New Book: ಶೆಲ್ಫಿಗೇರುವ ಮುನ್ನ; ಸುಧಾ ಶರ್ಮಾ ಪುಸ್ತಕ ‘ನಮ್ಮೊಳಗೆ ನಾವು’ ನಾಳೆಯಿಂದ ನಿಮ್ಮ ಓದಿಗೆ

|

Updated on: Apr 09, 2022 | 9:27 AM

Cancer : ಅವರಿಗೆ ಕ್ಯಾನ್ಸರ್, ಗೊತ್ತಾಗುವಾಗಲೇ ಕೊನೆಯ ಹಂತ. ಇನ್ನು ಐದು ತಿಂಗಳು ಬದುಕಬಹುದು ಎಂದಿದ್ದರು. ಅದನ್ನೂ ಅವರು ಎಷ್ಟು ಸವಾಲಿನಿಂದ ಸ್ವೀಕರಿಸಿದರು ಎಂದರೆ, “ಏನಂತೆ ಈಗ ನಾನು ನನ್ನ ಮುಂದಿನ ದಿನಗಳನ್ನು ತಾಸುಗಳಲ್ಲಿ, ನಿಮಿಷಗಳಲ್ಲಿ ಎಣಿಸುತ್ತೇನೆ.”

New Book: ಶೆಲ್ಫಿಗೇರುವ ಮುನ್ನ; ಸುಧಾ ಶರ್ಮಾ ಪುಸ್ತಕ ‘ನಮ್ಮೊಳಗೆ ನಾವು’ ನಾಳೆಯಿಂದ ನಿಮ್ಮ ಓದಿಗೆ
ಲೇಖಕಿ ಸುಧಾ ಶರ್ಮಾ, ಚವತ್ತಿ
Follow us on

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ: ನಮ್ಮೊಳಗೆ ನಾವು
ಲೇಖಕಿ: ಸುಧಾ ಶರ್ಮಾ, ಚವತ್ತಿ
ಪುಟ: 144
ಬೆಲೆ: ರೂ. 130
ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್, ಕೋಡೂರು (ಶಿವಮೊಗ್ಗ ಜಿಲ್ಲೆ)

ನೇಪಥ್ಯಕ್ಕೆ ಸರಿದು ಹೋಗಿದ್ದೆ. ವಯಸ್ಸು ನಲವತ್ತು ದಾಟುತ್ತಿದ್ದಂತೆ “ಇನ್ನೇನು ಮಾಡಿ ಏನು ಆಗಬೇಕಾಗಿದೆ” ಎನ್ನುವ ಜಡತ್ವವೂ ಆವರಿಸಿಬಿಟ್ಟಿತ್ತು. ಪ್ರತಿ ದಿನವೂ ಅದೇ ಚರ್ವಿತ ಚರ್ವಣ ಬದುಕು. ಇದೊಂದು ವ್ಯೂಹದ ಹಾಗೆ. ಒಮ್ಮೆ ಅದಕ್ಕೆ ಅಂಟಿಕೊಂಡು, ಅದೇ ಅಭ್ಯಾಸ ಆಗಿಹೋದರೆ ಅದರಿಂದ ಹೊರಬರುವುದಕ್ಕೆ ಪ್ರಯತ್ನಿಸದೇ ಹಾಗೇ ಇದ್ದು ಬಿಡುತ್ತೇವೆ. ಆಗ ಮನಸ್ಸಿನ ಒಂದು ಮೂಲೆಯಲ್ಲಿ ಹೇಳಲಾರದ, ವ್ಯಕ್ತಿಸಲೂ ಅರಿಯದ ಅತೃಪ್ತಿಯೊಂದು, ಪೂರ್ಣತೆಯ ಕೊರತೆಯ ಭಾವವೊಂದು ನಿರಂತರವಾಗಿ ಉಳಿದುಬಿಡುತ್ತದೆ. ಈ ನಿರಂತರ ದಾಹದ ಮೂಲ ಯಾವುದು? ನಮ್ಮೆಲ್ಲರ ಬದುಕಿನ ಉದ್ದೇಶವಾದರೂ ಏನು? ನಮ್ಮ ಬದುಕಿನ ಸಾರ್ಥಕತೆ ಯಾವುದು? ಮೇಲ್ನೋಟಕ್ಕೆ ಇದು ಯಾವುದೋ ಆಧ್ಯಾತ್ಮದ ಮಾತುಗಳಂತೆ ಅನ್ನಿಸಿದರೂ ಇದು ನ್ಯೂರೋಸೈನ್ಸ್​ನ ಭಾಗವಾದ ಪಾಸಿಟಿವ್ ಸೈಕಾಲಜಿಯ ಪ್ರಮುಖ ವಿಷಯ. ಮನುಷ್ಯ ಬದುಕಿನ ಉದ್ದೇಶ ಮತ್ತು ಸಾರ್ಥಕತೆಯನ್ನು ಅರ್ಥಮಾಡಿಸುವ, ಸಂತೋಷವೇ ಸಂಪತ್ತು ಎನ್ನುವ ಪಾಸಿಟಿವ್ ಸೈಕಾಲಜಿಯ ಕನ್ನಡದ ಮೊದಲ ಮಾಸಪತ್ರಿಕೆ “ಪ್ರಾಫಿಟ್ ಪ್ಲಸ್” ಆರಂಭಿಸಿಯೇ ಬಿಟ್ಟೆ. ಈ ಪತ್ರಿಕೆಗಾಗಿ ಬರೆದ ಸಂಪಾದಕೀಯ ಬರಹ ಮತ್ತು ಲೇಖನಗಳ ಗುಚ್ಛವೇ ಈ ಪುಸ್ತಕ.
ಸುಧಾ ಶರ್ಮಾ ಚವತ್ತಿ, ಪತ್ರಕರ್ತೆ

