ಜೀವನದಲ್ಲಿ ಒಮ್ಮೆಯಾದರೂ ಶಿವನ ಈ 12 ವಾಸಸ್ಥಾನಗಳಿಗೆ ಭೇಟಿ ನೀಡಲೇಬೇಕು, ಇದರಿಂದ ಸಿಗುವ ಲಾಭವೇನು?
ಶಿವ ಪುರಾಣದಲ್ಲಿ ಭಾರತದಲ್ಲಿರುವ ಒಟ್ಟು ಹನ್ನೆರಡು ಸಾಂಪ್ರದಾಯಿಕ ಜ್ಯೋತಿರ್ಲಿಂಗಗಳು ಮತ್ತು ಆ ಸ್ಥಳಗಳ ಮಹತ್ವವನ್ನು ವಿವರಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಪರ ಶಿವನ ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ. ಅದಲ್ಲದೆ ಹಿಂದೂ ಪುರಾಣದಲ್ಲಿ ಹೇಳುವ ಪ್ರಕಾರ ಜ್ಯೋತಿರ್ಲಿಂಗಗಳಿರುವ ಈ 12 ಸ್ಥಳಗಳಲ್ಲಿ ಶಿವನು ತನ್ನ ಭಕ್ತರಿಗೆ ವರವನ್ನು ನೀಡಲು ಬೇರೆ ಬೇರೆ ರೀತಿಯಲ್ಲಿ ಅವತಾರ ಎತ್ತಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಈ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಈ ಸ್ಥಳಗಳು ಎಲ್ಲಿವೆ? ಇದರ ಮಹತ್ವವೇನು? ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಟಿವಿ9 ಫೋಟೋ
ದೇವಾನು ದೇವತೆಗಳಲ್ಲಿ ಅಗ್ರಗಣ್ಯನಾದ ಶಿವನು ಸರಳ ಪೂಜೆಯಿಂದ ಬಲು ಬೇಗ ಒಲಿಯುತ್ತಾನೆ. ಇನ್ನು ಶಿವ ಪುರಾಣದಲ್ಲಿ, ಮಹಾದೇವನ ಸ್ವಭಾವವನ್ನು ವಿವರಿಸಲಾಗಿದೆ. ಜೊತೆಗೆ ಇದರಲ್ಲಿ ಶಿವನ ವೈಭವ ಮತ್ತು ಯಾವ ಪೂಜೆಗಳಿಂದ ಆತ ಪ್ರಸನ್ನನಾಗುತ್ತಾನೆ ಎಂಬುದನ್ನು ಸಂಪೂರ್ಣವಾಗಿ ತಿಳಿಸಲಾಗಿದೆ. ಶಿವ ಪುರಾಣವು 6 ವಿಭಾಗಗಳು ಮತ್ತು 24000 ಶ್ಲೋಕಗಳನ್ನು ಹೊಂದಿದ್ದು, ಇದರಲ್ಲಿ ಪೂಜಾ ಆಚರಣೆಗಳು, ಬೋಧನಾ ಕಥೆಗಳು ಶಿವನ ಮಹಿಮೆಯನ್ನು ಮತ್ತು ಶಿವನ ಮಹಾನ್ ವ್ಯಕ್ತಿತ್ವವನ್ನು ಶ್ಲಾಘಿಸಲಾಗಿದೆ. ಇದೆಲ್ಲದರ ಜೊತೆಗೆ ಶಿವ ಪುರಾಣದಲ್ಲಿ ಭಾರತದಲ್ಲಿರುವ ಒಟ್ಟು ದ್ವಾದಶ ಅಥವಾ ಹನ್ನೆರಡು ಸಾಂಪ್ರದಾಯಿಕ ಜ್ಯೋತಿರ್ಲಿಂಗಗಳು ಮತ್ತು ಆ ಸ್ಥಳಗಳ ಮಹತ್ವವನ್ನು ವಿವರಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಪರ ಶಿವನ ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ. ಅದಲ್ಲದೆ ಹಿಂದೂ ಪುರಾಣದಲ್ಲಿ ಹೇಳುವ ಪ್ರಕಾರ ಜ್ಯೋತಿರ್ಲಿಂಗಗಳಿರುವ ಈ 12 ಸ್ಥಳಗಳಲ್ಲಿ ಶಿವನು ತನ್ನ ಭಕ್ತರಿಗೆ ವರವನ್ನು ನೀಡಲು ಬೇರೆ ಬೇರೆ ರೀತಿಯಲ್ಲಿ ಅವತಾರ ಎತ್ತಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಈ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಈ ಸ್ಥಳಗಳು ಎಲ್ಲಿವೆ? ಇದರ ಮಹತ್ವವೇನು? ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಶಿವ ಪುರಾಣದಲ್ಲಿ ತಿಳಿಸಿದ 12 ಜ್ಯೋತಿರ್ಲಿಂಗಗಳು;
ಶಿವ ಪುರಾಣದ ಕೋಟಿರುದ್ರ ಸಂಹಿತೆಯಲ್ಲಿ ಶಿವನ 12 ಜ್ಯೋತಿರ್ಲಿಂಗಗಳ ಬಗ್ಗೆ ವಿವರವಾಗಿ ತಿಳಿಸಲಾಗಿದ್ದು, ಈ ಪ್ರಾಚೀನ 12 ಜ್ಯೋತಿರ್ಲಿಂಗಗಳು ಶಿವನ ವಾಸಸ್ಥಾನವೆಂದು ನಂಬಲಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ಈ 12 ಜ್ಯೋತಿರ್ಲಿಂಗಗಳ ಪೂಜೆಗೆ ವಿಶೇಷ ಮಹತ್ವವಿದೆ.
- ಸೋಮನಾಥ ಜ್ಯೋತಿರ್ಲಿಂಗ: ಗುಜರಾತ್ ನ (ಸೌರಾಷ್ಟ್ರ) ಪ್ರಾಂತ್ಯದ ಕಥಿಯಾವರ್ ಪ್ರದೇಶದ ಪ್ರಭಾಸ ಪ್ರದೇಶದಲ್ಲಿರುವ ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೇಲಿನ ಅತ್ಯಂತ ಹಳೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಶಿವ ಪುರಾಣದ ಪ್ರಕಾರ, ಸೋಮನಾಥ ಜ್ಯೋತಿರ್ಲಿಂಗವನ್ನು ಚಂದ್ರದೇವ ಸ್ವತಃ ಸ್ಥಾಪಿಸಿದ್ದ ಎಂಬ ಉಲ್ಲೇಖವಿದೆ. ಈ ಸೋಮನಾಥ ದೇವಾಲಯವನ್ನು ವಿಶ್ವದ ಅತ್ಯಂತ ಪೂಜ್ಯ ಮತ್ತು ಪ್ರಸಿದ್ದ ಶಿವ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಏಕೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದೇ ಮೊದಲನೆಯದು ಎಂದು ನಂಬಲಾಗಿದೆ.
