟಿಗೆ ಸಮಸ್ಯೆಗೆ ಸಿಲುಕಿರೋದೇಕೆ? ಮೋದಿ ಅವರ ಜಾತಕದಲ್ಲೇನಿದೆ? ಅವರ ರಾಜಕೀಯ ಭವಿಷ್ಯ ಹಾಗೂ ಕುಟುಂಬದ ಭವಿಷ್ಯ ಹೇಗಿದೆ ಎಂಬುದನ್ನು ಉಡುಪಿಯ ಕಾಪು ಮೂಲದ ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ‘ಟಿವಿ9ಕನ್ನಡ ಡಿಜಿಟಲ್’ ಜತೆ ವಿಶ್ಲೇಷಿಸಿದ್ದಾರೆ.

ಸಹೋದರನಿಗೆ ಅಪಘಾತ, ತಾಯಿಗೆ ಅನಾರೋಗ್ಯ; ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಹೇಳಿದ್ದಿಷ್ಟು
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರ ಪ್ರಹ್ಲಾದ್ ಮೋದಿ (Prahlad Modi) ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಡಕೊಳ ಬಳಿ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಯಿತು. ಸಣ್ಣ ಮಗು ಸೇರಿದಂತೆ ಕಾರಿನಲ್ಲಿದ್ದವರು ಗಾಯಗೊಂಡರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾದರು. ಇದರ ಬೆನ್ನಲ್ಲೇ ಮೋದಿ ಅವರ ಶತಾಯುಷಿ ತಾಯಿ ಹೀರಾಬೆನ್ ಮೋದಿ (Heeraben Modi) ಅನಾರೋಗ್ಯಕ್ಕೀಡಾಗಿ ಗುಜರಾತ್​​ನ ಅಹಮದಾಬಾದ್​ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಧಾನಿ ಕುಟುಂಬದವರೆಲ್ಲ ಒಟ್ಟೊಟ್ಟಿಗೆ ಸಮಸ್ಯೆಗೆ ಸಿಲುಕಿರೋದೇಕೆ? ಮೋದಿ ಅವರ ಜಾತಕದಲ್ಲೇನಿದೆ? ಅವರ ರಾಜಕೀಯ ಭವಿಷ್ಯ ಹಾಗೂ ಕುಟುಂಬದ ಭವಿಷ್ಯ ಹೇಗಿದೆ ಎಂಬುದನ್ನು ಉಡುಪಿಯ ಕಾಪು ಮೂಲದ ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ‘ಟಿವಿ9ಕನ್ನಡ ಡಿಜಿಟಲ್’ ಜತೆ ವಿಶ್ಲೇಷಿಸಿದ್ದಾರೆ.

ಮಾತೃ ಸಮಾನರ ಸಮಸ್ಯೆ ನೋಡಬೇಕಾಗುತ್ತಾ ಮೋದಿ?

ಮೋದಿ ಅವರದ್ದು ವೃಶ್ಚಿಕ ಲಗ್ನ ಮತ್ತು ರಾಶಿ. ಲಗ್ನಾಧಿಪ ಮತ್ತು ರಾಶಿಯ ಅಧಿಪತಿ ಒಂದೇ ಕಡೆ ಇದ್ದಾರೆ. ಚತುರ್ಥ ಮಾತೃ ಸ್ಥಾನ ಕುಂಭಕ್ಕೆ ಅಷ್ಟಮ ಸ್ಥಾನವಾದ ಕನ್ಯಾರಾಶಿಯು ಮಾತೃ ಸ್ಥಾನದ ಅಪಾಯ ವಿಚಾರ ತೋರಿಸುವಥದ್ದು. ಅದನ್ನು ಗುರು ವೀಕ್ಷಿಸುವ ಕಾಲದಲ್ಲಿ ಆ ಭಾವದ ಬಗ್ಗೆ ಜಾಗ್ರತೆ ಬೇಕು. ಇದನ್ನು ನೋಡಿದರೆ ಮೋದಿ ಅವರು ಮಾತೃ ಸಮಾನರಾದವರ ತೊಂದರೆಗಳನ್ನು ನೋಡಬೇಕಾಗಿ ಬರಬಹುದು. ಇದಕ್ಕೆ ಪರಿಹಾರ ಮಾಡಬೇಕಾಗುತ್ತದೆ ಎಂದು ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಿಸಿದ್ದಾರೆ. ದಶದೋಷಗಳಾಗಲೀ ಇತರ ಯಾವುದೇ ದೋಷಗಳಾಗಲೀ ಇಲ್ಲ. ಬೇರೆ ಯಾವ ತೊಂದರೆಗಳೂ ಪ್ರಧಾನಿಯವರಿಗಿಲ್ಲ ಎಂದು ಅವರು ಹೇಳಿದ್ದಾರೆ.