ನಮ್ಮ ಬದುಕನ್ನು ಆದಷ್ಟೂ ಸಂತೋಷಮಯವಾಗಿ ಇಟ್ಟುಕೊಳ್ಳುವುದು ಈ ಲೇಖನಗಳ ಉದ್ದೇಶ. ಇವು ಯಾವುದೇ ಮಠಾಧೀಶರ ಆಶೀರ್ವಚನ ಅಲ್ಲ. ಮನೋವೈಜ್ಞಾನಿಕ ಲೇಖನಗಳೂ ಅಲ್ಲ. ಬಹುತೇಕ ಲೇಖನಗಳು ನಮ್ಮೊಳಗೇ ನಾವು ಮಾತನಾಡಿಕೊಂಡಂತೆ ಇವೆ. ಅದಕ್ಕೇ ಅವು ಖುಷಿಕೊಡುತ್ತವೆ. ಅರೆರೆ ಇವು ನಮ್ಮದೇ ಕತೆಯಲ್ಲ, ನಾನೂ ಹೀಗೆಯೇ ಆಲೋಚಿಸಿದ್ದೇನಲ್ಲ ಎಂದುಕೊಳ್ಳುವ ಲೇಖನಗಳು ಇವು. ಇಲ್ಲಿರುವ ಬಹುತೇಕ ವಿಷಯಗಳು ನಮಗೆ ಗೊತ್ತಿರುವುದೇ ಆಗಿದೆ. ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಮತ್ತೊಮ್ಮೆ ಹೇಳೀ ನಮ್ಮನ್ನು ಎಚ್ಚರಿಸುವುದು ಲೇಖನಗಳ ಉದ್ದೇಶ.
ರವೀಂದ್ರ ಭಟ್​, ಪತ್ರಕರ್ತ