- ಮಲ್ಲಿಕಾರ್ಜುನ ಜ್ಯೋತಿರ್ಲಿಂಗ: 12 ಜ್ಯೋತಿರ್ಲಿಂಗಗಳಲ್ಲಿ ಮಲ್ಲಿಕಾರ್ಜುನ ದೇವಾಲಯ ಎರಡನೆಯದ್ದು. ಈ ಜ್ಯೋತಿರ್ಲಿಂಗವು ಆಂಧ್ರಪ್ರದೇಶದ ಕೃಷ್ಣಾ ನದಿಯ ದಡದಲ್ಲಿರುವ ಶ್ರೀಶೈಲ ಎಂಬ ಪರ್ವತದ ಮೇಲೆ ನೆಲೆಗೊಂಡಿದೆ. ಈ ದೇವಾಲಯವನ್ನು ದಕ್ಷಿಣದ ಕೈಲಾಸ ಎಂದೂ ಕೂಡ ಕರೆಯುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸುವ ಭಕ್ತನು, ಅಶ್ವಮೇಧ ಯಜ್ಞಕ್ಕೆ ಸಮನಾದ ಪುಣ್ಯವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
- ಮಹಾಕಾಳೇಶ್ವರ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಮಹಾಕಾಲ ಅಥವಾ ಮಹಾಕಾಳೇಶ್ವರ ಎಂದು ಪ್ರಸಿದ್ಧವಾಗಿದೆ. ಇದು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿದೆ. ಅದಕ್ಕಾಗಿಯೇ ಉಜ್ಜಯಿನಿಯನ್ನು ಮಹಾಕಾಲ ನಗರ ಎಂದೂ ಕರೆಯಲಾಗುತ್ತದೆ. ಪ್ರಾಚೀನ ಸಾಹಿತ್ಯದಲ್ಲಿ ಈ ದೇವಾಲಯವು ಅವಂತಿಕಾ ಪುರಿ ಎಂದು ಕರೆಯಲ್ಪಟ್ಟಿದೆ. ಅದಲ್ಲದೆ ಮಹಾಕಾಲೇಶ್ವರ ಜ್ಯೋತಿರ್ಲಿಂಗವು, ದಕ್ಷಿಣಾಭಿಮುಖವಾಗಿರುವ ಏಕೈಕ ಸ್ಥಳವಾಗಿದೆ. ಶಿವನ ಆರತಿಯನ್ನು ಇಲ್ಲಿ ದಿನಕ್ಕೆ 6 ಬಾರಿ ಮಾಡಲಾಗುತ್ತದೆ. ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಭಸ್ಮ ಆರತಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.
- ಓಂಕಾರೇಶ್ವರ ಜ್ಯೋತಿರ್ಲಿಂಗ: ಓಂಕಾರೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಇಂದೋರ್ ಬಳಿಯ ಮಾಲ್ವಾ ಪ್ರದೇಶದಲ್ಲಿದೆ. ಇದು ನರ್ಮದಾ ನದಿಯ ಉತ್ತರ ದಿಕ್ಕಿನಲ್ಲಿರುವ ಏಕೈಕ ದೇವಾಲಯವಾಗಿದೆ. ಶಿವನು ಇಲ್ಲಿ ನದಿಯ ಎರಡೂ ದಡಗಳಲ್ಲಿದ್ದಾನೆ. ಮಹಾದೇವನನ್ನು ಇಲ್ಲಿ ಓಂಕಾರೇಶ್ವರ ಮತ್ತು ಅಮರೇಶ್ವರ ಎಂದು ಪೂಜಿಸಲಾಗುತ್ತದೆ.
- ಕೇದಾರನಾಥ ಜ್ಯೋತಿರ್ಲಿಂಗ: ಸಮುದ್ರ ಮಟ್ಟದಿಂದ 3584 ಮೀಟರ್ ಎತ್ತರದಲ್ಲಿ ಮಂದಾಕಿನಿ ನದಿಯ ದಡದಲ್ಲಿರುವ ಕೇದಾರನಾಥ ದೇವಾಲಯವು ಉತ್ತರ ಭಾರತದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಜ್ಯೋತಿರ್ಲಿಂಗವು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಕೇದಾರ ಎಂಬ ಹಿಮಾಲಯದ ಶಿಖರದ ಮೇಲಿದೆ. ಈ ಪ್ರಯಾಣ ಅತ್ಯಂತ ಕಷ್ಟಕರವಾದ ಪ್ರಯಾಣ ಎಂದು ಹೇಳಲಾಗುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ವರ್ಷದ ಆರು ತಿಂಗಳ ಕಾಲ ಈ ಸ್ಥಳವನ್ನು ಮುಚ್ಚಲಾಗುತ್ತದೆ.