ಸಹೋದರ, ಮಿತ್ರನ ಕಳೆದುಕೊಳ್ಳುವ ಭೀತಿ ಇದೆಯೇ?

ಏಪ್ರಿಲ್ ವೇಳೆಗೆ ಗುರು ಮೇಷ ರಾಶಿ ಪ್ರವೇಶಿಸಿದಾಗ ತೃತೀಯದ ಅಷ್ಟಮ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ತೃತೀಯ ಅಂದರೆ ಭ್ರಾತೃ ಸ್ಥಾನ. ಇದು ಸಹೋದರರಿಗೆ ಸಂಬಂಧಿಸಿದ್ದಾಗಿದೆ. ಅದರ ಅಷ್ಟಮ ಸ್ಥಾನ ಸಿಂಹ. ಎಪ್ರಿಲ್ ನಂತರ ಅದನ್ನು ಗುರು ವೀಕ್ಷಣೆ ಮಾಡುವಾಗ ಆ ಭಾವದ ಬಗ್ಗೆ ಕಾಳಜಿ ಬೇಕು. ಹೀಗಾಗಿ ಸಹೋದರನ ಸಮಸ್ಯೆಗಳು ಎದುರಿಸುವ ಸಾಧ್ಯತೆ ಇದೆ. ಅಂದರೆ ಸಹೋದರರಿಗೆ ತೊಂದರೆಗಳಾಗುವ, ಪ್ರಾಣ ಹಾನಿಯಾಗುವ ಭೀತಿ ಇದೆ. ಮಿತ್ರರಿಗೂ ಸಮಸ್ಯೆಗಳಾಗಬಹುದು. ಆಪ್ತ ಮಿತ್ರರರನ್ನು ಕಳೆದುಕೊಳ್ಳುವಂಥ ಅಥವಾ ಅದಕ್ಕೆ ಸಮನಾದ ಕಠಿಣ ಸನ್ನಿವೇಶ ಎದುರಾದರೂ ಆಗುವ ಸಾಧ್ಯತೆ ಇದೆ. ಇದಕ್ಕೆ ಪರಿಹಾರ ಮಾಡಿಕೊಳ್ಳಬೇಕಾಗಬಹುದು. ಇಷ್ಟು ಬಿಟ್ಟರೆ ಮೋದಿ ಅವರಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಎದುರಾಗದು ಎಂದು ಅವರು ವಿಶ್ಲೇಷಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ

2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವೃಷಭ ರಾಶಿಗೆ ಗುರುವಿನ ಪ್ರವೇಶವಾಗುತ್ತದೆ. ಏಕಾದಶ ಸ್ಥಾನವನ್ನು ಗುರು ವೀಕ್ಷಿಸಲಿದ್ದಾನೆ. ಹೀಗಾಗಿ ಮೋದಿ ಅವರು ಈ ಹಿಂದಿಗಿಂತಲೂ ಎರಡುಪಟ್ಟು ಅಂತರದ ಜಯಭೇರಿ ಬಾರಿಸಲಿದ್ದಾರೆ. ಅಖಂಡ ಸಾಮ್ರಾಜ್ಯ ಯೋಗದ ಫಲ ಅವರಿಗಿದೆ. ಅಂದರೆ ಒಂದಿನಿತೂ ಬಿಡದೆ ಎಲ್ಲೆಡೆ ಅವರು ಜಯಗಳಿಸಲಿದ್ದಾರೆ. ಶುಕ್ರ ಮತ್ತು ಶನಿ ತೃತೀಯ, ಚತುರ್ಥ ಸ್ಥಾನದಲ್ಲಿರುವುದರಿಂದ ಎಲ್ಲರನ್ನೂ ಆಕರ್ಷಿಸುವ ಸ್ವಭಾವ ಮೋದಿ ಅವರದ್ದಾಗಿರಲಿದೆ. ಇವೆಲ್ಲ ಅವರಿಗೆ ಪ್ರಯೋಜನಕ್ಕೆ ಬರಲಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:19 pm, Thu, 29 December 22