ರಾಮನವಮಿ ವಿಶೇಷ: ರಾಮನ ಕಥೆ ಹೇಳುವ ರಾಮಾಯಣದಲ್ಲಿ ಅದೆಷ್ಟು ವೈವಿಧ್ಯ? ಕನ್ನಡದ ಪ್ರಮುಖ ರಾಮಾಯಣಗಳಿವು

|

Updated on: Apr 10, 2022 | 12:09 PM

ರಾಮಾಯಣದ ಹಲವು ಅವತರಣಿಕೆಗಳು ಕನ್ನಡದಲ್ಲಿಯೂ ಇವೆ. ಬಹುತೇಕ ರಾಮಾಯಣ ಕಥನಗಳು ರಾವಣನನ್ನು ಖಳ ನಾಯಕ ಎಂದು ನೋಡದೇ, ದುರಂತ ನಾಯಕನನ್ನಾಗಿ (ಪ್ರತಿನಾಯಕ) ಗ್ರಹಿಸಿರುವುದು ವಿಶೇಷ.

ರಾಮನವಮಿ ವಿಶೇಷ: ರಾಮನ ಕಥೆ ಹೇಳುವ ರಾಮಾಯಣದಲ್ಲಿ ಅದೆಷ್ಟು ವೈವಿಧ್ಯ? ಕನ್ನಡದ ಪ್ರಮುಖ ರಾಮಾಯಣಗಳಿವು
ರಾಮಾಯಣ ಕೃತಿಗಳು
Follow us on

‘ರಾಮಾಯಣ ಬರೆದವರು ಯಾರು’ ಎಂಬ ಪ್ರಶ್ನೆಗೆ ‘ವಾಲ್ಮೀಕಿ’ ಎನ್ನುವುದು ಅತ್ಯಂತ ಸರಳವಾದ ಉತ್ತರ. ಆದರೆ ‘ರಾಮಾಯಣವನ್ನು ವಿಸ್ತರಿಸಿದವರು ಯಾರು’ ಎಂದು ಯಾರನ್ನಾದರೂ ಕೇಳಿದರೆ ಉತ್ತರ ಹೇಳಲು ಅವರು ತಿಣುಕಾಡಬೇಕಾಗುತ್ತದೆ. ಏಕೆಂದರೆ ವಿಶ್ವದೆಲ್ಲೆಡೆ ನೂರಾರು ಬಗೆಯ ರಾಮಾಯಣಗಳು ಚಾಲ್ತಿಯಲ್ಲಿವೆ. ಒಂದರಲ್ಲಿ ರಾಮ ನಾಯಕನಾಗಿದ್ದರೆ ಮತ್ತೊಂದರಲ್ಲಿ ರಾಮ ಗೌಣ. ಸೀತೆಯೇ ಪ್ರಧಾನ. ಮಗದೊಂದರಲ್ಲಿ ಲಕ್ಷ್ಮಣ ಪ್ರಧಾನ, ಇನ್ನೊಂದರಲ್ಲಿ ರಾವಣನೇ ನಾಯಕ. ಸೀತೆಯನ್ನು ಒಬ್ಬ ಸಾಮಾನ್ಯ ರೈತನ ಮಗಳು ಎಂಬಂತೆ ಬಿಂಬಿಸುವ ರಾಮಾಯಣ ಕಥನಗಳೂ ಚಾಲ್ತಿಯಲ್ಲಿವೆ. ಆದಿಕವಿ ಎಂದೇ ಖ್ಯಾತರಾದ ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ರಚಿಸುವ ಕಾಲಕ್ಕಾಗಲೇ ರಾಮಾಯಣ ಕಾವ್ಯ ಚಾಲ್ತಿಯಲ್ಲಿತ್ತು. ತಮ್ಮ ಕಾಲದಲ್ಲಿ ಚಾಲ್ತಿಯಲ್ಲಿದ್ದ ಕಥನಗಳನ್ನೇ ಅವರು ಸಂಗ್ರಹಿಸಿದರು ಎನ್ನುವ ವಾದವೂ ಉಂಟು. ಜನಮಾನಸವನ್ನು ಅಪ್ಪಿಕೊಂಡ ರಾಮಾಯಣದ ಹಲವು ಅವತರಣಿಕೆಗಳು ಕನ್ನಡದಲ್ಲಿಯೂ ಇವೆ. ಬಹುತೇಕ ರಾಮಾಯಣ ಕಥನಗಳು ರಾವಣನನ್ನು ಖಳ ನಾಯಕ ಎಂದು ನೋಡದೇ, ದುರಂತ ನಾಯಕನನ್ನಾಗಿ (ಪ್ರತಿನಾಯಕ) ಗ್ರಹಿಸಿರುವುದು ವಿಶೇಷ.