ಕ್ಷಣ ಕ್ಷಣವೂ ಬದುಕುವುದು
ಅವರಿಗೆ ಕ್ಯಾನ್ಸರ್ ಆಗಿತ್ತು. ಗೊತ್ತಾಗುವಾಗಲೇ ಕೊನೆಯ ಹಂತ. ಹೆಚ್ಚೆಂದರೆ ಇನ್ನು ಐದು ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದರು. ಅದನ್ನೂ ಅವರು ಎಷ್ಟು ಸವಾಲಿನಿಂದ ಸ್ವೀಕರಿಸಿದರು ಎಂದರೆ ಅವರು ಹೇಳಿದ ಮಾತು “ಏನಂತೆ ಈಗ ನಾನು ನನ್ನ ಮುಂದಿನ ದಿನಗಳನ್ನು ತಾಸುಗಳಲ್ಲಿ, ನಿಮಿಷಗಳಲ್ಲಿ ಎಣಿಸುತ್ತೇನೆ.” ಹೌದು ಅಲ್ಲವಾ ನಮ್ಮ ದಿನಗಳನ್ನು ತಾಸುಗಳಲ್ಲಿ, ದಿನಗಳಲ್ಲಿ, ಎಣಿಸಲು ಆರಂಭಿಸಿದರೆ ಎಷ್ಟೊಂದು ದಿನಗಳಿವೆ ಎನ್ನುವುದು ಅರಿವಾಗುವ ಹಾಗೆ ಪ್ರತಿ ಕ್ಷಣವೂ ಮುಖ್ಯ ಎನ್ನುವುದು ಗೊತ್ತಾಗುತ್ತದೆ. ತುತ್ತು ತುತ್ತು ತಿನ್ನುವ ಹಾಗೆ ಕ್ಷಣ ಕ್ಷಣವನ್ನೂ ಉತ್ಕಟವಾಗಿ ಜೀವಿಸುವುದು. ಒಮ್ಮೆ ಇಂತಹ ಬದುಕು ಅಭ್ಯಾಸ ಆದರೆ ಸಮಯ ವ್ಯರ್ಥಮಾಡುವುದು ಸಾಧ್ಯವೇ ಇಲ್ಲ.

ವೇಳೆ ಅಮೂಲ್ಯ. ಈ ಅಮೂಲ್ಯವಾದದ್ದನ್ನು ನಾವು ಹೇಗೆ ಬಳಸುತ್ತೇವೆ ಎನ್ನುವುದೇ ನಮ್ಮ ಬದುಕಿನ ಮೌಲ್ಯವನ್ನು ಹೇಳುತ್ತದೆ. ಇದರ ಅರ್ಥ ನಮ್ಮ ವೇಳೆಯನ್ನು ಹೇಗಾದರೂ ಹಣ ಗಳಿಕೆಯ ರೀತಿಯಲ್ಲಿ ಬಳಸಬೇಕು ಎಂದಲ್ಲ. ಬಡತನವೇ ತುಂಬಿರುವಾಗ, ಸಿಕ್ಕ ಸಮಯವೆಲ್ಲ ಹಣಗಳಿಕೆಗೆ ಬಳಸಲ್ಪಡಬೇಕು ಎನ್ನುವ ಹಾಗೆ ಯೋಚಿಸುತ್ತಿದ್ದೆವು. ಮಕ್ಕಳಿಗೆ ಬಿಡುವಿದ್ದರೆ ಓದು ಓದು ಎನ್ನುವ ಹಾಗೆ. ಆದರೆ ಈಗ ಈ ಪರಿಕಲ್ಪನೆ ಬದಲಾಗಿದೆ. ಸಿಕ್ಕ ಸಮಯ ಬದುಕಿನ ವಿಕಸನಕ್ಕೆ ಬಳಕೆ ಆಗಲಿ ಎನ್ನುವುದು ಎಲ್ಲರ ಆಶಯವಾಗಿದೆ. ಬದುಕಿನ ಎಲ್ಲ ಪರಿಸ್ಥಿತಿಗಳಿಂದಲೂ ಕಲಿಯುತ್ತೇನೆ. ಪ್ರತಿ ದಿನವೂ, ಪ್ರತಿ ಕ್ಷಣವೂ ಬದುಕು ಹೊಸ ಹೊಸದನ್ನು ನೀಡುತ್ತಿದೆ. ನಾನು ಅದನ್ನು ನೋಡಬೇಕಾಗಿದೆ ಎನ್ನುವುದು ನಮ್ಮ ಇರುವಿಕೆಯಲ್ಲಿಯೇ ಬೆರೆತು ಬಿಟ್ಟರೆ ಪ್ರತಿ ಕ್ಷಣವೂ ಸಂಭ್ರಮವೇ.

