
ಶಾಂತಿ- ಸೌಹಾರ್ದತೆಯ ಸಂಕೇತವಾದ ರಂಜಾನ್ ಮುಸ್ಲಿಂರ ಪವಿತ್ರ ಹಬ್ಬ. ಈ ತಿಂಗಳು ಮುಸ್ಲಿಮರು 30 ದಿನಗಳ ಉಪವಾಸ ಆಚರಿಸುತ್ತಾರೆ. ಅಲ್ಲದೆ ಈ ತಿಂಗಳಲ್ಲಿ ದಾನ- ಧರ್ಮ ಹೆಚ್ಚಾಗಿ ಮಾಡಲಾಗುತ್ತೆ. ಇನ್ನು ವಿಶೇಷ ಅಂದ್ರೆ ಈ ತಿಂಗಳು ಉಪವಾಸವಿಡುವ ಕಾರಣ ಹಬ್ಬದಂದು ಮಾಡುವ ಆಹಾರ ತುಂಬಾ ವಿಶೇಷವಾಗಿರುತ್ತೆ. ರಂಜಾನ್ ಹಬ್ಬದಲ್ಲಿ 10ಕ್ಕೂ ಅಧಿಕ ಬಗೆಯ ಸಸ್ಯಹಾರಿ ಹಾಗೂ ಮಾಂಸಹಾರಿ ಖಾದ್ಯಗಳನ್ನು ತಯಾರಿಸಲಾಗುತ್ತೆ. ಆಹಾರ ಶುಚಿ, ರುಚಿಯಾಗಿರುವುದು ಮಾತ್ರವಲ್ಲದೆ ಆರೋಗ್ಯಕರವಾಗಿಯೂ ಇರಬೇಕು ಎಂಬ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತೆ. ತಿಂಗಳುಗಳ ಉಪವಾಸ ಮಾಡಿದ ದೇಹಕ್ಕೆ ಶಕ್ತಿ ತುಂಬುವಂತಿರಬೇಕು ಎಂಬ ಕಾರಣಕ್ಕಾಗಿ ದೇಹಕ್ಕೆ ಶಕ್ತಿ ನೀಡುವ ಆಹಾರಗಳನ್ನು ತಯಾರಿಸಲಾಗುತ್ತೆ.
Eid 2021 Special ರಂಜಾನ್ ಹಬ್ಬದ ವಿಶೇಷ ಹೆಚ್ಚಿಸಲು ಇಲ್ಲಿವೆ ಐದು ಸುಲಭ ತಿನಿಸುಗಳು
ರಂಜಾನ್ ಹಬ್ಬಕ್ಕೆ ಬೆಸ್ಟ್ ಮೆನು
ಶೀಕ್ ಕಬಾಬ್: ಬೋನ್‌ಲೆಸ್ ಚಿಕನ್ ಅಥವಾ ಮಟನ್ನ ಚಿಕ್ಕ ಚಿಕ್ಕ ಪೀಸ್ಗಳಲ್ಲಿ ಕಟ್ ಮಾಡಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ನಿಂಬೆ ಹಣ್ಣಿನ ರಸ, ಪುದಿನಾ, ಕೊತ್ತಂಬರಿ ಸೊಪ್ಪು, ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ ಹಾಗೂ ಗರಂ ಮಸಾಲಾ ಪುಡಿಯನ್ನು ರುಬ್ಬಿ ಫೇಸ್ಟ್ ತಯಾರಿಸಿ ಬಳಿಕ ಚಿಕನ್ ಅಥವಾ ಮಟನ್‌ಗೆ ಇದನ್ನು ಬೆರೆಸಿ. ಸ್ವಲ್ಪ ಹೊತ್ತು ಬಿಟ್ಟು ಮಸಾಲೆ ಮಿಶ್ರಿತ ಚಿಕನ್, ಮಟನ್‌ನನ್ನು ಒಂದು ಕಬ್ಬಿಣದ ಕಡ್ಡಿಗೆ ಅಂಟಿಸಿ ಬೆಂಕಿಯಲ್ಲಿ ಸುಟ್ಟರೆ ಶೀಕ್ ಕಬಾಬ್ ಸವಿಯಲು ಸಿದ್ಧ.
