ಮಹಾಭಾರತದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಅಲ್ಲಿ ಬರುವ ಕೆಲವು ಸೂಕ್ಷ್ಮ ಸಂದೇಶಗಳ ಕುರಿತು ನಾವುಗಳು ಗಮನಿಸುವುದೇ ಕಡಿಮೆ. ಅಂತಹ ಒಂದು ವಿಚಾರದ ಕುರಿತಾಗಿ ನಾವಿಂದು ತಿಳಿಯೋಣ. ಎಲ್ಲಾ ತಾಯಂದಿರೂ ತಮ್ಮ ಮಕ್ಕಳು ಹಾಗಿರಬೇಕು,ಹೀಗಿರಬೇಕು ಎಂದು ಬಯಸುವುದು / ಕನಸುಕಾಣುವುದು ಸ್ವಾಭಾವಿಕ. ಆದರೆ ಜಗತ್ತಿಲ್ಲಿ ಈ ಒಂದಂಶ ಇಲ್ಲದಿದ್ದರೆ ಏನಿದ್ದರೂ ಪ್ರಯೋಜನವಿಲ್ಲ. ಏನೀ ಒಂದಶ ? ಇದರ ಬಗ್ಗೆ ಇಂದು ತಿಳಿಯೋಣ. ಪಾಂಡವರು ಐದೂ ಜನ ಒಂದೊಂದು ರೀತಿಯಲ್ಲಿ ಉತ್ತಮರು. ತಪಸ್ವಿಗಳೂ ಹೌದು. ಧರ್ಮ, ಪಾಕ, ಶೌರ್ಯ-ಪರಾಕ್ರಮ,ಸಹನೆ ಹೀಗೆ ಎಲ್ಲಾ ವಿಷಯಗಳಲ್ಲೂ ಇವರಿಗಿಂತ ಉತ್ತಮರು ಇವರ ಸಮಕಾಲದಲ್ಲಿ ಇರಲಿಲ್ಲ. ಆದರೂ ಜಗತ್ತಲ್ಲಿ ಇವರಷ್ಟು ಕಷ್ಟಪಟ್ಟವರು ಬೇರೆ ಇಲ್ಲ. ತಿಳಿದೋ ತಿಳಿಯದೆಯೋ ಅತೀ ಹೆಚ್ಚು ಮೋಸಕ್ಕೆ ಒಳಗಾದವರು ಇವರೇ.
ಒಬ್ಬ ಶೌರ್ಯವುಳ್ಳವನು ಬುದ್ಧಿವಂತ ಅನುಭವಿಸಲಾಗದ ವ್ಯವಸ್ಥೆಯನ್ನು ಜಗದೈಕವೀರ ಅರ್ಜುನ ನಾಟ್ಯಕಲಿಸುವ ಸ್ತ್ರೀಯಾಗಿ ವೇಷ ಬದಲಿಸಿ ಬಾಳುವಂತಾಯಿತು,ಪರಮ ಶಕ್ತಿವಂತ ಭೀಮ ಅಡುಗೆ ಭಟ್ಟನಾಗುವ ಸ್ಥಿತಿ ಬಂತು. ಸತ್ಯವಂತ ಧರ್ಮಜ್ಞನಾದ ಯುಧಿಷ್ಠಿರನು ಧರ್ಮದ ರಕ್ಷಣೆಗಾಗಿ ಗುರುವಿಗೇ “ಅಶ್ವತ್ಥಾಮೋಹತಃ” (ಅಶ್ವತ್ಥಾಮನು ಸತ್ತ) ಎಂದು ಪರೋಕ್ಷವಾಗಿ ಸುಳ್ಳು ಹೇಳುವ ಪ್ರಸಂಗ ಬಂದೊದಗಿತು. (ಅಲ್ಲಿ ಅಶ್ವತ್ಥಾಮ ಎಂಬ ಹೆಸರಿನ ಆನೆ ಸಾಯಲ್ಪಟ್ಟದ್ದು. ನಿಜವಾದ ದ್ರೋಣಪುತ್ರ ಅಶ್ವತ್ಥಾಮನಲ್ಲ) ಆದರೂ ಧರ್ಮರಾಯನು ಅನಿವಾರ್ಯವಾಗಿ ಹಾಗೆ ಹೇಳಬೇಕಾಯಿತು.
ಹಾಗಾದರೆ ಇದಕ್ಕೆಲ್ಲ ಕಾರಣವೇನು ? ಎಂದು ಪ್ರಶ್ನೆ ಬಂದೇ ಬರುತ್ತದೆ. ಭಗವಂತನ ಆಟ ಎನ್ನಬಹುದು ಕೆಲವರು. ಹೌದೆನ್ನುವ ನಾವು. ಆದರೂ ಮೂಲಕಾರಣವೇನೆಂದು ಕುಂತಿಯೇ ಹೇಳುತ್ತಾಳೆ. ಮಹಾಭಾರತದ ಕೊನೆಗೆ ತಾಯಿಕುಂತಿಯು ತನ್ನ ಮೊಮ್ಮಕ್ಕಳನ್ನೆಲ್ಲಾ ಕಳೆದುಕೊಂಡಿದ್ದಾಳೆ . ತನ್ನ ಮಕ್ಕಳಿಗೆ ಜಯವಿದ್ದರೂ ಮೊಮ್ಮಕ್ಕಳಿಲ್ಲ ಕಣ್ಣೆದುರು. ಹೇಗಿರಬಹುದು ಕುಂತಿ,ಪಾಂಡವರ ಸ್ಥಿತಿ… ಊಹಿಸಲೂ ಅಸಾಧ್ಯವಾದ ಸಂದರ್ಭ ಅದು. ಆಗ ಕುಂತಿ ಜಗತ್ತಿನ ಎಲ್ಲಾ ಮಾತೆಯರನ್ನು ಕುರಿತು ಈ ರೀತಿಯಾಗಿ ಆಶೀರ್ವದಿಸುತ್ತಾಳೆ – “ಭಾಗ್ಯವಂತಂ ಪ್ರಸೂಯೇತ” ಅಂದರೆ ನೀವೆಲ್ಲಾ ತಾಯಂದಿರು ಭಾಗ್ಯವಂತರಿಗೆ ಜನ್ಮನೀಡಿರಿ. ಕೇವಲ ಶೂರ ಧೀರಾದರೆ ಸಾಲದು ಭಾಗ್ಯವೂ ಬೇಕು. ಅಂತಹ ಭಾಗ್ಯವಂತರನ್ನು ನೀವು ಮಕ್ಕಳಾಗಿ ಪಡೆಯಿರಿ ಎಂದು.
ಎಂತಹ ಅದ್ಭುತ ಯೋಚನೆಯಲ್ಲವೇ ತಾಯಿ ಕುಂತಿಯದು. ತನ್ನ ಮಕ್ಕಳಿಗೆ ಎಲ್ಲಾ ಇತ್ತು ಆದರೆ ಭಾಗ್ಯದ ಕೊರತೆ ಇತ್ತು. ನಿಮಗೆ ಉತ್ತಮಭಾಗ್ಯವೂ ಸಿಗಲಿ ಎಂದು ಕುಂತಿ ಹರಸುತ್ತಾಳೆ. ಅರ್ಥಾತ್ ಎಲ್ಲದಕ್ಕೂ ಭಾಗ್ಯ ಚೆನ್ನಾಗಿರಬೇಕು.
ಡಾ.ಕೇಶವ ಕಿರಣ ಬಿ
ಪ್ರಾಧ್ಯಾಪಕರು
S.R.B.S.S College ಹೊನ್ನಾವರ
kkmanasvi@gamail.com