- ಭೀಮಾಶಂಕರ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಪುಣೆಯಿಂದ 110 ಕಿ.ಮೀ ದೂರದ ಸಹ್ಯಾದ್ರಿ ಪರ್ವತದ ಮೇಲಿದೆ. ಭೋಲೆನಾಥದ 12 ಜ್ಯೋತಿರ್ಲಿಂಗಗಳಲ್ಲಿ, ಭೀಮಾಶಂಕರ ಜ್ಯೋತಿರ್ಲಿಂಗವನ್ನು ಆರನೇ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಇಲ್ಲಿನ ಸ್ಥಳೀಯ ಜನರು ಈ ದೇವಾಲಯವನ್ನು ಮೋಟೇಶ್ವರ ಮಹಾದೇವ ಎಂದು ಕೂಡ ಕರೆಯುತ್ತಾರೆ. ಕೃಷ್ಣ ನದಿಯ ಅತಿದೊಡ್ಡ ಉಪನದಿಗಳಲ್ಲಿ ಒಂದಾದ ಭೀಮಾ ನದಿಯು ಇಲ್ಲೇ ಹುಟ್ಟುತ್ತದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೌದ್ಧ ಶೈಲಿಯಲ್ಲಿ ಕೆತ್ತಿರುವ ಅಂಬಾ- ಅಂಬಿಕೇಯರ ಕೆತ್ತನೆಗಳನ್ನು ಕಾಣಬಹುದಾಗಿದೆ.
- ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಉತ್ತರ ಪ್ರದೇಶದ ವಾರಣಾಸಿಯ ಗಂಗಾ ನದಿಯ ದಡದಲ್ಲಿದೆ. ಈ ದೇವಾಲಯವನ್ನು ವಿಶ್ವೇಶ್ವರ ಎಂದೂ ಕೂಡ ಕರೆಯುತ್ತಾರೆ. ಈ ಪದದ ಅರ್ಥ ‘ಬ್ರಹ್ಮನ ಅಧಿಪತಿ’. ಅದಲ್ಲದೆ ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲೂ ಈ ದೇವಾಲಯದ ಉಲ್ಲೇಖವಿದೆ.
- ತ್ರಯಂಬಕೇಶ್ವರ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿದೆ. ಗೋದಾವರಿ ನದಿಯ ದಡದಲ್ಲಿರುವ, ನಾಸಿಕ್‌ನ ತ್ರಿಂಬಕೇಶ್ವರ ಅಥವಾ ತ್ರಯಂಬಕೇಶ್ವರನಿಗೆ ಅರ್ಪಿತವಾದ ಪ್ರಾಚೀನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಪವಿತ್ರ ಕುಂಭ ಮೇಳ ನಡೆಯುವ ನಾಲ್ಕು ನಗರಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ಉತ್ತರ ಭಾರತದ ಪಾಪನಾಶಿನಿಯನ್ನು ದಕ್ಷಿಣದಲ್ಲಿ ಗೋದಾವರಿ ನದಿಗೆ ಸಮಾನವೆಂದು ಪರಿಗಣಿಸಲಾಗಿದೆ, ಗಂಗಾನದಿಯ ಉಗಮಕ್ಕೆ ಮಹಾನ್ ಸನ್ಯಾಸಿ ಭಗೀರಥ ಕಾರಣ ಎಂದು ಹೇಳುವಂತೆ, ಗೋದಾವರಿ ನದಿಯ ಹರಿವು ಮಹಾನ್ ಋಷಿ ಗೌತಮನ ಮಹಾ ತಪಸ್ಸಿನ ಫಲ ಎನ್ನಲಾಗುತ್ತದೆ.