ಮಟನ್ ಅಕನಿ: ಅರಿಸಿನ, ಉಪ್ಪು ಹಾಕಿ ಮಟನ್ ಕುದಿಸಿ ನಂತರ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತಂಬ್ರಿ, ಪುದೀನಾ, ಒಣಕೊಬರಿ ಮಿಶ್ರಣ ಮಾಡಿ ರುಬ್ಬಬೇಕು. ಆ ಮೇಲೆ ಈರುಳ್ಳಿಯನ್ನು ತುಂಡರಿಸಿ ಹುರಿದು ಇದಕ್ಕೆ ರುಬ್ಬಿದ ಮಸಾಲಾ ಮಿಶ್ರಣ ಮಾಡಿ. ಕುದಿಸಿದ ಮಟನ್‌ನನ್ನು ಇದರಲ್ಲಿ ಹಾಕಿ ಮೇಲೆ ಕೋತಂಬರಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಮಟನ್ ಅಕನಿ ಡ್ರೈ ಫುಡ್ ಸೇವಿಸಬಹುದು.
ಹಲೀಮ್: ಇದು ಹೈದರಾಬಾದಿ ಡಿಶ್. ಗೋಧಿ ರವೆಯನ್ನು ಒಂದು ಗಂಟೆ ನೀರಲ್ಲಿ ನೆನೆಯಿಸಿ ಶಾಹಿ ಜೀರಿಗೆ, ಒಣ ಮೆಣಸು, ಚಕ್ಕೆ, ಲವಂಗ, ಏಲಕ್ಕಿ ಶುಂಠಿ, ಬೆಳ್ಳುಳ್ಳಿ ಮಿಶ್ರಣ ಮಾಡಿ ಹುರಿಯಬೇಕು. ನಂತರ ಧನಿಯಾ ಪುಡಿ, ಮೆಣಸು, ಅರಿಶಿಣ ಪುಡಿ, ಉಪ್ಪು ಹಾಗೂ ಕೈಮಾವನ್ನು ಪ್ರತ್ಯೇಕವಾಗಿ ಹುರಿದು ಅದಕ್ಕೆ ಸೇರಿಸಿ. ಆ ಮೇಲೆ ನೆನೆದ ಗೋಧಿ ರವಾ ಇದರೊಂದಿಗೆ ಮಿಶ್ರಣ ಮಾಡಿ 10 ನಿಮಿಷ ಕುದಿಸಬೇಕು. ನಂತರ ತುಪ್ಪ, ಪುದಿನ, ಹುರಿದ ಈರುಳ್ಳಿ, ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ಕುದಿಸಿದ ಮಟನ್‌ನೊಂದಿಗೆ ಸೇರಿಸಬೇಕು. ಹಲೀಮ್ ರೆಸಿಪಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ
ಶೀರ್ ಕುರ್ಮಾ: ಡ್ರೈ ಫ್ರೂಟ್ಸ್, ಹಾಲು, ಸಕ್ಕರೆ, ಏಲಕ್ಕಿ ಸೇರಿದಂತೆ ಪಾಯಸದ ರುಚಿ ಹೆಚ್ಚಿಸುವ ಅನೇಕ ಪದಾರ್ಥಗಳನ್ನು ಹಾಕಿ ಸಿಹಿ ಖಾದ್ಯ ಶೀರ್ ಕುರ್ಮಾ ಮಾಡಲಾಗುತ್ತೇ. ಅಲ್ಲದೆ ಶೀರ್ ಕುರ್ಮಾವನ್ನು ಮಾಡಲು ಅನೇಕ ವಿಧಾನಗಳಿವೆ. ಶೀರ್ ಕುರ್ಮಾ ರೆಸಿಪಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ
ಫ್ರುಟ್ ಸಲಾಡ್: ಹಾಲಿಗೆ ಪಿರ್ನಿ ಫೌಡರ್, ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ಗಟ್ಟಿಗೊಳಿಸಿ. ಆಮೇಲೆ ಸೇಬು, ದಾಳಿಂಬೆ, ಮೋಸಂಬೆ, ಬಾಳೆಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಅದರೊಂದಿಗೆ ಸೇರಿಸಬೇಕು. ನಂತರ ಅದಕ್ಕೆ ಗೋಡಂಬೆ, ಬದಾಮ್, ಒಣದ್ರಾಕ್ಷಿ ಸೇರಿಸಿ ಪ್ರೀಡ್ಜ್‌ನಲ್ಲಿಟ್ಟರೆ ಫ್ರುಟ್ ಸಲಾಡ್ ಸಿದ್ಧ.