Ram Navami 2024
ಪ್ರತಿ ವರ್ಷ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ವರ್ಷ, ಅಂದರೆ 2024 ರಲ್ಲಿ, ರಾಮ ನವಮಿ ಹಬ್ಬವನ್ನು ಎ.17 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಭಗವಾನ್ ರಾಮನು ಮಾನವ ರೂಪದಲ್ಲಿ ಭೂಮಿಯ ಮೇಲೆ ಅವತರಿಸಿದ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಶುಭ ಸಂದರ್ಭವನ್ನು ಸಂಭ್ರಮಿಸಲು ರಾಮ ನವಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಈ ದಿನ ದೇವಿ ಭಕ್ತರು ದುರ್ಗಾ ಮಾತೆಯ ಒಂಬತ್ತನೇ ರೂಪವಾದ ಸಿದ್ಧಿಧಾತ್ರಿಯನ್ನು ಕೂಡ ಪೂಜಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಮನವಮಿ ಪೂಜೆಯು ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 1:38 ರ ನಡುವೆ ನಡೆಸಬಹುದಾಗಿದೆ. ಭಗವಾನ್ ರಾಮನು ಮಧ್ಯಾಹ್ನ 12:21 ಕ್ಕೆ ಜನಿಸಿದನೆಂದು ನಂಬಲಾಗಿದೆ. ಈ ಸಮಯದಲ್ಲಿ, ಭಕ್ತರು ಮನೆಯಲ್ಲಿ ಅಥವಾ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಮಾಡಬಹುದು. ಈ ದಿನ ಭಗವಾನ್ ಶ್ರೀರಾಮ ಚಂದ್ರನನ್ನು ಪೂಜಿಸುವವರು ತಮ್ಮ ಜೀವನದಲ್ಲಿನ ದುಃಖ ಮತ್ತು ತೊಂದರೆಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ನಂಬಲಾಗಿದೆ ಜೊತೆಗೆ ಈ ದಿನವನ್ನು ಭಕ್ತಿಯಿಂದ ಆಚರಣೆ ಮಾಡಿದವರಿಗೆ ಭಗವಾನ್ ರಾಮನ ಪೂರ್ಣ ಆಶೀರ್ವಾದ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಇದನ್ನೂ ಓದಿ: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ
ಈ ದಿನದ ಪೂಜಾ ಆಚರಣೆಗಳು ಹೇಗಿರಬೇಕು?
- ರಾಮ ನವಮಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಗಂಗಾ ಜಲ ಬೆರೆಸಿದ ನೀರಿನಲ್ಲಿ ಸ್ನಾನವನ್ನು ಮುಗಿಸಿ ಭಗವಾನ್ ರಾಮ ಮತ್ತು ಮಾತಾ ಜಾನಕಿಗೆ ಭಕ್ತಿಯಿಂದ ನಮಿಸಬೇಕು.
- ಈ ದಿನದಂದು ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆಯ ಮುಂದೆ ರಂಗೋಲಿ ಹಾಕಿ ಮನೆಯನ್ನು ಸಿಂಗರಿಸಬೇಕು. ರಾಮ ಜನಿಸಿದ ಖುಷಿ ಪ್ರತಿ ಹಿಂದೂ ಮನೆಗಳಲ್ಲಿಯೂ ಕಾಣಬೇಕು.
- ಪೂಜೆಗೆ ಎಲ್ಲಾ ರೀತಿಯ ತಯಾರಿ ನಡೆಸಿದ ನಂತರ ಸ್ವಚ್ಛವಾದ ಹಳದಿ ಬಟ್ಟೆಗಳನ್ನು ಧರಿಸಿ ಸೂರ್ಯ ದೇವರಿಗೆ ನಮಸ್ಕಾರ ಮಾಡಿ.
- ಕೆಂಪು ಅಥವಾ ಹಳದಿ ಬಟ್ಟೆಯನ್ನು ಪೂಜಾ ಕೋಣೆಯಲ್ಲಿಟ್ಟು ಅದರ ಮೇಲೆ ಭಗವಾನ್ ರಾಮನ ಕುಟುಂಬದವರ ವಿಗ್ರಹ ಅಥವಾ ಫೋಟೋ ಇಟ್ಟು ಹೂವು, ಹಣ್ಣುಗಳನ್ನಿಟ್ಟು ಅಲಂಕಾರ ಮಾಡಿ.
- ಭಕ್ತಿಯಿಂದ ದೇವರ ಬಳಿ ಪ್ರಾರ್ಥನೆ ಮಾಡಿ, ಮಂತ್ರ ಪಠಿಸುತ್ತಾ ಭಗವಾನ್ ರಾಮನನ್ನು ಧ್ಯಾನಿಸಿ.
- ಪೂಜೆಯ ಸಮಯದಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ.
- ಪೂಜೆ ಮುಗಿದ ಬಳಿಕ ಆರತಿ ಮಾಡಿ, ಭಕ್ತಿಯಿಂದ ನಿಮ್ಮ ಆಸೆಗಳನ್ನು ದೇವರ ಮುಂದೆ ಬೇಡಿಕೊಳ್ಳಿ. ನೈವೇದ್ಯಕ್ಕೆ ಇಟ್ಟ ಪ್ರಸಾದ ಮತ್ತು ಹಣ್ಣುಗಳನ್ನು ಎಲ್ಲರಿಗೂ ವಿತರಿಸಿ.
- ಈ ರೀತಿ ಮಾಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಎಲ್ಲವೂ ಪ್ರಾಪ್ತಿಯಾಗುತ್ತದೆ.
- ರಾಮನವಮಿ ಹಬ್ಬದ ದಿನ ಮಾಂಸಾಹಾರ ಸೇವನೆ ಮಾಡಬೇಡಿ, ಅಡುಗೆಯಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನು ಸೇರಿಸಬೇಡಿ. ಸಾಧ್ಯವಾದಲ್ಲಿ ಉಪ್ಪು ಬೆರೆಸಿದ ಆಹಾರಗಳನ್ನು ಕೂಡ ಸೇವನೆ ಮಾಡಬೇಡಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