  1. ತೊರವೆ ರಾಮಾಯಣ
    ಕ್ರಿಶ 1400ರ ಆಸುಪಾಸಿನಲ್ಲಿದ್ದ ಮಹಾಕವಿ ಕುಮಾರವ್ಯಾಸನು (ಗದುಗಿನ ನಾರಾಯಣಪ್ಪ) ತಾನೇಕೆ ಮಹಾಭಾರತದ ಕಥೆ ಆರಿಸಿಕೊಂಡೆ ಎಂದು ತನ್ನನ್ನೇ ಪ್ರಶ್ನಿಸಿಕೊಂಡು ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎನ್ನುತ್ತಾನೆ. ಅಂದರೆ ಆ ಕಾಲಕ್ಕೆ ಅದೆಷ್ಟು ಬಗೆಯ ರಾಮಾಯಣ ಕಾವ್ಯಗಳು ಪ್ರಚಲಿತದಲ್ಲಿ ಇದ್ದಿರಬಹುದು ಊಹಿಸಿ. ಇಂದು ನಮ್ಮ ನಿಲುಕಿಗೆ ಸಿಗುವ ಪ್ರಮುಖ ಮಧ್ಯಕಾಲೀನ ರಾಮಾಯಣ ಕೃತಿ ‘ತೊರವೆ ರಾಮಾಯಾಣ’. ಕುಮಾರವ್ಯಾಸನ ಗಾಢ ಪ್ರಭಾವಕ್ಕೆ ಒಳಪಟ್ಟಿದ್ದ ಅಭಿಮಾನಿ ಕವಿ ತೊರವೆ ನರಹರಿ. ಗದುಗಿನ ನಾರಾಯಣಪ್ಪ ತನ್ನನ್ನು ತಾನು ಕುಮಾರವ್ಯಾಸ ಎಂದು ಕರೆದುಕೊಂಡರೆ, ಈ ಕವಿಯು ತನ್ನನ್ನು ತಾನು ಕುಮಾರವಾಲ್ಮೀಕಿ ಎಂದು ಕರೆದುಕೊಂಡ. ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನು ಕನ್ನಡದಲ್ಲಿ ಮೊಟ್ಟಮೊದಲು ಸಂಗ್ರಹಿಸಿಕೊಟ್ಟ ಮಹತ್ವದ ಕೃತಿ ಇದು.
  2. ರಾಮಾಶ್ವಮೇಧಂ
    ಗದ್ಯದಲ್ಲಿ ಉತ್ತರರಾಮಾಯಣವನ್ನು ಸಂಗ್ರಹಿಸಿಕೊಡುವ ಅಪರೂಪದ ಕೃತಿ. ಈ ಕೃತಿ ರಚಿಸಿದವರು ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಭಟ್ಟ). ಗಂಡ-ಹೆಂಡತಿಯ ಸಂವಾದವನ್ನೇ ನಿರೂಪಣೆ ಶೈಲಿಯಾಗಿಸಿಕೊಂಡ ಈ ಕೃತಿಯು ಪದ್ಮಪುರಾಣದಲ್ಲಿ ಬರುವ ರಾಮಾಯಣದ ಕಥೆಯನ್ನು ಆಕರವಾಗಿ ಇರಿಸಿಕೊಂಡಿದೆ. ರಾಮನ ಕಥೆಯ ಹೊಸನೋಟದ ಜೊತೆಜೊತೆಗೆ ಗಂಡ-ಹೆಂಡತಿಯ ಚುರುಕು ಸಂಭಾಷಣೆಗಳಿಂದಲೂ ಈ ಕೃತಿ ಗಮನ ಸೆಳೆಯುತ್ತದೆ. ‘ನೀರೇ ಇಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು’ ಎನ್ನುವುದೂ ಇದೇ ಕೃತಿಯಲ್ಲಿ ಬರುವ ಒಂದು ಸಾಲು.
  3. ಪಂಪ ರಾಮಾಯಣ
    ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ’ ಕಾವ್ಯವು ಪಂಪ ರಾಮಾಯಣ ಎಂದೂ ಪ್ರಸಿದ್ಧವಾಗಿದೆ. ಜೈನ ರಾಮಾಯಣ ಪರಂಪರೆಯ ವಿಮಲಸೂರಿಯ ‘ಪಲುಮಚರಿಯ’ ಕೃತಿಯನ್ನು ಆಧರಿಸಿದ ಕನ್ನಡ ಕೃತಿಯಿದೆ. 12ನೇ ಶತಮಾನದ ಆದಿಭಾಗದಲ್ಲಿ ಈ ಕೃತಿ ರಚಿತವಾಗಿರಬಹುದು ಎನ್ನಲಾಗಿದೆ. ವೈದಿಕ ಕಥನ ಶೈಲಿಯ ಸಂಸ್ಕೃತದ ವಾಲ್ಮೀಕಿ ರಾಮಾಯಣಕ್ಕೂ ಜೈನ ಕಥನ ಶೈಲಿಯ ಕನ್ನಡದ ಪಂಪ ರಾಮಾಯಣಕ್ಕೂ ಕಥೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿ ರಾವಣ ಕೇವಲ ಮಹಾಶೂರ ಮಾತ್ರನಲ್ಲ, ಚಾರಿತ್ರ್ಯದಲ್ಲೂ ಶುಚಿತ್ವ ಕಾಪಾಡಿಕೊಂಡವನು. ಅವನು ಲಂಪಟನಲ್ಲ ಎಂದು ಹಲವು ಪ್ರಸಂಗಗಳ ಮೂಲಕ ಕವಿ ಸಾರಿ ಹೇಳುತ್ತಾನೆ.
  4. ಶ್ರೀರಾಮಾಯಣ ದರ್ಶನಂ
    ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹತ್ವದ ಕೃತಿ. ಇತ್ತೀಚಿನ ದಿನಗಳಲ್ಲಿ ರಾಮಾಯಣದ ಬಗ್ಗೆ ಪ್ರಕಟವಾದ ಮಹಾಕಾವ್ಯ ಇದು. ಈವರೆಗೆ 20ಕ್ಕೂ ಹೆಚ್ಚು ಮರುಮುದ್ರಣ ಕಂಡಿರುವುದಲ್ಲದೆ ಸಂಸ್ಕೃತ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ಸರಳ ರಗಳೆಯ ಛಂದಸ್ಸಿನಲ್ಲಿ ನಾಲ್ಕು ಸಂಪುಟಗಳಲ್ಲಿ ರಾಮಾಯಣ ಕಥೆಯನ್ನು ಅಡಕಗೊಳಿಸಲಾಗಿದೆ. ವ್ಯಾಪಕ ಜನಮನ್ನಣೆ ಗಳಿಸಿದ ಈ ಕೃತಿಯು ಮಾನವೀಯ ಬಂಧಗಳನ್ನು, ನಡವಳಿಕೆಗಳನ್ನು, ಬೃಹತ್ ಆಶಯಗಳನ್ನು ಕಟ್ಟಿಕೊಡುವ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ ಎಂಬ ಗೌರವಕ್ಕೆ ಪಾತ್ರವಾಗಿದೆ.
  5. ಆನಂದ ರಾಮಾಯಣ
    ಆಡುಮಾತಿನಲ್ಲಿ ಪ್ರಚಲಿತದಲ್ಲಿದ್ದ ಹಲವು ಜಾನಪದ ರಾಮಾಯಣಗಳಿಗೆ ವಾಲ್ಮೀಕಿ ರಾಮಾಯಣವನ್ನು ಮುಖಾಮುಖಿಯಾಗಿಸಿದ ಮತ್ತೊಂದು ಮಹತ್ವದ ಕನ್ನಡ ಕೃತಿ ಅನಂದ ರಾಮಾಯಣ. ವಾಲ್ಮೀಕಿ ರಾಮಾಯಣದಲ್ಲಿರುವ ಮತ್ತು ಅಲ್ಲಿ ಉಲ್ಲೇಖವೇ ಆಗದಿರುವ ಹಲವು ಪ್ರಸಂಗಗಳು, ವಿವರಣೆಗಳು, ಕಥೆಗಳು ಇಲ್ಲಿವೆ. ತನ್ನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹತ್ತಾರು