- ವೈದ್ಯನಾಥ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಜಾರ್ಖಂಡ್ ರಾಜ್ಯದ ಸಂತಾಲ್ ಪರಗಣದ ಬಳಿ ಇದೆ. ಎಲ್ಲಾ 12 ಶಿವ ಜ್ಯೋತಿರ್ಲಿಂಗ ತಾಣಗಳಲ್ಲಿ, ಬೈದ್ಯನಾಥ ಅಥವಾ ವೈದ್ಯನಾಥ ದೇವಾಲಯವೂ ಸಹ ಮುಖ್ಯವಾಗಿದೆ ಏಕೆಂದರೆ ಇದು ಭಾರತದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಅಲ್ಲದೆ ಈ ಸ್ಥಳವನ್ನು ಹೃದಯಪೀಠ ಎಂದೂ ಕೂಡ ಕರೆಯಲಾಗುತ್ತದೆ.
- ನಾಗೇಶ್ವರ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ಗುಜರಾತ್ ನ ದ್ವಾರಿಕಾ ಪ್ರದೇಶದಲ್ಲಿದೆ. ರುದ್ರ ಸಂಹಿತೆಯಲ್ಲಿ ಶಿವನನ್ನು ‘ದಾರುಕವನ ನಾಗೇಶಂ’ ಎಂದು ವರ್ಣಿಸಲಾಗಿದೆ. ನಾಗೇಶ್ವರ ಎಂದರೆ ಸರ್ಪಗಳ ದೇವರು ಎಂದರ್ಥ. ಜಾತಕದಲ್ಲಿ ಹಾವಿನ ದೋಷವಿರುವ ಲೋಹಗಳಿಂದ ಮಾಡಿದ ಹಾವುಗಳನ್ನು ಇಲ್ಲಿ ನೀಡುತ್ತಾರೆ. ಅಲ್ಲದೆ ಸರ್ಪ ದೋಷ ನಿವಾರಣೆಗೆ ಇದೊಂದು ಪ್ರಶಸ್ತ ಜಾಗ ಎನ್ನಲಾಗುತ್ತದೆ.
- ರಾಮೇಶ್ವರಂ ಜ್ಯೋತಿರ್ಲಿಂಗ: ಈ ಜ್ಯೋತಿರ್ಲಿಂಗವು ತಮಿಳುನಾಡಿನ ರಾಮೇಶ್ವರಂನಲ್ಲಿದೆ. ಈ ಜ್ಯೋತಿರ್ಲಿಂಗವನ್ನು ಭಗವಾನ್ ಶ್ರೀ ರಾಮನು ನಿರ್ಮಿಸಿದನು ಎನ್ನಲಾಗುತ್ತದೆ. ಇಲ್ಲಿರುವ ಶಿವಲಿಂಗವನ್ನು ನೋಡುವುದರಿಂದ ಎಲ್ಲಾ ರೋಗಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.
- ಘೃಶ್ನೇಶ್ವರ ಜ್ಯೋತಿರ್ಲಿಂಗ: ಈ ದೇವಾಲಯವು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ದೌಲತಾಬಾದ್‌ನಿಂದ 20 ಕಿ.ಮೀ ದೂರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಕೊನೆಯ ಜ್ಯೋತಿರ್ಲಿಂಗ ಎನ್ನಲಾಗುತ್ತದೆ. ಘೃಶ್ನೇಶ್ವರ ಜ್ಯೋತಿರ್ಲಿಂಗವು ಇಲ್ಲಿನ ಸ್ಥಳ ಪ್ರತೀತಿಯಿಂದಲೂ ಜನಪ್ರಿಯವಾಗಿದೆ, ಏಕೆಂದರೆ ಇದು ಪ್ರಸಿದ್ಧ ಪ್ರವಾಸಿ ತಾಣಗಳಾದ ಅಜಂತಾ ಮತ್ತು ಎಲ್ಲೋರಾ ಗುಹೆಗಳ ಸಮೀಪದಲ್ಲಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:47 pm, Sat, 2 March 24