ಷಟ್ತಿಲಾ ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನವೆಂದು ಪರಿಗಣಿಸಲಾಗಿದೆ. ಈ ಶುಭ ದಿನವನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಪುಷ್ಯ ಮಾಸದ, ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸುವುದರ ಜೊತೆಗೆ ಎಳ್ಳನ್ನು ದಾನ ಮಾಡುವುದು ಕೂಡ ಶುಭ ಫಲಗಳನ್ನು ನೀಡುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಷಟ್ತಿಲಾ ಏಕಾದಶಿಯಂದು ಉಪವಾಸವಿದ್ದು ಪೂಜೆ ಮಾಡಲಾಗುತ್ತದೆ. ಜೊತೆಗೆ ಸ್ನಾನ, ನೈವೇದ್ಯದಿಂದ ತರ್ಪಣದ ವರೆಗೆ ಎಲ್ಲಾ ವಸ್ತುಗಳಲ್ಲೂ ಎಳ್ಳನ್ನು ಬಳಸುವುದರಿಂದಾಗಿ ಈ ದಿನವನ್ನು ಷಟ್ತಿಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ, ಈ ದಿನದಂದು ಪೂಜೆ ಅಥವಾ ಉಪವಾಸ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ.
ಪಂಚಾಂಗದ ಪ್ರಕಾರ, ಈ ಬಾರಿ ಷಟ್ತಿಲಾ ಏಕಾದಶಿಯನ್ನು ಫೆ. 6 ರಂದು ಆಚರಿಸಲಾಗುವುದು. ಫೆಬ್ರವರಿ 5 ರ ಸಂಜೆ 5:30 ಕ್ಕೆ ಏಕಾದಶಿ ತಿಥಿ ಪ್ರಾರಂಭವಾಗುತ್ತದೆ. ಫೆ. 6 ರಂದು ಸಂಜೆ 4:10 ಕ್ಕೆ ಮುಕ್ತಾಯವಾಗುತ್ತದೆ. ಈ ಮುಹೂರ್ತದಲ್ಲಿ ಪೂಜೆ, ಉಪವಾಸ ಮಾಡುವುದು ತುಂಬಾ ಮಂಗಳಕರವಾಗಿದೆ.
ಏಕಾದಶಿಯನ್ನು ಪ್ರತಿ ತಿಂಗಳು ಆಚರಿಸಲಾಗುತ್ತಿದ್ದರೂ, ಪಂಚಾಂಗದ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಾದ ಷಟ್ತಿಲಾ ಏಕಾದಶಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ಏಕಾದಶಿಯಂದು ವಿಷ್ಣುವನ್ನು ಪೂಜಿಸುವುದರ ಜೊತೆಗೆ ಎಳ್ಳನ್ನು ದಾನ ಮಾಡಲಾಗುತ್ತದೆ. ಇದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ, ಕಷ್ಟ ನಿವಾರಣೆಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಮೂಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ
ಷಟ್ತಿಲಾ ಏಕಾದಶಿ ದಿನ ವಿಷ್ಣುವನ್ನು ಪೂಜಿಸುವುದು ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇನ್ನು ಧರ್ಮ ಗ್ರಂಥಗಳ ಪ್ರಕಾರ ಅಕ್ಕಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಅಲ್ಲದೆ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು ತಾಮಸ ಆಹಾರವನ್ನು ತಪ್ಪಿಸಬೇಕು. ವಿಷ್ಣುವನ್ನು ಪೂಜಿಸುವವರು ಎಳ್ಳಿನಿಂದ ಮಾಡಿದ ತಿಂಡಿಗಳನ್ನು ಸೇವಿಸುವುದು ಒಳ್ಳೆಯದು. ಅಲ್ಲದೆ ಈ ದಿನ ನೀವು ಸ್ನಾನ ಮಾಡುವ ನೀರಿನಲ್ಲಿ ಎಳ್ಳಿನ ಬೀಜಗಳನ್ನು ಸೇರಿಸಬೇಕು. ಜೊತೆಗೆ ಎಳ್ಳನ್ನು ದಾನ ಅಥವಾ ಅದರಿಂದ ಮಾಡಿದ ಸಿಹಿ ತಿನಿಸುಗಳನ್ನು ಹಂಚುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಜೊತೆಗೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಈ ದಿನ, ಏಕಾದಶಿಯ ಉಪವಾಸದ ಕಥೆಯನ್ನು ಕೇಳುವುದು ಮತ್ತು ಪಠಿಸುವುದು ಅಪಾರ ಪುಣ್ಯವನ್ನು ನೀಡುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