ರಾಮಾಯಣಗಳನ್ನು ಈ ಕವಿಯು ಹೊಸ ಕಣ್ಣಿನಲ್ಲಿ ನೋಡಲು ಯತ್ನಿಸಿರುವುದೂ ಎದ್ದು ಕಾಣುತ್ತದೆ. ರಾಮಕಥೆಯ ಹಲವು ಘಟನೆಗಳ ತಿಥಿಗಳ ಉಲ್ಲೇಖದ ಜೊತೆಗೆ, ಅಂಥ ಸಂದರ್ಭಗಳಲ್ಲಿ ಮುಖ್ಯವ್ಯಕ್ತಿಗಳ ವಯಸ್ಸು ಎಷ್ಟಾಗಿತ್ತು ಎಂಬ ವಿವರಗಳೂ ಈ ಕೃತಿಯಲ್ಲಿವೆ.
  6. ಇನ್ನಷ್ಟು ರಾಮಾಯಣಗಳು
    ಸಿದ್ದವನಹಳ್ಳಿ ಕೃಷ್ಣಶರ್ಮರ ‘ರಾಮಾವತಾರ’ ವಾಲ್ಮೀಕಿ ರಾಮಾಯಣದ ಸರಳ ಮತ್ತು ಚೊಕ್ಕ ಕನ್ನಡ ಅನುವಾದವಾಗಿ ಜನಮನ್ನಣೆ ಗಳಿಸಿದೆ. ಎಸ್.ಎಲ್.ಭೈರಪ್ಪ ಅವರ ‘ಉತ್ತರಾಯಣ’ವು ರಾಮಾಯಣ ಪಾತ್ರಗಳನ್ನು ಮನೋವೈಜ್ಞಾನಿಕ ವಿಶ್ಲೇಷಣೆಯ ಆಯಾಮದಿಂದ ಪರಿಶೀಲಿಸುತ್ತದೆ. ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನು ಮೂಲಕ್ಕೆ ನಿಷ್ಠವಾಗಿ ಕನ್ನಡಕ್ಕೆ ತಂದಿರುವ ಕೃತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಭಾರತ ದರ್ಶನ ಪ್ರಕಾಶನದ ‘ಶ್ರೀಮದ್ವಾಲ್ಮೀಕಿ ರಾಮಾಯಣ’. ಇದನ್ನು ಹೊರತುಪಡಿಸಿದರೆ ಎಸ್.ರಂಗನಾಥ ಶರ್ಮಾ ಅವರು ಅನುವಾದಿಸಿರುವ ‘ಶ್ರೀಮದ್ವಾಲ್ಮೀಕಿ ರಾಮಾಯಣಮ್’ ಕೃತಿಶ್ರೇಣಿಯು ಆಸ್ತಿಕರಲ್ಲಿ ಮಾನ್ಯತೆ ಗಳಿಸಿದೆ.
  7. ಜಾನಪದ ರಾಮಾಯಣ
    ಪಿ.ಕೆ.ರಾಜಶೇಖರ್ ಮತ್ತು ಬಿ.ಎಸ್.ತಲ್ವಾಡಿ ಅವರು ಸಂಗ್ರಹಿಸಿದ ಕನ್ನಡ ಜನಪದ ರಾಮಾಯಣವು ರಾಮಾಯಣದಲ್ಲಿ ಸೀತೆಯ ಪ್ರಾಮುಖ್ಯತೆಯನ್ನು ಸಾರಿ ಹೇಳುವ ಕೃತಿ. ‘ಜನಕರಾಯನ ಮಗಳು ಬನಕೆ ತೊಟ್ಟಿಲ ಕಟ್ಟಿ ಲವಕುರನ್ನು ತೂಗ್ಯಾಳೋ’ ಎಂಬ ಸಾಲು ಜಾನಪದರು ರಾಮಾಯಣ ಕಥೆಯನ್ನು ಗ್ರಹಿಸಿರುವ ರೀತಿ.

ಇದನ್ನೂ ಓದಿ: Rama Navami 2021: ರಾಮನವಮಿಯಂದು ತಿಳಿದುಕೊಳ್ಳಬೇಕಾದ ಶ್ರೀ ರಾಮನ ಪ್ರಮುಖ ದೇವಾಲಯಗಳು

ಇದನ್ನೂ ಓದಿ: Ram Navami 2022: ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ

Published On - 12:06 pm, Sun, 10 April 22