ಇದನ್ನೂ ಓದಿ : ಶೆಲ್ಫಿಗೇರುವ ಮುನ್ನ; ‘ಪುನೀತ್ ರಾಜಕುಮಾರ್; ಮುಗ್ಧ ನಗುವೊಂದರ ಕಣ್ಮರೆ’ ಕೃತಿ ಮಾರ್ಚ್ 17ರಿಂದ ಲಭ್ಯ

ಕಾಲದ ನಿರಂತರ ಚಲನೆ ಅನಾದಿಯದು. ಇದು ಹಿಂದೂ ಇತ್ತು, ಮುಂದೂ ಇದೆ. ಬಂದು ಹೋಗುವವರು ನಾವು. ಬಂದು ಹೋಗುವವರು ಮಾಡುವುದು ಇಷ್ಟೇ, ಅಷ್ಟಿಷ್ಟು ಖುಷಿ ಕೊಡಲು ಪ್ರಯತ್ನಿಸುವುದು, ನಮ್ಮೊಳಗೆ ಇರುವುದನ್ನು ಕೊಡದೇ ಇಲ್ಲದಿರುವುದನ್ನು ಕೊಡುವುದು ಸಾಧ್ಯವೇ? ನಮ್ಮೊಳಗೇ ಸಂತೋಷ ಇರದಿದ್ದರೆ ಬೇರೆಯವರಿಗೆ ಎಲ್ಲಿಂದ ಕೊಡಲಿ? ಹಾಗಾಗಿ ನಮ್ಮೊಳಗೆ ಅದು ಇರುವ ಹಾಗೆ ನೋಡಿಕೊಳ್ಳಲೇ ಬೇಕು.

ಹಾಗಾದರೆ ಯಾವುದು ಸಂತೋಷ? ಚಿಕ್ಕ ಮಗುವಿನ ಕೈಗೆ ಎಷ್ಟೇ ಆಟಿಕೆಗಳನ್ನು ಕೊಟ್ಟರೂ ಸ್ವಲ್ಪ ಹೊತ್ತಿಗೆ ಅದೂ ಬೇಸರವೇ. ಮತ್ತೊಂದು ಬೇಕೆಂಬ ಹುಡುಕಾಟ. ಒಂದು ಸಿಕ್ಕರೆ ಮತ್ತೊಂದು, ಮಗದೊಂದು ಮುಗಿಯದ ದಾಹವನ್ನು ತಣಿಸುವುದು ಹೇಗೆ?

ಪ್ರಕೃತಿಯಲ್ಲಿ ಪ್ರತಿ ಜೀವಿಯೂ ಕೊಟ್ಟು ಸುಖಿಸುತ್ತದೆ. ಇದು ನಿಸರ್ಗದ ಸಹಜ ಸ್ವಭಾವ. ಮನುಷ್ಯಕೂಡ ಇದಕ್ಕೆ ಹೊರತಾಗಿಲ್ಲ. ತುಂಬ ಒಳ್ಳೆಯ ಮಾತಿದೆ “ಪರೋಪಕಾರಾರ್ಥಾಯ ಇದಂ ಶರೀರಂ.” ಈ ಶರೀರವನ್ನು ಪರರ ಉಪಕಾರಕ್ಕೆ ಇಡಬೇಕು ಎನ್ನುವ ಉದಾತ್ತ ತತ್ವ ಜೀವನದ ಸಂತೋಷವನ್ನು ತೆರೆದಿಟ್ಟು ತೋರಿದೆ. ಈಗ ನಾವು ಕೇವಲ ಹೊಟ್ಟೆ, ಬಟ್ಟೆ, ಹಣದ ಆಚೆ ಬದುಕಿಗೆ ಸಾರ್ಥಕತೆಯೂ ಬೇಕು ಎನ್ನುವ ಮನೋಭಾವದಲ್ಲಿ ಬದುಕುತ್ತಿದ್ದೇವೆ. ಈ ಸಾರ್ಥಕತೆ ಸಿಗುವುದು ಪ್ರತಿ ಕ್ಷಣವನ್ನೂ ಅರ್ಥಪೂರ್ಣವಾಗಿ ಕಳೆದಾಗ ಮಾತ್ರ. ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಾಗೆ, ಪ್ರತಿ ಕ್ಷಣದ ಅರ್ಥಪೂರ್ಣತೆಯೇ ಬದುಕಿನ ಸಾರ್ಥಕತೆಗೆ ನಾಂದಿ.

ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ಬೆನಕ ಬುಕ್ಸ್​ ಬ್ಯಾಂಕ್

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ರಾಜಲಕ್ಷ್ಮೀ ಕೋಡಿಬೆಟ್ಟು ಅನುವಾದಿಸಿದ ದೇವಕಿ ಜೈನ್ ‘ಹಿತ್ತಾಳೆ ಬಣ್ಣದ ಪುಸ್ತಕ’

Published On - 9:19 am, Sat, 9 April 22